ಬಾಡಿಗೆ ಮನೆ

ನಾನು ಚಿಕ್ಕವನಾಗಿದ್ದಾಗಿನ ಮಾತು. ತಿಂಗಳು ತಿಂಗಳೂ ಮನೆಗೆ ಬರುವ ಮಯೂರವನ್ನು ಓದಲು ನಾನು ಕಾಯುತ್ತಿರುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಸಣ್ಣ ಕಥೆಗಳು ಸೊಗಸಾಗಿರುತ್ತಿದ್ದವು. ಕೆಲವೊಮ್ಮೆ ನೀಳ್ಗತೆಗಳೂ ಪ್ರಕಟವಾಗುತ್ತಿದ್ದವು. ಟಿ.ಕೆ.ರಾಮರಾವ್ ಮೊದಲಾದವರ ಕುತೂಹಲಕಾರಿ ಕಥೆಗಳು ಎರಡು ಮೂರು ಕಂತುಗಳಲ್ಲಿ ಬರುತ್ತಿದ್ದವು.

ಇವುಗಳ ಜೊತೆಯಲ್ಲೇ ನಾನು ಬಹಳ ಆಸಕ್ತಿಯಿಂದ ಓದುತ್ತಿದ್ದ ಇನ್ನೊಂದು ಬಗೆಯ ಕಥೆಗಳೂ ಇದ್ದವು. ಅವೇ ಅನುವಾದಿತ ಕಥೆಗಳು. ಮಯೂರದಲ್ಲಿ ತಮಿಳು ತೆಲುಗು ಮಲೆಯಾಳ ಮರಾಠಿ ಭಾಷೆಗಳಿಂದ ಕನ್ನಡಕ್ಕೆ ಬರುತ್ತಿದ್ದ ಕಥೆಗಳಿದ್ದರೂ, ನಾನು ಹೆಚ್ಚಾಗಿ ಕಾಯುತ್ತಿದ್ದುದ್ದು ಇಂಗ್ಲಿಷ್ ಕಥೆಗಳ ಅನುವಾದಕ್ಕೆ. ಐದನೇ ತರಗತಿಯನಂತರ ಇಂಗ್ಲಿಷ್ ಕಲಿಯತೊಡಗಿದ ನನಗೆ ಉದ್ದನೆಯ ಕಥೆಗಳನ್ನು ಕನ್ನಡದಲ್ಲಿ ಓದುವುದೇ ಸಲೀಸೆನಿಸುತ್ತಿತ್ತು. ಅದರಲ್ಲೂ ಎನ್.ವಾಸುದೇವರಾವ್ (ಅವರೇ ಎಂತಲೇ ನನ್ನ ನೆನಪು) ಅವರು ಅನುವಾದಿಸಿದ ಆರ್ಥರ್ ಕಾನನ್ ಡಾಯಲ್ ರ ಶೆರ್ಲಾಕ್ ಹೋಮ್ಸ್ ಕಥೆಗಳು ಅವುಗಳ ನಿಗೂಢತೆಯಿಂದ
ಮನಸೆಳೆಯುತ್ತಿದ್ದವು. 'ತಪ್ಪಿಸಿಕೊಂಡ ಸದ್ಗೃಹಸ್ತೆ' (A Scandal in Bohemia), 'ರಹಸ್ಯ ಪತ್ರದ ಕಳವು' (The Paddington Mystery), 'ಕೆಂಪು ತಲೆಯವರ ಕೂಟ' (The Red Headed League), 'ರಕ್ತಪರಿಶೋಧನೆ' (A Study in Scarlet), 'ಬ್ಯಾಸ್ಕರ್ವಿಲ್ಲಿಯ ಬೇಟೆನಾಯಿ' ( The Hound of Baskarville), 'ಕೊನೆಯ ಸಮಸ್ಯೆ' (The Final Problem) ಮೊದಲಾದ ಶೆರ್ಲಾಕ್ ಹೋಮ್ಸ್ ಕಥೆಗಳನ್ನು ನಾನು ಮಯೂರದಲ್ಲೇ ಓದಿದ್ದ ನೆನಪು. ಹಾಗೇ ಅಗಾಥಾ ಕ್ರಿಸ್ಟಿ ಯ ಹೆಸರಾಂತ Three Blind Mice ಎನ್ನುವ ನೀಳ್ಗತೆಯ ಸೊಗಸಾದ ಅನುವಾದವೂ 'ಮೂರು ಕುರುಡು ಇಲಿಮರಿಗಳು' ಎನ್ನುವ ಹೆಸರಲ್ಲಿ ಮಯೂರದಲ್ಲಿ ಎರಡು ಕಂತುಗಳಲ್ಲಿ ಪ್ರಕಟವಾಗಿತ್ತು. ಹಾಗೇ ಅದೇ ಕತೆಗಾರ್ತಿಯ 'Philomel Cottage' ಅನ್ನುವ ಸಣ್ಣಕತೆಯೊಂದರ ರೂಪಾಂತರವಾದ 'ವಸಂತ ನಿಲಯ' ಅನ್ನುವ ಕಥೆಯನ್ನೂ ಮಯೂರದಲ್ಲೇ ನಾನು ಓದಿದ್ದು.

ಅದೆಲ್ಲ ಸರಿ. ಇಷ್ಟೆಲ್ಲ ಮುನ್ನುಡಿ ಯಾಕೆನ್ನುತ್ತೀರಾ?

ಕೆಲವು ವರ್ಷಗಳ ಹಿಂದೆ ನಾನು ಬರೆದಿದ್ದ ಸಣ್ಣ ಕಥೆಯೊಂದನ್ನು ಇಲ್ಲಿ ಹಾಕುತ್ತಿದ್ದೇನೆ. ನನಗೆ ನಿಜವಾಗಿ ಕತೆ ಬರೆಯುವುದಕ್ಕೆ ಬರದು - ಆದರೂ ಹುಚ್ಚು ಪ್ರಯತ್ನ ಇದು ಎನ್ನಿಸುತ್ತೆ. ಇರಲಿ. ಅನುವಾದಿತ ಕತೆ ಅಲ್ಲದಿದ್ದರೂ, ಕಥೆಯ ಮೂಲ ಎಳೆಯ ಒಂದು ಅಂಶವನ್ನು ಅಗಾಥಾ ಕ್ರಿಸ್ಟಿಯ The Listerdale Mystery ಎಂಬ ಕಥೆಯಿಂದ ತೆಗೆದುಕೊಂಡಿದ್ದೇನೆ.

ಓದಿ - ಏನನ್ನಿಸಿತು ಒಂದು ಸಾಲು ಬರೆಯಿರಿ.


************************************************************************************

ಪತ್ರಿಕೆ ಓದುತ್ತಿದ್ದ ದೇವಕಿ ಒಂದು ಕ್ಷಣ ತಡೆದಳು. ಮನೆ ಬಾಡಿಗೆಗಿದೆ ಎಂಬ ಸಣ್ಣ ಜಾಹೀರಾತು. 'ಜಯನಗರದಲ್ಲಿ ಸುಸಜ್ಜಿತವಾದ, ವಿಶಾಲವಾದ ಮನೆ ಬಾಡಿಗೆಗಿದೆ. ಚಿಕ್ಕ ಮಕ್ಕಳಿರುವ ಸಂಸಾರವಾಗಿರಬೇಕು. ಅತಿ ಕಡಿಮೆ ಬಾಡಿಗೆ. ಸಂಪರ್ಕಿಸಿ:೨೨೨-೩೪೭೮ ಬೆ.೯ರಿಂದ ೧೨ರ ಒಳಗೆ...'. ಗಡಿಯಾರ ನೋಡಿದಳು ದೇವಕಿ. ಆಗಲೇ ಒಂದು ಗಂಟೆಯಾಗುತ್ತಾ ಬಂದಿದೆ. ಥೂ. ನಾನು ಅದೂ ಇದೂ ಕೆಲಸ ಮುಗಿಸಿ ಒಂದು ಪೇಪರ್ ಓದಬೇಕು ಅಂತ ಕೈಗ್ ತೊಗೊಳೋ ಹೊತ್ತಿಗೆ ಮಧ್ಯಾಹ್ನವಾಗಿಬಿಡತ್ತೆ. ನಾಳೆ ಮರೀದೆ ವಿಚಾರಿಸಬೇಕು ಎಂದುಕೊಂಡಳು. ಈ ಕಾಲದಲ್ಲಿ ಅತಿ ಕಡಿಮೆ ಬಾಡಿಗೆಗೆ ಮನೆ ಕೊಡೋ ಈ ಮಹಾನುಭಾವ ಯಾರಿರಬಹುದು ಎಂದು ಕುತೂಹಲ ಮೂಡಿತು. ಸುಮ್ಮನೆ ಜನರಿಗೆ ಆಸಕ್ತಿ ಹುಟ್ಟಿಸೋಕೆ ಹಾಕಿರ್ತಾರೆ ಅಷ್ಟೆ. ಅಲ್ಲಿ ಹೋದರೆ ಹನ್ನೆರಡೋ ಹದಿನಾಕೋ ಸಾವಿರ ಬಾಡಿಗೆ ಅಂತಾರೆ, ಮೊದಲೇ ಜಯನಗರ, ಸುಮ್ಮನೆ ಸಮಯ ಹಾಳು ಎನ್ನಿಸಿತು. ಆದರೂ ಮನದ ಒಂದು ಮೂಲೆಯಲ್ಲಿ, ಒಂದು ಫೋನ್ ಕರೆಗೆ ಖರ್ಚು ಮಾಡಬೇಕಾಗಿರುವುದಾದರೂ ಏನು ಮಹಾ ಎಂಬ ಯೋಚನೆ ಬಂದಿತು. ರಘುವಿನ ಶಾಲೆಯೂ ಜಯನಗರದಲ್ಲೇ ಇರುವುದು, ಸಿಕ್ಕರೆ ಅನುಕೂಲವಲ್ಲವೇ ಎಂದೂ ಅನ್ನಿಸಿತು. ಸುಮಾರು ಎರಡು ತಿಂಗಳ ಹಿಂದೆ ಶಾಲೆಗೆ ಹತ್ತಿರದಲ್ಲಿ ಬೇರೆ ಮನೆ ಬಾಡಿಗೆಗೆ ಹುಡುಕುತ್ತಿದ್ದ ದೇವಕಿ ಗಂಡನಿಗೆ ಮಂಡ್ಯಕ್ಕೆ ವರ್ಗವಾದ ನಂತರ ಪ್ರಯತ್ನ ಕೈಬಿಟ್ಟಿದ್ದಳು. ಹಾಳು ಕೆಲಸದವರು ಸ್ಕೂಲ್ ಶುರು ಆದಮೇಲೆ ವರ್ಗ ಮಾಡ್ತಾರೆ, ಅವ್ರಿಗೇನು ಸಣ್ಣ ಮಕ್ಕಳಿರೋರ ಕಷ್ಟ ಗೊತ್ತಿಲ್ಲವೇ ಎಂದುಕೊಂಡಳು. ರಮೇಶ್, ಸದ್ಯಕ್ಕೆ ವಾರಕ್ಕೊಮ್ಮೆ ಬರ್ತಿರ್ತೀನಿ, ಈಗ ಮಗನ ಶಾಲೆ ನಡೆಯುತ್ತಿದೆ, ಮಧ್ಯದಲ್ಲಿ ಬಿಡಿಸೋಕ್ಕಾಗಲ್ಲ. ಹೋದರೆ ಇಲ್ಲಿ ಪೂರ್ತಿ ವರ್ಷಕ್ಕಾಗುವ ಫೀ ಮೊದಲೇ ತೊಗೊಂಡಿದಾರಲ್ಲ, ಅದೂ ಹೋಗತ್ತೆ ಎಂದಿದ್ದ. ಅದೂ ಸರಿಯೇ. ಶಾಲೆ ಇದ್ದಿದ್ದರಲ್ಲಿ ಚೆನ್ನಾಗಿಯೇ ಇದೆ, ಈ ಮಧ್ಯದಲ್ಲಿ ಈ ವರ್ಗಾವಣೆಯ ಕಾಟ ಇಲ್ಲದಿದರೆ ಚೆನ್ನಾಗಿರ್ತಿತ್ತು, ಇನ್ನೆರಡು ವರ್ಷ ಕಳೆದು ದೀಪಾನೂ ಅಲ್ಲಿಗೇ ಸೇರಿಸಬಹುದಿತ್ತು. ಇರಲಿ, ಇವರು ಹೇಳಿದಂತೆ ಏನಾದರೂ ವಶೀಲಿ ಬಾಜಿ ಮಾಡಿ ಮತ್ತೆ ಜೂನ್ ವೇಳೆಗೆ ಇಲ್ಲಿಗೇ ವಾಪಸ್ ಬರ್ತಾರೋ ಏನೋ, ಇಲ್ಲದಿದ್ದರೆ ನಾವೇ ಅಲ್ಲಿಗೆ ಹೊರಟುಹೋಗೋದು ಎಂದುಕೊಂಡಳು ದೇವಕಿ. ನನಗೆ ಮತ್ತು ಇಬ್ಬರು ಚಿಕ್ಕ ಮಕ್ಕಳಿಗೆ ಸಾಲದೇ ಈ ಮನೆ? ಈ ಊರೇ ಬಿಟ್ಟು ಹೋಗೋದಾದ್ರೆ, ಸುಮ್ಮನೆ ಯಾಕೆ ಇಲ್ಲದ ಉಸಾಬರಿ ಎಂದುಕೊಂಡಳು. ಹೊಟ್ಟೆ ಚುರುಗುಡುತ್ತಿತ್ತು. ಊಟ ಮಾಡಿ ಪ್ಲೇ ಹೋಮ್‌ನಿಂದ ದೀಪಾನ ಕರ್ಕೊಂಡು ಬರ್ಬೇಕು, ಮತ್ತೆ ಸಂಜೆ ರಘು ಬರೋ ವೇಳೆಗೆ ಅವನಿಗೆ ಇಷ್ಟವಾಗಿರೋ ಶಾವಿಗೆ ಪಾಯಸ ಮಾಡಬೇಕು ಅನ್ನೋದು ನೆನಪಿಗೆ ಬಂದ ದೇವಕಿ ಅಡಿಗೆ ಮನೆಗೆ ನಡೆದಳು.

*******

ಮರುದಿನ ಮಕ್ಕಳನ್ನು ಕಳಿಸಿ ಬಂದ ದೇವಕಿಗೆ ಜಾಹೀರಾತು ನೆನಪಾಯಿತು. ನೋಡುವ, ಇವತ್ತು ಬಂದಿದೆಯೇ ಪತ್ರಿಕೆಯಲ್ಲಿ ಎಂದು ಹುಡುಕಿದರೆ ಕಾಣದು. ನೆನ್ನೆಯ ಪೇಪರನ್ನು ಕೆಲಸದ ಗೌರಮ್ಮ ಎತ್ತಿಕೊಂಡು ಹೋಗಿರುವುದು ಖಾತ್ರಿ. ನಮ್ಮ ಮನೆ ರದ್ದಿ ಕಾಗದ, ಹಳೆ ಪಾತ್ರೆಗಳೆಲ್ಲ ಇವಳ ಪಾಲು, ನಾನೊಂದೂ ಮಾತಾಡೊಲ್ಲ. ಆದರೂ ಒಂದು ಸ್ವಲ್ಪವೂ ಕೃತಜ್ಞತೆಯಿಲ್ಲ. ಹೇಳದೆ ಕೇಳದೆ ತಿಂಗಳಲ್ಲಿ ನಾಲ್ಕೈದು ದಿನ ಚಕ್ಕರ್ ಎಂದು ಬೈದುಕೊಂಡಳು. ನೆನ್ನೆ ದೂರವಾಣಿ ಸಂಖ್ಯೆ ನೋಡಿದ್ದಾಗಲೇ ಕಂಡಿತ್ತು ಅದರ ವಿಶೇಷ. ಮೊದಲು ಮೂರು ೨ ; ಆಮೆಲೆ ಮೂರು ನಾಕೇಳು ಕೊನೇಗೆ ೮. ಹೌದು ೭೮ ನ್ನು ನೋಡಿದ ತಕ್ಷಣ ಅಮ್ಮನ ನೆನಪಾಗಿತ್ತಲ್ಲ, ಅಮ್ಮನ ಮನೆ ಡೋರ್ ನಂಬರ್ ಅದು. ಹೌದು. ೨೨೨-೩೪೭೮ ಡಯಲಿಸಿದಳು. "This is Sairam real estate agency. How can I help you?" ಎಂದಿತು ಒಂದು ಹೆಣ್ಣು ಕಂಠ. ಇವಳು ವಿವರಗಳನ್ನು ಹೇಳುತ್ತಿದ್ದಂತೆ, "Please hold" ಎಂದವಳು ಜೋರಾಗಿ 'ಏ ಕವಿತಾ, ಆ ಥರ್ಡ್ ಬ್ಲಾಕ್ ಮನೇ ಇದೆಯೇನೇ ಇನ್ನೂ' ಎಂದು ಕೂಗು ಹಾಕಿದಳು. ಈ ಊರಿನಲ್ಲಿ ಎಲ್ಲರೂ ಹೀಗೆ. ಫೋನಿನಲ್ಲಿ ಇಂಗ್ಲಿಷ್‌ನಲ್ಲಿ ಯಾಕೆ ಮಾತಾಡ್ಬೇಕಿತ್ತು? ಇವಳೂ ಕನ್ನಡದವಳೇ. ನನ್ನ ಹತ್ತಿರ ಕನ್ನಡದಲ್ಲೇ ಮಾತಾಡಿದ್ರೆ ಇವಳ ಗಂಟು ಹೋಗಿರ್ತಿತ್ತೇನು ಎಂದು ದೇವಕಿ ಎಂದುಕೊಳ್ಳುತ್ತಿರುವಷ್ಟರಲ್ಲಿ, ತಾನೂ ಅವಳೊಡನೆ ಇಂಗ್ಲಿಷ್ ನಲ್ಲೇ ಮಾತಾಡಿದೆ ಎಂಬುದು ಅರಿವಾಗಿ ಸ್ವಲ್ಪ ಮನಸ್ಸಿಗೆ ಒಂದು ತರಹ ಅಳುಕಾಯಿತು. ಆ ಕಡೆಯಿಂದ ಬಂದ ಉತ್ತರ ದೇವಕಿಗೇನೂ ಕೇಳಲಿಲ್ಲ. ''Yes Madam. It is still available. If you come to our office you'll get the details."ಬಾಡಿಗೆ ಎಷ್ಟು ಎಂದು ಕೇಳಿದ ದೇವಕಿಯ ಪ್ರಶ್ನೆಯನ್ನೇ ಕೇಳಿಸಿಕೊಳ್ಳದಂತಿದ್ದ ಆಕೆ ತನ್ನ ವಿಳಾಸ ಹೇಳುವುದರಲ್ಲಿ ಮಗ್ನಳಾಗಿದ್ದಳು.

ಇನ್ನೂ ಬೆಳಗ್ಗೆ ಹತ್ತೂ ಆಗಿಲ್ಲ. ಈ ಕ್ಷಣ ಹೊರಟರೆ ಆದೀತೆಂದೆಣಿಸಿ ದೇವಕಿ ಮನೆಗೆ ಕೀಲಿ ಹಾಕಿ, ಆಟೊ ಹತ್ತಿ ಜಯನಗರ ನಾಕನೇ ಬ್ಲಾಕ್ ಎಂದಳು. ಸಾಯಿರಾಮ ರೆಂಟಲ್ಸ್ ಹುಡುಕಲು ಏನೂ ಕಷ್ಟವಾಗಲಿಲ್ಲ. ಒಂದು ಸಣ್ಣ ಮಳಿಗೆ. ನನ್ನ ಕಿವಿ ಒಡೆದು ಹೋಗೋ ಹಾಗೆ ಕೂಗು ಹಾಕಿದ್ದಳಲ್ಲ, ಆ ಕವಿತಾ ಖಂಡಿತ ಕೆಪ್ಪಿ ಇರಬೇಕು ಎನಿಸಿ, ಅವಳಿಗೆ ಸಣ್ಣಗೆ ನಗು ಬಂತು. ಒಳಗೆ ಹೋದರೆ ಇದ್ದವನೊಬ್ಬ ಹುಡುಗ. ಇಬ್ಬರು ಹುಡುಗಿಯರೂ ನಾಪತ್ತೆ. ತನ್ನ ಪರಿಚಯ ಹೇಳುತ್ತಿದ್ದಂತೆ ಅವನು 'ನೀವು ಬರಬೌದು ಅಂತ ಹೇಳಿದಾರೆ. ಈ ಪೇಪರ್ ತುಂಬಿಸಿ ಇಡಬೇಕಂತೆ, ಬೇಗ ಬತ್ತಾರೆ' ಎಂದ. ಕಾಗದ ಕೈಗೆ ತೆಗೆದುಕೊಂಡಳು ದೇವಕಿ. ಗಂಡ ಹೆಂಡತಿ ಮಕ್ಕಳು, ಮತ್ತೆ ಮನೆಯಲ್ಲಿ ಇನ್ನಾರಾದರೂ ಇದ್ದರೆ ಅವರೆಲ್ಲರ ಹೆಸರು, ವಯಸ್ಸು, ಆದಾಯ, ಈಗ ಇರುವ ಮನೆಯ ಬಾಡಿಗೆ ಇನ್ನೂ ಇಪ್ಪತ್ತೆಂಟು ಪ್ರಶ್ನೆಗಳು.ಇವೆಲ್ಲ ಕಟ್ಟಿಕೊಂಡು ಇವರಿಗೇನಾಗಬೆಕು ಎಂದುಕೊಂಡು ಬರೆಯುತ್ತಿರುವಷ್ಟರಲ್ಲೇ ಕಡ್ಡಿಕಾಷ್ಟಕದಂತಿರುವವಳೊಬ್ಬಳು ಒಳಗೆ ಬಂದು "Hi, I'm Sujaya" ಎನ್ನುತ್ತಿದ್ದಂತೆ ಇವಳೇ ಆ ಘಂಟೆ ಬಾರಿಸಿದಂತೆ ಮಾತಾಡುವವಳು ಎಂಬುದು ಖಚಿತವಾಯಿತು ದೇವಕಿಗೆ. ಇವಳ ಇಂಗ್ಲಿಷ್ ಪರಿಣತಿ ಇವಳೆ ಇಟ್ಟುಕೊಳ್ಳಲಿ ಎಂದುಕೊಂಡ ದೇವಕಿ, ನಿಮ್ಮ ಹತ್ತಿರ ಮಾತಾಡಿದ್ದೆ ಅರ್ಧ ಗಂಟೆ ಹಿಂದೆ, ಥರ್ಡ್ ಬ್ಲಾಕ್ ಮನೆ ಬಗ್ಗೆ ಎಂದು, ತಾನು ಭರ್ತಿ ಮಾಡಿದ್ದ ಫಾರ್ಮ್ ಕೊಟ್ಟಳು. ಅದರ ಮೇಲೆ ಕಣ್ಣಾಡಿಸಿದ ಆಕೆ "ಓ, ಒಳ್ಳೆದಾಯಿತು, ನಿಮ್ಮ ಮಕ್ಕಳು ಇನ್ನೂ ಚಿಕ್ಕವರು. ೮-೧೦ ವರ್ಷದೊಳಗಿನ ಮಕ್ಕಳಿರೋ ಕುಟುಂಬದವರೇ ಬೇಕು ಅಂದಿದಾರೆ ಮಾಲೀಕರು. ಮೊದಲು ಮನೆ ನೋಡಿಕೊಂಡು ಬನ್ನಿ. ಇಷ್ಟ ಆದರೆ ಬಾಡಿಗೆ ವಿಷಯ ಮಾತಾಡಬಹುದು" ಎಂದವಳು ಹುಡುಗನಿಗೆ "ಓ ರಂಗಾ, ಆ ಮನೆ ತೋರಿಸ್ಕೊಂಡು ಬಾರೋ" ಎಂದಳು.

ಅಲ್ಲಿಗೆ ೫-೧೦ ನಿಮಿಷದ ಕಾಲ್ನಡಿಗೆಯ ಹಾದಿ. ಹುಡುಗ ಇದೇ ಮನೆ ಕಣ್ರಮ್ಮಾ ಎಂದು ಮನೆ ಗೇಟ್ ತೆಗೆಯುತ್ತಿದ್ದಂತೆ ದೇವಕಿಯ ಎದೆ ಧಸಕ್ ಎಂದಿತು. ಇಷ್ಟು ದೊಡ್ಡ ಮನೆ! ಎರಡಂತಸ್ತಿನ ಮೂಲೆ ಮನೆ. ಮನೆಯ ಮುಂದೆ ಸೊಗಸಾದ ಹೂವಿನ ತೋಟ, ಬಗೆಬಗೆಯಾಗಿ ಅರಳಿದ್ದ ಹೂಗಳು, ಪಕ್ಕದ ರಸ್ತೆಗೆ ತೆರೆಯುವಂತಿದ್ದ ಕಾರ್ ಗರಾಜ್, ಇದಕ್ಕೆ ನಾವು ಬಾಡಿಗೆ ಕೊಟ್ಟ ಹಾಗೇ ಎಂದುಕೊಳ್ಳುತ್ತಿದ್ದಂತೆ, ಹಿಂದೆ ಒಂದು ಚಿಕ್ಕ ಮನೆ ಇರುವುದು ಕಾಣಿಸಿತು. ಓಹ್, ಆ ಹಿಂದಿನ ಮನೆಯಿರಬಹುದು ಎಂಬ ಯೋಚನೆ ಹೊಳೆಯಿತಾದರೂ 'ವಿಶಾಲವಾದ' ಎಂದಿದ್ದ ಜಾಹೀರಾತು ನೆನಪಾಗಿ ಸ್ವಲ್ಪ ಕಕ್ಕಾಬಿಕ್ಕಿಯಾದಳು ದೇವಕಿ. ಅಷ್ಟರಲ್ಲಿ ಮನೆಯ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ "ಮನೆ ನೋಡಕ್ಕೆ ಬಂದಿದೀರೇನ್ರಮ್ಮ" ಎಂದು ಕೇಳಿದ. ಪಂಚೆ ಚೌಕಳಿ ಅಂಗಿ ಧರಿಸಿದ್ದಾತನ ಕೈಗೆ ಮೆತ್ತಿದ್ದ ಮಣ್ಣು ನೋಡಿದರೆ ಆತ ಮಾಲಿ ಎಂಬುದು ಗೊತ್ತಾಗುತ್ತಿತ್ತು. "ನನ್ನ ಹೆಸರು ರಾಮಣ್ಣ ಅಂತ. ಇಲ್ಲೇ ತೋಟದ ಕೆಲಸ ಮಾಡ್ಕೊಂಡಿದೀನಿ" ಎಂದವ ಬೀಗ ತೆರೆದು ಒಳಗೆ ಕರೆದೊಯ್ದ.

*********

ಇಬ್ಬರು ಮಕ್ಕಳನ್ನೂ ಕಳಿಸಿ ಬಂದ ದೇವಕಿ ಟೀವಿ ಹಾಕಿ ಉಶ್ಶಪ್ಪ ಎಂದು ಸೋಫಾದ ಮೇಲೆ ಕುಳಿತಳು. ಬೆಳಗಾದಾಗ ಇಬ್ಬರು ಮಕ್ಕಳನ್ನೂ ತಯಾರು ಮಾಡಿ ತಿಂಡಿ ತಿನ್ನಿಸಿ ಕಳಿಸುವ ಹೊತ್ತಿಗೇ ಅರ್ಧ ಶಕ್ತಿ, ಪೂರ್ತಿ ಯುಕ್ತಿಯೆಲ್ಲ ಖರ್ಚು ಮಾಡಬೇಕಾಗುತ್ತೆ ಅವಳು. ಆದರೂ ಈ ಮನೆಗೆ ಬಂದ ಮೇಲೆ ಎಷ್ಟೊ ವಾಸಿ ಅಲ್ಲವೇ ಅನ್ನಿಸಿದೆ ಅವಳಿಗೆ. ಶಾಲೆಗೆ ಮೊದಲಿಗಿಂತ ಹತ್ತಿರವಾಗಿದೆ. ಬಸ್ ಅಥವ ಆಟೋ ನೆಚ್ಚುವ ಕಾಟವಿಲ್ಲ. ಆರೇಳು ನಿಮಿಷದ ನಡಿಗೆ. ನಿತ್ಯವೂ ಒಂದು ಸ್ವಲ್ಪ ವ್ಯಾಯಾಮವಾದೀತೆಂದು ಆಯಾ ಗೀಯಾ ಯಾರನ್ನೂ ಗೊತ್ತು ಮಾಡದೇ, ತಾನೇ ಹೋಗುತ್ತಾಳೆ ದೇವಕಿ. ರಘುವಿನ ಶಾಲೆಯ ಬಳಿಯೇ ದೀಪಾಳನ್ನೂ ಪ್ರಿ-ಸ್ಕೂಲ್ ಗೆ ಸೇರಿಸಿದ್ದಾಳೆ. ಐದು ತಿಂಗಳು ಆಗಿದ್ದೇ ತಿಳೀಲಿಲ್ಲವಲ್ಲ ಇಲ್ಲಿಗೆ ಬಂದು. ಇವರಿಗೇ ನಿರ್ಧಾರ ಮಾಡಲು ಬಿಟ್ಟಿದ್ದರೆ, ಗೊತ್ತೇ ಇದೆಯಲ್ಲ, ಇವರು ಎಲ್ಲದರಲ್ಲೂ ಮೀನ-ಮೇಷ ಎಣಿಸೋ ರೀತಿ, ಕೈಬಿಟ್ಟು ಹೋಗಿರ್ತಿತ್ತು ಅಷ್ಟೆ. ನಾನು ಸ್ವಲ್ಪ ಧೈರ್ಯದಿಂದ ನಿರ್ಧಾರ ತೊಗೊಂಡಿದ್ದು ತುಂಬಾ ಒಳ್ಳೆದಾಯ್ತು. ಅಷ್ಟಕ್ಕೂ ಆ ರೆಂಟಲ್ ಏಜೆನ್ಸಿ ನವರು ಜಾಸ್ತಿ ಸಮಯಾನೇ ಕೊಡಲಿಲ್ಲವಲ್ಲ? ಮನೆ ನೋಡಿ ಬಂದ ಮರುದಿನವೇ "ನಿಮಗೆ ಕೊಡೋಕೆ ನಾವು ತಯಾರ್, ಆದ್ರೆ ನೀವು ನಾಳೆ ಸಂಜೆ ಒಳಗೆ ಬರ್ತೀವಿ ಅಥವ ಇಲ್ಲ ಅಂತ ಹೇಳಿ, ಅಡ್ವಾನ್ಸ್ ಅಂತ ಎರಡು ಸಾವಿರ ಕೊಡಬೇಕು. ನೀವೇನಾದರೂ ಆಮೇಲೆ ನಮ್ಮ ಕಂಡಿಶನ್ ಆಗಲ್ಲ ಗೀಗಲ್ಲ ಅಂತ ಮನಸ್ಸು ಬದಲಾಯಿಸಿದರೆ, ಆ ದುಡ್ಡೂ ನಾವು ವಾಪಸ್ ಮಾಡೋಲ್ಲ."ಅಂದರಲ್ಲ. ಎಲ್ಲಾ ಬಿಟ್ಟು ಆ ದಿನವೇ ಇವರು ಕೊಯಂಬತ್ತೂರಿಗೆ ಕೆಲಸಕ್ಕೆ ಹೋಗಿರ್ತಾರೆ ಅಂತ ನನಗೇನು ಕನಸು ಬೀಳತ್ತಾ? ಹಿಂದಿನ ದಿನ ಫೋನ್ ಮಾಡಿದಾಗಲೂ ಏನೂ ಹೇಳಿರಲಿಲ್ಲ. ಹೀಗಿದೆ ವಿಷಯ, ಏನು ಮಾಡೋದು ಅಂತ ಕೇಳಲು ಆಫೀಸಿಗೆ ಫೋನ್ ಮಾಡಿದರೆ, ಏನೋ ಕೆಲಸ ಅರ್ಜೆಂಟ್ ಆಗಿ ಬಂತು, ಇವತ್ತು ಬೆಳಗ್ಗೆ ತಾನೇ ಹೊರಟರು ಅನ್ನಬೇಕೇ? ಮೊಬೈಲ್ ಗೆ ಮಾಡಿದರೆ, ಅದೂ "ಬಳಕೆದಾರರು ವ್ಯಾಪ್ತಿ ಪ್ರದೇಸದಿಂದ ಹೊರಗಿದ್ದಾರೆ" ಅಂತ ಒಂದೇ ಸಮ ಹೊಡ್ಕೋತಿತ್ತು ಅಷ್ಟೇ. ನಾನೇ ಹೋದರೆ ಎರಡು ಸಾವಿರ, ಅಷ್ಟಕ್ಕೂ, ಮನೆಯನ್ನು ನೋಡಿದ ಮೇಲೆ ರಮೇಶ ಬೇಡವೆಂದು ಹೇಳಲಾರ ಎಂಬ ನಂಬಿಕೆಯಲ್ಲಿ, ಅಡ್ವಾನ್ಸ್ ಕೊಟ್ಟೇ ಬಿಟ್ಟೆನಲ್ಲ!

ಹೌದು ಮತ್ತೆ, ಅವ್ರಿಗೇನು ಹುಚ್ಚೇ, ದುಡ್ಡು ಉಳಿಯುತ್ತೆ ಅಂತ ಗೊತ್ತಾದಮೇಲೆ, ಬೇಡ ಅನ್ನಕ್ಕೆ? ಮೊದಲಿನ ಮನೆಗೆ ಕೊಡ್ತಾ ಇದ್ದದ್ದು ಮೂರೂವರೆ ಸಾವಿರ ಬಾಡಿಗೆ, ಐವತ್ತು ಸಾವಿರ ಮುಂಗಡ. ಇದಕ್ಕೆ ಕೊಟ್ಟಿರೋದು ಎರಡು ಸಾವಿರ ಬಾಡಿಗೆ, ಎರಡು ಸಾವಿರ ಮುಂಗಡ. ಆ ಮನೆಯ ಎರಡರಷ್ಟಾದರೂ ದೊಡ್ಡದು ಈ ಮನೆ. ಈ ಕಾಲದಲ್ಲೂ ಈ ಊರಿನಲ್ಲಿ ಇಂಥಹ ಮಹಾನುಭಾವರು ಇದ್ದಾರೆ ಅಂದರೆ ನಂಬೋಕ್ಕೇ ಆಗಲ್ಲ. ಅಷ್ಟಕ್ಕೂ ಆ ಮಾಲೀಕ ಮಹಾನುಭಾವನ ಮುಖದರ್ಶನವೇ ಆಗದಂತೆ, ಆಗೋದು ತಾನೆ ಹೇಗೆ? ಈ ಮನೆಯನ್ನು ಕೊಂಡು ಎರಡು ತಿಂಗಳೂ ಆಗದೆ , ಮಗಳ ಮನೆಗೆಂದು ಅಮೆರಿಕಾಗಿ ಹೋಗಿದ್ದಾನಂತೆ. ಬರುವುದು ಇನ್ನೂ ಮುಂದಿನ ಜೂನ್ ನಲ್ಲೇ. ಎಲ್ಲಾ ಒಪ್ಪಂದವನ್ನೂ ಸಾಯಿರಾಮ ಏಜನ್ಸಿಯವರೇ ಮಾಡಿಬಿಟ್ಟರಲ್ಲ. "ಮುಂದಿನ ಜೂನ್ ವರೆಗೆ ಲೀಸ್, ಆಮೇಲೆ ಇಬ್ಬರಿಗೂ ಬೇಕಾಗಿದ್ದಲ್ಲಿ ಮುಂದುವರಿಸಬಹುದು. ಮನೆಯಲ್ಲಿರುವ ಫರ್ನಿಚರ್ ಎಲ್ಲಾ ಅಲ್ಲೇ ಇರಬೇಕು. ಬಾಡಿಗೆಗೆ ಬಂದವರು ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಮ್ಮ ಹಳೆಯ ಸೋಫಾ ಅಲಮಾರಿ ಇತ್ಯಾದಿ ಮನೆಯಲ್ಲಿ ಇಡಲು ಸಾಧ್ಯವಾಗದಿದ್ದರೆ, ಗರಾಜ್‌ನಲ್ಲೋ ಹಿಂದಿನ ಮನೆಯಲ್ಲೋ ಇಡಬಹುದು. ಮನೆ ಮಾಲೀಕರ ಕಾರ್ ಗರಾಜ್‌ನಲ್ಲೇ ಇರುತ್ತದೆ. ಮಾಲಿ ರಾಮಣ್ಣ ಮೊದಲಿಂದ ಮಾಲೀಕರ ಮನೆಯಲ್ಲಿ ಕೆಲಸ ಮಾಡಿದವನು. ಅವನು ಹಿಂದಿನ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಮನೆಯ ಹಿಂದೆ-ಮುಂದೆ ಇರುವ ಗಿಡಗಳ ಉಸ್ತುವಾರಿ ಮಾಡುತ್ತಾನೆ. ಅವನ ಸಂಬಳವನ್ನು ಮನೆ ಮಾಲೀಕರೇ ನೋಡಿಕೊಳ್ಳುತ್ತಾರಾದರೂ, ಗಿಡಗಳಿಗೆ ಕೀಟನಾಶಕ, ಗೊಬ್ಬರ ಅದು ಇದು ಬೇಕಾದಾಗ ಆತ ಕೇಳಿದರೆ, ಬಾಡಿಗೆದಾರರು ಅದಕ್ಕೆ ಬೇಕಾಗುವ ಹಣವನ್ನು ಕೊಟ್ಟು, ನಂತರ ಬಾಡಿಗೆಯಲ್ಲಿ ಅಷ್ಟು ಹಣವನ್ನು ಮುರಿಹಾಕಿಕೊಳ್ಳಬಹುದು" ಎಂದಿದ್ದರು . ಈ ಮನೆಯಲ್ಲಿದ್ದ ಪೀಠೋಪಕರಣಗಳು ತನ್ನ ಮನೆಯಲ್ಲಿದ್ದಕ್ಕಿಂತ ಚೆನ್ನಾಗಿಯೇ ಇದ್ದುದರಿಂದ ದೇವಕಿಗೇನೂ ಪಿಚ್ಚೆನಿಸಿರಲಿಲ್ಲ. ಮೊದಲಿನಿಂದಲೂ ಮನೆಯನ್ನು ಚೆನ್ನಾಗಿ ಇಟ್ಟುಕೊಂಡೇ ಅಭ್ಯಾಸವಾಗಿರುವ ಅವಳಿಗೆ, ಈ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಏನೂ ಕಷ್ಟವೆನಿಸುತ್ತಿಲ್ಲ. ಗಂಡ ಪರಸ್ಥಳದಲ್ಲಿರುವುದರಿಂದ, ವಯಸ್ಸಾಗಿರುವವನೇ ಆದರೂ ಆಗಲಿ, ಗಂಡಸೊಬ್ಬ ಹಿಂದಿನ ಮನೆಯಲ್ಲಿ ಇರುವುದು ಅವಳಿಗೆ ಎಷ್ಟೋ ಧೈರ್ಯ ತಂದಿತ್ತು.

ಮಾಲಿ ರಾಮಣ್ಣ ಒಳ್ಳೆಯ ವ್ಯಕ್ತಿಯಂತೆ ತೋರುತ್ತಿದ್ದ. ಹೆಚ್ಚು ಮಾತಾಡುವುದಿಲ್ಲ. ಸದಾ ಕಾಲ ಏನಾದರೊಂದು ಕೆಲಸ ಮಾಡುತ್ತಿರುತ್ತಾನೆ. ಓದು ಬರಹ ಬಲ್ಲವನು. ಎಷ್ಟೋ ಬಾರಿ ಮನೆಯಲ್ಲಿ ಏನಾದರೂ ಓದುತ್ತಿರುವುದು ದೇವಕಿಯ ಕಣ್ಣಿಗೆ ಬಿದ್ದಿದೆ. "ಏನಪ್ಪಾ ಓದುತ್ತಿರ್ತೀಯಲ್ಲ ?" ಅಂತ ಕೇಳಿದರೆ ಮಾತ್ರ, "ನಾನು ಏನು ತಾನೇ ಓದಬಲ್ಲೆನಮ್ಮ? ಹೀಗೆ ಪೇಪರ್ ನಲ್ಲಿ ಒಂದು ನಾಕಕ್ಷರ ಓದುತೀನಿ, ಅಷ್ಟೆ" ಅಂತಾನೆ. ದೇವಕಿಗೂ ಆಗಾಗ ಏನಾದರೂ ಸಹಾಯ ಬೇಕೇನಮ್ಮ ಎಂದು ಕೇಳುವುದುಂಟು. ದೀಪಾ ಮಾತ್ರ ಮಾಲಿ ರಾಮಣ್ಣನನ್ನು ಹಚ್ಚಿಕೊಂಡುಬಿಟ್ಟಿದ್ದಾಳೆ. ಪ್ಲೇಹೋಂ ನಿಂದ ಬಂದಮೇಲೆ ರಾಮಣ್ಣ ಕೆಲಸ ಮಾಡುತ್ತಿದ್ದರೆ ಅವನೊಡನೆ ಮಾತಾಡುತ್ತಾ ಇರುತ್ತಾಳೆ. ರಮೇಶ ಬಂದಾಗ ಒಮ್ಮೆ ದೇವಕಿಗೆ ಹೇಳಿದ್ದ, ಮೂರು ಹೊತ್ತೂ ಆ ಮಾಲಿಯ ಹತ್ತಿರ ಹೋಗಕ್ಕೆ ಬಿಡಬೇಡ, ಇಂತಹವರನ್ನ ನಂಬೋಕ್ಕಾಗಲ್ಲ, ಜೋಪಾನ ಅಂತ. ದೇವಕಿಗೇನೋ ಅಷ್ಟು ಅಪನಂಬಿಕೆ ಪಡಬೇಕಾದ್ದಿಲ್ಲ, ಎಷ್ಟೆಂದರೂ ಮನೆಯ ಮಾಲೀಕರಿಗೆ ಗೊತ್ತಿರುವವನು ಎಂದೆನಿಸುತ್ತದೆ. ಆದರೂ ರಮೇಶ್, 'ಅಯ್ಯೋ ಯಾವ ಹುತ್ತದಲ್ಲಿ ಯಾವ ಹಾವೋ? ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಒಳ್ಳೆಯದಲ್ವೇನೇ' ಎಂದಾಗ, ಅದೂ ಸರಿ ಎನ್ನಿಸಿದ್ದೇನೋ ಉಂಟು.

**********

ಮಕ್ಕಳಿಗೆ ಹೇಳಿದಂತೆಯೇ ಮೂವತ್ತು ನಿಮಿಷಗಳಲ್ಲೇ ಮರಳಿ ಬಂದಳು ದೇವಕಿ. ಬಾಗಿಲು ತೆಗೆಯುವಷ್ಟರಲ್ಲೇ ಕೇಳಿದ್ದು ದೀಪಾ ಜೋರಾಗಿ ಅಳುತ್ತಿರುವ ಶಬ್ದ. ಏನಾಯಿತೇ ಎಂದು ಕೇಳಿದರೆ, ಸುಮ್ಮನೆ ಬಿಕ್ಕುತ್ತಿದ್ದಾಳೆಯೇ ಹೊರತು ಅವಳು ಹೇಳುವುದೇನೂ ತಿಳಿಯುತ್ತಿಲ್ಲ. ರಘು .. ರಘೂ ಎಂದು ಕೂಗಿ ಕರೆದರೆ ಅವನೂ ಓಗೊಡುತ್ತಿಲ್ಲ. ಎಲ್ಲಿ ಹೋದ ? ಮನೆ ಬಾಗಿಲು ತಾನು ಹಾಕಿದ್ದಂತೆ ಹಾಕೇ ಇತ್ತಲ್ಲ ? ಯಾವತ್ತೂ ಇಲ್ಲದ್ದು, ಇವತ್ತು ಯಾಕೆ ಇಬ್ಬರೇ ಮಕ್ಕಳನ್ನು ಬಿಟ್ಟು ಹೋದೆನೋ ಅಂಗಡಿಗೆ ಎನ್ನಿಸಿತು ಅವಳಿಗೆ. ನಿಧಾನವಾಗಿ ದೀಪಾಳಿಗೆ ಸಮಾಧಾನ ಮಾಡುತ್ತಾ ಕೇಳಿದರೆ ಕೆಲವೇ ಶಬ್ದಗಳು ಗೊತ್ತಾಗುತ್ತಿವೆ. ಬಾಲ್, ರಘು, ಬಿದ್ದ, ರಕ್ತ, ರಾಮಣ್ಣ ಅಂತ. ಕಂಗಾಲಾದಳು ದೇವಕಿ. ಹಿಂದಕ್ಕೆ ರಾಮಣ್ಣನ ಮನೆಗೆ ಓಡಿ ಹೋಗಿ ನೋಡಿದರೆ ಮನೆ ಬೀಗ. ಏನೂ ಮಾಡಲೂ ತಿಳಿಯದೆ ತಾನೂ ಅಳಲು ಆರಂಭಿಸಿದಳು ದೇವಕಿ. ಅಷ್ಟರಲ್ಲೆ ಫೋನು ರಿಂಗಣಿಸಿತು. ಎತ್ತಿದರೆ ಆ ಕಡೆಯಿಂದ ಬಂದ ಧ್ವನಿ "ಕೆ.ಜೆ.ಹಾಸ್ಪಿಟಲ್ ಇಂದ ಮಾತಾಡ್ತಿದ್ದೇನೆ. ಡಾಕ್ಟರ್ ರಾವ್ ನಿಮ್ಮ ಹತ್ತಿರ ಮಾತಾಡ್ತಾರೆ, ಒಂದು ನಿಮಿಷ ಹೋಲ್ಡ್ ಮಾಡಿ" ಎಂದಿತು . ಆ ಒಂದು ಕ್ಷಣದಲ್ಲಿ ದೇವಕಿಯ ಮನ್ಸಸ್ಸಿನಲ್ಲಿ ಎಷ್ಟು ಕೆಟ್ಟ ಯೋಚನೆಗಳು ಹರಿದಾಡಲು ಆರಂಭಿಸಿದ್ದವೋ, ಕಣ್ಣುಗತ್ತಲೆ ಬಂದಂತಾಯಿತು. ತಿಳಿವಾಗುವಾಗ ಕೇಳಿದ್ದು ಇಷ್ಟೆ "..ಯೋಚನೆ ಮಾಡಬೇಡಿ, ಏನೂ ತೊಂದರೆ ಆಗಿಲ್ಲ, ಬೇಗ ಬನ್ನಿ ಕೆ.ಜೆ.ಆಸ್ಪತ್ರೆಗೆ, ನಾನು ಇಲ್ಲೇ ಇದ್ದೀನಿ". ಫೋನಿಟ್ಟು ಲಗುಬಗೆಯಿಂದ ಹೊರಟು ಆಟೋ ಹತ್ತಿದ ಮೇಲೆಯೇ ಅವಳಿಗೆ ಫೋನ್‌ನಲ್ಲಿ ಕೇಳಿದ ಧ್ವನಿ ಮಾಲಿ ರಾಮಣ್ಣನದು ಅಲ್ಲವೇ ಎನ್ನಿಸಿದ್ದು.


ಆಟೋ ಆಸ್ಪತ್ರೆಗೆ ಬರುತ್ತಿದ್ದಂತೆ, ಡ್ರೈವರ್ ಕೈಗೆ ಕೈಲಿದ್ದ ನೋಟನ್ನೇ ತುರುಕುತ್ತಾ, ಚಿಲ್ಲರೆಗೂ ಕಾಯದೇ, ದೀಪಾಳನ್ನೂ ಎಳೆದುಕೊಂಡು ಒಳಗೋಡಿದಳು ದೇವಕಿ. ರಿಸೆಪ್ಶನ್‌ನಲ್ಲಿ ತನ್ನ ಪರಿಚಯವನ್ನು ಹೇಳುತ್ತಿದ್ದಂತೆ ಆಕೆ, ಇವಳಿಗೆ ಕೂರಲು ಕುರ್ಚಿ ತೋರಿಸಿ, ಫೋನ್‌ನಲ್ಲಿ "ಡಾಕ್ಟರ್ ರಾವ್, ನಿಮ್ಮ ಕಡೆಯವರು ಬಂದಿದ್ದಾರೆ" ಎಂದು ನುಡಿದು ಕೆಳಗಿಟ್ಟಳು. ನಿಮಿಷದಲ್ಲೇ ಬಂದದ್ದು ಮಾಲಿ ರಾಮಣ್ಣ! ಬಂದವನೇ, "ಅಮ್ಮ ದೇವಕಿ, ಏನೋ ಚೇಷ್ಟೆ ಮಾಡುತ್ತ ರಘು ಬಾಲ್ಕನಿಯಿಂದ ಬಿದ್ದುಬಿಟ್ಟಿದ್ದಾನೆ ಅಂತ ಕಾಣತ್ತೆ, ದೀಪಾ ಅಳುವ ಶಬ್ದ ಕೇಳಿ ಹೊರಬಂದರೆ, ಅಲ್ಲಿ ರಘು ಬಿದ್ದಿದ್ದಾನೆ, ತಲೆಯಲ್ಲಿ ರಕ್ತ; ಜ್ಞಾನವೂ ಇಲ್ಲ. ಆ ತಕ್ಷಣ, ನಾನು ಕೂಡಲೆ ಏನು ಮಾಡಲು ಸಾಧ್ಯವೋ ಮಾಡಿ ಇಲ್ಲಿಗೆ ಕೂಡಲೆ ಕಾರಲ್ಲಿ ಕರೆದುಕೊಂಡು ಬಂದೆ. ಈ ನರ್ಸಿಂಗ್ ಹೋಂ ನನಗೆ ತುಂಬ ಬೇಕಾದವರದ್ದು. ಈಗ ಜ್ಞಾನವೂ ಬಂದಿದೆ. ಆದರೆ ತಲೆಗೆ ಪೆಟ್ಟು ಬಿದ್ದಿದ್ದರಿಂದ ಬೇಕಾಗಿರೋ ಟೆಸ್ಟ್‌ಗಳೆಲ್ಲ ಒಂದು ಸಲ ಮಾಡ್ತಿದ್ದೀವಿ. ನೀವೇನೂ ಯೋಚನೆ ಮಾಡಬೇಕಾಗಿಲ್ಲ. ನಾನು ಎಲ್ಲಾ ನೋಡ್ಕೋತೀನಿ" ಎನ್ನುತ್ತಿದ್ದ ರಾಮಣ್ಣನ ಮಾತು ಕೇಳುತ್ತ ದೇವಕಿಯ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿತು.

***********
"ನಿಮಗೆ ನಾವು ಹೇಗೆ ಕೃತಜ್ಞತೆ ಅರ್ಪಿಸಬೇಕೋ ತಿಳಿಯುತ್ತಿಲ್ಲ. ಆ ಕ್ಷಣದಲ್ಲಿ ನೀವಿಲ್ಲದಿದ್ದಿದ್ದರೆ ಏನಾಗಿರ್ತಿತ್ತೋ ಏನೋ' ಎನ್ನುತ್ತಿದ್ದ ರಮೇಶನ ಮಾತನ್ನು ತಡೆದರು ಡಾ.ರಾಮಚಂದ್ರ ರಾವ್. ನೋಡಿ ರಮೇಶ್, ನನಗಿದ್ದ ಒಬ್ಬನೇ ಮಗ, ಸೊಸೆ, ಮುದ್ದಾದ ಇಬ್ಬರ ಮೊಮ್ಮೊಕ್ಕಳು ಎಲ್ಲರನ್ನೂ ತಮಿಳುನಾಡಿನ ಸುನಾಮಿಯಲ್ಲಿ ಕಳೆದುಕೊಂಡುಬಿಟ್ಟು ನನಗೆ ಜೀವನದ ಉತ್ಸಾಹವೇ ಉಡುಗಿಹೋಯಿತು. ಏನು ಮಾಡಲೂ ತೋಚುತ್ತಿರಲಿಲ್ಲ. ನನ್ನ ಕ್ಲಿನಿಕ್ಕನ್ನೂ ಮುಚ್ಚಿಬಿಟ್ಟೆ. ನೆಂಟರು ಇಷ್ಟರು ಯಾರನ್ನೂ ನೋಡೋ ಮನಸ್ಸಾಗ್ತಿರಲಿಲ್ಲ. ಅಷ್ಟರಲ್ಲಿ, ನನ್ನ ಗೆಳೆಯರೊಬ್ಬರು ಈ ಜಯನಗರದ ಮನೆಯನ್ನು ಮಾರುತ್ತಿದ್ದರು. ಅದನ್ನು ನಾನೇ ಕೊಂಡುಕೊಂಡು, ಚಿಕ್ಕ ಮಕ್ಕಳಿರುವ ಕುಟುಂಬದವರು ಬೇಕು ಬಾಡಿಗೆಗೆ ಅಂತ ಜಾಹೀರಾತು ಹಾಕಿಸಿದೆ. ನಾನು ಯಾರು ಅಂತ ಗೊತ್ತಾಗದಂತೆ ಹಿಂದಿನ ಮನೆಯಲ್ಲಿದ್ದೆ. ಆದಷ್ಟು ದುಃಖವನ್ನು ಮರೆಯಬೇಕೆಂದು ಸದಾ ಕಾಲ ಗಿಡಗಳ ಜೊತೆ ಕಾಲ ಕಳೀತಿದ್ದೆ. ನಿಮ್ಮ ಕುಟುಂಬ ಬಾಡಿಗೆಗೆ ಬಂದಮೇಲೆ ನಿಮ್ಮ ಮಗಳಂತೂ ನನಗೆ ತುಂಬಾ ಹತ್ತಿರವಾದಳು. ಸದಾಕಾಲ ರಾಮಣ್ಣ, ರಾಮಣ್ಣ ಅಂತ ನನ್ನ ಸುತ್ತ ಮುತ್ತಾನೇ ಕಳೀತಿದ್ದಳು. ಅವಳನ್ನು ನೋಡುತ್ತ ನಾನು ನನ್ನ ನೋವನ್ನು ಎಷ್ಟೋ ಮರೆತೆ. ನಿಮಗೆ ನಾನು ಧನ್ಯವಾದ ಹೇಳ್ಬೇಕು ನಿಜವಾಗಿ. ನನ್ನ ಒಂದು ಆಸೆ ಇದೆ. ನಡೆಸಿಕೊಡಬೇಕು. ನಮ್ಮ ಮನೆ ಬಾಡಿಗೆ ಅಗ್ರಿಮೆಂಟ್ ಮುಗಿದರೂ ನೀವು ಈ ಮನೆ ಮಾತ್ರ ಬಿಟ್ಟು ಹೋಗಬಾರದು, ಇಲ್ಲೇ ಇರಬೇಕು" ಎಂದರು. ಕಣ್ಣು ತೇವವಾಗುತ್ತಾ ದೇವಕಿ "ನಾವು ಇರ್ತೀವಿ, ಆದರೆ ನೀವು ಹಿಂದಿನ ಮನೆಯಲ್ಲಿ ಒಬ್ಬರೇ ಇರುವ ಹಾಗಿಲ್ಲ, ನಮ್ಮ ಜೊತೆಯಲ್ಲಿ ನಮ್ಮ ಮನೆಯವರಾಗಿ ಇರಬೇಕು" ಎನ್ನುತ್ತಿದ್ದಂತೆ ಡಾಕ್ಟರ್ ರಾವ್ ಅವರ ಕಣ್ಣಿನಲ್ಲೂ ಹನಿಗಳು ಮೂಡಿದವು.
************************************
*****************************
*********

(ಕಥೆಯ ಎಳೆ ಅಗಾಥಾ ಕ್ರಿಸ್ಟಿ ಯವರ ಇಂಗ್ಲಿಷ್ ಕಥೆಯೊಂದರಿಂದ ಪ್ರೇರೇಪಿತ)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?