ಧರ್ಮವೆ ಜಯವೆಂಬ ದಿವ್ಯ ಮಂತ್ರ

ಧರ್ಮವೆ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ

ವಿಷವಿಕ್ಕಿದವನಿಗೆ ಷಡ್ರಸವನುಣಿಸಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪುಸಿಯಾಡಿ ಕೆಡಿಸುವನ ಹಾಡಿ ಹೊಗಳಲು ಬೇಕು
ಮೋಸ ಮಾಡುವವನ ಹೆಸರ ಮಗನಿಗಿಡಬೇಕು !


ಎಂತಹ ಸಾಲುಗಳು ಅಲ್ಲವೇ? ಧರ್ಮದ ಹೆಸರಲ್ಲಿ ಕಚ್ಚಾಡುವವರಿಗೆ, ಕರುಣೆ , ಕ್ಷಮೆ ಅನ್ನುವುದನನ್ನು ನಾವು ಎಂದೂ ಮರೆಯಬಾರದೆಂದು ಎತ್ತಿ ಹೇಳುವ ಸಾಲುಗಳಿವು. ಜೊತೆಗೆ ಇಂತಹ ಯೋಚನಗಳು ನಮ್ಮಲ್ಲಿ ಎಂದಿಗೂ ಇದ್ದವು, ಇಂದೂ ಇರಬೇಕು ಎಂದು ಕನ್ನಡಿ ಇಟ್ಟು ತೋರುವ ಸಾಲುಗಳಿವು.

ಆದರೆ ನಿಜವಾಗಿ ನಾನು ಹೇಳಹೊರಟದ್ದೇ ಬೇರೆ ವಿಷಯ - ವಿಷಯಾಂತ ಸಾಕು. ಕಳೆದ ವಾರ ಇಲ್ಲಿ ಒಂದು ಒಳ್ಳೇ ಸಂಗೀತ ಕಚೇರಿ ಕೇಳಿದೆ. ಅದು ನಡೆದದ್ದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ನಡೆಸಿದ ಕನ್ನಡೋತ್ಸವ-೨೦೦೮ ರಲ್ಲಿ.

ಹಾಡುಗಾರರು ರಾಘವನ್ ಮಣಿಯನ್. ಡಾ|ಬಾಲಮುರಳಿಕೃಷ್ಣ ಅವರ ಶಿಷ್ಯ. ಅವರು ಕನ್ನಡಿಗರಲ್ಲದಿದ್ದರೂ, ಕನ್ನಡಕೂಟದಲ್ಲಿ ನಡೆಯುವ ಕಚೇರಿಯೆಂದು, ಪೂರ್ತಿ ಕಾರ್ಯಕ್ರಮವನ್ನು ಕನ್ನಡದಲ್ಲಿರುವ ರಚನೆಗಳಿಂದಲೇ ಕಳೆಕಟ್ಟಿಸಿದರು. ಅವರು ಹಾಡಿ ಹಾಡುಗಳಲ್ಲಿ ಧರ್ಮವೆ ಜಯವೆಂಬ ದಿವ್ಯ ಮಂತ್ರ ಕೂಡ ಒಂದಾಗಿತ್ತು.

ಇದರ ಜೊತೆಗೆ, ಈ ಕಚೇರಿ ಇನ್ನೊಂದು ನಿಟ್ಟಿನಿಂದ ನನ್ನ ಮಟ್ಟಿಗೆ ವಿಶೇಷವಾಗಿತ್ತು. ಸಾಧಾರಣವಾಗಿ, ಕರ್ನಾಟಕ ಸಂಗೀತ ಕಚೇರಿಯೆಂದರೆ ತ್ಯಾಗರಾಜರ ರಚನೆಗಳು ಒಂದೆರಡಾದರೂ ಇರುವುದು ರೂಢಿ. ಆದರೆ ತ್ಯಾಗರಾಜರು ಕನ್ನಡದಲ್ಲಿ ರಚಿಸಿಲ್ಲವಲ್ಲ! ಹಾಗಾಗಿ ರಾಘವನ್ ಕನ್ನಡಕ್ಕೆ ಅನುವಾದಿಸಿದ ತ್ಯಾಗರಾಜರ ಕೃತಿಯೊಂದನ್ನು ಹಾಡಿದರು. ತ್ಯಾಗರಾಜರ ಮಾಯಾಮಾಳವಗೌಳ ರಾಗದ ’ಮೇರು ಸಮಾನ ಧೀರ’ ಅನ್ನುವ ರಚನೆಯನ್ನು ಕನ್ನಡಕ್ಕೆ ತಂದಿದ್ದು ನಾನೇ ಎನ್ನುವುದು ನನಗೆ ಒಂದು ಹೆಮ್ಮೆ Smiling ಮತ್ತೆ, ಒಬ್ಬ ಹಾಡುಗಾರರು, ಅದನ್ನು ಕಚೇರಿಯಲ್ಲಿ ನೂರಾರು ಜನರ ಮುಂದೆ ಹಾಡಿ ಅದಕ್ಕೆ ಜೀವ ಕೊಟ್ಟರು ಅನ್ನುವುದಂತೂ ಬಹಳ ಸಂತೋಷ ತಂದಿತು.

ಈ ಕಚೇರಿಯ ಬಗ್ಗೆ ಇನ್ನೂ ವಿವರವಾಗಿ ಕೆಳಗಿನ ಕೊಂಡಿಯಲ್ಲಿ ಬರೆದಿದ್ದೇನೆ. ಹೋಗಿ ಓದಿ. ಅಲ್ಲೇ ಕಚೇರಿಯ ಕೆಲವು ತುಣುಕುಗಳನ್ನು ಕೇಳಲೂ ಬಹುದು.

ಹೀಗೊಂದು ವಿಶೇಷ ಸಂಗೀತ ಕಚೇರಿ

ಕಡೆಗೆ ಒಂದು ತಿಲ್ಲಾನವನ್ನು ಕನ್ನಡದಲ್ಲೇ ರಾಘವನ್ ಅವರು ರಚಿಸಿದ್ದು ಕೂಡ ಬಹಳ ಮೆಚ್ಚುವಂತಹ ಸಂಗತಿ.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?