ಸಂಗೀತ ನವರಾತ್ರಿ : ಆಶ್ವಯುಜ ಶುದ್ಧ ಷಷ್ಟಿ

ಆಗಲೇ ಹಬ್ಬದ ಅರ್ಧದಷ್ಟು ದಿನಗಳು ಕಳೆದಾಗಿದೆ. ಸಂಗೀತದ ವಿಷಯ ಮಾತಾಡುತ್ತ ಹೋದರೆ, ನನಗೆ ನಿಲ್ಲಿಸುವುದಕ್ಕೇ ತಿಳಿಯುವುದಿಲ್ಲ ಅನ್ನಿಸುತ್ತೆ! ಯಾವಾಗಲೂ ಯಾವುದರ ಬಗ್ಗೆ ಬರೆಯಬೇಕೆಂದೇ ತಿಳಿಯದೇ ಹೋಗುತ್ತೆ. ಏಕಂದರೆ ಹೇಳಿದಷ್ಟೂ ಮುಗಿಯುವಂತಿಲ್ಲವಲ್ಲ ಸಂಗೀತ ಸಾಗರ?

ಚಲಿಸದ ಸಾಗರ ಅಂತೊಂದು ಸಿನೆಮಾ ಬಂದಿತ್ತು - ನಾನು ನೋಡಿರಲಿಲ್ಲ. ಬಹುಶಃ ನದಿಗಳು ಹರಿಯುತ್ತವೆ, ಸಮುದ್ರ ಇದ್ದಲ್ಲೇ ಇರುತ್ತೆ ಎನ್ನುವುದು ಅದರ ಒಳಗಿನ ಭಾವ ಇರಬಹುದು. ಆದರೆ, ಈ ಸಂಗೀತ ಸಾಗರ ನಿಜವಾಗಿ ಬದಲಾಗುತ್ತ ಹೋಗುತ್ತಿರುತ್ತದೆ. ಹಾಗಾಗಿ ನಮ್ಮ ಸಂಗೀತದ ಕೆಲವು ಅಂಶಗಳು ಸಾವಿರಾರು ವರ್ಷಗಳಿಂದ ಹಾಗೇ ಉಳಿದಿವೆಯಾದರೂ, ಮತ್ತೆ ಕೆಲವು ವಿಷಯಗಳು ಬದಲಾಗುತ್ತ ಹೋಗಿವೆ ಅನ್ನುವುದು ಬಲ್ಲವರ ಮಾತು.

ಸಂಗೀತದಲ್ಲಿ ಒಂದು ರಾಗ ಕೇಳಲು ಹಿತವಾಗಿರಬೇಕಾದರೆ, ಐದು ಸ್ವರಗಳಾದರೂ ಇರಬೇಕು - ಇಲ್ಲದಿದ್ದರೆ ಅದು ಸೊಗಸುವುದಿಲ್ಲ ಅನ್ನುವ ನಂಬಿಕೆ ಇತ್ತು. ಅದನ್ನು ಬುಡಮೇಲು ಮಾಡಿದವರು ೨೦ ನೇ ಶತಮಾನದ ಒಬ್ಬ ಮಹಾನ್ ಕಲಾವಿದರಾದ ಡಾ.ಬಾಲಮುರಳಿಕೃಷ್ಣ ಅವರು. ಒಮ್ಮೆ ಯಾವುದೋ ಲಹರಿಯಲ್ಲಿ ಹಾಡಿಕೊಳ್ಳುತ್ತಿದ್ದರಂತೆ - ಆಮೇಲೆ ಗಮನಿಸಿ ನೋಡಲು ಅದರಲ್ಲಿ ನಾಕೇ ಸ್ವರಗಳಿದ್ದುದ್ದನ್ನು ಕಂಡು, ಆ ರಾಗಕ್ಕೆ ಲವಂಗಿ ಎನ್ನುವ ಹೆಸರಿಟ್ಟು, ಒಂದು ಕೃತಿಯನ್ನು ರಚಿಸಿದರು. ಆನಂತರ, ಇದೇ ದಾರಿಯಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡಿ, ಇನ್ನೂ ಕೆಲವು ಅದೇ ಬಗೆಯ ರಾಗಗಳನ್ನೂ, ಅವುಗಳಲ್ಲಿ ರಚನೆಯನ್ನೂ ಮಾಡಿದ್ದಾರೆ.

ಇವತ್ತು ನಾನು ನಿಮಗೆ ಕೇಳಿಸುವುದು ಆ ನಾಕು ಸ್ವರಗಳ ಮೊದಲ ರಾಗ - ಲವಂಗಿಯನ್ನೇ. ಇದರಲ್ಲಿ ಬರುವ ಸ್ವರಗಳನ್ನು ಸಂಗೀತ ಪರಿಭಾಷೆಯಲ್ಲಿ ಹೀಗೆ ಸೂಚಿಸಬಹುದು.

ಸ ರಿ೧ ಮ೧ ದ೧ ಸ - ಸ ದ೧ ಮ೧ ರಿ೨ ಸ

ಈ ರಚನೆ ಸಂಸ್ಕೃತದಲ್ಲಿದ್ದು ಸಾಹಿತ್ಯ ಹೀಗಿದೆ:

ಓಂಕಾರಾಕಾರಿಣಿ ಮದಹಂಕಾರವಾರಿಣಿ ಅವತು ಮಾಂ ||ಓಂಕಾರಾಕಾರಿಣೀ||

ಹೂಂಕಾರಮಾತ್ರ ಶತ್ರು ದಮನೀ ಹ್ರೀಂಕಾರರೂಪಿಣೀ ರುದ್ರಾಣಿ ||ಓಂಕಾರಾಕಾರಿಣೀ||

ಮುರಳೀ ಸುಧಾಲಹರೀ ವಿಹಾರಿ ಪುರರಿಪು ಪ್ರೇಮಿತ ತ್ರಿಪುರಸುಂದರಿ
ಕರುಣಾರಸಭರಿತ ಲಲಿತಲವಂಗಿ ವರದಾ ಅಭಯದಾ ಸಕಲಶುಭಾಂಗಿ ||ಓಂಕಾರಾಕಾರಿಣೀ||

ಈಗ ಈ ರಚನೆಯನ್ನು ಬಾಲಮುರಳಿಕೃಷ್ಣ ಅವರ ಶಿಷ್ಯರಾದ ರಾಮವರ್ಮ ( ಇವರು ತಿರುವನಂತಪುರದ ಅರಸುಮನೆತನಕ್ಕೆ ಸೇರಿದವರು) ಅವರ ಕಂಠದಲ್ಲಿ ಕೇಳಿ.ರಾಮವರ್ಮ ಅವರು ವೀಣೆ ನುಡಿಸುವುದರಲ್ಲೂ ಪ್ರವೀಣರು.ಈ ರಾಗದಲ್ಲಿ ಒಂದು ಕಡೆ ರೌದ್ರಭಾವವೂ ಇನ್ನೊಂದು ಕಡೆ ಕರುಣಾ, ಶಾಂತರಸವೂ ಸಮ್ಮಿಲಿತವಾದಂತಿವೆ. ಅದಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಮೊದಲ ಭಾಗದಲ್ಲಿ ದೇವಿ ತನ್ನ ಹೂಂಕಾರದಿಂದ ಹೇಗೆ ಶತ್ರುಗಳನ್ನು ನಾಶಮಾಡುತ್ತಾಳೆ ಎಂದು ಹೇಳಿದ್ದರೆ, ಇನ್ನೊಂದುಕಡೆ ಲಲಿತ ಲವಂಗೀರೂಪಿಯಾದ, ಕೇಳಿದ್ದನ್ನು ಕೊಡಬಲ್ಲ, ಭಯದೂರಮಾಡುವ ಆ ಶಿವೆಯು ಹೇಗೆ ಮುರಳೀಗಾನವನ್ನು ಕೇಳುತ್ತ ನಲಿಯುತ್ತಾಳೆ ಎನ್ನುವುದನ್ನು ಚರಣದಲ್ಲಿ ಹೇಳಲಾಗಿದೆ.

ಅಂದಹಾಗೆ ಮುರಳೀ ಎನ್ನುವುದು ಬಾಲಮುರಳಿಕೃಷ್ಣ ಅವರ ಅಂಕಿತ. ಮತ್ತೆನ್ನೊಂದು ವಿಶೇಷ ಏನು ಗೊತ್ತೇ? ಇಲ್ಲಿರುವ ಕಚೇರಿ ನಡೆದಿದ್ದು ರಾಷ್ಟ್ರಪತಿ ಭವನದಲ್ಲಿ!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?