ಸಮಹಗಲಿರುಳು

ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ - "ಇವತ್ತು ಈಕ್ವಿನಾಕ್ಸ್" ಅಂತ.

"ಹಂಗಂದ್ರೇನು" ಅಂದರು ಅವರು.

ಮತ್ತೆ ಶುದ್ಧ ಸಂಸ್ಕೃತದಲ್ಲಿ "ಇವತ್ತು ಶರದ್ ವಿಷುವ" ಅಂತ ಹೇಳ್ಬಹುದಿತ್ತು - ಅದರ ಬದಲು ಕೇಳಿದರೆ, ತಾನಾಗೇ ಅರ್ಥ ಆಗೋ ಅಂತಹ ಪದ ಯಾಕೆ ಹೇಳ್ಬಾದ್ರು ಅನ್ನಿಸಿ "ಸಮಹಗಲಿರುಳು" ಅಂದೆ.

ಪದದಲ್ಲೇ ಅರ್ಥ ಬಂತಲ್ಲ? ಅಂದ್ರೆ ಇವತ್ತು ರಾತ್ರಿ ಮತ್ತೆ ಹಗಲು ಒಂದೇ ಸಮ ಇರುತ್ತವೆ. ಬೆಂಗಳೂರು (ಅಥವಾ ಕರ್ನಾಟಕದಲ್ಲಿ ಯಾವ ಜಾಗ ಆದರೂ) ಭೂಮಧ್ಯರೇಖೆಗೆ ಬಹಳ ದೂರ ಇಲ್ಲದೇ ಇರೋದ್ರಿಂದ ಚಳಿಗಾಲಕ್ಕೂ ಬೇಸಿಗೇಗೂ ದಿನ ರಾತ್ರಿಗಳ ಅವಧಿ ತುಂಬಾ ಬದಲಾಗೋದಿಲ್ಲ. ಆದ್ರೆ, ಭೂಮಧ್ಯ ರೇಖೆಯಿಂದ ಹೆಚ್ಚು ಹೆಚ್ಚು ಉತ್ತರಕ್ಕೆ (ಅಥವಾ ದಕ್ಷಿಣಕ್ಕೆ) ಹೋದಹಾಗೆ ಕಾಲ ಬದಲಾದ ಹಾಗೆ ಹಗಲು ಹೆಚ್ಚಾಗೋದೂ, ಅಥವಾ ರಾತ್ರಿ ಹೆಚ್ಚಾಗೋದೋ ಸುಲಭವಾಗಿ ಗೊತ್ತಾಗುತ್ತೆ.

ಜೂನ್ ೨೧ (ಅಥವಾ ಅಕ್ಕ ಪಕ್ಕದ ದಿನ) ಅತೀ ಹೆಚ್ಚಿನ ಹಗಲು ಇರುತ್ತೆ. ಹಾಗೇ ಡಿಸೆಂಬರ್ ೨೧(ಅಥವಾ ಒಂದು ದಿನ ಆಚೀಚೆ) ಅತಿ ಕಡಿಮೆ ಹಗಲಿರುತ್ತೆ.

ಅತಿ ಹೆಚ್ಚು ಹಗಲಿರುವ ದಿನದಿಂದ ಪ್ರತಿ ದಿನ ಹಗಲಿನ ಅವಧಿ ಸ್ವಲ್ಪ್ಸ್ ಸ್ವಲ್ಪ ಕಡಿಮೆಯಾಗ್ತಾ ಹೋಗ್ತಿದ್ದಹಾಗೆ, ಒಂದು ದಿನ ಹಗಲು ರಾತ್ರಿ ಎರಡೂ ಒಂದು ಸಮ ಆಗ್ಬೇಕಲ್ಲ? ಅದು ಇವತ್ತು ಆಗತ್ತೆ.

ಈಕ್ವಿನಾಕ್ಸ್ - ಅಂದರೂ ಅದೇ ಅರ್ಥ. ಈಕ್ವಲ್ ನೈಟ್ಸ್ ಅನ್ನೋ ಅರ್ಥ ಬರುವ ಗ್ರೀಕ್ ಪದ ಅದು.

ಇದರಲ್ಲಿ ಇನ್ನೂ ಒಂದು ಅಂಶ ಇದೆ, ಹೇಳಿಬಿಡುವೆ. ಈ ಮೊದಲೇ ಎಷ್ಟೋ ಸಲ ಸಮಯ ಸಿಕ್ಕಾಗಲೆಲ್ಲ ಹೇಳಿದೀನಿ. ಭೂಮಿ ಸೂರ್ಯನ ಸುತ್ತ ಸುತ್ತೋ ಪಾತಳಿಯನ್ನ ಆಕಾಶದ ವರೆಗೆ ತೊಗೊಂಡು ಹೋದರೆ, ಅದನ್ನ ಕ್ರಾಂತಿವೃತ್ತ ಅಂತಾರೆ ಅಂತ. ಅದೇ ದಾರಿಯಲ್ಲೇ ನಮಗೆ ಸೂರ್ಯ ಆಕಾಶದಲ್ಲಿ ಕಾಣಿಸೋದು. ಅದೇ ರಾಶಿ ಚಕ್ರದ ನಡುವೆ ಹಾದು ಹೋಗುವ ಗೆರೆ ಕೂಡಾ. ಈ ಕ್ರಾಂತಿ ವೃತ್ತ ಆಕಾಶದ ಸಮಭಾಜಕ (celestial equator) ವನ್ನ ಎರಡು ಕಡೆ ಕತ್ತರಿಸುತ್ತೆ.

ಯಾಕಂದ್ರೆ ನಮಗೆಲ್ಲ ಗೊತ್ತಲ್ಲ, ಭೂಮಿ ತಾನು ಸೂರ್ಯನ್ನ ಸುತ್ತೋ ಸಮಪಾತಳಿಗೆ ಇಪ್ಪತ್ಮೂರೂವರೆ ಡಿಗ್ರಿ ವಾಲಿಕೊಂಡಿದೆ ಅಂತ.

ನಿಜ ಹೇಳ್ಬೇಕು ಅಂದ್ರೆ, ವಿಷುವ ಅನ್ನೋದು ಈ ಎರಡು ಬಿಂದುಗಳು ಮಾತ್ರ. ಸೂರ್ಯ ಯಾವತ್ತು ಈ ಬಿಂದುವಿನಲ್ಲಿ ಹೋದಹಾಗೆ ಕಾಣ್ತಾನೋ ಅವತ್ತೇ ವಿಷುವ.

ಸೂರ್ಯ ಕ್ರಾಂತಿವೃತ್ತದ ಮೇಲೆ ಹೋಗ್ತಾ ಯಾವಾಗ ಆಗಸದ ಸಮಭಾಜಕವನ್ನ ದಕ್ಷಿಣದಿಂದ ಉತ್ತರಕ್ಕೆ ಹೋಗ್ತಾ ಕತ್ತರಿಸ್ತಾನೋ, ಅವತ್ತು ವಸಂತ ವಿಷುವ. ಅಂದ್ರೆ, ವಸಂತ ಋತು ಶುರುವಾಗೋ ದಿನ.

ಆದ್ರೆ, ಇವತ್ತು ಸೂರ್ಯ ಆ ಸಮಭಾಜಕದ ಮೇಲೆ, ಉತ್ತರದಿಂದ ದಕ್ಷಿಣಕ್ಕೆ ದಾಟ್ತಾನೆ.ಅದಕ್ಕೇ , ಇವತ್ತು ಶರದ್ ವಿಷುವ.

ಆದ್ರೆ, ಒಂದು ಬಿಂದು ಅಂದ್ ಮೇಲೆ, ಅದು ಹೇಗೆ ಒಂದು ದಿವಸ ಎಲ್ಲಾ ಇರಕ್ಕೆ ಸಾಧ್ಯ ಅಲ್ವಾ? ನಿಜ ಹೇಳ್ಬೇಕೆಂದ್ರೆ, ಈಕ್ವಿನಾಕ್ಸ್, ಅಥವಾ ವಿಷುವ ಅನ್ನೋದು ಕಾಲದಲ್ಲಿ ಒಂದು ಕ್ಷಣ ಮಾತ್ರ. ಇವತ್ತು ಸೆಪ್ಟೆಂಬರ್ ೨೨, ಯುನಿವರ್ಸಲ್ ಸಮಯ ಮಧ್ಯಾಹ್ನ ೩:೪೦ ಕ್ಕೆ, ಅಂದ್ರೆ ಭಾರತದ ಕಾಲಮಾನ ರಾತ್ರಿ ೯:೧೦ ಕ್ಕೆ ಈ ಶರದ್ ವಿಷುವ ಬಿಂದು ಬರತ್ತೆ.

ಅಂದ್ರೆ, ನಾಳೆ ಬೆಳಗ್ಗೆ ನೀವು ಸೂರ್ಯ ಹುಟ್ಟೋದನ್ನ ನೋಡಿದ್ರೆ, ಅದು ನಿಜವಾದ ಪೂರ್ವ ಅಂತಿಟ್ಕೋಬಹುದು. ಸೂರ್ಯ ಪ್ರತೀದಿನ ಒಂದೇ ಕಡೇಲೇ ಹುಟ್ಟೋದಿಲ್ಲ. ದಿವಸಾ ಹಿಂದಿನ ದಿನಕ್ಕಿಂತ ಚೂರು ಎಡಕ್ಕೋ, ಚೂರು ಬಲಕ್ಕೋ ( ಅವನು ಉತ್ತರಾಯಣದಲ್ಲಿದಾನೋ, ದಕ್ಷಿಣಾಯನದಲ್ಲಿದಾನೋ ಅದರ ಮೇಲೆ) ಹುಟ್ತಾನೆ.

ವಿಷುವ - ವಸಂತ ಹಾಗೂ ಶರದ್ ವಿಷುವ ದಿನದಂದು ಅವನು ಸರೀ ಪೂರ್ವದಲ್ಲಿ ಹುಟ್ಟಿ ಸರೀ ಪಶ್ಚಿಮದಲ್ಲಿ ಮುಳುತ್ತಾನೆ. ಮತ್ತೆಅವತ್ತು ಹಗಲಿನ ಮತ್ತೆ ರಾತ್ರಿ ಅವಧಿಗಳು ಒಂದೇ ಸಮ ಇರತ್ತೆ . ಆದ್ರೆ ಈ ಲೆಕ್ಕಾಚಾರದಲ್ಲಿ ಸೂರ್ಯನ ನಡು ಬಿಂದು ಲೆಕ್ಕಕ್ಕಿಟ್ಕೊಳೋದ್ರಿಂದ, ಹಗಲಿನ ಅವಧಿ ನಿಜವಾಗಿ ಹೇಳ್ಬೇಕೆಂದ್ರೆ, ಒಂದು ಕೈ ಮುಂದೇ ಇರತ್ತೆ! ಅದೇನೇ ಇರಲಿ. ಈ ದಿನಕ್ಕೆ "ಸಮಹಗಲಿರುಳು" ಅಂತ ಕರೆಯೋದಾದ್ರೆ ತಪ್ಪಿಲ್ಲ - ಹಿಂದೆ ಗ್ರೀಕರು ಮಾಡಿದ ತಪ್ಪನ್ನೇ ಮತ್ತೆ ಮಾಡಿದ್‍ಹಾಗಾಗುತ್ತೆ , ಅಷ್ಟೇ!

ಶರತ್ಕಾಲ ಅನ್ನೋದನ್ನ ಸಂಸ್ಕೃತ ಕವಿಗಳು ಬಹಳ ಬಣ್ಣಿಸಿದಾರೆ. ಕಾಳಿದಾಸ ಎಲ್ಲೋ ಪುಟಗಟ್ಟಲೆ ವರ್ಣನೆ ಮಾಡಿದ್ದಾನೆ ಅಂತ ನೆನಪು. ಹಾಗೇ ಭರ್ತೃಹರಿ ಕೂಡ ಒಂದು ಸುಭಾಷಿತದಲ್ಲಿ ಹೇಗೆ ಕೆಲವು ವಸ್ತುಗಳು ಸ್ವಲ್ಪ ಕೊರತೆಗಳಿದ್ದರೂ ಚೆನ್ನಾಗಿರುತ್ತೆ ಅಂತ ಬಣ್ಣಿಸೋವಾಗ, ಹುಣ್ಣಿಮೆಗೆ ಹಿಂದಿನ ದಿನದ ಚಂದ್ರ, ಯುದ್ಧದಲ್ಲಿ ಕಾದು ಬಸವಳಿದ ಸೈನಿಕ,ಮೊದಲಾದ ಉದಾಹರಣೆಗಳಲ್ಲಿ "ಶರದಿ ಸರಿತಾಶ್ಯಾನ ಪುಲಿನಾ" - ಅಂದ್ರೆ, ಮಳೆ ಕಡಿಮೆಯಾಗಿ, ಹೆಚ್ಚಿನ ನೀರು ಹರಿವಿಲ್ಲದೆಲೆ ಅಲ್ಲಲ್ಲೇ ಮರಳು ದಂಡೆಗಳು ಕಾಣ್ತಾ ಇರೋ ಅರೆ ತುಂಬಿದ ಶರತ್ಕಾಲದ ನದಿಯನ್ನೂ ಕೂಡ "ಸನಿಮ್ನಾ ಶೋಭಂತೇ" - ಊನವಿದ್ದರೂ ಮೆರುಗುತ್ತಾರೆ ಅಂತ ಹೊಗಳ್ತಾನೆ.

ಇರಲಿ, ಎಲ್ಲೆಲ್ಲೋ ಹೋಗೋ ಮೊದಲು ನಿಲ್ಲಿಸ್ತೀನಿ. ಶರತ್ಕಾಲ ನಿಮಗೆಲ್ಲ ಒಳ್ಳೇದನ್ನೇ ತರಲಿ!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?