ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಂಚಮಿ

ರಾಗಮಾಲಿಕೆಗಳ ಬಗ್ಗೆ ನಾನು ಹಿಂದೇ ಒಂದು ಬಾರಿ ಬರೆದಿದ್ದೆ. ಹೇಗೆ ಬಗೆಬಗೆ ಹೂವುಗಳನ್ನು ಸೇರಿಸಿ ಕಟ್ಟಿದ ಮಾಲೆ ಕಣ್ಣಿಗೆ ಸುಂದರವೋ, ಹಾಗೇ ಬೇರೆ ಬೇರೆ ರಾಗಗಳನ್ನು ಸೇರಿಸಿ ಹೊಸೆದ ರಾಗಮಾಲಿಕೆಗಳೂ ಕಿವಿಗೆ ಕೇಳಲು ಚೆನ್ನ. ಅದರಲ್ಲೂ ದೇವೀ ಸ್ತುತಿಯ ಬಗ್ಗೆ ಹೇಳುವಾಗ ಇನ್ನೊಂದು ಅನುಕೂಲವಿದೆ. ಸ್ತ್ರೀ ಸಮಾನತೆ ಅದು ಇದು ಅಂತ ಯಾರು ಏನಾದರೂ ಹೇಳಿಕೊಂಡರೂ, ಸಂಗೀತವು ಸ್ವಲ್ಪ ಸ್ತ್ರೀ ಪಕ್ಷಪಾತಿ ಅನ್ನುವುದರಲ್ಲೆರಡು ಮಾತಿಲ್ಲ. ಎಲ್ಲ ಕಲೆಗಳಿಗೆ ಆಕರವೆಂದು ನಾವು ನಂಬಿರುವ ಸರಸ್ವತಿ ಹೆಣ್ಣಾಗಿರುವುದೇ ಇದಕ್ಕೆ ಕಾರಣವಿರ್ಬೇಕು. ಅದಿರಲಿ, ನಾನು ಏನು ಹೇಳೋದಕ್ಕೆ ಹೊರಟೆ ಅಂದರೆ ರಾಗಗಳ ಹೆಸರುಗಳಲ್ಲಿ ಹೆಣ್ಣಿನ ಹೆಸರು (ಅಥವಾ ವಿಶೇಷಣಗಳೇ) ಹೆಚ್ಚಿಗೆ ಇವೆ. ಆದ್ದರಿಂದ ದೇವಿಯ ಬಗ್ಗೆ ರಾಗಮಾಲಿಕೆ ಮಾಡಿ, ಅದರಲ್ಲಿ ರಾಗಗಳ ಹೆಸರುಗಳನ್ನು ಸೇರಿಸುವುದಕ್ಕೊಂದು ಒಳ್ಳೇ ಅವಕಾಶವಿದೆ.

ಈ ರೀತಿಯ ರಾಗಮಾಲಿಕೆಗಳಲ್ಲೊಂದಾದ ರಂಜನಿಮಾಲಾ ಬಗ್ಗೆ ಕಳೆದ ನವರಾತ್ರಿಯಲ್ಲಿ ಬರೆದಿದ್ದೆ. ಇದೇ ಅಲ್ಲದೆ ತರಂಗಂಬಾಡಿ ಪಂಚನದ ಅಯ್ಯರ್ ಅವರ ’ಆರಭಿ ರಾಗಪ್ರಿಯೇ ಶಂಕರಿ’ ಎಂಬ ಹದಿನಾರು ರಾಗಗಳ, ಪ್ರತಿಸಾಲಿನಲ್ಲೂ ರಾಗಮುದ್ರೆ ಇರುವ, ತಮಿಳು ಭಾಷೆಯಲ್ಲಿರುವ ರಾಗಮಾಲಿಕೆ ಜನಪ್ರಿಯವಾಗಿದ್ದು, ಇದರ ಕನ್ನಡ ಅನುವಾದವೂ ಕೆಲವು ಬದಲಾವಣೆಗಳೊಂದಿಗೆ ಪ್ರಚಲಿತದಲ್ಲಿದೆ. ಮುತ್ತುಸ್ವಾಮಿ ದೀಕ್ಷಿತರ ’ಪೂರ್ಣಚಂದ್ರಬಿಂಬ ವಿಜಯವದನೇ’ ಎಂಬ ಆರು ರಾಗಗಳ ರಾಗಮಾಲಿಕೆಯೂ ಸೊಗಸಾಗಿದ್ದು, ಅದರಲ್ಲಿ ಪೂರ್ಣಚಂದ್ರಿಕಾ, ನಾರಾಯಣಿ, ಸರಸ್ವತೀ ಮನೋಹರಿ, ಶುದ್ಧವಸಂತ, ಹಂಸಧ್ವನಿ ಮತ್ತು ನಾಗಧ್ವನಿ ರಾಗಗಳಲ್ಲಿ ರಚಿತವಾಗಿದೆ.

ಆದರೆ ಇವತ್ತು ನಾನು ನಿಮಗೆ ಕೇಳಿಸುವ ರಾಗಮಾಲಿಕೆ ಇದ್ಯಾವುದೂ ಅಲ್ಲ! ಇವತ್ತು ಪಂಚಮಿ ಅಲ್ಲವೇ? ಅದಕ್ಕೇ ಐದು ರಾಗಗಳ ಪಂಚಕಲ್ಯಾಣಿ ರಾಗಮಾಲಿಕೆಯನ್ನು ಕೇಳೋಣ. ಸಂಗೀತದ ಅಧಿದೇವಿಯಾದ ವಾಣಿಯನ್ನು ನೆನೆಯುವ ಈ ರಾಗಮಾಲಿಕೆಯ ಸಾಹಿತ್ಯ ಶತಾವಧಾನಿ ಡಾ.ಗಣೇಶ್ ಅವರದ್ದಾಗಿದ್ದರೆ, ಇದಕ್ಕೆ ಸಂಗೀತ ಒದಗಿಸಿ ಹಾಡಿರುವುದು ಡಾ.ನಾಗವಲ್ಲಿ ನಾಗರಾಜ್.
ಕಲ್ಯಾಣಿ, ಮೋಹನ ಕಲ್ಯಾಣಿ, ಹಮೀರ್ ಕಲ್ಯಾಣಿ, ಪೂರ್ವಿಕಲ್ಯಾಣಿ ಮತ್ತು ಯಮುನಾಕಲ್ಯಾಣಿ ರಾಗಗಳಲ್ಲಿರುವ ಈ ರಾಗಮಾಲಿಕೆಯನ್ನು ಕೇಳಿ ಆನಂದಿಸಿ. ಪ್ರತಿ ಚರಣದಲ್ಲೂ ಆಯಾ ರಾಗ ಮುದ್ರೆ ಬಂದಿರುದನ್ನು ಗಮನಿಸಿದಿರಾ?

-ಹಂಸಾನಂದಿ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?