ಭಾಮೆಯ ನೋಡಲು ತಾ ಬಂದ

ಎಷ್ಟೋ ದಿನಗಳಿಂದ ಯಾವುದಾದರೂ ರಾಗದ ವಿಷಯ ಬರೆಯಬೇಕೆಂದುಕೊಳ್ಳುತ್ತಲೇ ಇದ್ದೆ. ಆದರೆ ಯಾಕೋ ಮುಂದೆ ಹೋಗುತ್ತಲೇ ಹೋಗುತ್ತಿತ್ತು. ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡುತ್ತ ಇದ್ದಕ್ಕಿದ್ದ ಹಾಗೆ ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಅನ್ನುವ ಹಾಡು ನೆನಪಿಗೆ ಬಂತು.

ಈ ಚಿತ್ರವನ್ನು ನಾನು ನೋಡಿರಲಿಲ್ಲ. ಆದರೆ ಬರೀ ಹಾಡುಗಳನ್ನ ಕೇಳಿದ್ದೆ. ಆ ಕಾಲಕ್ಕೆ ತಕ್ಕ ಹಾಗೆ ಒಳ್ಳೇ ಶಾಸ್ತ್ರೀಯ ಧಾಟಿಯ ಹಾಡುಗಳಿವೆ ಅಂತ ಗೊತ್ತಿತ್ತು. ಆದರೆ ಈಗ ಬೇಕಾದ್ದು ತೋರಿಸಲು ಸಪ್ತಾಕ್ಷರೀ ಮಂತ್ರವಿದೆಯಲ್ಲ Eye-wink (youtube), ಅದನ್ನೇ ಜಪಿಸಿಸಿದೆ. ಸಿಕ್ಕೇಬಿಡ್ತು ಬೇಕಾದ್ದ ಹಾಡು. ಮೊದಲಿಗೆ ಹಾಡು ಕೇಳಿ, ಮತ್ತೆ ಈ ಹಾಡನ್ನು ಏಕೆ ತೆಗೆದುಕೊಂಡೆ ಅಂತ ಹೇಳುವೆ.


ಸೂಲಮಂಗಲಂ ರಾಜಲಕ್ಷ್ಮಿ ಅವರು ಹಾಡಿರೋ ಈ ಹಾಡು ಹಿಂದೋಳ ರಾಗದಲ್ಲಿದೆ. ಈ ಹಿಂದೆ ಕಲ್ಯಾಣಿ, ಮೋಹನ, ಸಿಂಧೂಬೈರವಿ ಮೊದಲಾದ ರಾಗಗಳ ಬಗ್ಗೆ ಬರೆದಿದ್ದೆ. ಹೀಗಾಗಿ, ಇನ್ನೊಂದು ಒಳ್ಳೇ ರಾಗದ ಬಗ್ಗೆ ಬರೀಬೇಕು ಅನ್ನಿಸಿದಾಗ ಹಿಂದೋಳ ರಾಗ ಸಹಜವಾದ ಒಂದು ಆಯ್ಕೆ.

ಕರ್ನಾಟಕ ಸಂಗೀತದಲ್ಲಿ ಹಿಂದೋಳ ಎನ್ನುವ ಹೆಸರಲ್ಲಿ ಮತ್ತೆ ಹಿಂದೂಸ್ತಾನಿಯಲ್ಲಿ ಮಾಲ್‍ಕೌಂಸ್ ಅನ್ನುವ ಹೆಸರಲ್ಲಿ ಬಹಳವೇ ಪ್ರಖ್ಯಾತವಾದ ರಾಗ. ಇದು ಒಂದು ಔಡುವ ರಾಗ - ಅಂದರೆ ಇದರಲ್ಲಿ ಐದು ಸ್ವರಗಳು ಮಾತ್ರ ಬರುತ್ತವೆ.

ಸ ಗ ಮ ದ ನಿ ಸ - ಸ ನಿ ದ ಮ ಗ ಸ ಎನ್ನುವ ಆರೋಹಣ ಅವರೋಹಣಗಳನ್ನು ಈ ರಾಗಕ್ಕೆ ಬರುತ್ತವೆ. ಸಾಧಾರಣ ಗಾಂಧಾರ, ಶುದ್ಧ ಮಧ್ಯಮ ಶುದ್ಧ ಧೈವತಗಳು ಬರುವ ಈ ರಾಗ ಭಕ್ತಿ, ಶಾಂತ, ಕರುಣಾ ಮೊದಲಾದ ರಸಗಳನ್ನು ಚೆನ್ನಾಗಿ ವ್ಯಕ್ತಪಡಿಸಬಹುದು.ಇನ್ನೂ ಹೆಚ್ಚಿನ ವಿವರಗಳನ್ನ ಈ ಬರಹದ ಮುಂದಿನ ಭಾಗಗಳಲ್ಲಿ ಕೊಡುವೆ.

ಅಂದ ಹಾಗೆ, ಈ ರಾಗ ಚಲನಚಿತ್ರಗಳಲ್ಲೂ ಬೇಕಾದಷ್ಟು ಕಾಣಿಸಿಕೊಂಡಿವೆ. ಕೆಲವು ಉದಾಹರಣೆಗಳನ್ನು ಇಲ್ಲಿ ಕೇಳೋಣ:

ಮೊದಲಿಗೆ ಭಕ್ತ ಕುಂಬಾರ ಚಿತ್ರದ ಮಾನವ ದೇಹವು ಮೂಳೆ ಮಾಂಸದ ತಡಿಕೆ - ಇದೇ ರಾಗದಲ್ಲಿ ಯೋಜಿಸಿರುವ ಈ ಹಾಡನ್ನು ಕೇಳಿ - ಪಿಬಿಶ್ರೀನಿವಾಸ್ ಅವರ ದನಿಯಲ್ಲಿ.


ಈಗ ಇದೇ ರಾಗದಲ್ಲಿ ಒಂದು ಒಳ್ಳೇ ಯುಗಳ ಗೀತೆ - ನಮ್ಮಲ್ಲಿ ಇಬ್ಬರು ಗಾಯಕಿಯರು ಒಟ್ಟಿಗೆ ಹಾಡಿರುವ ಹಾಡುಗಳು ಕಡಿಮೆಯೇ. ಅಂತಹ ಗೀತೆಗಳಲ್ಲೊಂದು ಸುಂದರ ಗೀತೆ ಇದು - ಹಿಂದೋಳ ರಾಗದ ಚಿತ್ರಗೀತೆಗಳಲ್ಲಿ ನನಗಿದು ಅಚ್ಚುಮೆಚ್ಚು.

ನೋಡಿ - ನಾಂದಿ ಚಿತ್ರದಿಂದ - ಚಂದ್ರಮುಖಿ ಪ್ರಾಣಸಖಿ - ಹಾಡಿರುವವರು ಎಸ್.ಜಾನಕಿ ಮತ್ತು ಬೆಂಗಳೂರು ಲತಾ


ಹಿಂದೋಳ ರಾಗ ಶ್ಲೋಕಗಳನ್ನು ಹಾಡುವುದಕ್ಕ್ಕೆ ಹೇಳಿಸಿದ ರಾಗವೇ. ಇದಕ್ಕೊಂದು ಒಳ್ಳೇ ಉದಾಹರಣೆಯನ್ನು ಕೊಡಲು ಕವಿರತ್ನ ಕಾಳಿದಾಸ ಚಿತ್ರಕ್ಕಿಂತ ದೂರ ಹೋಗಬೇಕಿಲ್ಲ. ಕೆಳಗಿರುವ ಗೀತೆಯಲ್ಲಿನ ಮಾಣಿಕ್ಯವೀಣಾಮುಪಲಾಲಯಂತೀಂ ಎನ್ನುವ ಶ್ಲೋಕ ರಾಗಮಾಲಿಕೆಯಲ್ಲಿದ್ದು, ಅದರಲ್ಲಿ ಮಾತಾ ಮರಕತಶ್ಯಾಮಾ ಎಂಬ ಸಾಲು ಹಿಂದೋಳರಾಗದಲ್ಲಿದೆ. ನಂತರ ಅದು ಕಲ್ಯಾಣಿ ರಾಗಕ್ಕೆ ತಿರುಗುತ್ತದೆ.


ಈ ಸುಂದರ ಶ್ಲೋಕದಿಂದ ಇವತ್ತು ಮುಗಿಸುವೆ - ಮುಂದಿನ ಭಾಗದಲ್ಲಿ ಹಿಂದೋಳದ ಇನ್ನಷ್ಟು ಚರಿತ್ರೆ, ಉದಾಹರಣೆಗಳೊಂದಿಗೆ ಹಾಜರಾಗುವೆ Smiling

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?