ಪ್ರಾಸದ ವರಸೆ

ಸಂಪದದಲ್ಲಿ, ಸುನಿಲ ಜಯಪ್ರಕಾಶರು ಭರತೇಶವೈಭವದ ಬಗ್ಗೆ ಮಾತಾಡುತ್ತ, ಪ್ರಾಸದ ಸುದ್ದಿ ತೆಗೆದರು. ಆಗ ತಟ್ಟನೆ, ಹಿಂದೆ ಇನ್ನೊಂದು ಅಲ್ಲೇ ಪೋಸ್ಟಿಗೆ ನಾನು ಹಾಕಿದ್ದ ಟಿಪ್ಪಣಿ ನೆನಪಾಯಿತು. ಸ್ವಲ್ಪ ಪ್ರಾಸವು ತ್ರಾಸು ಅನ್ನಿಸುವಷ್ಟೇ ಹೆಚ್ಚಿದ್ದರೂ, ಸ್ವಲ್ಪ ಬದಲಾವಣೆಗಳೊಡನೆ ಇಲ್ಲಿ ಮತ್ತೊಮ್ಮೆ ಹಾಕೋಣ ಅನ್ನಿಸಿತು!

ಈಗ ಓದಿ ಈ ಪದ್ಯ - ಆಸೆಯ ದೋಸೆ ಅಥವ ಪ್ರಾಸದ ವರಸೆ - ನಿಮಗಿದು ಪ್ರಯಾಸದ ವರಸೆಯಾಗಿ ಕಂಡರೆ, ನಾನೇ ಜವಾಬ್ದಾರಿ!

ದೋಸೆ ದೋಸೆ ತಿನ್ನಲು ಆಸೆ

ಅಯ್ಯೋ ಮನಸೇ!
ಇರೋದ್ ಸ್ಯಾನ್ ಹೋಸೆ
ಅಂತ್ಯಾಕ್ ನಿರಾಸೆ?

ದೋಸೆಮೇಲಾದ್ರೆ
ತಡೀಲಾರ್ದಾಸೆ
ಮೆಂತ್ಯ ಅಕ್ಕಿ
ಮೇಲುದ್ದಿನ್ಬೇಳೇ
ಹಾಕಿ ನೆನೆಸೇ!

ನಾಕು ಗಂಟೆ ಬಿಟ್ಟು
ರುಬ್ಬು ಗುಂಡಲ್ಹಾಕಿ
ಚೆನ್ನಾಗ್ ತಿರುವಿಟ್ಟು
ತಯಾರ್ಸು ದೋಸೆಹಿಟ್ಟು!

ಮಾರ್ನೆ ದಿನವೆ
ನಾನ್-ಸ್ಟಿಕ್ ಕಾವ್ಲೆ
ಒಲೆಮೇಲಿಟ್ರೆ
ಶುರು ನೋಡಾಗ್ಲೆ
ಸೌಟಿಗೊಂದು ದೋಸೆ

ಅಜ್ಜಿಯು ಮಾಡಿದ
ಮೆಂತ್ಯದ ದೋಸೆ
ಅಮ್ಮನು ಮಾಡಿದ
ರಾಗಿಯ ದೋಸೆ
ಮುದ್ದಿನ ಮಡದಿಯ
ಉದ್ದಿನ ದೋಸೆ
ವಿದ್ಯಾರ್ಥಿ ಭವನದ
ಮಸಾಲೆ ದೋಸೆ
ನಿಂತೇ ಮುಗಿಸುವ
ದರ್ಶಿನಿ ದೋಸೆ
(ಗತಿ ಬೇರೆ ಇರದೆ)
ನಾನೇ ಮಾಡಿದ
ಧಿಡೀರು ದೋಸೆ

ಯಾವ್ದಾದ್ರೂ ದೋಸೆ
ಯಾರ್ಮಾಡಿದ್ರು ದೋಸೆ
ತಿನ್ನಲು ಸೊಗಸೇ!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?