ರಾಹು ಕೇತು ಕಾಟ, ಚಕ್ರವ್ಯೂಹ ಮತ್ತು ಅಭಿಮನ್ಯುವಿನ ಸಾವು

ಕಳೆದ ಬರ ಬರೆದ್ಮೇಲೆ ನಂತರ, ಕೆಲವು ಗೆಳೆಯರು ಇ-ಮೆಯ್ಲ್ ಮಾಡಿದ್ದರಿಂದ ನಾನು ಕೊಟ್ಟ ವಿವರ ಸ್ವಲ್ಪ ಕಮ್ಮಿಯಾಗಿತ್ತು ಅಂತ ಅನ್ನಿಸ್ತು. ಮುಖ್ಯವಾಗಿ, ಗ್ರಹಣ ಚಕ್ರವೂ, ರಾಹು ಕೇತು ಬಿಂದುಗಳು ಅಪ್ರದಕ್ಷಿಣವಾಗಿ ಸುತ್ತುವ ಅವಧಿಯೂ ಹದಿನೆಂಟೂ ಚಿಲ್ಲರೆ ವರ್ಷಗಳಾದರೂ, ಅವೆರಡು ಯಾಕೆ ಬೇರೆ ಅನ್ನೋ ಬಗ್ಗೆ ನಾನು ಮಾತಾಡಿರಲಿಲ್ಲ. ಅದಕ್ಕೇ, ಮಹಾಭಾರತದ ಯುದ್ಧದ ವಿಷಯಕ್ಕೆ ಹೋಗೋ ಮೊದಲು ಆ ಬಾಕಿಯನ್ನು ತೀರಿಸಿಬಿಡೋಣ. ಅಲ್ವೇ?

ಮೊದಲೇ ಹೇಳಿದ್ದೆ. ಈ ಗ್ರಹಣ ( ಅದ್ರಲ್ಲೂ ಸೂರ್ಯ ಗ್ರಹಣ) ಆಗೋದು ಭೂಮಿ ಮೇಲಿರೋವರ ಸೌಭಾಗ್ಯ ಅಂತ. ಯಾಕಂದ್ರೆ, ಎಂಟು ಹತ್ತು ಇಪ್ಪತ್ತು ಉಪಗ್ರಹಗಳಿರೋ ಗುರು ಶನಿ ಅಂತಹ ಗ್ರಹಗಳಿಂದ ಈ ರೀತಿ ಸೂರ್ಯ ಗ್ರಹಣ ಆಗೋದಿಲ್ಲ ಅಂತ. ಸೂರ್ಯ ಚಂದ್ರಂಗಿಂತ ಸುಮಾರು ನಾನೂರರಷ್ಟು ದೊಡ್ಡವನು. ಹಾಗೇ ಚಂದ್ರ ಭೂಮಿಗಿರೋ ದೂರ ಲೆಕ್ಕ ಹಾಕ್ಕೊಂಡ್ರೆ, ಸುಮಾರು ನಾನೂರರಷ್ಟು ಹೆಚ್ಚು ದೂರ್ದಲ್ಲಿದಾನೆ. ಹಾಗಾಗೇ ಭೂಮಿಯಿಂದ ನೋಡಿದಾಗ ಈ ಎರಡೂ ಕಾಯಗಳು ನಮಗೆ ಸುಮಾರು ಒಂದೇ ಅಳತೆಯಲ್ಲಿ ಕಾಣತ್ವೆ. ಅಲ್ಲದೆ, ಅವೆರಡರ ಪಾತಳೀನೂ ಒಂದಕ್ಕೊಂದು ಓರೆಯಾಗಿದ್ರೂ, ಒಂದನ್ನೊಂದು ಅಡ್ಡ ಹಾಯೋ ಸಮಯದಲ್ಲಿ ಎರಡೂ ಒಂದೇ ಕಡೇಲಿದ್ರೆ ಗ್ರಹಣ ಆಗತ್ತೆ ಅಂತ.

ಹಾಗೇ, ಇನ್ನೂ ಒಂದೆರಡು ಇಂತಹ ಅಕಸ್ಮಾತ್ ಆಗಿ ಆಗಿರೋ ವಿಷ್ಯಗಳಿಂದಲೇ ಈ ಹದ್ನೆಂಟು ವರ್ಷ ಹತ್ತು ದಿನದ ಗ್ರಹಣ ಚಕ್ರ (ಸೆರಾಸ್ ಸೈಕಲ್) ಉಂಟಾಗೋದು. ಹೋದಸಲವೇ ಹೇಳ್ದೆ. ರಾಹು ಕೇತು ಬಿಂದುಗಳೂ ಸುಮಾರು ಹದಿನೆಂಟೂವರೆ ವರ್ಷದಲ್ಲಿ ಅಪ್ರದಕ್ಷಿಣವಾಗಿ ಸುತ್ತುತ್ತಾ ಇರತ್ವೆ ಆಕಾಶದಲ್ಲಿ ಅಂತ. ಸೂರ್ಯ ಆಕಾಶದಲ್ಲಿ ಯಾವುದಾದರೂ ನಿಂತಿರುವ ಬಿಂದು (ನಮ್ಮ ಕಣ್ಣಲ್ಲಿ) - ಉದಾಹರಣೇಗೆ ಒಂದು ನಕ್ಷತ್ರ - ಚಿತ್ತಾ - ಅಂತಿಟ್ಕೊಳ್ಳಿ, ಅಲ್ಲಿಂದ ಹೊರಟು ಮತ್ತೆ ವಾಪಸ್ ಅಲ್ಲೀಗೆ ಬರೋ ಕಾಲವನ್ನೇ ನಾವು ಒಂದು (ನಾಕ್ಷತ್ರಿಕ) ವರ್ಷ ಅಂತೀವಿ. ಇದು ಮುನ್ನೂರರವತ್ತೈದೂ ಕಾಲು ದಿವಸ ಆಗತ್ತೆ.

ಈಗ ಈ ಲೆಕ್ಕಾಚಾರಕ್ಕೆ ಭೂಮಿಯೇ ನಡುವಲ್ಲಿದೆ, ಸೂರ್ಯ, ರಾಹು, ಕೇತು ಚಂದ್ರಗಳೇ ಸುತ್ತತಾ ಇವೆ ಅಂದ್ಕೊಂಡ್ರೆ ತಪ್ಪೇನಾಗಲ್ಲ. ಸೂರ್ಯ ಪ್ರದಕ್ಷಿಣೆ ಮಾಡ್ತಾನೆ ಒಂದ್ವರ್ಷದಲ್ಲಿ. ರಾಹು ಕೇತು ಅಷ್ಟು ಹೊತ್ತಿಗೆ ಸ್ವಲ್ಪ ಹಿಂದೆ ಹೋಗಿರತ್ವೆ ಅಲ್ವಾ ( ಸುಮಾರ ೧/೧೮ * ೩೬೦ ಅಂಶಗಳಷ್ಟು). ಹಾಗಾರೆ, ಇವತ್ತು ಸೂರ್ಯ ರಾಹುವಿನಲ್ಲಿ (ಅಥವಾ ರಾಹುವಿನ ಮುಂದೆ/ಹಿಂದೆ ಇದಾನೆ ಅಂದ್ಕೊಂಡ್ರೆ, ಮತ್ತೆ ಅವನು ರಾಹುವಿಗೆ ಸಿಗೋ ಹೊತ್ತಿಗೆ ಒಂದು ವರ್ಷಕ್ಕಿಂತ ಕಮ್ಮಿ ವೇಳೆ ಆಗ್ಬೇಕು ಅಲ್ವಾ?

ಹೌದು. ಇದು ಸುಮಾರಾಗಿ ೩೪೬.೬ ದಿವಸಕ್ಕೇ ಆಗತ್ತೆ. ಇದನ್ನ ಡ್ರೆಕೋನಿಯನ್ ವರ್ಷ ಅಂತಾರೆ - ಕನ್ನಡದಲ್ಲಿ ನಾವು ಸರಳವಾಗಿ, ರಾಹು-ಕೇತುವರ್ಷ ಅನ್ಬಹುದೇನೋ.

ಇನ್ನು ಚಂದ್ರ-ಸೂರ್ಯ ಒಟ್ಟಿಗೆ ಬರೋದು, ಅಥವಾ ಒಂದಕ್ಕೊಂದು ಎದುರು ಬರೋದು, ಹೇಗೆ ಅನ್ನೋದಂತೂ ಎಳೇ ಮಕ್ಕಳಿಗೇ ಗೊತ್ತು. ಅಲ್ವಾ? ಅದನ್ನೇ ನಾವು ಹುಣ್ಣಿಮೆ ಅಮಾವಾಸ್ಯೆ ಅನ್ನೋದು. ಇದೇ ಒಂದು ಚಾಂದ್ರಮಾನ ತಿಂಗಳು. ಈ ಅವಧಿ ಸುಮಾರಾಗಿ ೨೯.೫ ದಿವಸದಷ್ಟು ಉದ್ದ ಇರತ್ತೆ.

ಹಾಗೇ, ಚಂದ್ರ, ಒಂದು ನಕ್ಷತ್ರದಿಂದ ಹೊರಟು ಮತ್ತೆ ಮರಳಿ ಅಲ್ಲಿಗೇ ಬರೋದಕ್ಕೆ, ಮತ್ತೆ ಇಲ್ಲಿ ರಾಹು (ಅಥವಾ ಕೇತು)ವಿನಿಂದ ಹೊರಟು ಮತ್ತೆ ಅಲ್ಲಿಗೇ ಬರೋದಕ್ಕೆ ಬರೋ ಕಾಲ ೨೭.೨ ದಿವಸ. (ನಿಂತಿರೋ ನಕ್ಷತ್ರಕ್ಕೆ ಹೋಲಿಸಿದರೆ, ರಾಹು/ಕೇತುವನ್ನ ಮುಟ್ಟೋ ಅವಧಿ ಸ್ವಲ್ಪೇ ಸ್ವಲ್ಪ ಕಡಿಮೆ ಇರ್ಬೇಕು. ಯಾಕೆ? ಅನ್ನೋದನ್ನ ನೀವೇ ಯೋಚಿಸಿ!). ಇದನ್ನ ನಾವು ರಾಹುಕೇತು ಮಾಸ ಅನ್ನೋಣ (ಡ್ರೆಕೋನಿಕ್ ಮಂತ್).

ಈಗ ನೋಡಿ ತಮಾಷೆ.

೧೯ ರಾಹುಕೇತುವರ್ಷಗಳು = ೧೯ * ೩೪೬.೪ = ೬೫೮೫.೭೮ ದಿನ
೨೪೨ ರಾಹುಕೇತುಮಾಸಗಳು = ೨೪೨ * ೨೭.೨ = ೬೫೮೫.೩೬ ದಿನ
೨೨೩ ಚಾಂದ್ರಮಾನಮಾಸಗಳು= ೨೨೩ *೨೯.೫ = ೬೫೮೫.೩೨ ದಿನ

ಈ ಮೂರೂ ಸುಮಾರು ಹತ್ತು ಗಂಟೆಯೊಳಗಿನ ಅವಧಿಯೊಳಗೇ ಬರತ್ವೆ!

:) :) :)

ನೋಡಿ ಈಗ ಏನಾಯ್ತು. ಇವತ್ತು ಸೂರ್ಯ ಚಂದ್ರ ಎರಡೂ ರಾಹು ಬಿಂದುವಿನಲ್ಲಿದ್ರು ಅಂದ್ಕೊಳಿ. ಅಂದ್ರೆ ಇವತ್ತು ಅಮಾವಾಸ್ಯೆ ಆಗಿತ್ತು. ಆಗ ೬೫೮೫ ದಿವಸ ಆದಮೇಲೆ ಮತ್ತೆ ಸೂರ್ಯ ಚಂದ್ರ ಎರಡೂ ರಾಹುವಿನಲ್ಲೇ ಇರ್ತಾರೆ, ಮತ್ತೆ ಅಮಾವಾಸ್ಯೆಯೇ ಆಗಿರತ್ತೆ!

ಇದೇ ನೋಡಿ ಗ್ರಹಣ ಚಕ್ರದ ಒಳಗುಟ್ಟು. ಈಗ ಗೊತ್ತಾಯ್ತಲ್ಲ, ಯಾಕೆ ರಾಹು ಕೇತು ಹಿಂದಕ್ಕೆ ಸುತ್ತುತ್ತಾ ಇರೋ ಕಾಲವೂ, ಮತ್ತೆ ಗ್ರಹಣ ಚಕ್ರವೂ (ಒಂದಕ್ಕೊಂದು ಸ್ವಲ್ಪ ಸಂಬಂಧ ಇದ್ದರೂ) ಬೇರೆ ಬೇರೆ ಅಂತ?

*****

ಈಗ ಮುಗಿತಾಯ ಹಾಡಕ್ಕೆ ಮುಂಚೆ ನನ್ನನ್ನ ಕೊರೀತಿರೋ ಒಂದು ವಿಷ್ಯ.

ಮಹಾಭಾರತದ ಯುದ್ಧದಲ್ಲಿ ಚಕ್ರವ್ಯೂಹಕ್ಕೆ ಸಿಕ್ಕಿ ಅಭಿಮನ್ಯು ಸತ್ತದ್ದು ಎಲ್ರಿಗೂ ಗೊತ್ತು. ಆಗ, ಸಿಂಧುರಾಜ ಜಯದ್ರಥ ಅಭಿಮನ್ಯುವನ್ನ ಚಕ್ರವ್ಯೂಹದೊಳಗೆ ಬಿಟ್ಟು, ಆಮೇಲೆ ಹೊರಗೆ ಹೋಗೊದಕ್ಕೆ ಬಿಡಲಿಲ್ಲವಂತೆ. ಚಿಕ್ಕ ಹುಡುಗನ್ನ ಎಲ್ಲ್ರೂ ಸೇರಿ ಕೊಂದ್ಬಿಟ್ರು.

ಮತ್ತೆ ಅರ್ಜುನ ಇದನ್ನ ತಿಳ್ದ ತಕ್ಷಣ, ಮಾರನೇದಿನ ಸೂರ್ಯ ಮುಳ್ಗೋದ್ರೊಳ್ಗೆ ಜಯದ್ರಥನ್ನ ಕೊಲ್ತೀನಿ, ಇಲ್ಲ ನಾನೇ ಸಾಯ್ತೀನಿ ಅಂತಾನೆ. ಇದು ಗೊತ್ತಾಗಿ, ಕೌರವರೆಲ್ಲ, ಜಯದ್ರಥನ್ನ ಹೊರಕ್ಕೇ ಬರ್ದಿರೋ ತರಹ ಕಾಪಾಡ್ಕೋತಾರೆ. ಸೂರ್ಯ ಮುಳುಗಿ ಸಂಜೆಯಾಗತ್ತೆ. ಆಗ ಎಲ್ರೂ, ಅವನನ್ನ ಹೊರಗೆ ತಂದು ಅರ್ಜುನಂಗೆ ತೋರ್ಸಿ, ಈಗ ಮಾಡು ಅಗ್ನಿ ಪ್ರವೇಶ ಅಂತಾರೆ. ಆಗ, ಕೃಷ್ಣ ಸೂರ್ಯನ್ನ ತೋರಿಸಿ, ನೋಡಿ ಇನ್ನೂ ಸೂರ್ಯ ಮುಳುಗಿಲ್ಲ ಅಂದದ್ದೇ ತಡ, ಅರ್ಜುನ ಜಯದ್ರಥನ್ನ ಸಾಯ್ಸ್ತಾನೆ. ಇದಕ್ಕೆ ಕೃಷ್ಣ ಸೂರ್ಯನ್ನ ಅವನ ಚಕ್ರದಿಂದ ಮಾಯ ಮಾಡ್ಬಿಟ್ಟ ಅನ್ನೋ ಕಥೇನೂ ಕಟ್ಬಿಟ್ಟಿದ್ದಾರೆ ನಮ್ಮ ಹಿಂದಿನೋವ್ರು. (ಇದು ಮೂಲ ಭಾರತದಲ್ಲಿ ಹೇಗಿದೆ ಅನ್ನೋದನ್ನ ಓದ್ಬೇಕು ನಾನಿನ್ನೂ - ಅಲ್ಲಿ ಹೇಗಿದೆ ಅಂತ ನನ್ಗೆ ಸರಿಯಾಗಿ ಗೊತ್ತಿಲ್ಲ- ಇದು ಒಂದು ಜನಪ್ರಿಯ ವರ್ಶನ್ ಅಷ್ಟೇ)

ಈಗ ಈ ವಿವರ ನೋಡಿದ್ರೆ, ಇದೊಳ್ಳೆ ಸೂರ್ಯ ಗ್ರಹಣದ ತರಹವೇ ಇದೆ ಅಲ್ವಾ?

(ಮಹಾಭಾರತ ಯುದ್ಧದ ಕಾಲ ಕಂಡು ಹಿಡ್ಯಕ್ಕೆ ಯತ್ನಿಸಿದೋರೆಲ್ಲ, ಈ ಅಂಶದಿಂದಲೇ ಮುಂದೆ ಹೋಗೋದು).

ಆದರೆ ಅದು ಗ್ರಹಣವೇ ಆಗಿದ್ರೆ, ಸೂರ್ಯ ಮುಳ್ಗೇ ಬಿಟ್ಟ ಅಂತ ಯಾಕನ್ಕೊಂಡ್ರು? ಯಾಕಂದ್ರೆ ಗ್ರಹಣಗಳನ್ನ ನೋಡಿ ಅವ್ರಿಗೂ ಗೊತ್ತಿರ್ಬೇಕು ಅಲ್ವಾ?

ಈ ವಿಷಯದ ಬಗ್ಗೆ ನನ್ನ ಕೆಲವು ಅನುಮಾನಗಳನ್ನ ಹೀಗೆ ಹೇಳ್ಬಹುದು.

೧. ಇದೊಂದು ಪೂರ್ಣ ಗ್ರಹಣ ಆಗಿತ್ತು, ಮತ್ತೆ ಸರಿಸುಮಾರು ಸಂಜೆ ಮುಂದೆ ಆಗಿತ್ತು

೨. ಅವರಲ್ಲಿ ಯಾರೂ ಪೂರ್ಣ ಸೂರ್ಯ ಗ್ರಹಣವನ್ನು ನೋಡೇ ಇರ್ಲಿಲ್ಲ/ ಕೇಳೇ ಇರ್ಲಿಲ್ಲ ( ಸ್ವಲ್ಪ ಅಸಂಭವ)

೩. ಅವರಿಗೆ ಯಾರಿಗೂ ಇನ್ನೂ ಗ್ರಹಣಗಳು ಹೇಗೆ ಆಗತ್ವೆ ಅನ್ನೋದು ತಿಳಿದಿರಲಿಲ್ಲ

೪. ಇನ್ನೂ ಹೆಚ್ಚಿಗೆ ಹೇಳೋದಾದ್ರೆ, ಗ್ರಹಣಗಳು ಇಂತಹ ದಿವ್ಸ ಆಗತ್ತೆ ಅಂತ ಮೊದ್ಲೇ ತಿಳ್ಕೊಳೋದು ಹೆಚ್ಚಾಗಿ ತಿಳ್ದಿರ್ಲಿಲ್ಲ

೫. ಇವೆಲ್ಲ ಗೊತ್ತಿದ್ದೂ (ಒಂದು ವೇಳೆ), ಇಷ್ಟು ಹೊತ್ತು ಸೂರ್ಯ ಕಾಣಲ್ಲ , ಆಮೇಲೆ ನೆರಳಿಂದ ಹೊರಬರತ್ತೆ ಅನ್ನೋ ಲೆಕ್ಕಾಚಾರ ಗೊತ್ತಿಲ್ದಿದ್ದ್ರೆ, ಸುಮಾರು ಮುಳುಗೋ ಹಂತದಲ್ಲಿರೋ ಸೂರ್ಯ, ಮುಳ್ಗಕ್ಕೆ ಮುಂಚೆ ನೆರಳಿಂದ ಹೊರಬಂದು ತನ್ ಮುಖ ತೋರ್ಸ್ತಾನೆ ಅನ್ನೋದು ಗೊತ್ತಿಲ್ದಿದ್ರೂ ಇರಬಹುದು.

ಹಾಗಾದ್ರೆ, ಇದರಲ್ಲಿ ಕೃಷ್ಣನದೇನು ಹೆಚ್ಚುಗಾರಿಕೆ?

ಅಲ್ವಾ?

ಒಂದುವೇಳೆ, ಅವನಿಗೆ ಮಾತ್ರ ಮರುದಿನ ಗ್ರಹಣ ಆಗತ್ತೆ ಅನ್ನೋದು ಗೊತ್ತಿದ್ರೆ? ಅದಕ್ಕೇ ಅವನು ಅರ್ಜುನನ್ನ ಆ ತರಹ ಆಣೆ ಇಡಕ್ಕೆ ಹೇಳಿದ್ರೆ?

ಅದೂ ಸಾಧ್ಯ ಅಲ್ವೇ? ಅಂತಹ ಸಂದರ್ಭದಲ್ಲಿ, ಗ್ರಹಣವಾದಾಗ ಸೂರ್ಯನೇ ಮುಳುಗಿದ ಅಂತ ಕೌರವರು ಅಂದ್ಕೊಂಡಿದ್ರೂ ಆಶ್ಚರ್ಯ ಇಲ್ಲ!

ಗ್ರಹಣ ಚಕ್ರ ಇನ್ನೂ ಚೆನ್ನಾಗಿ ಅರ್ಥವಾಗಿಲ್ದಿದ್ದಿರೋ ಕಾಲ ಅದು ಅನ್ಸತ್ತೆ. ಆಗ, ಒಂದು ವೇಳೆ, ಐವತ್ನಾಕು ವರ್ಷ ಮೂವತ್ತು ದಿನದ ಹಿಂದೆ ಒಂದು ಗ್ರಹಣವಾಗಿದ್ದು ತಿಳಿದಿದ್ದ ಕೃಷ್ಣ ಲೆಕ್ಕಾಚಾರ ಹಾಕಿ ಗ್ರಹಣವನ್ನು ಊಹಿಸಿ, ಅರ್ಜುನ ಕೈಲಿ ಆ ಶಪಥ ಮಾಡಿಸಿದ್ದನೇ? ಆ ಯುದ್ಧ ಭೂಮೀಲಿದ್ದಾಗ ಅವನಿಗೆ ಸಲಹೆ ಕೊಡೋದಕ್ಕೆ ಪಕ್ಕದಲ್ಲಿ ಯಾರೂ ಜ್ಯೋತಿಷಿ ನಿಂತಿರ್ತಿರ್ಲಿಲ್ಲ ಅನ್ಸತ್ತೆ ನಂಗನೋ! ಅಲ್ಲದೆ, ಹದಿನೆಂಟು ವರ್ಷ ಹತ್ತು ದಿನದ ನಂತರ ಮರಳೋ ಸೂರ್ಯ ಗ್ರಹಣ ಬೇರೆಲ್ಲೋ ಆಗತ್ತೆ. ಒಂದೇ ಸ್ಥಳದಲ್ಲಿ ಆಗತ್ತಾದ್ರೆ, ಅದಕ್ಕೆ ಮೂರು ಗ್ರಹಣ ಚಕ್ರದಷ್ಟು ಸಮಯ ಬೇಕು. ಇದಷ್ಟೇ ಅಲ್ಲ. ಈ ಐವತ್ನಾಕು ವರ್ಷದ ನಂತರ ಆಗೋ ಗ್ರಹಣ ಎಶ್ಟೋ ನೂರು ಮೈಲಿ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಆಗತ್ತೆ ( ಮಹಾ ಭಾರತದ ಮಟ್ಟಿಗೆ, ಐವತ್ನಾಕು ವರ್ಷದ ಮೊದಲಿನ ಗ್ರಹಣ ಕುರುಕ್ಷೇತ್ರಕ್ಕಿಂತ ದಕ್ಷಿಣಕ್ಕೆ, ಅಂದ್ರೆ ಮಧ್ಯ ಭಾರತದಲ್ಲಿ ಆಗಿತ್ತ ಅನ್ನೋದೇ ಸಲೀಸು - ದ್ವಾರಕೆ ಇರೋದು ಮಧ್ಯ ಭಾರತದಲ್ಲಿ ಅನ್ನೋದೂ ಒಂದು ಗಮನಿಸಬೇಕಾದ ಸಂಗತಿ).

ಇದ್ದರೂ ಇರಬಹುದು. ಅದಕ್ಕೇ ನನ್ಗೆ ಕೃಷ್ಣ ಜ್ಯೋತಿಶ್ಶಾಸ್ತ್ರ ಪಾರಂಗತ (astronomer) ನಾಗಿದ್ದಿರಬಹುದು ಅನ್ಸಿದೆ. ಹಾಗಾಗೇ, ಬೇರೆಯವರಿಗೆ ಗೊತ್ತಿಲ್ಲದ ಗ್ರಹಣ ಚಕ್ರ ಅವನಿಗೆ ಗೊತ್ತಿತ್ತು. ಈ ಬೇರೆಯವರಲ್ಲಿ, ದುರ್ಯೋಧನನ ಆಸ್ಥಾನದ ಜ್ಯೋತಿಷಿಗಳೂ ಸೇರಿದ್ರು - ಅಲ್ವೇ?

ಅಂದ್ರೆ, ಆ ಕಾಲಕ್ಕಿನ್ನೂ ಗ್ರಹಣ ಚಕ್ರದ ವಿಷಯ ಎಲ್ಲಾ ಜ್ಯೋತಿಷಿಗಳಿಗೂ ಗೊತ್ತಿಲ್ಲದೇ ಇದ್ದಿರಬೌದು. ಕೆಲವ್ರ ಮಟ್ಟಿಗೆ ಅದಿನ್ನೂ ಗುಟ್ಟಿನ ತಿಳಿವಾಗಿದ್ದಿರಬೌದು. ಅದರ ಅರಿವಿದ್ದ ಕೆಲವರಲ್ಲಿ ಕೃಷ್ಣನೂ ಒಬ್ಬನಾಗಿದ್ದಿರಬಹುದು. ಎಷ್ಟೇ ಅಂದೂ ಸಕಲಕಲಾವಲ್ಲಭ ತಾನೇ ಅವನು!

ನನ್ನ ಅನುಮಾನ ನಿಜವಾದ್ರೆ, ನಾವು ಕೃಷ್ಣನ್ನ ಭಾರತ ಹಳೇ ಜ್ಯೋತಿಷಿಗಳ ಸಾಲಿನಲ್ಲಿ ನಿಲ್ಸ್ಬೇಕಾಗತ್ತೇನೋ!

-ಹಂಸಾನಂದಿ
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?