ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ

ಇವತ್ತು ನವರಾತ್ರಿಯ ಏಳನೇ ದಿನ. ಮತ್ತೆ ಇವತ್ತೇ ಹೆಚ್ಚು ಜನರ ಮನೆಯಲ್ಲಿ ಸರಸ್ವತೀ ಪೂಜೆ ಕೂಡ. ಕೆಲವರು ಮಹಾನವಮಿಯ ಆಯುಧಪೂಜೆಯ ದಿನ ಸರಸ್ವತೀ ಪೂಜೆ ಮಾಡುವುದೂ ಉಂಟು. ಸರಸ್ವತಿ ಎಂದರೆ ನನಗೆ ನೆನಪಾಗುವುದು ಶೃಂಗೇರಿಯ ಶಾರದೆ. ಅದೆಂತಹ ಪ್ರಶಾಂತ ಸ್ಥಳ? ಅಲ್ಲಿ ದಸರೆಯ ಸಮಯದಲ್ಲಿ ನಡೆಯುವುವ ಪೂಜೆಗಳೂ ಹೆಚ್ಚಾಯದ್ದೇ. ಮಳಗಾಲ ಮುಗಿಯುತ್ತ ಬಂದಿರುವುದರಿಂದ ತಿಳಿಯಾಗಿ ಹರಿಯುವ ತುಂಗೆ. ಅದಕ್ಕೇ ಇರಬೇಕು ಶೃಂಗೇರಿಯ ಶಾರದೆಯ ಮೇಲಿರುವ ಸಂಗೀತ ರಚನೆಗಳಿಗೂ ಕೊರತೆ ಇಲ್ಲ.

ಕೆಲವು ಪ್ರಸಿದ್ಧ ಸರಸ್ವತೀ ಸ್ತುತಿಗಳನ್ನು ಕನ್ನಡಕ್ಕೆ(ಭಾವಾನುವಾದದಲ್ಲಿ) ತಂದಿರುವೆ. ಓದಿ, ನಂತರ ಹಾಡು ಕೇಳಬಹುದು. ಅಲ್ಲವೇ?

ಸರಸತಿಯೆ ತಲೆಬಾಗುವೆನು ಮನದಾಸೆಗಳನೀವಳೆ
ಅರಿವಿನಾಸೆಯೆನಗಿರಲು ಹರಸು ಕೈಗೂಡುತಿರಲೆಂದು

(ಮೂಲ:

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ )

ಶಾರದೆಯೆ ನಮಿಸುವೆನು ಕಾಶ್ಮೀರದಲಿ ನೆಲೆಸಿಹಳೆ
ಕೋರುವೆನು ಅನುದಿನವು ಅರಿವು ತಿಳಿವನು ನೀಡು

(ಮೂಲ:

ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀ
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ಬುದ್ಧಿಂ ಚ ದೇಹಿಮೇ)

ಮೈಯ ಬಣ್ಣವೋ ಬೆಳ್ಪು ಮಂಜುಮಲ್ಲಿಗೆತಿಂಗಳನಿತು; ಬಿಳಿಯುಟ್ಟು
ಕೈಯಲಿ ಪೊಳೆವ ವರವೀಣೆ ಪಿಡಿದು ನಿಂದಿರುವೆ ಬೆಳ್ದಾವರೆಯಲಿ
ತಾಯೆ! ಆ ಬೊಮ್ಮಹರಿಶಿವರಿಂದಲೂ ಸಲ್ಲುವುದು ಪೂಜೆ ನಿನಗೆ!
ಕಾಯೆ ಸರಸತಿಯೆ ಇಂದೆನ್ನ ಕೈಬಿಡದೆ ಉಳಿಸದೇ ಅಲಸಿಕೆಯನು

(ಮೂಲ:

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ )

ಪದ್ಮಚರಣ್ ಆಕಾಶವಾಣಿ ಬೆಂಗಳೂರು ಕೇಂದ್ರವನ್ನು ೮೦ರ ದಶಕದಲ್ಲಿ ಕೇಳುತ್ತಿದ್ದವರಿಗೆ ಸುಪರಿಚಿತ ಹೆಸರು. ಪಿಟೀಲು ವಿದ್ವಾಂಸರಾಗಿದ್ದ ಕೃಷ್ಣಮಾಚಾರ್ ಅವರು ಪ್ರಸಿದ್ಧಿ ಗಳಿಸಿದ್ದು ಅವರ ಪದ್ಮಚರಣ್ ಎಂಬ ಹೆಸರಿನಿಂದಲೇ. ಆಕಾಶವಾಣಿ ಕಲಾವಿದರಾಗಿದ್ದ ಅವರು, ಶಾಸ್ತ್ರೀಯ ಸಂಗೀತದಲ್ಲೂ, ಜೊತೆಗೆ ಭಾವಗೀತೆಗಳಿಗೆ ರಾಗ ಸಂಯೋಜನೆ ಮಾಡು ವುದರಲ್ಲೂ ಪ್ರಸಿದ್ಧಿ ಹೊಂದಿದ್ದರು. ಕಲ್ಯಾಣಿ ರಾಗ ಇವರಿಗೆ ಬಹಳ ಇಷ್ಟವಾಗಿದ್ದರಿಂದ, ಆ ರಾಗದ ಛಾಯೆಯಲ್ಲಿರುವ ಹಲವು ಸುಗಮ ಸಂಗೀತ ಸಂಯೋಜನೆ ಮಾಡಿದ್ದರಿಂದ ಇವರಿಗೆ ಕಲ್ಯಾಣಿ ಪದ್ಮಚರಣ್ ಎಂದೇ ಕರೆಯುತ್ತಿದ್ದರೆಂದು ತಿಳಿದವರೊಬ್ಬರು ಒಮ್ಮೆ ನನಗೆ ಹೇಳಿದ್ದರು.

ಅದಕ್ಕೇ ಇವತ್ತು ನಾನು ಪದ್ಮಚರಣ್ ಅವರು ಶೃಂಗೇರಿ ಶಾರದೆಯ ಮೇಲೆ ರಚಿಸಿರುವ ಒಂದು ಕೃತಿಯನ್ನು ನಿಮಗೆ ಕೇಳಿಸಬಯಸುವೆ. ವಿದ್ವಾನ್ ಬೆಂಗಳೂರು.ಎಸ್.ಶಂಕರ್ ಅವರ ದನಿಯಲ್ಲಿ.


ಶೃಂಗಪುರಾಧೀಶ್ವರೀ ಶಾರದೇ - ರಾಗ ಕಲ್ಯಾಣಿ


ಹಾಡಿನಲ್ಲಿ ಬಂದ ರಾಗಮುದ್ರೆ (ಕಲ್ಯಾಣಿ) ಮತ್ತು ವಾಗ್ಗೇಯಕಾರ ಮುದ್ರೆಯನ್ನು ಗಮನಿಸಿದಿರಾ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?