Skip to main content

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾಣೀಗೆ ಕೊರೀತಾನೇ ಇತ್ತು. ಅಣ್ಣ ಬರೆದ ಹಾಗೇ ತಾನೂ ಚಿತ್ರಗಳನ್ನ ಬರೆದು ಬರೆದು ನೋಡ್ತು. ಆದ್ರೆ ಯಾಕೋ ಬಗೆ ಹರೀಲೇ ಇಲ್ಲ. ಉತ್ತರಕ್ಕೆ ಹೋಗ್ತಾ ಹೋಗ್ತಾ ಉತ್ತರ ಧ್ರುವ ಸಿಕ್ಕತ್ತೆ. ಅಲ್ಲಿ ನಮ್ಮ ದಾಯಾದಿಗಳಿದಾರಂತೆ. ಅಲ್ಲಿ ತುಂಬ ಚಳಿಯಂತೆ ಅನ್ನೋ ವಿಷಯ ಮಾತ್ರ ಮನದಟ್ಟಾಗಿತ್ತು. ಇವತ್ತು ಕೇಳಿ ಹೇಗಾದ್ರೂ ತಿಳ್ಕೊಳ್ಲೇ ಬೇಕು ಅಂತ ಅಣ್ಣ ಅಣ್ಣನ್ನ ಇವತ್ತು ಮತ್ತೆ ಕೇಳ್ತು.

ಸರಿ. ಅಪ್ಪ ಕರಡಿ ಒಂದು ಚಿತ್ರ ಹಾಕಿ ತೋರಿಸ್ತು ಮೊದ್ಲಿಗೆ.


"ನೋಡು ಪುಟ್ಟಾ, ನಾವು ಕೂತ್ಕೊಂಡಾಗ, ನಮಗೆ ಆಕಾಶ ಒಂದು ಕವಿಚಿದ ಬಾಂಡಲೆ ಹಾಗೆ ಕಾಣತ್ತೆ. ಮತ್ತೆ ಅವತ್ತು ಬೆಟ್ಟದ ಮೇಲಿಂದ ನೋಡಿದಾಗ ಆಕಾಶ ಭೂಮಿ ಸೇರೋ ಜಾಗ ನೋಡಿದ್ದು ನೆನಪಿದೆಯಾ? ಈಗ ನೋಡು, ಸೀಗೇ ಗುಡ್ದಲ್ಲಿ, ಅಥವಾ ಮಾಲೇಕಲ್ಲಿನಲ್ಲಿ ಕಾಣೋ ದಿಕ್ಕುಗಳನ್ನು ಹೀಗೆ ತೋರ್ಸಿದೀನಿ ಚಿತ್ರದಲ್ಲಿ. ಗೊತ್ತಾಯ್ತಾ?" ಅಂತು ಅಪ್ಪ.

"ಓಹೋ, ಧ್ರುವ ನಕ್ಷತ್ರದ ಕಡೆಗೆ ಹೋದರೆ ಉತ್ತರ. ಅದಕ್ಕೆ ಎದುರುಗಡೆ ಹೋದರೆ ದಕ್ಷಿಣ. ಹಾಗೇ ದಕ್ಷಿಣದ ಕಡೆಗೆ ನಾನು ನೋಡ್ತಾ ಕೂತಿರೋ ಹಾಗೆ ಬರ್ದಿದೀರಾ ಅಲ್ವ ಅಣ್ಣ ಚಿತ್ರನಾ? ಆಗ ನನ್ ಬಲ್ಗೈ ಪಶ್ಚಿಮ, ಎಡಗೈ ಪೂರ್ವ" ಅಂತು ಪುಟಾಣಿ.

"ಸರಿಯಾಗಿ ಹೇಳ್ದೆ ಪುಟ್ಟಾ. ಆಮೇಲೆ, ಇನ್ನೊಂದು ವಿಷ್ಯ ಗಮನಿಸು. ಇದು ನಮ್ಮೂರು ಸೀಗೇಗುಡ್ಡದಿಂದ ಆಗಲಿ, ಅಥವಾ ಮಾಲೇಕಲ್ಲಿಂದ ಆಗಲಿ, ಅಥವಾ ಬೇರೆ ಊರು - ತೋರಣಗಲ್ಲೋ, ಗಂಗಡಿಕಲ್ಲೋ, ಎಲ್ಲಿಂದಲೂ ಒಂದೇ ಆಗತ್ತೆ. ಈಗ ನಮ್ಮೂರಿಂದ ಉತ್ತರ ದಿಕ್ಕಿಗೆ ತುಂಬಾ ದೂರ ನಡ್ಕೊಂಡು ಹೋದ್ವಿ ಅಂತಿಟ್ಕೋ - ಆದ್ರೆ ನಮ್ ದಾಯಾದಿಗಳ ಮನೆ ಅಷ್ಟು ದೂರದ ತನಕ ಬೇಡ, ಒಂದರ್ಧ ದೂರ ನಡುವೆ ಅಂದ್ಕೋ. ಅಲ್ಲಿಂದ ದಿಕ್ಕುಗಳು ಹೇಗೆ ಕಾಣತ್ತೆ ಅಂತ ತೋರಿಸ್ತೀನಿ" ಅಂತ ಇನ್ನೊಂದು ಚಿತ್ರ ಬರೀತು ಅಪ್ಪ.


"ಈಗ ಮೊದಲ ಚಿತ್ರಕ್ಕೂ, ಎರಡನೇ ಚಿತ್ರಕ್ಕೂ ಏನು ವ್ಯತ್ಯಾಸ ಹೇಳು ನೋಡಣ" ಅಂತು ಅಪ್ಪ ಕರಡಿ.

ಪುಟಾಣಿ ನೋಡ್ಬಿಟ್ಟು - "ಹ್ಮ್... ಮೊದಲ ಚಿತ್ರದಲ್ಲಿ ಧ್ರುವ ನಕ್ಷತ್ರ ಆಕಾಶದಲ್ಲಿ ಕೆಳಗೆ ಕಾಣಿಸ್ತಿದೆ, ಎರಡನೇದರಲ್ಲಿ ಅದು ಇನ್ನೂ ಸ್ವಲ್ಪ ಮೇಲೆ ಹೋಗಿದೆ. ಅಲ್ವಾ?" ಅಂತ ಕೇಳ್ತು.

"ಹೌದು - ಸರಿಯಾಗಿ ಹೇಳ್ದೆ. ಅಲ್ಲೂ ಉತ್ತರ ದಕ್ಷಿಣ ಮೇಲೆ ಕೆಳಗೆ ಎಲ್ಲ ದಿಕ್ಕುಗಳೂ ಅದೇ ತರಹ ಇದೆ. ಆದ್ರೆ ಧ್ರುವ ನಕ್ಷತ್ರ ನಮ್ಮೂರಲ್ಲಿ ಕಾಣಕ್ಕಿಂತ ಆಕಾಶದಲ್ಲಿ ಎತ್ತರದಲ್ಲಿ ಕಾಣ್ತಿದ. ನಾವು ಉತ್ತರಕ್ಕೆ ಹೋಗ್ತಾ ಹೋಗ್ತಾ ಇದ್ದ ಹಾಗೆ, ಧ್ರುವ ನಕ್ಷತ್ರವೂ ಮೇಲೆ ಮೇಲಕ್ಕೆ ಹೋಗ್ತಾ ಹೋಗ್ತಾ ಒಂದು ಕಡೇಲಿ ಸರೀಯಾಗಿ ನಮ್ ತಲೇ ಮೇಲೆ ಕಾಣತ್ತೆ. ಅದೇ ಜಾಗಾನ ಉತ್ತರ ಧ್ರುವ ಅನ್ನೋದು" ಅಂತು ಅಪ್ಪ.

ಪುಟಾಣೀಗೆ ಚೆನ್ನಾಗೇ ಅರ್ಥ ಆಯ್ತು - " ಅಣ್ಣ, ಹಾಗಾದ್ರೆ ಉತ್ತರ ಧ್ರುವದಲ್ಲಿ ದಿಕ್ಕು ಹೇಗಿರತ್ತೆ ಅಂತ ಚಿತ್ರ ಬರೀಲಾ ನಾನೇ?" ಅಂತ ಕೇಳ್ತು.

"ಬರಿ ಬರಿ - ಆದ್ರೆ ಅಲ್ಲಿ, ನಿಂತರಹ ಕಂದು ಬಣ್ಣದ ಕರಡೀಮರಿನ ಬರೀಬೇಡ - ಅಲ್ಲಿದಾರೆ ನಮ್ ದಾಯಾದಿಗಳೆಲ್ಲ ಅಂತ, ಅವರೆಲ್ಲ ಬಿಳೀ ಅಂದ್ರೆ ಮಲ್ಗೆ ಹೂವಿಂತರಹ ಬೆಳ್ಗಿರ್ತಾರೆ" ಅಂತು ಅಪ್ಪ.

ಪುಟಾಣಿ ಚಿತ್ರ ಬರೀತು. ಧ್ರುವ ನಕ್ಷತ್ರ ಹೇಗೆ ನೆತ್ತಿ ಮೇಲಕ್ಕೆ ಹೋಯ್ತು ಅಂತನೂ ತೋರಿಸಿಬಿಡ್ತು ನೋಡಿ.
ಆದ್ರೆ ಆಮೇಲೆ ಶುರುವಾಯ್ತು ಪೀಕಲಾಟ ಪುಟಾಣೀಗೆ. ಮೇಲೆ ಕೆಳಗೆ ಎಲ್ಲ ಸರಿಯಾಗಿ ತೋರಿಸ್ತು. ನಡುವೆ ಒಂದು ಬಿಳೀ ಕರಡೀನೂ ಬರೀತು. ಆದ್ರೆ ಬಲಕ್ಕೆ ಹೋದ್ರೆ ಯಾವ ದಿಕ್ಕಾಗತ್ತೆ, ಮುಂದಕ್ಕೆ ಹೋದ್ರೆ ಯಾವ ದಿಕ್ಕಾಗತ್ತೆ ಅಂತ ಮಾತ್ರ ಬರೆಯಕ್ಕೆ ಗೊತ್ತೇ ಆಗ್ಲಿಲ್ಲ!

"ಅಣ್ಣ ನೀವೇ ತೋರ್ಸಿ - ಸರಿಯಾಗಿ ಹೇಗೆ ಬರೆಯೋದು ಯಾವ್ಕಡೆ ಯಾವ್ದಿಕ್ಕು ಅಂತ ಗೊತ್ತಾಗ್ತಿಲ್ಲ" ಅಂತು ಪುಟಾಣಿ ಸಪ್ಮೋರೆ ಹಾಕ್ಕೊಂಡು.

"ಈಗ ಮೊದಲ್ನೇ ಚಿತ್ರ ನೋಡು ಪುಟ್ಟಾ - ಉತ್ತರ ಅನ್ನೋ ಕಡೆಗೆ ಸೀಗೇ ಗುಡ್ಡದಿಂದ ಹೋದ್ರೂ, ಮಾಲೇಕಲ್ಲಿಂದ ಹೋದ್ರೂ, ಗಂಗಡೀಕಲ್ಲಿಂದ ಹೋದ್ರೂ ಎಲ್ಲಿಗೆ ಹೋಗಿ ಸೇರ್ತೀವಿ? ಉತ್ತರ ಧ್ರುವಕ್ಕೆ ಅಲ್ವಾ? ಹಾಗಾರೆ, ಉತ್ತರ ಧ್ರುವದಿಂದ ಕೂತು ನೋಡ್ದಾಗ ಈ ಊರುಗಳಿಂದ ಬರೋ ದಾರಿಗಳು ಹೇಗೆ ಕಾಣತ್ವೆ ಅಂತ ನೀನು ಬರೆದ ಚಿತ್ರದಲ್ಲಿ ಗುರುತು ಮಾಡೋಣ್ವಾ?" ಅಂತ ಹೇಳಿ ಪುಟಾಣಿ ಚಿತ್ರಕ್ಕೆ ಒಂದೆರಡು ಬದಲಾವಣೆ ಮಾಡ್ತು ಅಪ್ಪ.
"ಈಗ ನೋಡು ಪುಟ್ಟ, ನಮ್ಮೂರಿಂದ ಉತ್ತರಧ್ರುವಕ್ಕೆ ನಡ್ಕೊಂಡ್ ಹೋದ ಹಾಗೇ, ಉತ್ತರ ಧ್ರುವದಿಂದ ನಮ್ಮೂರಿಗೆ ಬರ್ಬೋದು ಅಲ್ವಾ? ಹಾಗೆ ಬಂದ್ರೆ ನಾವು ಯಾವ ದಿಕ್ಕಲ್ಲಿ ಬರ್ತೀವಿ?"

"ಅದು ಗೊತ್ತು! ದಕ್ಷಿಣ" ಅಂತು ಪುಟಾಣಿ.

"ಸರ್ಯಾಗಿ ಹೇಳ್ದೆ ನೋಡು. ಈಗ ಅದೇ ತರಹ ಮಾಲೇಕಲ್ಲಿಂದಲೂ, ತೋರಣಗಲ್ಲಿಂದಲೂ, ಗಂಗಡಿ ಕಲ್ಲಿಂದ್ಲೂ ಹೋಗಿದ್ದ್ ದಾರೀಲೇ ಮತ್ತೆ ಬಂದ್ರೆ ಎಲ್ಲಿಗೆ ಹೋಗ್ಬಹುದು? ಮತ್ತೆ ಯಾವ್ ದಿಕ್ಕಿಗೆ ಹೋದ್ ಹಾಗಾಗತ್ತೆ?" ಅಂತು ಅಪ್ಪ.

ಪುಟಾಣಿ ಸ್ವಲ್ಪ ಬೆರಳು ತೋರ್ಸಿದ್ರೆ ಹಸ್ತ ನುಂಗೋ ತರ್ಹ ಚುರುಕು! ತಕ್ಷಣ ಹೇಳ್ತು - " ಗಂಗಡೀಕಲ್ಲಿಂದ ಹೋದದಾರೀಲೇ ಮತ್ತೆ ಬಂದ್ರೆ, ಅಂದ್ರೆ, ಉತ್ತರ ದಿಕ್ಕಿಗೆ ಎದುರಾಗಿ, ಅಂದ್ರೆ ದಕ್ಷಿಣ ದಿಕ್ಕಿಗೆ ಬಂದ್ರೆ ಗಂಗಡೀಕಲ್ಲೇ ಸಿಕ್ಕುತ್ತೆ. ಹಾಗೇ ಮಾಲೇಕಲ್ಲಿಂದ ಮತ್ತೆ ಬಂದ್ರೆ, ಅಂದ್ರೆ, ಉತ್ತರ ದಿಕ್ಕಿಗೆ ಎದುರಾಗಿ, ಅಂದ್ರೆ ದಕ್ಷಿಣ ದಿಕ್ಕಿಗೆ ಬಂದ್ರೆ ಮಾಲೇಕಲ್ಲೇ ಸಿಕ್ಕುತ್ತೆ!"

ಅಪ್ಪ ಕರಡೀಗೂ ಖುಶಿ ಆಯ್ತು ಪುಟಾಣಿಯ ಚಬುಕಾದ ಉತ್ರ ಕೇಳಿ. ಹಾಗಾದ್ರೆ ನೀನು ಮೊದಲು ಬರೆದ ಚಿತ್ರನಾ ಸರಿ ಮಾಡ್ತೀಯಾ" ಅನ್ನೋ ಅಷ್ಟರಲ್ಲಿ ನೋಡತ್ತೆ ಆಗ್ಲೇ ಪುಟಾಣಿ ಚಿತ್ರಾನ ತಿದ್ದಿ ಬರೆದುಬಿಟ್ಟಿದೆ!"ಭಲೇ! ಭೇಷ್ - ಸರಿಯಾಗಿ ಬರ್ದಿದೀಯ ಪುಟಾಣೀ" ಅಂತ ಅಪ್ಪ ಕರಡೀ ಪುಟಾಣೀನ ತಬ್ಕೋತು.

ಪುಟಾಣಿ "ನಾನೀಗ್ಲೆ, ಅಮ್ಮನಿಗೆ ಹೋಗಿ ಹೇಳ್ತೀನಿ, ಉತ್ತರ ಧ್ರುವದಲ್ಲಿ ಇರೋದೊಂದೇ ದಿಕ್ಕು - ಅದು ದಕ್ಷಿಣ. ಯಾವ್ ಕಡೇಗೆ ಹೋದ್ರೂ ಅದು ದಕ್ಷಿಣಕ್ಕೇ ಮುಖ ಮಾಡಿರತ್ತೆ ಏನು ಹೇಗೆ ಅಂತ ಚೆನ್ನಾಗಿ ವಿವರಿಸ್ತೀನಿ. ಅಮ್ಮಂಗೂ ಖುಶಿಯಾಗಿ, ನಮ್ ಪುಟಾಣಿ ಬಲು ಜಾಣ ಅಂತ ಹೊಗಳಿ ಇನ್ನೂ ಒಂದು ದೊಡ್ಡ್ ಬೊಗಸೆ ಜೇನುತುಪ್ಪ ಕೊಡ್ತಾರೆ" ಅಂತ ಗವಿ ಒಳಕ್ಕೆ ಓಟಕಿತ್ತಿತು!

-ಹಂಸಾನಂದಿ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.

ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ  ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು  ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!


ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು,  ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನ…

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ. ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ. ಆದರೆ…

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…