ಹೂ ಬಾಣ ಹಿಡಿದವಗೆ ಒಂದು ನಮನ

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಪೆ ಹೂ ಬಾಣಗಳ ಹಿಡಿದಿಹಗೆ

ಕೊ.ಕೊ: ಮನ್ಮಥನು ಅರವಿಂದ,ಅಶೋಕ, ನೀಲೋತ್ಪಲ, ಚೂತ, ನವಮಲ್ಲಿಕಾ - ಈ ಐದು ಹೂಗಳ ಬಾಣವನ್ನು ಹಿಡಿದು ವಸಂತ ಋತುವಿನಲ್ಲಿ ಬರುತ್ತಾನೆ ಎನ್ನುವುದು ಒಂದು ಕವಿ ಸಮಯ. ಅಂದಹಾಗೇ ಇವೆಲ್ಲ ನಿಜವಾದ ಹೂಗಳೇ :)

ಸಂಸ್ಕೃತ ಮೂಲ:

ಶಂಭುಃ ಸ್ವಯಂಭು ಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತ ಸತತಂ ಗೃಹಕರ್ಮ ದಾಸಾಃ
ವಾಚಾಮಗೋಚರ ಚರಿತ್ರ ವಿಚಿತ್ರತಾಯ
ತಸ್ಮೈ ನಮೋ ಭಗವತೇ ಕುಸುಮಾಯುಧಾಯ

ಇದು ಭರ್ತೃಹರಿಯ ಶೃಂಗಾರಶತಕದ ಮೊದಲ ಪದ್ಯ.

-ಹಂಸಾನಂದಿ