ಕೌಮಾರೀ ಗೌರೀ ವೇಳಾವಳಿ

ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲದ್ದೂ, ನಮ್ಮಲ್ಲಿ ಇರುವುದೂ ಏಕೆ ಎನ್ನುವುದು ನನಗೆ ಗೊತ್ತಿಲ್ಲ.

ನಾನು ಚಿಕ್ಕವನಾಗಿದ್ದಾಗ, ಮಳೆಗಾಲದ, ಅದರಲ್ಲೂ ಸೋನೆಮಳೆಗಾಲದಲ್ಲಿ ಬರುವ ಈ ಹಬ್ಬಗಳ ಮುನ್ನಾದಿನ, ಅಷ್ಟಾಗಿ ದುರಸ್ತಿಯಲ್ಲ ರಸ್ತೆಯ ಆಚೀಚೆ ಕುಳಿತ ವ್ಯಾಪಾರಸ್ಥರ ನಡುವೆ ಹೋಗಿ ಪೇಟೆ ಬೀದಿಯಲ್ಲಿ ಸುತ್ತಿ ಹೂವು ಹಣ್ಣು ಖರೀದಿಸುವ ಆ ಅನುಭವ ಮಾತ್ರ ಇನ್ನೂ ಮರೆತಿಲ್ಲ!

ಅದೆಲ್ಲಾ ಇರಲಿ; ಹಬ್ಬಗಳು ಚೆನ್ನಾಗಿ ಕಳೆಯಲಿ ಎನ್ನುವ ಹಾರೈಕೆಗಳೊಂದಿಗೆ ಒಂದು ಒಳ್ಳೆ ಹಾಡನ್ನು ಕೇಳಿಸಹುದು ಎನ್ನಿಸಿತು.

ಮುತ್ತುಸ್ವಾಮಿ ದೀಕ್ಷಿತರು ಅವರ ಕಾಲದಲ್ಲಿ ಪ್ರಸಿದ್ಧವಿಲ್ಲದ ರಾಗಗಳಲ್ಲಿಯೂ ಒಂದೊಂದು ಚಿಕ್ಕ ರಚನೆಗಳನ್ನು ಮಾಡಿ ರಾಗಗಳ ಸಾಧ್ಯತೆಯನ್ನು ತೋರಿಸಿಕೊಟ್ಟವರು. ಅವರು ತಂಜಾವೂರಲ್ಲಿ ಕೆಲವು ವರ್ಷ ಕಳೆದಾಗ, ಅವರಲ್ಲಿ ಸಂಗೀತ ಕಲಿಯುವವರಿಗೆ ಅನುಕೂಲವಾಗಲೆಂದು ಈ ರೀತಿಯ ರಚನೆಗಳನ್ನು ತಂಜಾವೂರಿನ ಬೃಹದೀಶ್ವರ/ಬೃಹದಂಬಿಕೆಯರ ಮೇಲೆ, ಅಥವಾ ಆಲ್ಲೇ ಇರುವ ಬೇರೆ ಯಾವುದಾದರೂ ದೇವಾಲಯದಲ್ಲಿರುವ ದೇವತೆಯ ಮೇಲೆ ರಚಿಸಿದರಂತೆ. ಅಂತಹ ಕೃತಿಗಳಲ್ಲಿ ಒಂದು ಈ ಗೌರಿ ಹಬ್ಬದ ದಿನ ಕೇಳಲು ಬಲು ತಕ್ಕುದಾದ್ದು: ಅದೇ "ಕೌಮಾರೀ ಗೌರೀ ವೇಳಾವಳಿ" ಎಂಬ ರಚನೆ. ಇದರಲ್ಲಿ ದೀಕ್ಷಿತರು ಗೌರಿಯನ್ನು "ಒಳಿತು ಉಂಟುಮಾಡುವಂತಹವಳೇ, ಈಶ್ವರನನ್ನು ವಶಪಡಿಸಿಕೊಂಡಿರುವವಳೇ, ಹಾಡನ್ನು ಕೇಳಿ ನಲಿಯುವವಳೇ!" ಎಂದು ಕರೆದಿದ್ದಾರೆ.

ಹಾಡಿನ ಪೂರ್ಣ ಪಾಠ ಹೀಗಿದೆ:

ಕೌಮಾರೀ ಗೌರೀ ವೇಳಾವಳಿ ಗಾನ ಲೋಲೆ ಸುಶೀಲೇ ಬಾಲೇ ಪಲ್ಲವಿ

ಕಾಮಾಕ್ಷೀ ಕನಕರತ್ನ ಭೂಷಣಿ ಕಲ್ಯಾಣೀ ಗುರುಗುಹ ಸಂತೋಷಿಣಿ
ಹೇಮಾಂಬರಿ ಶಾತೋದರಿ ಸುಂದರಿ ಹಿಮಗಿರಿಕುಮಾರಿ ಈಶವಶಂಕರಿ ಚರಣ

ಈ ರಚನೆಯನ್ನು ಬಾಲಮುರಳಿ ಅವರ ದನಿಯಲ್ಲಿ ನೀವು ಸಂಗೀತಪ್ರಿಯ ತಾಣದಿಂದ ಇಲ್ಲಿ ಕೇಳಬಹುದು.

ಈ ಹಾಡು ಯಾವರಾಗದ್ದೆಂದು ಹೇಳುವ ಗೋಜೇ ಇಲ್ಲ - ಮೊದಲ ಸಾಲಿನಲ್ಲೇ ಕಂಡು ಬಂದ ಗೌರೀವೇಳಾವಳಿ ಎನ್ನುವುದೇ ಅದು. ಮಕ್ಕಳ ಸೈನ್ಯ ಅನ್ನುವ ೧೯೮೦ರ ದಶಕದ ಚಿತ್ರವನ್ನು ನೀವು ನೋಡಿದ್ದರೆ, ಅದರಲ್ಲಿ ಬರುವ "ಗೌರಿಮನೋಹರಿಯ ಕಂಡೆ" ಎನ್ನುವ ಹಾಡು ನಿಯೋಜಿತವಾದ ಗೌರಿಮನೋಹರಿ ರಾಗಕ್ಕೆ ಹತ್ತಿರವಾದ ರಾಗ ಇದು.

ಅಂದಹಾಗೆ, ಹೋದವರ್ಷ ಇದೇ ಸಮಯದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಇನ್ನೊಂದು ಪ್ರಸಿದ್ಧ ರಚನೆಯ ಬಗ್ಗೆ ಬರೆದಿದ್ದೆ. ಅದೇ ಈಗ ಇವತ್ತು ದಟ್ಸ್ ಕನ್ನಡದಲ್ಲಿ ಕಾಣಿಸಿಕೊಂಡಿದೆ. ಓದಬೇಕೆಂದವರು ಇಲ್ಲಿ ಚಿಟುಕಿಸಿ: ಸಂಗೀತಪ್ರಿಯ ನಮ್ಮ ಗಣೇಶ

ಮತ್ತೊಮ್ಮೆ, ಎಲ್ಲರಿಗೂ ಹಬ್ಬಗಳು ಸಂತಸವನ್ನು ತರಲೆಂಬ ಹಾರೈಕೆಯಲ್ಲಿ

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?