ಹಿರಣ್ಮಯೀಂ ಲಕ್ಷ್ಮೀಂ ಸದಾ ಭಜಾಮಿ

ಅಗಸ್ಟ್ ೧೫-೨೦೦೮

ಇವತ್ತು ಸ್ವಾತಂತ್ರೋತ್ಸವ, ಮತ್ತೆ ಕಮಲದಲಿ ನಿಂದಿಹ, ಕಮಲವ ಕೈಯಲ್ಲಿ ಹಿಡಿದ, ಕಮಲಮುಖಿಯಾದ ವರಲಕ್ಷ್ಮಿಯ ಪೂಜೆಯ ದಿನ!


ಚಿತ್ರ: ಎಂ ಎನ್ ಆರ್ ಪ್ರಸಾದ್


ಇವತ್ತು ಸರಸ್ವತಿ ಮತ್ತೆ ಲಕ್ಷ್ಮಿ ಇಬ್ಬರನ್ನೂ ನೆನೆಯಬಹುದಾದ ದಿನ ಅನ್ನಬಹುದು. ಯಾಕಂದ್ರೆ, ನಮ್ಮ ತಾಯಿ ಭಾರತಿ. ಭಾರತಿ ಅಂದರೆ ಸರಸ್ವತಿ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಇನ್ನು ಶ್ರಾವಣ ಪೂರ್ಣಿಮೆಯ ಮುಂಚಿನ ಶುಕ್ರವಾರದಲ್ಲಿ ಮಾಡುವ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಸುಮಾರು ದಕ್ಷಿಣಭಾರತದಲ್ಲೆಲ್ಲ ಇದೆ.

ಸಂಗೀತ ತ್ರಿಮೂರ್ತಿಗಳಲ್ಲ್ಲಿ ಒಬ್ಬರು ಮುತ್ತುಸ್ವಾಮಿ ದೀಕ್ಷಿತರು. ಅವರ ಶ್ರೀವರಲಕ್ಷ್ಮೀ ನಮಸ್ತುಭ್ಯಂ ಅನ್ನುವ ರಚನೆ ಪ್ರಖ್ಯಾತವಾಗಿದೆ. ಅದರಲ್ಲಿ ಲಕ್ಷ್ಮಿಯನ್ನು ಭಕ್ತರಿಗೆ ಸುಲಭವಾಗಿ ದೊರೆಯುವ ವರಲಕ್ಷ್ಮಿಯನ್ನು ಸ್ಮರಿಸುತ್ತಾರೆ.

ಸಂಗೀತ ಸರಸ್ವತಿಯ ಉಪಾಸಕರಾದ ಮುತ್ತುಸ್ವಾಮಿ ದೀಕ್ಷಿತರು ಲಕ್ಷ್ಮಿಯನ್ನು (ಅಂದರೆ ಸಂಸಾರ ನಡೆಸಲು ಬೇಕಾದ ಹಣವನ್ನು) ಕಡೆಗಣಿಸಿದ್ದರೆಂದು ಅವರ ಹೆಂಡತಿಗೆ ಸ್ವಲ್ಪ ಅಸಮಾಧಾನವಿತ್ತಂತೆ. ಅದನ್ನು ಅವರು ಗಂಡನೆದುರು ತೋರಿಸಿಯೂಬಿಟ್ಟರಂತೆ. ಯಾರಾದರೂ ರಾಜರದೋ, ಜಮೀನ್ದಾರರದೋ ಆಶ್ರಯ ಹಿಡಿದು ಹಣಗಳಿಸಬಾರದೇ ಅಂದರಂತೆ. ಆಕೆಯದೇನು ತಪ್ಪಿಲ್ಲ ಬಿಡಿ - ಮನೆಯನ್ನು ನೋಡಿಕೊಳ್ಳದ ಗಂಡನಾದರೆ, ಯಾವ ಹೆಂಡತಿಯೂ ಅದನ್ನೇ ಅಂದಾಳು!ಅಲ್ಲವೇ?

ಆ ಸಂದರ್ಭದಲ್ಲೇ ದೀಕ್ಷಿತರು ಅದಕ್ಕೆ ಉತ್ತರವೋ ಎನ್ನುವಂತೆ, ಹಿರಣ್ಮಯೀಂ ಲಕ್ಷ್ಮೀಂ ಸದಾ ಭಜಾಮಿ, ಹೀನ ಮಾನವಾಶ್ರಯಂ ತ್ಯಜಾಮಿ ಎಂದು ಹಾಡಿದರಂತೆ. ಅಂದೇ ಅವರ ಹೆಂಡತಿಯ ಕನಸಿನಲ್ಲಿ ಲಕ್ಷ್ಮಿ ಬಂದು ಚಿನ್ನದ ಮಳೆಸುರಿಸಿ ಸಾಕೇ, ಇನ್ನೂ ಬೇಕೇ ಎಂದಂತಾಯಿತಂತೆ. ಎಚ್ಚೆತ್ತ ಆಕೆ, ತನ್ನ ಗಂಡನ ಸಂಗೀತಕ್ಕೆ ಸಮವಾದ ಐಶ್ವರ್ಯವೇ ಇಲ್ಲ ಎಂದುಕೊಂಡರಂತೆ.

ಇದು ಎಷ್ಟು ಮಟ್ಟಿಗೆ ನಿಜ, ಎಷ್ಟು ಮಟ್ಟಿಗೆ ಅಂತೆ-ಕಂತೆ ಅನ್ನುವುದನ್ನು ಬದಿಗಿಟ್ಟು ಆ ಹಾಡನ್ನು ಷಣ್ಮುಖಪ್ರಿಯ - ಹರಿಪ್ರಿಯ ಸಹೋದರಿಯರ ಕಂಠದಲ್ಲಿ ನೀವು ಇಲ್ಲಿ ಕೇಳಬಹುದು.

ಸುಂದರವಾದ ಲಲಿತಾ ರಾಗದಲ್ಲಿರುವ ಈ ರಚನೆ ಸಂಸ್ಕೃತದಲ್ಲಿದೆ. ಹಾಡಿನ ಕೊನೆಯಲ್ಲಿ ಬರುವ ರಾಗಮುದ್ರೆಯನ್ನೂ ಗಮನಿಸಿ.

ಇದರ ಭಾವಾರ್ಥವನ್ನು ಇಲ್ಲಿ ಕನ್ನಡಿಸಿರುವೆ - ಛಂದಸ್ಸು ವ್ಯಾಕರಣ ಮಾತ್ರ ಕೇಳಬೇಡಿ :)

ಬಂಗಾರಿ ಲಕುಮಿಯ ಸದಾ ನೆನೆವೆ
ಹೀನ ಮನುಜರಾಸರೆಯ ತೊರೆವೆ || ಪಲ್ಲವಿ||

ಸಿರಿಯನುಗಾಲ ತರುವ ಪಾಲುಗಡಲ ಮಗಳ
ಹರಿಯೆದೆಯಲಿ ನೆಲೆಸಿಹ ಚಿಗರೆಯ ಚಿಗುರು ನಡಿಗೆಯವಳ
ಕರದಲಿ ತಾವರೆ ಪಿಡಿದ ಹೊಳೆವ ಪಚ್ಚೆ ಬಳೆಯವಳ || ಅನುಪಲ್ಲವಿ ||

ಬಿಳಿಕಮಲದಿ ನಿಂದಿಹಳ ಸಮನಾರಿರದ ಕಮಲಾಂಬಿಕೆಯ
ಜೀವರಾಶಿಗಳಿಂ ಪೂಜೆಗೊಂಬಳ ಹೂಹಾರ ಮಾಣಿಕದೊಡವೆಯವಳ
ಸಂಗೀತಕೇಲಿಯಲಿ ನಲಿಯುವಳ ಗಿರಿಜೆಯ ಗೆಳತಿ ಈ ಇಂದಿರೆಯ
ಚಂದಿರನ ಕಾಂತಿಯ ಮೊಗದವಳ ಬಯಸಿದನೀವ ಚಿಂತಾಮಣಿಯ
ಹಳದಿ ಪೀತಾಂಬರವುಟ್ಟಿಹ ಗುರುಗುಹ*ನ ಮಾವನ ಮಡದಿಯ! ಲಲಿತೆಯ! || ಚರಣ ||

* ಮುತ್ತುಸ್ವಾಮಿ ದೀಕ್ಷಿತರ ಮುದ್ರೆ ಗುರುಗುಹ - ಅದು ಷಣ್ಮುಖನದ್ದೇ ಮತ್ತೊಂದು ಹೆಸರು. ಲಕ್ಷ್ಮಿಯನ್ನು ಷಣ್ಮುಖನ ಮಾವನ ಮಡದಿ ಎಂದು ಚಮತ್ಕಾರಿಕವಾಗಿ ಕರೆದಿದ್ದಾರೆ.

-ಹಂಸಾನಂದಿ

ಚಿತ್ರ ಕೃಪೆ: ಎಂ ಎನ್ ಆರ್ ಪ್ರಸಾದ್

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?