ಕಟಪಯಾದಿ ಸೂತ್ರ

ಕೆಲವು ದಿನಗಳ ಹಿಂದೆ ರಮೇಶಬಳಗಂಚಿಯವರು ಒಂದು ಸಬ್ಸ್ಟಿಟ್ಯೂಷನ್ ಸೈಫರ್ ಅಮ್ಮಜಿಖಷೆಸ್ಸ ಖನಮ ಒಜಿ ಎಂಬ ಬರಹವನ್ನು ಬರೆದಿದ್ದರು. ಆಗ, ಕಟಪಯಾದಿ ಸೂತ್ರದ ಬಗ್ಗೆ ಬರೆಯಬಹುದಲ್ಲ ಅನ್ನೋ ಯೋಚನೆ ಬಂತು.

ಬೇರೆ ದೇಶಗಳಿಗಿಂತ ಮೊದಲು ಭಾರತದಲ್ಲೇ ಭಾರೀ ಅಂಕೆಗಳ ಉಪಯೋಗವಾಗಿದೆ ಅನ್ನೋದು ನಿಚ್ಚಳವಾಗಿರುವ ಸಂಗತಿ. ನಮ್ಮ ಮೂವತ್ತುಮೂರು ಕೋಟಿ ದೇವತೆಗಳಿಂದ ಹಿಡಿದು, ಕೃತ-ತ್ರೇತಾ-ದ್ವಾಪರ-ಕಲಿಗಾಲಗಳಲ್ಲಿ ಬರುವ ವರ್ಷಗಳ ತನಕ ದೊಡ್ಡ ಅಂಕೆಗಳದ್ದೇ ಭರಾಟೆ.

ಆದರೆ, ಹಿಂದೆ ಅಂಕೆಗಳನ್ನು ಅಕ್ಷರಗಳಿಂದ, ಪದಗಳಿಂದ ಗುರುತಿಸುತ್ತಿದ್ದರು ಎನ್ನುವುದು ಗೊತ್ತಿದೆಯೇ ನಿಮಗೆ? ಇಲ್ಲವಾದರೆ ಮುಂದೆ ಓದಿ.

ಇದಕ್ಕೆ ಕಟಪಯಾದಿ ಸೂತ್ರ ಎಂದು ಹೆಸರು. ಈ ಸೂತ್ರದ ಸಹಾಯದಿಂದ, ದೊಡ್ಡ ಸಂಖ್ಯೆಗಳನ್ನು ನೆನಪಿನಲ್ಲಿಡಲು ಸುಲಭವಾದ ಪದಗಳನ್ನೋ, ಶ್ಲೋಕಗಳನ್ನೋ ಮಾಡಿಕೊಳ್ಳುತ್ತಿದ್ದರು. ಉದಾಹರಣೆಗೆ,ಬೆಂಗಳೂರಿನಲ್ಲಿ ೪೮,೪೮,೨೫೮ ಜನ ಕನ್ನಡಿಗರಿದ್ದಾರೆ ಅಂದುಕೊಳ್ಳೋಣ. ಈ ಅಂಕೆಯನ್ನು ನೆನಪಿನಲ್ಲಿಡುವುದು ಸುಲಭವೇ ಅಥವಾ ಸಮರಸವೇಜೀವನ ಎನ್ನುವುದನ್ನು ನೆನಪಿನಲ್ಲಿಡುವುದು ಸುಲಭವೋ? ಈ ಸಂದರ್ಭದಲ್ಲಿ ಹೆಚ್ಚು ವ್ಯತ್ತ್ಯಾಸ ಕಾಣ್ದಿದ್ದರೂ, ಪದವನ್ನು (ಅಥವಾ ವಾಕ್ಯವನ್ನು) ನೆನಪಿನಲ್ಲಿಡುವುದು ಸರಳ ಅನ್ನೋದು ಪುಟ್ಟಮಕ್ಕಳಿಗೂ ಗೊತ್ತಾಗೋ ಮಾತು. ಆದ್ರೆ, ಸಮರಸವೇ ಜೀವನ ಅನ್ನೋದು ಈ ಅಂಕೆಗೆ ಹೇಗೆ ಸಮವಾಗುತ್ತೆ ಅನ್ನೋದನ್ನ ಅರ್ಥ ಮಾಡ್ಕೊಂಡ್ರೆ ವಾಸಿ. ಅಲ್ವಾ?

ಈ ಸೂತ್ರವನ್ನು ಜ್ಯೋತಿಷ್ಯದ, ಬಹುಶಃ ಗಣಿತದ ಇತರ ಹೊತ್ತಿಗೆಗಳಲ್ಲೂ ಉಪಯೋಗಿಸಿಸುತ್ತಿದ್ದರೆಂದು ತೋರುತ್ತೆ. ಇದಲ್ಲದೇ ಬೇರೆ ರೀತಿಯ ಸಬ್ಸ್ಟಿಟ್ಯೂಷನ್ ಸೈಫರ್ ಗಳು ಕೂಡ ಇದ್ದಿರಬಹುದು. ೧೭-೧೮ನೇ ಶತಮಾನದಿಂದೀಚೆ, ಕರ್ನಾಟಕ ಸಂಗೀತದಲ್ಲೂ ಇದನ್ನು ಬಳಸಲಾಗಿದೆ.

ಇನ್ನು ಮುನ್ನುಡಿ ಮುಗಿಸಿ ಸೂತ್ರಕ್ಕೆ ಬರೋಣವೇ?

ಕಟಪಯಾದಿ ಸೂತ್ರ ಬಹಳ ಸರಳ: ಕಾದಿನವ-ಟಾದಿನವ-ಪಾದಿಪಂಚ-ಯಾದ್ಯಷ್ಟ - ಅಂದರೆ, ಕಾದಿಂದೊಂಬತ್ತು-ಟಾದಿಂದೊಂಬತ್ತು-ಪಾದಿಂದೈದು-ಯಾದಿಂದೆಂಟು ಎಂದಿಟ್ಟುಕೊಳ್ಳಿ.

ಇದು ಏನನ್ನ ಹೇಳುತ್ತಿದೆ ಎಂದಿರಾ? ನಮ್ಮ ಅಕ್ಷರಮಾಲೆಯನ್ನು ನೋಡಿ:

ಕ ಖ ಗ ಘ ಙ ‌
ಚ ಛ ಜ ಝ ಞ್
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ

ಇದರಲ್ಲಿ ಈ ಸೂತ್ರ, ಪ್ರತಿ ಅಕ್ಷರಕ್ಕೂ ಒಂದು ಅಂಕೆಯನ್ನು ನಿಗದಿಮಾಡುತ್ತೆ. ಕಾದಿಂದೊಂಬತ್ತು - ಎಂದರೆ, ಕ = ೧, ಖ=೨ .... ಝ= ೯; ಹಾಗೇ, ಟಾದಿಂದೊಂಬತ್ತು ಎಂದರೆ ಟ =೧, ಠ =೨, ಡ = ೩ ..... ಧ = ೯; ಪಾದಿಂದೈದು ಎಂದರೆ, ಪ = ೧ .....ಮ = ೫ ; ಯಾದಿಂದೆಂಟು ಎಂದರೆ, ಯ = ೧ , ರ = ೨ .....ಹ=೮.

ನ , ಮತ್ತು ಣ ಈ ಎರಡೂ ಅಕ್ಷರಗಳಿಗೆ ಬೆಲೆ ನಿಗದಿಇಲ್ಲದಿರುವುದರಿಂದ ಅದಕ್ಕೆ ಸೊನ್ನೆ ಎಂದಿಟ್ಟುಕೊಳ್ಳುವುದು.

ಈಗ ಸಂಪದ ಅನ್ನೋ ಪದವನ್ನು ತೊಗೊಳ್ಳಿ; ಇದರಲ್ಲಿ ಬರುವ ಪ್ರತಿ ವ್ಯಂಜನ ಅಕ್ಷರಕ್ಕೂ ಅದರ ಬೆಲೆ ಕಟ್ಟುತ್ತಾ ಬರೋಣ.
ಸ = ಯಾದಿಂದೆಂಟರಲ್ಲಿ, ಇದು ಏಳನೆಯದು ; ಹಾಗಾಗಿ ಇದರ ಬೆಲೆ ೭
ಪ = ಪಾದಿಂದೈದರಲ್ಲಿ, ಇದು ಮೊದಲದ್ದು; ಹಾಗಾಗಿ ಇದರ ಬೆಲೆ ೧
ದ = ಟಾದಿಂದೊಂಬತ್ತರಲ್ಲಿ, ಇದು ಎಂಟನೆಯದು; ಹಾಗಾಗಿ ಇದರ ಬೆಲೆ ೮.

ಒಟ್ಟಿಗೆ ಸೇರಿಸಿದರೆ ಸಂಪದ = ೭೧೮ ; ಆದರೆ ಕಟಪಯಾದಿ ಸೂತ್ರದ ಕೊನೆಯಭಾಗ "ಅಂಕಾನಾಂ ವಾಮತೋ ಗತಿಃ" ಅನ್ನುತ್ತೆ; ಅಂದರೆ, ಅಂಕಿಗಳನ್ನು ಎಡಕ್ಕೆ ಬರ್ಕೊಂಡು ಹೋಗಿ ಅಂತ. ಅಂದರೆ ಸಂಪದ ಅನ್ನೋ ಪದದ ಬೆಲೆ ೮೧೭ ಆಗತ್ತೆ! ಹೀಗೇ ನಿಮಗೆ ಯಾವ ಪದ ಬೇಕೋ ಆ ಪದವನ್ನು ತೊಗೊಂಡು ಅದರ ಅಂಕೆ ಬೆಲೆ ನಿರ್ಧಾರ ಮಾಡ್ಕೋಬಹುದು. ಯಾವ ಸಂಖ್ಯೆಯನ್ನು ಕೂಡ ಕೋಡ್ ಮಾಡಲು, ಹೀಗೆ ಈ ಕಟಪಯಾದಿ ಸೂತ್ರ ಬಳಸುತ್ತಾ ಇದ್ದರು.

ಕರ್ನಾಟಕ ಸಂಗೀತದಲ್ಲಿ ಇದನ್ನ ಹೇಗೆ ಬಳಸಿದಾರೆ ಅಂತ ಹೇಳ್ಬಿಡ್ತೀನಿ. ೭೨ ಮೇಳರಾಗಗಳಿವೆ ಕರ್ನಾಟಕ ಸಂಗೀತದಲ್ಲಿ. ಅದನ್ನ ಒಂದು ಕ್ರಮದಲ್ಲಿ ಜೋಡಿಸಿದಾರೆ. ಎಲ್ಲ ಮೇಳರಾಗಗಳಿಗೂ, ಅವುಗಳ ಅನುಕ್ರಮ ಸಂಖ್ಯೆ ಎಷ್ಟು ಅಂತ ಗೊತ್ತಾಗೋ ತರಹ ಹೆಸರು ಕೊಟ್ಟಿದಾರೆ. ಆ ಮೊದಲೇ, ಬೇರೆ ಹೆಸರಿದ್ದ ರಾಗಗಳಿಗೆ, ಎರಡಕ್ಷರ ಸೇರಿಸಿ, ಅದನ್ನ ಕಟಪಯಾದಿ ಸೂತ್ರ ಪಾಲಿಸೋ ಹಾಗೆ ಮಾಡಿದಾರೆ.

ಉದಾಹರಣೆಗೆ ಕಲ್ಯಾಣಿ ರಾಗವನ್ನ ಮೇಚಕಲ್ಯಾಣಿ ಅಂತ ಕರೆದು ಅದರ ಸಂಖ್ಯೆ ೬೫ ಅಂತಲೂ, ಮಾಳವಗೌಳವನ್ನ ಮಾಯಾಮಾಳವಗೌಳ ಅಂತ ಕರೆದು, ಅದರ ಸಂಖ್ಯೆ ೧೫ ಅಂತಲೂ ಗೊತ್ತಾಗೋ ಹಾಗೆ ಮಾಡಿದಾರೆ. ಇನ್ನು ಈ ಮೇಳದ ಪದ್ಧತಿ ಬಂದ ಮೇಲೆ ಕಲ್ಪಿಸಿದ ಹೊಸ ರಾಗಗಳಿಗೆ ಹೆಸರುಕೊಡುವಾಗಲೆ, ಗಾಯಕಪ್ರಿಯ, ಸರಸಾಂಗಿ ಅಥವಾ ವಾಗಧೀಶ್ವರಿ ಹೀಗೆ ಕಟಪಯಾದಿ ಸೂತ್ರವನ್ನು ಪಾಲಿಸೋ ಹೆಸರೇ ಕೊಟ್ಟಿದ್ದಾರೆ.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?