ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ

ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಬಂಗಾರ ಶಾರದೆಯ ಶ್ರೀದಿವ್ಯವಾಣಿ
ಅಚ್ಚ ಕನ್ನಡಜಾಣೆ ಗಾಯತ್ರಿ ಗೀರ್ವಾಣಿ
ವ್ಯಾಸ ಲಕ್ಷ್ಮೀಶರ ಕುಸುಮಕೋಕಿಲವಾಣಿ
ಕರುನಾಡ ಕವಿಕುಲದ ಕನ್ನಡದ ರಸವಾಣಿ
ಸಿರಿಗನ್ನಡಂ ಗೆಲ್ಗೆ ಶ್ರೀಮಂತ ವಾಣಿ

ಈ ಹಾಡನ್ನು ಚಿಕ್ಕವನಾಗಿದ್ದಾಗಿನಿಂದ ನಾನು ಕೇಳುತ್ತ ಬಂದಿದ್ದೇನೆ. ಈ ಹಾಡನ್ನು ಕೇಳುತ್ತಲೆ, ನಮ್ಮ ಸಂಗೀತದಲ್ಲಿ ಶತಮಾನಗಳು ಉರುಳಿದಂತೆ ಬೇರೆಬೇರೆ ರಾಗಗಳು ಚಾಲ್ತಿಗೆ ಬರುವುದೂ ಹೋಗುವುದೂ ನನ್ನ ಮನಸ್ಸಿನ ಮುಂದೆ ಬಂದು ನಿಲ್ಲುತ್ತದೆ. ಆಯಾ ಕಾಲಕ್ಕೆ ತಕ್ಕಂತೆ, ಹೊರಗಿನ ಪ್ರಭಾವಗಳು ಶಾಸ್ತ್ರ್ರೀಯ ಸಂಗೀತದ ಮೇಲೆ ಪ್ರಭಾವ ಬೀರುವುದೂ, ನಿದಾನವಾಗಿ ಶಾಸ್ತ್ರೀಯವಾದ್ದು ಯಾವುದು ಎನ್ನುವುದರ ವಿವರಣೆಯೇ ಬದಲಾಗಿ ಹೋಗಿರುವುದೂ ಉಂಟು.

ಮುಸಲ್ಮಾನರು ವಾಯುವ್ಯ ಭಾಗದಿಂದ ನಮ್ಮ ದೇಶದ ಮೇಲೆ ದಂಡೆತ್ತಿ ಬಂದಾಗ ಅವರೊಡನೆ ಬಂದ ಅವರ ಸಂಗೀತ ಆವತ್ತು ಭಾರತದಲ್ಲಿದ್ದ ಸಂಗೀತದ ಮೇಲೆ ತನ್ನ ಪ್ರಭಾವವನ್ನು ಬೀರಿತು. ಇದರಿಂದಲೇ, ನಮ್ಮಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದೂ ಸ್ತಾನಿ ಸಂಗೀತ ಎಂಬ ಎರಡು ಪ್ರಕಾರಗಳುಂಟಾಗಿರುವುದೂ ತಿಳಿದ ವಿಷಯವೇ. ಹೆಜ್ಜುಜ್ಜಿ, ನವರೋಜು ಮೊದಲಾದ ರಾಗಗಳಲ್ಲಿ, ನಮ್ಮಲ್ಲಿಗೆ ಬಂದಮೇಲೂ ಮೊದಲಿನ ಹೆಸರನ್ನೇ ಅಥವ ಮೊದಲ ಹೆಸರನ್ನೇ ಹೋಲುವ ಹೆಸರನ್ನು ಇಡಲಾಯಿತು.

ಹಾಗೆ ಬಂದ ರಾಗಗಳಲ್ಲೊಂದು ಇಮನ್. ಅಥವ, ಎಮನ್, ನಮ್ಮ ದೇಶದ ಸಂಗೀತದ ಮೇಲೆ ಅಗಾಧ ಪರಿಣಾಮವನ್ನು ಬೀರಿತು. ಎಮನ್, ಇಮನ್ ಎಂದರೆ blessed ಎಂಬ ಅರ್ಥವನ್ನು ವಿಕಿಪಿಡಿಯಾ ಹೇಳುತ್ತದೆ. ಈ ರಾಗವನ್ನು ನಮ್ಮ ಸಂಗೀತಗಾರರು ತೆಗೆದುಕೊಂಡಾಗ, ಅದೇ ಅರ್ಥ ಬರುವ ಕಲ್ಯಾಣ ಎಂಬ ಹೆಸರನ್ನು ಇದಕ್ಕಿಟ್ಟದ್ದು ಸರಿಯೇ ಆಗಿದೆ ಎಂದು ಮಿತ್ರರೊಬ್ಬರಿಂದ ತಿಳಿದುಬಂತು. ಇಂದು ಈ ರಾಗ ಹಿಂದೂಸ್ತಾನಿಯಲ್ಲಿ, ಯಮನ್ ಅಥವಾ ಕಲ್ಯಾಣ್ ಎಂದೂ, ಕರ್ನಾಟಕ ಸಂಗೀತದಲ್ಲಿ ಅದರದೇ ಹೆಣ್ಣು ರೂಪವಾದ ಕಲ್ಯಾಣಿ ಎಂದೂ ನೆಲೆ ನಿಂತಿದೆ

ಸಂಗೀತ ಗ್ರಂಥಗಳಲ್ಲಿ ೧೫೫೦ರ ಹೊತ್ತಿಗೆ ಕಲ್ಯಾಣಿ, ಕಲ್ಯಾಣ, ಇಮನ್ ಎನ್ನುವ ಹೆಸರುಗಳು ಕಾಣಿಸಿಕೊಳ್ಳತೊಡಗುತ್ತೆ. ಒಬ್ಬ ಕನ್ನಡಿಗ ಸಂಗೀತ ಶಾಸ್ತ್ರಜ್ಞ ರಾಮಾಮಾತ್ಯ ತನ್ನ ಸ್ವರಮೇಳಕಲಾನಿಧಿಯಲ್ಲಿ ಈ ಹೆಸರನ್ನು ಪ್ರಸ್ತಾಪ ಮಾಡುವುದಿಲ್ಲ. ಇವನ ನಂತರ ೩೦-೪೦ ವರ್ಷಗಳನ ನಂತರ ಬಂದ ಇನ್ನೊಬ್ಬ ಕನ್ನಡಿಗ ಸಂಗೀತ ಶಾಸ್ತ್ರಜ್ಞ ಪುಂಡರೀಕ ವಿಟ್ಠಲ ಕಲ್ಯಾಣವೆಂಬ ಹೆಸರನ್ನು ಹೇಳುತ್ತಾನಾದರೂ, ಅವನು ಹೇಳುವ ರಾಗ ಸ್ವರೂಪ ಈಗಿನದ್ದಕ್ಕಿಂತ ಸ್ವಲ್ಪ ಬೇರೆಯದ್ದಾಗಿದೆ. ಇವನ ನಂತರ ೪೦-೫೦ ವರ್ಷಗಳ ನಂತರ ಬಂದ ವೆಂಕಟ ಮಖಿ, ತನ್ನ ಚತುರ್ದಂಡಿ ಪ್ರಕಾಶಿಕೆಯಲ್ಲಿ ವೆಂಕಟಮಖಿ "ಕಲ್ಯಾಣಿಯಂತಹ ರಾಗಗಳು, ಕೋಟಿಗಟ್ಟಲೆ ಇವೆ. ಆದರೆ, ಅದು ಪ್ರಬಂಧಗಳ ರಚನೆಗೆ ಸೂಕ್ತವಲ್ಲ" ಎನ್ನುತ್ತಾನೆ. ಜೊತೆಯಲ್ಲೇ, ಇದು ಮುಸಲ್ಮಾನರಿಗೆ ಪ್ರಿಯ ಎಂದೂ ಹೇಳುತ್ತಾನೆ. ಇದರಿಂದಾಗಿ, ಈ ರಾಗಕ್ಕೆ ಪರ್ಶಿಯನ್ನರ ಮೂಲ ಎಂಬ ಮಾತಿಗೆ ಪುಟ ದೊರೆಯುತ್ತದೆ.

ಆದರೆ, ಇವರುಗಳಿಗಿಂತ ಮೊದಲೇ ಬಂದ ಹರಿದಾಸರಾದ ಶ್ರೀಪಾದರಾಯರು (ಕ್ರಿ.ಶ.೧೪೦೪-೧೫೦೨) ಒಂದು ರಚನೆಯಲ್ಲಿ "ಮಂದಗಮನೆಯರೆಲ್ಲ ತೂಗಿದರು ಕಲ್ಯಾಣಿ ರಾಗದಿಂದ" ಎಂದು ಹಾಡಿದ್ದಾರೆ. ಪುರಂದರದಾಸರು (ಕ್ರಿ.ಶ. ೧೪೮೪-೧೫೬೪) ಎರಡು ಮೂರು ರಚನೆಗಳಲ್ಲಿ ಕಲ್ಯಾಣಿ ರಾಗದ ಪ್ರಸ್ತಾಪ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಕರ್ನಾಟಕ ಸಂಗೀತದ ಅಭ್ಯಾಸದ ಬಾಲಪಾಠಗಳಲ್ಲಿಯೂ ಪುರಂದರ ದಾಸರೇ ರಚಿಸಿರುವ ಕಮಲಜಾದಳ ವಿಮಲ ಸುನಯನ ಎಂಬ ಗೀತೆಯೂ ಪ್ರಸಿದ್ಧವೇ ಆಗಿದೆ.

ಇದರಿಂದ, ಕಲ್ಯಾಣಿ ರಾಗ ಲಕ್ಷ್ಯದಲ್ಲಿ ಸುಮಾರು ಹದಿನೈದನೇ ಶತಮಾನದ ಮೊದಲಿನಿಂದಲೇ ಬಳಕೆಗೆ ಬಂದರೂ, ಅದನ್ನು ಲಕ್ಷಣಕಾರರು ಗಣನೆಗೆ ತೆಗೆದುಕೊಂಡು, ಅದನ್ನು ಗ್ರಂಥಸ್ಥವನ್ನಾಗಿ ಮಾಡುವುದಕ್ಕೆ ಸುಮಾರು ಎರಡು ಶತಮಾನಗಳಿಗಿಂತ ಹೆಚ್ಚು ಕಾಲ ಬೇಕಾಯಿತು ಎನ್ನಬಹುದು.

ಕಲ್ಯಾಣಿ ರಾಗ ಇಂದು ಬಹಳ ಜನಪ್ರಿಯ ರಾಗಗಳಲ್ಲೊಂದು. ಚಿತ್ರಗೀತೆ, ಭಾವಗೀತೆ, ಗಜಲ್, ಮೊದಲಾದುವುಗಳಲ್ಲೂ ಇದು ಬಹಳ ಜನಪ್ರಿಯವೇ. ಇದರ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುತ್ತೇನೆ. ಆದರೆ, ಇವತ್ತು ಪೀಠಿಕೆಯಂತೆ, ಕಲ್ಯಾಣಿ ರಾಗದಲ್ಲಿ ನಿಯೋಜಿಸಿರುವ ರಾಜ್ ಕುಮಾರ್ ಅವರ ಒಂದು ಸುಪ್ರಸಿದ್ಧ ಚಿತ್ರಗೀತೆಯನ್ನು ಇಲ್ಲಿ ಕೇಳಿ. ಚಿತ್ರ: ಶ್ರಾವಣ ಬಂತು.

ಮುಂದಿನ ಭಾಗದಲ್ಲಿ ಮತ್ತಷ್ಟು........

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?