ಕನ್ನಡ ಬರ್ದೋನು ಕೋಡಂಗಿ

ಹಾಸನದಲ್ಲೆಲ್ರೂ ಆಡೋ ಮಾತೇನು?
ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು?
ಮಂಗಂಗಿನ್ನೊಂದ್ಹೆಸರ್ ಗೊತ್ತಾ?
ಕನ್ನಡ ಬರ್ದೋನು ಕೋಡಂಗಿ

ಕಂತಿ ಹಂಪನ ಸಮಸ್ಯೆಗಳ ಬಗ್ಗೆ ಕೇಳೇ ಇರ್ತೀರ. ಒಂದು ಸಾಲು ಪದ್ಯ ಕೊಟ್ಟು ಅದರಲ್ಲಿ ತಪ್ಪು ತಪ್ಪಾಗಿ ಅರ್ಥ ಮಾಡೋ ಹಾಗಿಟ್ಟು, ಆಮೇಲೆ ಉಳಿದ ಸಾಲುಗಳನ್ನ ಬರೀಬೇಕಾದ್ದು ಇಲ್ಲಿಯ ಚಮತ್ಕಾರ.

ಇವತ್ತು ಯಾವ್ದೋ ಸಂಸ್ಕೃತ ಪದ್ಯ ಓದೋವಾಗ, ಅದನ್ನ ಅನುವಾದ ಮಾಡೋ ಬದಲು ಹೊಸದಾಗಿ ಅದೇ ತರಹ ಬರೆಯಣ ಅನ್ನಿಸ್ತು. ಅದೇ ಈ ಪ್ರಯತ್ನ. ಅಷ್ಟೇ.

ಕನ್ನಡ ಬರ್ದೋನು ಕೋಡಂಗಿ ಅನ್ನೋ ಒಂದು ಸಾಲು ಕೊಟ್ಟರೆ, ಮೊದಲಿಗೆ ಮೂರು ಪ್ರಶ್ನೆಗಳು ಬರೋ ಸಾಲು ಹಾಕಿದ್ರೆ ಹೇಗಾಗತ್ತೆ - ನೋಡಿ.

ಪ್ರಶ್ನೆ: ಹಾಸನದಲ್ಲೆಲ್ರೂ ಆಡೋ ಮಾತೇನು? - ಉತ್ತರ: ಕನ್ನಡ

(ಕರ್ನಾಟಕದಲ್ಲಿ, ಹಾಸನ, ಮಂಡ್ಯ ಮೊದಲಾದ ಕಡೆಯೇ ಅತಿ ಹೆಚ್ಚು ಶೇಕಡಾವಾರು ಕನ್ನಡಿಗರು ಇರೋದು ಅನ್ನೋದು ಗೊತ್ತಿರೋ ವಿಷಯವೇ)

ಪ್ರಶ್ನೆ: ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು? - ಉತ್ತರ: ಬರ್ದೋನು

(ಬರೆದವನು :) ಬರದವನು ಅಲ್ಲ Smiling :) ) - ನಮ್ಮೂರ್ ಕಡೆ ಆಡುಮಾತಲ್ಲಿ ಎರಡಕ್ಕೂ ಬರ್ದೋನು ಅಂತ ಹೇಳೋದೇ ರೂಢಿ!

ಪ್ರಶ್ನೆ: ಮಂಗಂಗಿನ್ನೊಂದ್ಹೆಸರ್ ಗೊತ್ತಾ? - ಉತ್ತರ: ಕೋಡಂಗಿ

ಅದಕ್ಕೇ ಕೊನೇಸಾಲು ಕನ್ನಡ ಬರ್ದೋನು ಕೋಡಂಗಿ

ಕನ್ನಡ ’ಬರ’ದೇ ಇರೋರು, ನನ್ನ ಹೊಡೀಬೇಡಿ ಸದ್ಯಕ್ಕೆ!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ