ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತಡೆಯಲಾರದ ದುರಂತಗಳಾದರೆ, ಕೆಲವು ಸ್ವಯಂಕೃತಾಪರಾಧಗಳು. ಈಗ ಗಾಂಧೀಜಿಯವರು ಹೇಳುವಂತೆ ’ಸಬ್ ಕೋ ಸನ್ಮತಿ ದೇ ಭಗವಾನ್’ ಎಂದು ಹೇಳಿಕೊಳ್ಳುತ್ತ ಮುನ್ನಡೆವುದೊಂದೇ ದಾರಿಯೋ ಏನೋ ಎನ್ನಿಸುತ್ತೆ. ಕಾಲದ ಪ್ರವಾಹದಲ್ಲಿ ತಡೆದು ನಿಲ್ಲಬಲ್ಲವರಾರು?

ಅದೇ ರೀತಿ, ಸಂಗೀತ ಅನ್ನುವುದೂ ನಿಂತ ನೀರಲ್ಲ. ಅದರಲ್ಲಿಯೂ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಂಗೀತ ಹೇಗೆ ಒಂದು ಕಲಾಪ್ರಕಾರವೋ, ಅದೇ ರೀತಿ ಒಂದು ಗಣಿತದ ಬುನಾದಿಯಮೇಲೂ ನಿಂತಿದೆ. ಹೇಗೆ ಹೊಸ ಹೊಸ ರಸಾಯನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಾಗುತ್ತಿರುತ್ತವೋ, ಅದೇ ರೀತಿ ಹೊಸ ಹೊಸರಾಗಗಳೂ ಸಂಗೀತ ಪ್ರಪಂಚಕ್ಕೆ ಸೇರುತ್ತಲೇ ಹೋಗುತ್ತವೆ. ಅದರಲ್ಲಿ ಜಳ್ಳು ಯಾವುದು, ಒಳ್ಳೆಯದು ಯಾವುದು ಎನ್ನುವುದನ್ನು ಕಾಲವೇ ಹೇಳುತ್ತೆ.

ಪೀರಿಯಾಡಿಕ್ ಟೇಬಲ್ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅಣು ಪರಮಾಣುಗಳನ್ನು ಒಂದು ಕ್ರಮದಲ್ಲಿ ಇಡುತ್ತಾ ಹೋದಾಗ, ಅದರಲ್ಲಿ ಹೋಲಿಕೆ ಇರುವಂತಹ ಮೂಲವಸ್ತುಗಳೆಲ್ಲ ಒಂದು ಪಟ್ಟಿಯಲ್ಲಿ ಇರುವಂತೆ ಮಾಡುವ ಸಲಕರಣೆ ಇದು. ಒಂದು ನೇರಸಾಲಿನಲ್ಲಿರುವ ಮೂಲವಸ್ತುಗಳು ಸ್ವಭಾವಗಳಲ್ಲಿ ಹೋಲಿಕೆ ಇರುತ್ತೆ ಎನ್ನುತ್ತೆ ರಸಾಯನ ಶಾಸ್ತ್ರ. ಈ ವಿಂಗಡಣೆ ಮಾಡಿಟ್ಟಾಗ, ಕೆಲವು ಖಾಲಿ ಜಾಗಗಳಲ್ಲಿ ಯಾವುದೇ ಮೂಲಧಾತು ಇಲ್ಲದೇ ಹೋಗಿದ್ದರಿಂದಲೇ ಅಲ್ಲವೇ ೧೭-೧೮-೧೯ನೇ ಶತಮಾನಗಳಲ್ಲಿ ಆಲ್ಲಿ ಇರಬೇಕಾದ ಧಾತುಗಳಿಗೆ ವಿಜ್ಞಾನಿಗಳು ಹುಡುಕಿ ಯಶಸ್ವಿಯಾಗಿದ್ದು?

ಕರ್ನಾಟಕ ಸಂಗೀತದಲ್ಲೂ ಇದೇ ರೀತಿಯ ಒಂದು ಪ್ರಯೋಗ ಮಾಡುವ ಮನೋಭಾವ ಬೆಳೆದದ್ದನ್ನು ೧೬-೧೯ನೇ ಶತಮಾನದಲ್ಲಿ ನಾವು ಕಾಣುತ್ತೇವೆ. ರಾಗಗಳನ್ನು ಗುಂಪುಗುಂಪಾಗಿ ವಿಂಗಡಿಸಲು ಮೇಳಗಳನ್ನು ಹೇಳಲಾಗಿದ್ದು ಇದರ ಮೊದಲ ಹೆಜ್ಜೆ. ವಿದ್ಯಾರಣ್ಯರ ಕಾಲಕ್ಕೆ (ಸುಮಾರು ಕ್ರಿ.ಶ.೧೩೫೦) ರೂಢಿಗೆ ಬಂದ ಈ ಪದ್ಧತಿ ೨೦೦-೩೦೦ ವರ್ಷ ಕಳೆಯುವಷ್ಟರಲ್ಲಿ ಗಣಿತ-ತರ್ಕಗಳ ಉಪಯೋಗದಿಂದ ವೆಂಕಟಮಖಿಯ ೭೨ ಮೇಳಗಳ ಪದ್ಧತಿಯ ಚೌಕಟ್ಟನ್ನು ಹಾಕಿಕೊಟ್ಟಿತು. ಇದರಿಂದ ನಂತರ ಬಂದ ಪ್ರಾಯೋಗಿಕ ಮನೋಭಾವವುಳ್ಳ ಸಂಗೀತಗಾರರಿಗೂ, ವಾಗ್ಗೇಯಕಾರರಿಗೂ ತಮ್ಮ ಕಲ್ಪನೆಯನ್ನು ಹರಿಬಿಡಲು ಅನುವು ಮಾಡಿಕೊಟ್ಟಿತು.ವೆಂಕಟಮಖಿಯ ಕಾಲಕ್ಕೆ (~ಕ್ರಿ.ಶ ೧೬೫೦)ಪ್ರಸಿದ್ಧವಾದದ್ದು ಕೇವಲ ೧೯ ಮೇಳಗಳು. ಅವನು ಅವುಗಳ ಬಗ್ಗೆ ವಿವರಿಸಿ, ತಾನೇ ಸ್ವಂತ ಸಿಂಹರವ ಎಂಬ ಹೊಸ ರಾಗವನ್ನು ತನ್ನ ಪದ್ಧತಿಗೆ ಅನುಗುಣವಾಗಿ ರಚಿಸಿದ್ದೇನೆ ಎಂದು ಹೇಳಿ, ಮುಂದಿನ ಪೀಳಿಗೆಗಳು ಇನ್ನುಳಿದ ೫೨ ಮೇಳರಾಗಗಳನ್ನು ಕಲ್ಪಿಸಬಹುದು ಎಂದು ಅವನ ಚತುರ್ದಂಡಿ ಪ್ರಕಾಶಿಕೆಯಲ್ಲಿ ಹೇಳಿದ್ದಾನೆ.

ಅಂತಹ ಒಬ್ಬ ದೊಡ್ಡ ಪ್ರಯೋಗಪಟು ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ 1775 - ಕ್ರಿ.ಶ. 1835 )ವೆಂಕಟಮಖಿ ಹಾಕಿಕೊಟ್ಟ ಚೌಕಟ್ಟಿನಲ್ಲಿ ಹೊಸ ಹೊಸ ಮೇಳರಾಗಗಳನ್ನು ಪ್ರಾಯೋಗಿಕವಾಗಿ ಕಲ್ಪಿಸಿ, ಮತ್ತು ಆ ಎಲ್ಲ ೭೨ ಮೇಳರಾಗಳಲ್ಲೂ ರಚನೆ ಮಾಡಿದವರಲ್ಲಿ ಅವರೇ ಮೊದಲಿಗರು.

ಇವತ್ತು ನಾನು ನಿಮಗೆ ಕೇಳಿಸುವ ರಚನೆ ಮುತ್ತುಸ್ವಾಮಿ ದೀಕ್ಷಿತರ ಒಂದು ದೇವಿಯ ಕುರಿತಾದ ರಚನೆ. ಅದು ಇರುವುದು ಈ ಮೊದಲೇ ವೆಂಕಟಮಖಿಯೇ ಕಲ್ಪಿಸಿದ್ದ ಸಿಂಹರವ ಎಂಬ ರಾಗದಲ್ಲಿ. ಇದನ್ನು ಮೇಳಸಂಖ್ಯೆ ಕಂಡುಹಿಡಿಯುವ ಸೌಕರ್ಯಕ್ಕಾಗಿ ಮಾಡಿದ ಕಟಪಯಾದಿ ಸೂತ್ರದ ಪ್ರತ್ಯಯ ಸೇರಿಸಿ ’ದೇಶಿ ಸಿಂಹರವ’ ಅನ್ನುವುದು, ಅಥವಾ ಅದಕ್ಕೆ ಇನ್ನೊಂದು ಪದ್ಧತಿಯಲ್ಲಿ ಹೆಸರಾದ ಹೇಮವತಿ, ಅಥವಾ ಹೈಮವತಿ ಎಂಬ ಹೆಸರಿನಲ್ಲಿ ಕರೆಯುವುದು ರೂಢಿಯಾಗಿದೆ.

ತಮಿಳುನಾಡಿನ ತಿರುನೆಲ್ವೇಲಿಯ ನೆಲ್ಲೈಯಪ್ಪರ್ ಗುಡಿಯಲ್ಲಿರುವ ದೇವಿಯ ಬಗ್ಗೆ ಇರುವ ರಚನೆ. ಇಲ್ಲಿ ಶಿವ-ಪಾರ್ವತಿಯರನ್ನು ನೆಲ್ಲೈಯಪ್ಪರ್ ಮತ್ತು ಕಾಂತಿಮತಿ ಎಂಬ ಹೆಸರುಗಳಿಂದ ಪೂಜಿಸಲಾಗುತ್ತೆ. ಕೃತಿ ಸಂಸ್ಕೃತದಲ್ಲಿದ್ದು ಪೂರ್ಣ ಸಾಹಿತ್ಯ ಹೀಗಿದೆ:

ಶ್ರೀ ಕಾಂತಿಮತಿಂ ಶಂಕರ ಯುವತಿಂ ಶ್ರೀ ಗುರುಗುಹ ಜನನೀಂ ವಂದೇಹಂ || ಪಲ್ಲವಿ||

ಹ್ರೀಂಕಾರ ಬೀಜಾಕಾರಸದನಾಂ ಹಿರಣ್ಯ ಮಣಿಮಯ ಶೋಭಾಸದನಾಂ
ಪಾಕಶಾಸನಾದಿ ವಿನುತಾಂ ಪರಶುರಾಮ ನತ ಹಿಮಶೈಲಸುತಾಂ
ಶುಕ ಶೌನಕಾದಿ ಸದಾರಾಧಿತಾಂ ಶುದ್ಧ ತಾಮ್ರಪರ್ಣೀ ತಟಸ್ಥಿತಾಂ
ಶಂಖಾದ್ಯಷ್ಟೋತ್ತರಸಹಸ್ರಕಲಶಾಭಿಷೇಕಾಂ ಮೋದಾಮ್ ಸುರಹಿತಾಂ || ಚರಣ||

ಇದನ್ನು ನೀವಿಲ್ಲಿ ವಿದುಷಿ ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್ ಅವರ ಕೊರಲಲ್ಲಿ ಕೇಳಬಹುದು.


-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?