Someಕ್ರಮಣದ ಪುರಾಣ - ಭಾಗ ಒಂದು

ಇತ್ತೀಚೆಗೆ ಸಂಪದದಲ್ಲಿ ಡಾನಾ.ಸೋಮೇಶ್ವರ ಅವರು ಈಗ ಸಂಕ್ರಾಂತಿಯ ಆಚರಣೆಯಲ್ಲಿ Someಕ್ರಾಂತಿ ತರುವ ಕಾಲವಾಗಿದೆ ಎಂದು ಕರೆ ಕೊಟ್ಟರು. ಅದಾದ ಮೇಲೆ ಸ್ವಲ್ಪ ವಿಚಾರ ವಿನಿಮಯವೂ ಆಯಿತು. ಅದಕ್ಕೆ Someಕ್ರಮಣದ ಬಗ್ಗೆ ಸ್ವಲ್ಪ Someಗೀತ ಹಾಡೋಣ ಎನ್ನಿಸಿತು. ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ ಅಂತ ಗಾದೆ ಇರೋದನ್ನ ಮರೀಬೇಡಿ. ಹಾಗಾಗಿ ಓದಿದ್ದು ಹಿಡೀದಿದ್ರೆ, ಇನ್ನೊಂದು ಸಲ ಓದಿ. ಇನ್ನೂ ಸರಿ ಇಲ್ಲ ಅಂದ್ರೆ ಮತ್ತೊಂದು ಸಲ ಓದಿ. ಆಗ, ಸರಾಗ ವಾಗಿಬಿಡತ್ತೆ. ರಾಗದ ರುಚಿ ತಿಳಿಯತ್ತೆ.

ಸ್ವಲ್ಪ ದಿನದ ಕೆಳಗೆ ನಾನು ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಗಾದೆ ಬಗ್ಗೆ ಸ್ವಲ್ಪ ಹರಟಿದ್ದೆ. ನೆನಪಿಲ್ದೇ ಇದ್ರೆ, ಅದನ್ನ ಇಲ್ಲಿ ನೀವು ಓದ್ಬಹುದು. ನಮಗೆಲ್ಲ ಗೊತ್ತಿರೋ ಹಾಗೆ, ಮುಕ್ಕಾಲುವಾಸಿ ಹಬ್ಬಗಳು ಪ್ರತೀ ವರ್ಷ ಬಂದ ದಿನವೇ ಬರೋಲ್ಲ. ಯುಗಾದಿ ದೀಪಾವಳಿ ಗೌರಿ ಗಣೇಶ ಇವೆಲ್ಲ ಹಾಗೆ. ಒಂದೇ ಹಬ್ಬ ಯಾವಾಗಲೂ ಸುಮಾರಾಗಿ ಒಂದೇ ದಿನ ಬರುತ್ತೆ. ಅದು ಜನವರಿ ೧೪ರ ದಿನ (ಒಂದೊಂದ್ಸಲ ೧೫ಕ್ಕೋ ೧೬ಕ್ಕೋ ಬಂದ್ರೆ, ನನ್ನ ಕ್ಷಮಿಸಿಬಿಡಿ ಸ್ವಾಮೀ , ನನ್ ತಪ್ಪಲ್ಲ ಅದು!) ಸಂಕ್ರಾಂತಿ. ಇದರ ಜೊತೆಗೆ ಕರಾವಳಿಯವ್ರು ಯುಗಾದಿನೂ ಹೀಗೇ ಏಪ್ರಿಲ್ ಹದ್ನಾಕರ ದಿನವೇ ಮಾಡ್ತಾರೆ. ಆದ್ರೆ, ನಮ್ಮ ಹಳೇ ಮೈಸೂರಲ್ಲಿ ಯುಗಾದಿ ಅಂದ್ರೆ ಚಾಂದ್ರಮಾನದ್ದೇ. ಮತ್ತೆ ಘಟ್ಟದ ಕೆಳಗ್ನೋರು ಬೇಜಾರು ಮಾಡ್ಕೋಬೇಡಿ ನೋಡಿ ಮತ್ತೆ.

ಸರಿ. ಎಲ್ಲೆಲ್ಲೋ ಹೋಗೋದು ಬಿಟ್ಟು ವಿಷ್ಯಕ್ಕೆ ಬರ್ತೀನಿ. ಈಗ ಈ ಜನವರಿಯಲ್ಲಿ ಆಚರಿಸೋ ಸಂಕ್ರಾಂತಿ, ಮಕರ ಸಂಕ್ರಾಂತಿ ಅಂತ ಮಕ್ಕಳಿಗೂ ಗೊತ್ತು. ಹಾಗಾದ್ರೆ, ಬೇರೆ ಸಂಕ್ರಾಂತಿಗಳು ಇವೆಯೆ? ಖಂಡಿತ. ಇದೊಂದು ಸೂರ್ಯ ಸಂಬಂಧಿ ಘಟನೆ- ಆದ್ರೆ, ನಮ್ಮ ಕಣ್ಣಿಗೆ ಕಾಣೋದನ್ನ, ನಾವು, ನಮ್ಮನುಕೂಲಕ್ಕೆ ಮಾಡಿಕೊಂಡಿರೋದು. ಸೂರ್ಯ, ಮಕರ ಸಂಕ್ರಾಂತಿ ಆಗ್ಲೀ, ಅಥವಾ ತುಲಾ ಸಂಕ್ರಾಂತಿ ಆಗ್ಲಿ, ಏನೂ ಹೆಚ್ಚುವರಿ ಕೆಲ್ಸ ಮಾಡೋನಲ್ಲ. ಆದರೆ, ನಾವು ಆಕಾಶದಲ್ಲಿ ಹನ್ನೆರಡು ರಾಶಿ ಇರೋ ಅಂಥಾ ರಾಶಿಚಕ್ರ ಮಾಡ್ಕೊಂಡಿದೀವಲ್ಲ, ಹಾಗಾಗಿ, ವರ್ಷಕ್ಕೆ ಹನ್ನೆರಡು ಸಂಕ್ರಾಂತಿ ಇರುತ್ವೆ. ಅಷ್ಟೇ. ಹನ್ನೆರಡೇ ರಾಶಿ ಯಾಕೆ ಅಂದ್ರಾ? ಬೇಕಾದ್ರೆ ಈ ಕೊಂಡಿನ ಕ್ಲಿಕ್ ಮಾಡಿ ನೋಡಿ .

ವಿವರಣೆ ಸ್ವಲ್ಪ ಸುಲ್ಭ ಆಗ್ಲಿ ಅಂತ ಒಂದು ಚಿತ್ರ ಹಾಕಿದೀನಿ ಇಲ್ಲಿ ಕೆಳಗೆ. ನೋಡಿ.
ಚಿತ್ರ ೧:ಮೇಲಿರೋ ಚಕ್ರದ ನಡು ಬಿಂದುವಿನಲ್ಲಿ ಭೂಮಿ ಇದೆ ಅಂತಿಟ್ಕೊಳಿ. ಹೊರಗಡೆ ಇರೋ ಚಕ್ರವೇ ಆಕಾಶ. ಆಕಾಶನ ಸಮವಾಗಿ ಹನ್ನೆರಡು ಪಾಲು ಮಾಡಿ, ಒಂದೊಂದರಲ್ಲ್ಲೂ ಸೂರ್ಯನ ಹಾದೀಲಿ ಕಾಣೊ ಒಂದೊಂದು ನಕ್ಷತ್ರದ ಗುಂಪಿಗೆ ಮೇಷ, ವೃಷಭ ಮೊದಲಾಗಿ ಹೆಸ್ರು ಕೊಟ್ಟಿದಾರೆ ಹಿಂದಿನೋವ್ರು. ಮೇಷ ಟಗರಿನ ತರಹಾನೂ, ಕನ್ಯಾ ಹುಡುಗಿ ತರಹನೂ ಕಾಣ್ಬೇಕಾದ್ರೆ, ನಿಮ್ಮ ಕಣ್ಣಲ್ಲಿ ಭಾಳ ಕಲ್ಪನಾಶಕ್ತಿ ಇರ್ಬೇಕು. ಆದ್ರೆ, ಸದ್ಯಕ್ಕೆ ಅದೇನೂ ಬೇಡ.

ಈಗ, ಮೇಲಿರೋ ಚಕ್ರವನ್ನ, ಸಪಾಟಾದ ಕಾಗದದ ಮೇಲಿದೆ ಅನ್ನೋದನ್ನ ಮರೆತು, ಒಂದು ಚೆಂಡಿನ ತರಹ ಇದೆ ಅಂತ ಭಾವಿಸ್ಕೋಳಿ. ಈ ಚೆಂಡೇ ಆಕಾಶದ ಪ್ರತಿರೂಪ. ಯಥಾ ಪ್ರಕಾರ, ಚೆಂಡಿನ ಕೇಂದ್ರ ಬಿಂದುಲಿ ನಾವು. ಅಂದ್ರೆ, ನಮ್ಮ ಭೂಮಿ. ಭೂಮಿ ಮೂಲಕ ಹೋಗೋ ಹಾಗೆ, ಈ ಚೆಂಡಿನಲ್ಲಿ ಒಂದು ದಬ್ಬಳ ತೂರಿಸೋಣ. ಅದನ್ನೇ ಉತ್ತರ- ದಕ್ಷಿಣ ಅನ್ನೋಣ. ಈಗ, ಈ ದಬ್ಬಳ ಚೆಂಡಿನೊಳಗಿದೆ.ನಮಗೆ ಕಾಣ್ತಿಲ್ಲ. ಆದ್ರೆ, ಚೆಂಡಿನ ಮೇಲೂ ನಾವು ಉತ್ತರಧ್ರುವದಿಂದ ದಕ್ಷಿಣ ಧ್ರುವಕ್ಕೆ ( ಇವು ಎಲ್ಲಿವೆ? ದಬ್ಬಳ ಚೆಂಡಿನೊಳಕ್ಕೆ ಹೋಗಿ, ಹೊರಕ್ಕೆ ಬರ್ತಿದೆಯಲ್ಲ, ಅವೇ), ಗೆರೆಗಳನ್ನ ಎಳೆದು ಚೆಂಡಿನ ಮೇಲೆ ಹನ್ನೆರಡು ತೊಳೆಗಳ ರೀತಿ ಸಮಾನ ಭಾಗಗಳನ್ನ ಮಾಡಬಹುದು. ಅಲ್ವಾ? ಹೀಗೇನೇ ಆಕಾಶದಲ್ಲಿ ಮೇಷದಿಂದ ಮೀನದವರೆಗೆ ಹನ್ನೆರಡು ರಾಶಿಯಾಗಿ ವಿಂಗಡಿಸಿರೋದು. ಇದು ಸರಳವಾಗಿದೆ ಅಂದ್ಕೋತೀನಿ.ಈಗ, ಇನ್ನೊಂದು ವಿಷಯ ಹೇಳ್ಬೇಕು. ಭೂಮಿ, ಸೂರ್ಯನ ಸುತ್ತ ಸುತ್ತೋವಾಗ, ಈ ಉತ್ತರ ದಕ್ಷಿಣದ ’ದಬ್ಬಳ’ ಅದು ಸುತ್ತೋ ಸಮತಳಕ್ಕೆ ಲಂಬವಾಗಿರದೆ, ಓರೆಯಾಗಿದೆ. ನೀವು ಬುಗುರಿಆಡಿದ್ದನ್ನ ನೆನಪಿಸ್ಕೊಳ್ಳಿ. ಮೊದಮೊದಲು ಬುಗುರಿಯ ಮೊಳೆ, ನೇರವಾಗಿ ತಿರುಗ್ತಿರತ್ತೆ. ಸ್ವಲ್ಪ ತಿರ್ಗೋದು ನಿಧಾನವಾದಾಗ, ಬುಗುರಿ ಮೊಳೆ, ನೆಲಕ್ಕೆ ಸ್ವಲ್ಪ ಓರೆಯಾಗತ್ತೆ. ಅಲ್ವಾ? ಅದೇ ತರಹ. ಅದ್ನ್ನೇ ಇಲ್ಲಿ ಚಿತ್ರದಲ್ಲಿ ತೋರ್ಸಿದೀನಿ.ಚಿತ್ರ ೨

ಈಗ ಮೇಲಿನ ಚಿತ್ರ ನೋಡ್ದಾಗ, ಸೂರ್ಯನ ಕಿರಣ ತುಸು ಸಮಯ ದಕ್ಷಿಣದ ಅರ್ಧದ ಮೇಲೆ ಸ್ವಲ್ಪ ನೇರವಾಗಿ, ಉತ್ತರದ ಅರ್ಧದ ಮೇಲೆ ಓರೆಯಾಗೊ ಬೀಳೋದು ಕಾಣ್ತಿದೆ ಅಲ್ವ? ಅದೇ ತರಹ, (ಇನ್ನಾರು ತಿಂಗಳ ಮೇಲೆ) ಭೂಮಿ ಸೂರ್ಯನ ಆ ಕಡೆಗೆ ಹೋದಾಗ, ಕಿರಣಗಳು ಉತ್ತರದ ಅರ್ಧ ಭಾಗಕ್ಕೆ ನೇರವಾಗಿ ಬೀಳತ್ವೆ. ಇದೇ ನಮ್ಮಲ್ಲಿನ ಬೇಸಿಗೆ ಚಳಿಗಾಲಗಳಿಗೆ ಕಾರಣ. ಸೂರ್ಯನಿಂದ ಭೂಮಿ ಎಷ್ಟು ದೂರ ಇದೆ ಅನ್ನೋದು ಮುಖ್ಯ ಆಗೋದೇ ಇಲ್ಲ. ನಿಜ ಹೇಳ್ಬೇಕಂದ್ರೆ, ಉತ್ತರ ಅರ್ಧದಲ್ಲಿ ಚಳಿ ಇರುವ ಡಿಸೆಂಬರ್ ತಿಂಗಳಲ್ಲೇ ಭೂಮಿ ಸೂರ್ಯನಿಗೆ ಅತೀ ಹತ್ತಿರದಲ್ಲಿರೋದು!


ಸರಿ! ಎಲ್ಲಿಂದ ಎಲ್ಲೋ ಹೋಗ್ತಾ ಇದೀನಿ. ದಾರಿ ಪೂರ್ತಿ ತಪ್ಪೋ ಮೊದಲು ಮತ್ತೆ ಸರಿದಾರಿ ಸೇರ್ತೀನಿ ಸದ್ಯ! ಈಗ ಭೂಮಿ ಸೂರ್ಯನ ಸುತ್ತ ಸ್ವಲ್ಪ ಮೊಟ್ಟೆ ಆಕಾರದಲ್ಲಿ ಸುತ್ತತಾ ಇದೆ ಅಂತ ಗೊತ್ತಲ್ಲ. ಈಗ ಭೂಮಿಯ ಮಧ್ಯದ ಭೂಮದ್ಯರೇಖೆಯನ್ನೇ ಆಕಾಶದ ವರೆಗೆ ಹಿಗ್ಗಿಸೋಣ. (ನಮ್ದೇನು ಖರ್ಚಾಗುತ್ತೆ ಹೇಳಿ? ಊಹೆ ಮಾಡ್ಕೊಳೋದಲ್ವಾ ಬರಿ ;) ) ಆ ಪಾತಳಿಯನ್ನ , ಭೂಮಿ ಸುತ್ತೋ ದಾರಿ ಸರಿಯಾಗಿ ಎರಡು ಕಡೆ ಮುಟ್ಟುತ್ತೆ. ಯಾಕೆ? ನಾವು ಊಹೆ ಮಾಡ್ಕೊಂಡ ಪಾತಳಿ, ಅನಂತದ ವರೆಗೆ ಹೋಗ್ತಾ ಇರಬೋದು ಅಲ್ವಾ? ಎರಡು ಪಾತಳಿಗಳಿ ಸೇರೋ ಜಾಗ ಒಂದು ನೀಟಸಾಲು. (ಪುಸ್ತಕದ ಎರಡು ಪುಟ ಸೇರೋದನ್ನ ನೆನಸಿಕೊಳಿ). ಒಂದು ಪಾತಳಿ, ಮತ್ತೆ ಒಂದು ಕಕ್ಷೆ ( ಭೂಮಿಯ ಕಕ್ಷೆ) ಅಂದ್ರೆ, ಒಂದು ಕಾಗದದ ಪುಟದಲ್ಲಿ, ಒಂದು ತಂತಿಯನ್ನ ಎರಡು ಕಡೆ ತೂರಿಸಿ, ತಂತಿಯ ಎರಡೂ ಕಡೆಗಳನ್ನ ಸೇರಿಸಿದ ಹಾಗೆ ಅಂದ್ಕೊಳಿ. ತಂತಿ ಈಗ ಒಂದು ಗುಂಡಗೋ ಕೋಳಿ ಮೊಟ್ಟೆ ಆಕಾರದಲ್ಲೋ ಇರತ್ತಲ್ವಾ? ಇದು ಸುಮ್ನೆ ಉದಾಹರಣೆಗೆ ಹೇಳ್ದೆ ಅಷ್ಟೆ.

ಈಗ ಇನ್ನೊಂದು ಯೋಚಿಸೋಣ. ಆಕಾಶನ ಸುಲಿದು ಸಪಾಟಾಗಿ ಇಟ್ಟರೆ ಹೇಗೆ ಕಾಣತ್ತೆ ಅಂತ ನೋಡೋಣ. ನಮ್ಮ ತಲೆ ಮೇಲೆ ನೋಡ್ತಾ ಆಕಾಶದಲ್ಲಿ ಒಂದು ಪಟ್ಟಿ ಮಾಡ್ತಾ ಒಂದುಕಡೆ ಇಂದ ಇನ್ನೊಂದು ಕಡೇಗೆ ಹೋಗ್ತಾ ಇದ್ರೆ, ಮತ್ತೆ ಮೊದಲಿಗೆ ಹೊರಟ ಜಾಗಕ್ಕೇ ಬರ್ತೀವಲ್ವಾ? ಈ ಪಟ್ಟಿಯನ್ನೇ ಒಂದು ಹಾಳೆ ಮೇಲಿಟ್ರೆ, ಹೀಗೆ ಕಾಣತ್ತೆ ನೋಡಿ.
.
ಚಿತ್ರ ೩


ಚಿತ್ರ ೩ ರಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಒಂದು ಗೀಟು ಎಳೆದಿದ್ದೀನಿ ನೋಡಿ. ಅದು ಏನಂದ್ರೆ, ಭೂಮಿನ ಎರಡು ಭಾಗ ಮಾಡೋ ರೇಖೆನ ಆಕಾಶದವರೆಗೂ ತೊಗೊಂಡು ಹೋದ್ರೆ, ಅದು ಆಕಾಶವನ್ನೇ ಎರಡು ಹೋಳಾಗಿ ಮಾಡತ್ತಲ್ವ? ಅದೇ ಆ ಗೀಟು. ಮತ್ತೆ, ಮೊದಲೇ ಹೇಳಿದ ಹಾಗೆ ಇದು ಆಕಾಶದ ಸುತ್ತ ೩೬೦ ಡಿಗ್ರಿಯನ್ನು ಬಿಚ್ಚಿಟ್ಟಿರೋ ರೀತಿ. ಅಂದ್ರೆ, ನಿಜವಾಗಿ ಈ ನಡುವಿನ ಗೀಟಿನ ಬಲತುದಿ ಮತ್ತೆ ಎಡತುದಿ ಎರಡೂ ಒಂದೇ ಜಾಗ. ಅವೆರಡನ್ನೂ ಮನಸ್ನಲ್ಲೇ ಸೇರಿಸಿದ್ರೆ, ನಿಮಗೆ ಅದು ಆಕಾಶದ ಸುತ್ತ, ಆಕಾಶವನ್ನ ಉತ್ತರ-ದಕ್ಷಿಣವಾಗಿ ವಿಂಗಡಿಸೋ ಗೆರೆಯ ಸುತ್ತ ಇರೋ ಒಂದು ಪಟ್ಟಿ ಅಂತ ಗೊತ್ತಾಗತ್ತೆ. ಅಲ್ವಾ?

ಈಗ ಈ ಪಟ್ಟಿಯ ಮೇಲೆ ಸೂರ್ಯ ನಮಗೆ ಹೇಗೆಕಾಣ್ತಾನೆ ಅನ್ನೋದನ್ನ ನೋಡೋಣ. ಚಿತ್ರ ೨ನ್ನ ನೋಡಿದ್ರೆ, ನಿಮಗೆ ಸೂರ್ಯ ಅರ್ದ ಸಮಯ ಭೂಮಿ ಭೂಮದ್ಯ ರೇಖೆಯ ಸಮತಳದ ಒಂದು ಬದಿಯಲ್ಲೂ, ಇನ್ನರ್ಧ ಕಾಲ ಅದರ ಇನ್ನೊಂದು ಬದಿಯಲ್ಲೂ ಇರ್ತಾನೆ ಅನ್ನೋದು ಗೊತ್ತಾಗತ್ತೆ. ಅಲ್ವಾ? ಇನ್ನು ಭೂಮಧ್ಯರೇಖೆಯ ಸಮತಳ ಆಕಾಶದಲ್ಲಿ ಯಾವುದು? ಅದೇ ಚಿತ್ರ ೩ರರ್ಲ್ಲಿರುವ ಮಧ್ಯದ ಪೂರ್ವ-ಪಶ್ಚಿಮದ ಗೀಟು. ಹಾಗಾದ್ರೆ, ಸೂರ್ಯ ಎಲ್ಲಿ ಕಾಣ್ತಾನೆ ಈ ಪಟ್ಟಿಯಲ್ಲಿ? ಅದನ್ನೆ ಕೆಳಗಿನ ಚಿತ್ರದಲ್ಲಿ ಹಳದಿ ಬಣ್ಣದಲ್ಲಿ ತೋರ್ಸಿದೀನಿ ನೋಡಿ.

ಅಂದ್ರೆ, ಒಟ್ಟಿನಲ್ಲಿ ಸೂರ್ಯ ಅರೆವರ್ಷ ಈ ಆಕಾಶಮಧ್ತ್ಯರೇಖೆಯ (ಇದನ್ನೇ ವಿಷುವದ್ ವೃತ್ತ ಅನ್ನೋದು - ಯಾಕೆ ಏನು ಅಂತ ಈಗ ಕೇಳ್ಬೇಡಿ. ಆಮೇಲಿ ಹೇಳ್ತೀನಿ!) ಬಲಗಡೆ, ಇನ್ನರೆ ವರ್ಷ, ಬಲಗಡೆ ಇರ್ತಾನೆ. ಗೊತ್ತಾಯ್ತಲ್ಲ? ಮತ್ತೆ, ಎರಡು ದಿನ ಅಥವ ಇನ್ನೂ ಸರಿಯಾಗಿ ಹೇಳಬೇಕಾದ್ರೆ, ಸರಿಯಾಗಿ ಎರಡು ಕ್ಷಣ, ಅವನು ಈ ರೇಖೆಯಮೇಲೇ ಇರ್ತಾನೆ. ಇವುಗಳನ್ನೇ ವಿಷುವ ಬಿಂದು (equinox) ಅನ್ನೋದು. ಸೂರ್ಯ ಅಲ್ಲಿದ್ದ ದಿನ ಭೂಮಿ ಮೇಲೆ ನೀವು ಎಲ್ಲೇ ನಿಂತಿರಿ, ಅಥ್ವಾ ಕೂತಿರಿ, ಸರಿಯಾಗಿ ಅರ್ಧ ದಿನ ಹಗಲು, ಅರ್ಧ ರಾತ್ರಿ ಆಗಿರತ್ತೆ.

ಸರಿ, ಇನ್ನು ಸಂಕ್ರಾಂತಿ ವಿಷಯಕ್ಕೆ ಬರೋಣ. ಇದೇನಿದು? ಇಷ್ಟು ಹೊತ್ತು ತಲೆ ಕೊರೆದು ಈಗ ವಿಷಯಕ್ಕೆ ಬರೋದು ಅಂತಿದೀಯಲ್ಲ ಅನ್ಬೇಡಿ! ಇದು ಗಹನವಾದ ವಿಚಾರ ಅಲ್ವೇ? ಭದ್ರ ಬುನಾದಿ ಇಲ್ದೆ ಹೋದ್ರೆ, ಕಳೆದುಹೋಗ್ತೀವಷ್ಟೆ! ಅದಕ್ಕೆ ಇಷ್ಟೆಲ್ಲಾ ಗಳಹಬೇಕಾಯ್ತು. :)

ಮುಂದಿನ ಭಾಗದಲ್ಲಿ ಉಳಿದ ವಿವರಗಳಿಗೆ ಕಾಯ್ತೀರಾ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?