ಅಂಗಳದೊಳಗೆ ಬೆಳದಿಂಗಳು ತುಂಬಿತು

ಕೆಲವು ದಿನಗಳ ಹಿಂದೆ ಸಂಪದದ ಗೆಳೆಯರೊಬ್ಬರು ಜಾವಳಿ ಅಂದರೇನು ಅಂತ ಕೇಳಿದ್ದರು . ಮೊದಲೆ ಹೇಳಿಬಿಡುವೆ - ಜಾವಳಿಗೂ ಜವಳಿಗೂ ಅರ್ಥಾತ್ ಸಂಬಂಧ ಇಲ್ಲ ಅಂತ. ಜಾವಳಿ ಜವಳಿ ಏನೂ ಅವಳಿ-ಜವಳಿ ಪದಗಳಲ್ಲ. ಆದರೆ ಪದ ಜಾವಳಿ ಸುಮಾರು ಅವಳಿ ಜವಳಿ ಅಂದ್ರೂ ತಪ್ಪಿಲ್ಲ.

ಇದೇನಪ್ಪ ಜಾವಳಿ ಅನ್ನೋ ಪದದ ಅರ್ಥವನ್ನೇ ಹೇಳದೆ ಪದ ಹಾಡ್ತಿದಾನೆ ಅಂದ್ಕೋಬೇಡಿ. ಇಲ್ಲಿ ಪದ ಅಂದರೆ, ಒಂದು ವಾಕ್ಯದಲ್ಲಿ ಬರುವ ಮಾತುಗಳು ಅನ್ನೋ ಅರ್ಥವಲ್ಲ. ಬದಲಿಗೆ ಪದ ಅನ್ನೋದು ಒಂದು ರೀತಿಯ ಸಂಗೀತ ರಚನೆ. ಇದೇನಪ್ಪ ಹೀಗೆ ಅಂತೀರಾ? ಪದ ಹಾಡಬೇಡ ಸುಮ್ಮನೆ ನೀನು ಅಂತ ಹೇಳೋದು ಕೇಳಿಲ್ಲ್ವಾ-ಮತ್ತೆ ಮತ್ತೆ ಹೇಳಿದ್ದನ್ನೇ ಹೇಳೋರ್ಗೆ? ಅದಕ್ಕೆ ಕಾರಣ ಇದೆ. ಹರಿದಾಸರು ರಚಿಸಿರೋ ರಚನೆಗಳಲ್ಲಿ ಬಹುಪಾಲು ಕೃತಿಗಳಿಗೆ ಪದ ಅನ್ನೋ ಹೆಸರೇ ಸಲ್ಲತ್ತೆ. ಅವರ ರಚನೆಗಳನ್ನ ಕೀರ್ತನೆಗಳು, ಉಗಾಭೋಗಗಳು, ಸುಳಾದಿಗಳು ಮೊದಲಾಗಿ ವಿಂಗಡನೆ ಮಾಡಬಹುದು. ಪದ ಅನ್ನೋದು ಈ ಎಲ್ಲ ರಚನೆಗಳನ್ನೂ ಒಟ್ಟಿಗೆ ಸೂಚಿಸಲು ಇರೋ ಒಂದು ಸಾಮಾನ್ಯ ಹೆಸರು.

ಈ ಪದಗಳನ್ನು ಮೊದಲು ರಚಿಸಿದ್ದು ಯಾರು ಎಂದರೆ ನಾವು ನಮ್ಮ ಹರಿದಾಸರನ್ನೇ ಬೊಟ್ಟು ಮಾಡಿತೋರಿಸ್ಬೇಕಾಗುತ್ತೆ. ಹರಿದಾಸರ ಹಾಡುಗಳ ಕೇಂದ್ರಬಿಂದು ಹರಿಯೇ. ಹರಿಯ ಮೇಲೆ ಬರೆದ ರಚನೆಗಳಲ್ಲಿ ವೈವಿಧ್ಯಮಯವಾದ ಪದಗಳು ಇವೆ. ದೇವಸ್ತುತಿ, ಭಕ್ತಿಯನ್ನು ಸೂಚಿಸುವ ಪದಗಳು - ಇವನ್ನೇ ಕೀರ್ತನೆ, ದೇವರನಾಮ ಎನ್ನುವುದು. ಮತ್ತೆ ದೇವರನ್ನೇ ಮಗುವಿನಂತೆ ಭಾವಿಸಿ ಲಾಲಿಸುವ ತಾಯೀಭಾವದ ವಾತ್ಸಲ್ಯಭಾವದ ಪದಗಳು, ಮತ್ತು ಆ ಮಹಾಶಕ್ತಿಯನ್ನೇ ದೂಷಿಸಿ ಮರೆಯಲ್ಲಿ ಹೊಗಳುವ ನಿಂದಾ ಸ್ತುತಿಗಳು, ಅಥವಾ ಮಾನವ ಜೀವನಕ್ಕೆ ತತ್ವಗಳನ್ನು, ಮೌಲ್ಯಗಳನ್ನು ತೋರಿಸುವ ತತ್ವ ಪದಗಳು. ಇದರ ಜೊತೆಗೆ ದೇವನನ್ನು ತನ್ನ ಪತಿಯೆಂದೋ, ಇನಿಯನೆಂದೋ ಭಾವಿಸಿ ಹಾಡಿರುವ ನಾಯಕೀ ಭಾವದ ಶೃಂಗಾರ ಪದಗಳೂ ಇವೆ.

ಈಗಿನ ಸಂಗೀತದ ಪರಿಭಾಷೆಯಲ್ಲಿ ಪದ ಎಂಬುದರ ಅರ್ಥ ಸುಮಾರಾಗಿ ಈ ನಾಯಕೀ ಭಾವದ ಶೃಂಗಾರ ಪದಗಳಿಗೇ ಸೀಮಿತವಾಗಿದೆ. ತೆಲುಗಿನಲ್ಲಿ ಅನ್ನಮಯ್ಯ ಕೂಡ ಬರೆದ ರಚನೆಗಳಲ್ಲೂ ಸಾವಿರಾರು ಶೃಂಗಾರ ಪದಗಳು ಇವೆ.

ಈಗ ಜಾವಳಿ ಎನ್ನುವುದೂ ಶೃಂಗಾರ ಪದದ ರೀತಿಯ ಒಂದು ರಚನೆಯೇ. ಆದರೆ, ಹಾಡುವ ಪರಿಯಲ್ಲಿ ಸ್ವಲ್ಪ ವ್ಯತ್ಯಾಸ ತೋರಬಹುದು. ಪದಗಳನ್ನು ಸ್ವಲ್ಪ ನಿಧಾನವಾಗಿ, ವಿಳಂಬಕಾಲದಲ್ಲಿ, ಹೆಚ್ಚು ತೂಕವಾರ ರಾಗಗಳಲ್ಲಿ ಹಾಡಿದರೆ, ಜಾವಳಿಗಳನ್ನು ಸ್ವಲ್ಪ ಹಗುರವಾದ ರಾಗಗಳಲ್ಲಿ, ದೇಶ್ಯವಾದ ರಾಗಗಳಲ್ಲಿ ಹಾಡುವ ಪದ್ಧತಿ ಹೆಚ್ಚು. ಪದ-ಜಾವಳಿ ಎರಡರ ಮೂಲ ಭಾವವೂ ವಿರಹದ ವಿವರಣೆಯೇ ಆಗಿದ್ದರೂ, ಪದಗಳು ಹೇಳಬೇಕಾದ್ದನ್ನು ಸೂಕ್ಷ್ಮವಾಗಿ, ನವಿರಾಗಿ, ಎಷ್ಟು ಬೇಕೋ ಅಷ್ಟೇ ತೋರುವಂತಿರುತ್ತವೆ. ಜಾವಳಿಗಳಿಗೆ ಈ ಕಟ್ಟುಪಾಡು ಕಡಿಮೆಯಂತೆ. ಕೆಲವು ಜಾವಳಿಗಳು ಸೂಚ್ಯಕ್ಕಿಂತ ವಾಚ್ಯವಾಗಿರುತ್ತೆ ಅಂತ ಕೇಳಿದ್ದೇನೆ. ಆದರೆ, ಹೆಚ್ಚಿನ ಜಾವಳಿಗಳು ತೆಲುಗಿನಲ್ಲಿರುವುದರಿಂದ ವಾಚ್ಯಾರ್ಥ ನನಗೆ ಗೊತ್ತಾಗಿಲ್ಲ ;-)

ಹೆಚ್ಚಿನ ಪದ ಮತ್ತು ಜಾವಳಿಗಳು ನಾಯಕಿ ತನ್ನ ಸಖಿಗೆ ಹೇಳುವ ರೀತಿಯಲ್ಲಿರುತ್ತವೆ. ಕೆಲವೊಮ್ಮೆ ನಾಯಕಿ ನೇರವಾಗಿ ನಾಯಕನಿಗೆ ಹೇಳುವಂತಹವೂ ಉಂಟು.

ಪದ ಮತ್ತು ಜಾವಳಿ ಇವೆರಡೂ ರಚನೆಗಳೂ ನೃತ್ಯದಲ್ಲೂ ಕಾಣಿಸಿಕೊಳ್ಳುತ್ತವೆ. ಶತಮಾನದ ಹಿಂದೆ ಇವು ಹೆಚ್ಚಾಗಿ ದೇವದಾಸಿ ಪರಂಪರೆಯವರಿಗೆ ಮಾತ್ರ ಮೀಸಲಾಗಿದ್ದು, ಬೇರೆ ಸಂಗೀತಗಾರರು ಹಾಡುತ್ತಿರುವ ರೂಢಿ ಇರಲಿಲ್ಲವಂತೆ. ಈಗ ಆ ಕಟ್ಟುಪಾಡು ದೂರವಾಗಿದೆ. ಸಂಗೀತ ಕಚೇರಿಗಳಲ್ಲಿ ಮುಖ್ಯವಾದ ರಚನೆಗಳನ್ನೆಲ್ಲ ಪ್ರಸ್ತುತ ಪಡಿಸಿ ಆದ ಮೇಲೆ, ದೇವರನಾಮ, ಭಜನ್ ಮೊದಲಾದ ಲಘು ಪ್ರಕಾರದ ರಚನೆಗಳನ್ನು ಹಾಡುವಾಗ, ಪದ, ಮತ್ತು ಜಾವಳಿಗಳನ್ನೂ ಹಾಡುವ ರೂಢಿಯಿದೆ.

ಡಿ.ವಿ.ಜಿ. ಅವರು ತಮ್ಮ ಜ್ಞಾಪಕ ಚಿತ್ರಶಾಲೆಯಲ್ಲಿ, ಬೆಂಗಳೂರು ನಾಗರತ್ನಮ್ಮ (ಇವರೇ ಇರಬೇಕೆಂದು ನನ್ನ ನೆನಪು) ಎಂಬ ಕಲಾವಿದೆ ಹಾಡುತ್ತಿದ್ದ ಪದ ಮತ್ತು ಜಾವಳಿಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಇಂದು ಈ ವಿಷಯದ ಬಗ್ಗೆ ಬರೆಯಲೂ ಕಾರಣವಿದೆ. ನಾನು ಮಾಡಿದ ಹಿಂದಿನ ಕರೆಗೆ ಓಗೊಟ್ಟು ಹಲವು ಮಿತ್ರರು ದಾಸರ ರಚನೆಗಳನ್ನು ವಿಕಿಗೆ ಸೇರಿಸಲು ನೆರವಾಗುತ್ತಿದ್ದಾರೆ. ಆ ಕೆಲಸದಲ್ಲಿ, ಒಬ್ಬರು ದಾಸರಚನಾ ಸಾಗರದಲ್ಲಿ, ಈ ಮುತ್ತನ್ನು ಹೆಕ್ಕಿಕೊಟ್ಟರು. ಇದನ್ನು ಓದಿ: ತಂಗಾಳಿ ವಶವಲ್ಲವೇ ಎಂದು ಆರಂಭವಾಗುವ ಈ ಪದ.

ತಂಗಾಳಿ ವಶವಲ್ಲವೇ ರಾಗ:ಶಂಕರಾಭರಣ ತಾಳ: ಅಟ

ತಂಗಾಳಿ ವಶವಲ್ಲವೇ ಪಲ್ಲವಿ

ಅಂಗದೊಳಗೆ ಬೆಳದಿಂಗಳು ತುಂಬಿತು ಅ.ಪ

ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕಂದಿಸಲು
ಮಂದ ಮಾರುತದಲಿ ನಿಂದಿರಲಾರೆನೇ ಹೊಂದಿದ ತಾಪವು ಹೋಹುದೇನೆ ಹೆಣ್ಣೇ 1

ಬಂಗಾರವೊಡಲಿಗೆ ಭಾರವಾಗಿದೆಯೇ ಶೃಂಗರಿಸಿ ಕೊಳ ಸೇರಲಿಲ್ಲ
ಅಂಗಜ ಶರತಾಪ ತಾಳಲಾರೆ ನಾನು ಉಂಗುರವು ನಿನಗೆ ಉಚಿತವೇನೇ ಹೆಣ್ಣೇ 2

ಮುನ್ನ ಪುರಂದರ ವಿಠಲರಾಯ ಕೂಡಿ ಇನ್ನೂ ಬಾರೆಂದರೆ ಬಾರನೇಕೆ
ಅನ್ನ ಪಾನ ರುಚಿಯಾಗಿ ತೋರಲಿಲ್ಲ ನಿನ್ನಾಣೆ ಕಣ್ಣಿಗೆ ನಿದ್ರೆ ಬಾರದು ಹೆಣ್ಣೇ 3

ಪುರಂದರ ವಿಠಲನನ್ನು ಸೇರಿ, ನಂತರ ಅವನ ವಿರಹದಿಂದ ಬಸವಳಿದ ಹೆಣ್ಣಿನ ಬವಣೆಯನ್ನು , ಅವಳು ತನ್ನ ಗೆಳತಿಗೆ ಹೇಳಿಕೊಳ್ಳುವ ರೂಪದಲ್ಲಿರುವ ಈ ಶೃಂಗಾರ ಪದದಲ್ಲಿ ಪುರಂದರ ದಾಸರು ಬಹಳ ಸಮರ್ಥವಾಗಿ ತೋರಿದ್ದಾರೆ.

ಹೆಚ್ಚಿನ ಪದ, ಜಾವಳಿಗಳನ್ನು ಅನುಪಲ್ಲವಿಯಿಂದ ಆರಂಭಿಸುವುದೇ ರೂಢಿ. ಹಾಗಾಗಿ, ಇದನ್ನು ಅಂಗಳದೊಳಗೆ ಬೆಳದಿಂಗಳು ತುಂಬಿತು ಎಂಬ ಅನುಪಲ್ಲವಿಯಿಂದ್ಲೇ ಎತ್ತಿ ಹಾಡಿದರೆ ಸೊಗಸು ಎನ್ನಿಸಿತು. ಶಂಕರಾಭರಣದಂಥ ರಕ್ತಿ ರಾಗವನ್ನು ಇದಕ್ಕೆ ಸೂಚಿಸಿರುವುದರಿಂದ ಇದು ಪದವೇ - ಜಾವಳಿಯಲ್ಲ ಅಂತ ನನ್ನ ಅನಿಸಿಕೆ.

ಈ ಹಾಡನ್ನು ಹಾಡುವುದು ನಾನು ಕೇಳಿಲ್ಲ. ಇಂದಿನ ವರೆಗೂ ಇದನ್ನೂ ನೋಡಿಯೂ, ಓದಿಯೂ ಇರಲಿಲ್ಲ. ಆದರೆ, ನೋಡಿದೊಡನೆ ಎಷ್ಟು ಸುಂದರೆ ಪದ ಇದು ಎನ್ನಿಸಿತು. ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳೋಣ ಎಂದು ಕೂಡಲೇ ಬರೆದುಬಿಟ್ಟೆ!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?