"ಜಾಮಾತೋ ದಶಮಗ್ರಹಃ" ಅನ್ನೋ ಮಾತಿದೆ. ಅಂದ್ರೆ, ಅಳಿಯ ಅನ್ನೋನು ಹತ್ತನೇ ಗ್ರಹ ಅಂತ. ಪಾಪ ಯಾರೋ ಅಳಿಯನ ಕಾಟದಿಂದ ಬೆಂದೋರ ಮಾತಿರ್ಬೇಕು ಇದಂತೂ. ಆದ್ರೆ, ಏನು ಕೆಟ್ಟದಾದ್ರೂ, ಅದನ್ನ ’ಗ್ರಹಚಾರ’ - ಅಂದ್ರೆ, ಗ್ರಹಗಳ ಪ್ರಭಾವದಿಂದ ಅಂದುಬಿಡೋದೊಂದು ಕೆಟ್ಟ ರೂಢಿ ನಮ್ಮಲ್ಲಿ. Sad

ಈ ವಿಷಯ ಯಾಕೆ ಬಂತು ಅಂತೀರಾ? ಬರಿಗಣ್ಣಿಗೆ ಕಾಣೋ ಐದೂ ಗ್ರಹಗಳನ್ನ ಒಟ್ಟಿಗೆ ನೋಡೋ ಒಂದು ಒಳ್ಳೇ ಸಂದರ್ಭ ಈ ತಿಂಗಳು ಬರ್ತಾ ಇದೆ. ಅದರಲ್ಲೂ ನಾಕು ಗ್ರಹಗಳು ತೀರಾ ಅಕ್ಕ ಪಕ್ಕದಲ್ಲೇ ಇರತ್ವೆ. ಇದನ್ನ ಆಗ್ಲೇ ನಮ್ಮ ಟಿವಿ ವಾಹಿನಿಗಳವರು ಸಿಂಹ ರಾಶಿಯಲ್ಲಿ ದುಷ್ಟ ಚತುಷ್ಟಯ ಗ್ರಹಕೂಟ Smiling :) - ಇಂತಿಂಥಾ ಹೊತ್ತು ಇಂತಿಂಥಾ ರಾಶಿಯಲ್ಲಿ ಹುಟ್ಟಿದವರು ಶಾಂತಿ ಮಾಡ್ಕೋಬೇಕು ಅದು ಇದು ಅಂತ ಆಗ್ಲೇ ಹೇಳ್ತಿದಾರೋ ಏನೋ ನಂಗಂತೂ ಗೊತ್ತಿಲ್ಲ. ಹೋದ ಗ್ರಹಣ ಆಗೋಕೆ ಮುಂಚೆ ಅಂತೂ ಇವೆಲ್ಲ ಬಂದಿತ್ತು ಟಿವಿಯಲ್ಲಿ ಅಂತ ಕೇಳಿದೆ. (ನಾನು ನೋಡ್ಲಿಲ್ಲ). ಇರ್ಲಿ.

ಬರಿಗಣ್ಣಿಗೆ ಕಾಣೋ ಗ್ರಹಗಳು ಐದು. ಮಂಗಳ-ಬುಧ-ಗುರು-ಶುಕ್ರ-ಶನಿ. ಈ ಐದರಲ್ಲಿ ಗುರು ಒಂದು ಬಿಟ್ಟು ಇನ್ನು ನಾಕೂ ಪಶ್ಚಿಮದಲ್ಲಿ ಸೂರ್ಯ ಮುಳುಗಿದ ಕೂಡಲೆ ಕಾಣುತ್ತವೆ ಈ ತಿಂಗಳು. ಗುರು ಒಂದು ಪೂರ್ವದಲ್ಲಿ ಕಾಣತ್ತೆ.ಆಗಸ್ಟ್ ಹದಿನೈದರ ಸಂಜೆಯ ಆಕಾಶ - ಚಿತ್ರದ ಮೇಲೆ ಚಿಟಕಿಸಿದರೆ ಚೆನ್ನಾಗಿ ಕಾಣುತ್ತೆ.ಇದನ್ನ ನೋಡೋಕೆ ನಿಮಗೆ ಬೇಕಾದ್ದು ಇಷ್ಟು.

೧. ಪಶ್ಚಿಮ ದಿಗಂತ ಕಾಣೋ ಅಂತಹ ಒಂದು ಜಾಗ

೨. ಮೋಡ ಇಲ್ಲದ ಆಕಾಶ. ಈ ಮಳೆಗಾಲದಲ್ಲಿ ಅದು ಕಷ್ಟವೇ. ಆದ್ರೆ, ದಿವಸಾ ನೋಡ್ತಿದ್ರೆ, ಒಂದಲ್ಲ ಒಂದು ದಿನ ಮೋಡ ಇಲ್ದೇ ಇರಬಹುದು. ಮತ್ತೆ ಮೋಡ ಮುಳುಗೋ ಸೂರ್ಯನ ಆಚೀಚೆ ಇಲ್ದೆ ಇದ್ರೆ ಸಾಕು. ನಾಕು ಗ್ರಹಗಳನ್ನ ಸಲೀಸಾಗಿ ನೋಡ್ಬಹುದು.

೩. ಸೂರ್ಯನ ಹತ್ತಿರದ ಬುಧ, ಶುಕ್ರಗಳು ವೇಗವಾಗಿ ಚಲಿಸೋದ್ರಿಂದ ಅವುಗಳ ಜಾಗ ದಿನೇ ದಿನೇ ಬದ್ಲಾಗುತಿರುತ್ವೆ.

೪. ಸೂರ್ಯ ಮುಳುಗಿ ಒಂದು - ಒಂದೂವರೆ ಗಂಟೆಯೊಳಗೆ, ಈ ನಾಕೂ ಗ್ರಹಗಳು ಮುಳುಗಿಬಿಡತ್ವೆ - ಅಥವಾ ತೀರಾ ಕೆಳಗೆ ಹೋಗುತ್ತವೆ. ಹಾಗಾಗಿ ಸರಿಯಾದ ಸಮಯದಲ್ಲಿ ನೋಡೋದು ಮುಖ್ಯ.

೫. ಗುರು ನೋಡೋದಕ್ಕೇನೂ ಕಷ್ಟ ಇಲ್ಲ. ಕತ್ತಲಾದಮೇಲೆ, ಪೂರ್ವದಲ್ಲಿ ಸ್ವಲ್ಪ ದಕ್ಷಿಣದ ಬದಿಗೆ ಕಾಣೋ ಬಹಳ ಪ್ರಕಾಶಮಾನವಾದ ಬೆಳಕೇ ಗುರು.

ಆಗಸ್ಟ್ ಹದಿನೈದರಂದು ಕಾಣೋ ಹಾಗೆ ಪಶ್ಚಿಮ ಆಕಾಶದ ಒಂದು ಚಿತ್ರ ಹಾಕಿದೀನಿ. ಚಿತ್ರದಲ್ಲಿ ಸೂರ್ಯನೂ ಇದಾನೆ. ಅಂದ್ರೆ, ಸೂರ್ಯ ಮುಳುಗಿದಮೇಲೆ, ಅವನು ದಿಗಂತಕ್ಕಿಂತ ಕೆಳಗಿದ್ದಾನೆ ಅಂತ ಅಂದ್ಕೊಂಡು ಚಿತ್ರ ನೋಡಿದ್ರೆ, ನಿಮಗೆ ಉಳಿದ ನಾಕು ಗ್ರಹಗಳನ್ನ ಪತ್ತೇ ಹಚ್ಚಬಹುದು.

ಆ ದಿನ ಶುಕ್ರ-ಶನಿ-ಬುಧ ಈ ಮೂರೂ ಒಂದಕ್ಕೊಂದು ತೀರಾ ಹತ್ತಿರವಿರುತ್ತವೆ.ಶುಕ್ರ ಬಹಳ ಪ್ರಕಾಶಮಾನವಾಗಿರೋದ್ರಿಂದ ಹುಡುಕೋದು ಕಷ್ಟ ಇಲ್ಲ. ಅದರ ಆಧಾರದಿಂದ ಇನ್ನೆರಡನ್ನ ಪತ್ತೆ ಮಾಡಿ.

ಮಂಗಳ ಒಬ್ಬ ಸ್ವಲ್ಪ ಮೇಲಿರ್ತಾನೆ. ಆದ್ರೆ, ಅದರ ಕೆಂಪು ಬಣ್ಣದಿಂದ ಅದನ್ನೂ ಕಾಣುವುದು ಕಷ್ಟವಾಗಲಾರದು.

ಹದಿನೈದರ ತನಕ ಕಾಯೋ ಅಗತ್ಯ ಇಲ್ಲ. ಈಗಿಂದಲೇ, ಯಾವತ್ತು ಸಂಜೆ ಆಕಾಶದಲ್ಲಿ ಮೋಡ ಇರೋದಿಲ್ವೋ, ಅವತ್ತೆಲ್ಲ ನೋಡ್ಬಹುದು!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?