ಏನ್ ಗುರು ಮತ್ತು ದಿಲ್ಲಿಯ ರಾಜ್ಯಭಾರ

ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು. ನಾನಂತೂ, ಅಲ್ಲಿಯ ಬರಹಗಳನ್ನ ತಪ್ಪದೇ ಓದ್ತಿದೀನಿ.

ಇದೇನಪ್ಪ ವಟವಟ ಅಂತ ಬೇರೆ ಬ್ಲಾಗ್ ಬಗ್ಗೆ ಜಾಹೀರಾತು ಕೊಡಕ್ಕೆ ಶುರು ಮಾಡ್ಬಿಟ್ಯಲ್ಲ ಅನ್ಬೇಡಿ. ಅಷ್ಟಕ್ಕೂ, ನನ್ಗೂ ಬನವಾಸಿ ಬಳಗಕ್ಕೂ ಯಾವ ಸಂಬಂಧವೂ ಇಲ್ಲ. ಮತ್ತೆ, ಅಲ್ಲಿ ಬರಹ ಯಾರ್ಯಾರು ಬರೀತಾರೆ ಅಂತ್ಲೂ ನಂಗೆ ಗೊತ್ತಿಲ್ಲ. ಮತ್ಯಾಕೆ ಅವರ ವಿಷ್ಯ ಮಾತಾಡ್ತಿದೀನಿ ಅಂತೀರಾ? ಇವತ್ತು ಎಲ್ಲೋ ಏನ್ನೋ ಓದ್ತಿದ್ದಾಗ ಒಂದು ಸಂಸ್ಕೃತ ಸುಭಾಷಿತ ಕಣ್ಗೆ ಬಿತ್ತು. ಅದು ಯಾರು, ಯಾವಾಗ ಬರ್ದಿದ್ದು ಅಂತ ನನ್ಗೆ ಸುತರಾಂ ಗೊತ್ತಿಲ್ಲ. ಆದ್ರೆ, ಅದು ಓದ್ದಾಗ, ದೇವ್ರೆ, (ಕಮ್ಮಿ ಅಂದ್ರೆ) ನೂರಾರು ವರ್ಷಗಳಿಂದ ಇದೇ ಸ್ಥಿತಿ ಇದ್ಯಲ್ಲಪ್ಪ? ಯಾವಾಗ ಸರೀ ಹೋಗತ್ತೇ? ಅನ್ನಿಸ್ತು. ಅದಕ್ಕೇ ಏನ್ಗುರು ಮಾಡ್ತಿರೋ ಕೆಲ್ಸನ ಹೊಗಳ್ದೆ ಅಷ್ಟೆ.

ಆ ಸುಭಾಷಿತ ಹೀಗಿದೆ ನೋಡಿ.

ದಿಲ್ಲೀಶ್ವರಃ ವಾ ಜಗದೀಶ್ವರಃ ವಾ ಮನೋರಥಾನ್ ಪೂರಯಿತುಂ ಸಮರ್ಥಃ |

ಅನ್ಯೈಃ ನೃಪಾಲೈಃ ಪರಿದೀಯಮಾನಂ ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್ ||

ಅದನ್ನೆ ನಮ್ಮ ಮಾತಲ್ಲೇ ಹೇಳ್ಬೇಕೂಂದ್ರೆ,

ದಿಲ್ಲಿಯ ರಾಜ, ಅಥ್ವಾ ಜಗತ್ಗೇ ರಾಜ ಮಾತ್ರ

ಮನಸ್ಗೆ ಬೇಕಾದ್ದೆಲ್ಲ ಬಿಡದೇ ಕೊಡಬಲ್ಲ!

ಕೊಟ್ರೆ ಅವ್ರು ಇವ್ರು ಚಿಲ್ರೆ ಪಲ್ರೆ ರಾಜ್ರೆಲ್ಲ

ಉಪ್ಪಿಗೆ ಸಾಕಾಯ್ತೂಂದ್ರೆ, ಸೊಪ್ಪಿಗೆ ಸಾಲೋದಿಲ್ಲ
**!

(**ಅನುವಾದ ಮಾಡೋವಾಗ, ಮೂಲ್ದಲ್ಲಿರೋ ಶಾಕ = ತರ್ಕಾರಿ ಅನ್ನೋದ್ನ , ನಾನು ಸ್ವಲ್ಪ ಪ್ರಾಸ್ವಾಗಿರ್ಲಿ ಅಂತ ಸೊಪ್ಪು ಮಾಡ್ಬಿಟ್ಟಿದೀನಿ ಸ್ವಾಮೀ. ಎಷ್ಟೇ ಅಂದ್ರೂ, ನಮ್ಮ ಕರ್ನಾಟಕ್ದಲ್ಲಿ ಇರೋ ಅಷ್ಟು ಬೇರ್ಬೇರೆ ಸೊಪ್ಪು ಇನ್ನೆಲ್ಲೂ ಸಿಕ್ಕಲ್ಲವಲ್ಲ!)

ಅದ್ರಲ್ಲೂ ನೋಡಿ, ದೇವ್ರಿಗಿಂತ ಮೊದಲು ದಿಲ್ಲಿ ರಾಜನ್ನ ಹೇಳ್ತಾ ಇದಾನೆ ಈ ಕವಿ. ಇದನ್ನ, ದಕ್ಷಿಣದ ಯಾರೋ ಕವಿ ಬರ್ದಿದಾನೆ ಅನ್ನೋದ್ರಲ್ಲಿ ನಂಗೆ ಯಾವ ಅನ್ಮಾನಾನೂ ಇಲ್ಲ. ಅವತ್ತೂ, ಇವತ್ತೂ, ಯಾವತ್ತೂ ದಿಲ್ಲಿಯ ಕೃಪೆಗೆ ಕಾಯೋದೇ ನಮ್ಮ ಕೆಲ್ಸ ಆಗೋಯ್ತಲ್ಲ!

ಏನ್ಗುರು ಅಂತಾವ್ರು ಹೆಚ್ಲಿ, ಜನಕ್ಕೆ ನಮ್ಮದು ಏನು, ನಮ್ಗೆ ಸಲ್ಬೇಕಾದ್ದು ಏನು ಅನ್ನೋ ಅರಿವು ಬರ್ಲಿ, ಅನ್ಯಾಯ ಕಮ್ಮಿ ಆಗ್ಲಿ (ನಿಲ್ಲಲಿ ಅಂತ ಹೇಳ್ಬೇಕೂ ಅಂತಿದ್ದೆ, ಆದ್ರೆ ಅದು ತೀರಾ ಎತ್ರದ ಆಸೆ!, ಅಲ್ವಾ) ಇನ್ನಾದ್ರೂ ಅನ್ನೋ ಆಸೆ ನಂದು.

-ಹಂಸಾನಂದಿ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?