ಹೊಸ ತಾಣ: ಹರಿದಾಸ ಸಂಪದ

ನಮಿಪೆ ಶ್ರೀಪಾದರಾಜರಿಗೆ ಮಣಿವೆ ವ್ಯಾಸಯೋಗಿಗೆ
ಶ್ರೀಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆಕನ್ನಡ ನಾಡಿನ, ನುಡಿಯ ಸಾಂಸ್ಕೃತಿಕ ಚರಿತ್ರೆಯನ್ನು ಗಮನಿಸಿದಾಗ ಅದರಲ್ಲಿ ಹರಿದಾಸರು ಮುನ್ನೆಲೆಯಲ್ಲಿ ನಿಲ್ಲುತ್ತಾರೆ. ಬಸವಣ್ಣ ಮೊದಲಾದ ಶಿವಶರಣರು ೧೧-೧೨ನೇ ಶತಮಾನದಲ್ಲಿ ಶಿವಭಕ್ತಿಯ ಹಾದಿಯೊಡನೆ ಸಮಾಜಸುಧಾರಣೆಯ ಬೀಜವನ್ನೂ ಬಿತ್ತಿದರು. ಅದಕ್ಕೆ ಸ್ವಲ್ಪವೇ ಕಾಲದ ನಂತರ ಮೊದಲಾದ ಹರಿದಾಸ ಸಂಪ್ರದಾಯ, ಹರಿಭಕ್ತಿಯ ಬೇರಿನಲ್ಲಿ ಹುಟ್ಟಿದರೂ, ಅದು ನಂತರ ಸಂಗೀತ, ಸಮಾಜ ಸುಧಾರಣೆಯೇ ಮೊದಲಾದ ಹಲವು ಹಾದಿಗಳಲ್ಲಿ ಹೊರಹೊಮ್ಮಿ, ಚಿಗುರಿ ಹೂಬಿಟ್ಟಿತು.

ಹರಿದಾಸರು ಸಂಸಾರದಲ್ಲೇ ಇದ್ದು ಈಸಬೇಕು, ಇದ್ದು ಜಯಿಸಬೇಕು ಎನ್ನುತ್ತಾ, ಭಕ್ತಿಯನ್ನು ಸಂಸಾರದಲ್ಲಿದ್ದೂ ನಡೆಸಿ ತೋರಿಸಿ ಗೆದ್ದವರು. ಸಾಲಮಾಡೆನು, ಸಾಲದೆನೆನು, ನಾಳೆಗಿಡೆನು ಮೊದಲಾದ ಆಣೆಗಳನ್ನಿಟ್ಟು ಅದರಂತೇ ನಡೆದವರು. ಬೀದಿ ಬೀದಿ ತಿರುಗುತ್ತಾ ಹಾಡುತ್ತಾ ತಮ್ಮ ನಲ್ಮೆಯ ಮಾತುಗಳನ್ನು ಮನೆಮನೆಗೆ ತಲುಪಿಸಿದರು. ಈ ಮಾದರಿಯಲ್ಲೇ ನಮ್ಮ ಸಮಾಜದ ಓರೆಕೋರೆಗಳನ್ನು ತಮ್ಮ ಕೈಲಾದ ಮಟ್ಟಿಗೆ ತಿದ್ದುತ್ತ ಹೋದವರು.

ತಾವು ನೆಚ್ಚಿನ ದೇವನನ್ನೊಲಿಸುವ ಭಾಷೆ ತಮ್ಮ ಆಡುಮಾತಾಗಿರಬೇಕೆಂಬುದು ದಾಸ ಸಂಪ್ರದಾಯದವರ ಗುರಿಯಾಗಿತ್ತು. ಅಂತಹ ಮಾತೇ ಮನಮುಟ್ಟುವಂತಹದು ಎಂದು ಅವರು ಅರಿತಿದ್ದರು. ಅದಕ್ಕೆಂದೇ, ಎಲ್ಲ ಹರಿದಾಸರೂ ಕನ್ನಡದಲ್ಲಿಯೇ ತಮ್ಮ ರಚನೆಗಳನ್ನು ಮಾಡಿದ್ದಾರೆ. ಪದ, ಸುಳಾದಿ, ಉಗಾಭೋಗ ಮೊದಲಾಗಿ ಬೇರೆಬೇರೆ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಕನಕದಾಸರಂತ ಕೆಲವು ದಾಸರಂತೂ ಇಷ್ಟಕ್ಕೇ ನಿಲ್ಲದೆ ಹಿರಿಯ ಕಾವ್ಯಗಳನ್ನೂ ಬರೆದಿದ್ದಾರೆ.

ಒಟ್ಟಿನಲ್ಲಿ ಹದಿನಾಕನೇ ಶತಮಾನದ ಕೊನೆಯಲ್ಲಿ ಶ್ರೀಪಾದರಾಯರಿಂದ ಬೆಳೆಯತೊಡಗಿದ ದಾಸ ಸಾಹಿತ್ಯ ಸುಮಾರು ಇಪ್ಪತ್ತನೇ ಶತಮಾನದವರೆಗೆ ಬೆಳೆಯುತ್ತ ಬಂತು. ಇದಲ್ಲದೇ, ಅನೇಕ ಹರಿದಾಸರು ನಮ್ಮ ಶಾಸ್ತ್ರೀಯ ಸಂಗೀತದಲ್ಲಿ ಹಲವಾರು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಬರೀ ಪುಸ್ತಕಗಳಲ್ಲಿ ಮಾತ್ರ ಕಾಣುವಂತಿದ್ದ ಹಲವಾರು ಸಂಗೀತಪ್ರಕಾರಗಳಿಗೆ ಜೀವಕೊಟ್ಟಿದ್ದಾರೆ. ಆ ಮೂಲಕ, ಕನ್ನಡನಾಡಿನ ಮನೆಮನೆಗೂ ಸಾಹಿತ್ಯವೂ ಸಂಗೀತವೂ ಹಬ್ಬುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಸಂಗೀತದ ನೆಲಗಟ್ಟಾದ ಪಾಠಗಳನ್ನೂ, ಅಭ್ಯಾಸಸರಣಿಗಳನ್ನೂ ಯೋಜಿಸಿದ ಪುರಂದರ ದಾಸರನ್ನಂತೂ, ಕರ್ನಾಟಕದ ಹೊರಗೂ ಕರ್ನಾಟಕ ಸಂಗೀತ ಪಿತಾಮಹ ಎಂದು ಕೊಂಡಾಡುತ್ತಾರೆ.

ಹರಿದಾಸರ ರಚನೆಗಳು ಕೇವಲ ಅವರ ಭಕ್ತಿಮಾರ್ಗದ ಕುರುಹಾಗಿರದೆ, ಅವರ ಕಾಲಗಳ ಜನಸಾಮಾನ್ಯರ ಬಾಳ್ವೆಗೊಂದು ಕನ್ನಡಿಯೇ ಸರಿ. ಕನ್ನಡ ನೆಲದಲ್ಲಿ ಐದಾರು ನೂರು ವರ್ಷಗಳ ಕಾಲದಲ್ಲಿ ನೂರಾರು ಹಿರಿಕಿರಿಯ ಹರಿದಾಸರು ಆಗಿ ಹೋಗಿದ್ದಾರೆ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ತಮ್ಮ ತಮ್ಮ ಅಳವಿಗೆ ತಕ್ಕ ಕೊಡುಗೆಯಿತ್ತಿದ್ದಾರೆ. ಶಿಷ್ಯ ಪರಂಪರೆಗಳು ಬಹಳ ಕಾಲ ಬಾಳದ ಕಾರಣ ಅದೆಷ್ಟೋ ದಾಸರ ರಚನೆಗಳು ಇಂದು ನಮಗೆ ಸಿಗದೇ ಹೋಗಿವೆ. ಹಾಗೆ ನಿಂತಿರುವ ರಚನೆಗಳಲ್ಲೂ ಎಷ್ಟಕ್ಕೂ ಅವುಗಳನ್ನು ಆಯಾ ದಾಸರು ಹೇಗೆ ಹಾಡುತ್ತಿದ್ದರೆಂಬ ಮಾಹಿತಿಯೂ ಹಲವೆಡೆ ಸಿಗದೇ ಹೋಗಿದೆ. ಬಾಯಿಂದ ಬಾಯಿಗೆ ಬಂದು, ಹಲವಾರು ಶತಮಾನಗಳಿಂದ ಉಳಿದಿರುವ ದಾಸರ ರಚನೆಗಳನ್ನು ಇನ್ನಾದರೂ ಕಳೆದುಕೊಳ್ಳಬಾರದಲ್ಲವೇ? ಹರಿದಾಸರು ನಮಗೆ ಬಿಟ್ಟುಹೋಗಿರುವ ಈ ಸೊತ್ತನ್ನು ಉಳಿಸುವುದು ನಮ್ಮ ಮೊದಲ ಹೊಣೆಗಾರಿಕೆಯಲ್ಲವೇ?

ಹರಿದಾಸರ ಬಗ್ಗೆ, ಅವರ ಸಂಪ್ರದಾಯದ ಬಗ್ಗೆ, ಅವರ ರಚನೆಗಳ ಬಗ್ಗೆ ಮಾತುಕತೆ ನಡೆಸಲು, ಅವರ ರಚನೆಗಳನ್ನು ಅಂತರ್ಜಾಲ ಪ್ರಪಂಚದಲ್ಲಿ ಉಳಿಸಿ, ಎಲ್ಲ ಕನ್ನಡಿಗರಿಗೆ ದೊರಕಿಸಿಕೊಡುವಂತಹ ಒಂದು ಪ್ರಯತ್ನವೇ ಹರಿದಾಸ ಸಂಪದ. ಬನ್ನಿ, ಈ ತಾಣ ನಿಮ್ಮದು. ದಾಸರ ರಚನೆಗಳ ಕಂಪು ನಿಮಗಿನ್ನೂ ಹತ್ತಿರವಾಗಲಿ!

ಹರಿದಾಸ ಸಂಪದಕ್ಕೆ ಹೋಗಲು ಇಲ್ಲಿ ಚಿಟಕಿಸಿ.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?