ಹೆಸರಿಲ್ಲದ್ದು !

ಯಾರನ್ನಾದರೂ ಬೆಟ್ಟುಮಾಡಿ ತೋರುವುದು ಸಭ್ಯತೆಯಲ್ಲ ಅನ್ನುವುದು ಹಲವರ ಅಂಬೋಣ. ಅದನ್ನು ನೀವು ಒಪ್ಪುವಿರೋ, ಬಿಡುವಿರೋ, ಆದರೆ, ’ತೋರು’ವ ಕೆಲಸ ಮಾಡುವ ಬೆರಳಿಗೆ ತೋರುಬೆರಳು ಎಂಬ ಹೆಸರೇನೋ ಸಾರ್ಥಕ ಅನ್ನಿಸುತ್ತೆ. ಅಲ್ಲವೆ? ಅದಲ್ಲದೆ, ಎಲ್ಲಕ್ಕಿಂತ ಚಿಕ್ಕ ಬೆರಳಿಕೆ ಕಿರುಬೆರಳು ಎನ್ನುವುದೂ, ಎಲ್ಲಕ್ಕೂ ದಪ್ಪದ ಬೆರೆಳಿಗೆ ಹೆಬ್ಬೆರಳು ಎನ್ನುವುದೂ, ಅಷ್ಟೇ ಅರ್ಥಪೂರ್ಣ. ಇನ್ನು ನಡು ಬೆರಳು- ಅದೂ ಕೂಡ ಸ್ಥಾನಸೂಚಕ. ಉಳಿದದ್ಯಾವುದು?

ಆ ಬೆರಳಿಗೆ ಆಗಾಗ ಉಂಗುರ ತೊಡಿಸುವುದರಿಂದ, ಅದಕ್ಕೆ ಉಂಗುರದ ಬೆರಳು ಎನ್ನುವ ರೂಢಿ ಇದೆ. ಸಂಸ್ಕೃತದಲ್ಲಿ, ಈ ಬೆರಳಿಗೆ ಏನು ಹೆಸರು ಗೊತ್ತೇ?

’ಹೆಸರಿಲ್ಲದ್ದು’ !

ಹೌದು. ಈ ಬೆರಳಿಗೆ ’ಅನಾಮಿಕಾ’ ಅಥವ ಹೆಸರಿಲ್ಲದ್ದು ಎನ್ನುವುದೇ ಸರಿಯಾದ ಹೆಸರು ಸಂಸ್ಕೃತದಲ್ಲಿ. ಉಂಗುರದ ಬೆರಳು ಎಂಬರ್ಥ ಬರುವ ಹೆಸರಿದೆಯೋ ಇಲ್ಲವೋ ನಾನರಿಯೆ.

ಆದರೆ, ಈ ಹೆಸರು ಹೇಗೆ ಬಂತೆಂಬುದರ ಬಗ್ಗೆ ಮಾತ್ರ ಕುತೂಹಲಕಾರಿ ಕಥೆಯೊಂದಿದೆ. ಕೇಳಿ.

ಪುರಾ ಕವೀನಾಂ ಗಣನಾ ಪ್ರಸಂಗೇ ಕನಿಷ್ಟಕಾದಿಷ್ಟಿತ ಕಾಲಿದಾಸಃ
ಅದ್ಯಾಪಿ ತತ್ತುಲ್ಯ ಕವೇರಭಾವಾತ್ ಅನಾಮಿಕಾ ಸಾರ್ಥವತೀ ಬಭೂವ

ಇದನ್ನೇ ಕನ್ನಡದಲ್ಲಿ ನಾನು ಹೀಗೆ ಹೇಳುವೆ:

(ಇದು ಕನ್ನಡವೇ? ಎಂದು ಕೇಳದಿರಿ :-) )

ಹಿಂದೊಮ್ಮೆ ವರಕವಿಗಳನು ಎಣಿಸುತಿರಲು
ಕಿರುಬೆರಳಲಿ ಇಟ್ಟರು ಆ ಕಾಳಿದಾಸನನು
ಇಂದಿಗೂ ಅವನ ಸಮ ಕವಿ ಬರದೆ ಇರಲು
ಹೆಸರಿಲ್ಲದ್ದು ಆಯಿತದು ಅರ್ಥಪೂರಿತವು

ಕವಿಗಳನ್ನು ಎಣಿಕೆ ಮಾಡುವಾಗ, ಕಾಳಿದಾಸ ಎಂದು ಹೇಳಿ, ಕಿರುಬೆರಳನ್ನು ಮಡಿಚಿಟ್ಟರಂತೆ ( ಎಣಿಸುವಾಗ ನಾವು ಹಾಗೆ ತಾನೇ ಮಾಡುವುದು?).ಈಗ ನಡೆಯುವ ಜನಗಣತಿಯ ತರಹ ಆಗ ಕವಿಗಣತಿ ಇತ್ತೋ ಏನೋ? ನಂತರ ಎರಡನೆಯ ಬೆರಳಿಗೆ, ಕಾಳಿದಾಸನಿಗೆ ಸಾಟಿಯಾದವನೋ, ಅಥವಾ ಅವನನ್ನು ಮೀರಿಸುವವನೋ ಯಾರೂ ಸಿಗದೇ ಹೋಗಲು, ಆ ಬೆರಳಿಗಿದ್ದ ’ಅನಾಮಿಕ’ ’ಹೆಸರಲ್ಲದ್ದು’ ಎಂಬ ಹೆಸರು ಬಹಳ ಅರ್ಥಪೂರ್ಣವಾಯಿತು ಎಂದು ಸುಭಾಷಿತಕಾರ ಹೇಳುತ್ತಾನಿಲ್ಲಿ.

ಅಂದಹಾಗೆ, ಇದು ಯಾರು ಬರೆದ ಪದ್ಯ ಅನ್ನುವುದು ನನಗೆ ಗೊತ್ತಿಲ್ಲ. ತಿಳಿದವರಿದ್ದರೆ ಬರೆಯಿರಿ.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?