Skip to main content

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು, ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು.

ಮೊದಲಿಗೆ ಈ ಹಾಡನ್ನು ನೋಡೋಣ:

ತುತ್ತುರು ತೂರೆಂದು ಬತ್ತಿಸರಾಗಗಳನ್ನು ಚಿತ್ತಜ ಜನಕ ತನ್ನ ಕೊಳಲಲ್ಲೂದಿದನು

ಕೊಳಲನ್ನು ನುಡಿಸುವಾದ ತುರ್-ತುರ್ ಎಂಬ ಸದ್ದಿನೊಡನೆ ಬರುವಂತಹ ರಂಜಕ ಪ್ರಯೋಗಗಳನ್ನು ಮಾಡುವ ಕೊಳಲು ವಾದಕರನ್ನು ನಾವು ನೋಡಿದ್ದೇವೆ. ಕೃಷ್ಣನು ಒಬ್ಬ ಚತುರ ಕೊಳಲು ನುಡಿಸುವ ಸಂಗೀತಗಾರನಾಗಿದ್ದ ಎನ್ನುವುದು ಪರಂಪರೆಯಿಂದ ಬಂದ ನಂಬಿಕೆ. ಆದರೆ, ಕೃಷ್ಣನು ಕೊಳಲು ನುಡಿಸಿದ್ದನ್ನು ನಾವಾರೂ ಕಂಡಿಲ್ಲ. ೧೫-೧೬ನೇ ಶತಮಾನದಲ್ಲಿ ಕೃಷ್ಣನ ಬಗ್ಗೆ ಹಾಡುವ ಪುರಂದರದಾಸರು, ಕೊಳಲು ನುಡಿಸುವಲ್ಲಿ ಇಂತಹ ಪ್ರಯೋಗಗಳ ಬಗ್ಗೆ
ಬರೆದಿದ್ದಾರೆಂದರೆ, ಅಂತಹ ಪ್ರಯೋಗಗಳನ್ನು ಕೊಳಲುವಾದಕರು ಸುಮಾರು ಐದುನೂರು ವರ್ಷಗಳಿಂದಲಾದರೂ ಮಾಡಿಕೊಂಡೇ ಬಂದಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ. ಅಂದರೆ, ಪುರಂದರರು ತಾವು ಕಂಡ ಕೊಳಲು ನುಡಿಸುವ ವಿಧಾನವೊಂದನ್ನು ಕೃಷ್ಣನ ಕೊಳಲಲ್ಲಿ ತೋರಿಸಿದ್ದಾರೆಂದು ಹೇಳಬಹುದು. ಈ ಕಾರಣಕ್ಕಾಗಿಯೇ ದಾಸ ಸಾಹಿತ್ಯವನ್ನು ನಾವು ಆ ಕಾಲಕ್ಕೊಂದು ಕನ್ನಡಿ ಎಂದು ಹೇಳುವುದು ಸರಿಯಾದ ಮಾತು.

ಈ ಹಾಡು ಇನ್ನೂ ಇನ್ನೊಂದು ಬಗೆಯಲ್ಲಿ ಸಂಗೀತಾಭ್ಯಾಸಿಗಳಿಗೆ ಹೆಚ್ಚಾಯದ್ದಾಗುತ್ತೆ. ಪುರಂದರದಾಸರು ಲಕ್ಷಗಟ್ಟಲೆ ರಚನೆಗಳನ್ನು ಮಾಡಿದ್ದಾರೆಂದು ಪ್ರತೀತಿ ಇದೆ. ಆದರೆ, ಈಗ ನಮಗೆ ದೊರಕುವುದು ಒಂದೆರಡು ಸಾವಿರಗಳಷ್ಟು ಮಾತ್ರ. ಪುರಂದರದಾಸರನ್ನು ನಾವು ’ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯುವುದು ನಿಜವಾದರೂ, ಅವರು ತಮ್ಮ ರಚನೆಗಳನ್ನು ಹಾಡುತ್ತಿದ್ದ ಮೂಲ ಮಟ್ಟು ಮುಕ್ಕಾಲುಪಾಲು ರಚನೆಗಳಿಗೆ ನಮ್ಮ ಕಾಲದವರೆಗೆ ಉಳಿದಿಲ್ಲ. ಆದರೆ, ಅವರ ಹಾಡುಗಳಲ್ಲಿರುವ ಒಳಗಿನ ಕುರುಹುಗಳಿಂದ ನಾವು ಅಂದಿನ ಕಾಲದ ಸಂಗೀತದ ಬಗ್ಗೆ ಹಲವು ವಿಚಾರಗಳನ್ನು ಅರಿಯಹುದಾಗಿದೆ. ಅಂತಹ ಹಾಡುಗಳಲ್ಲಿ, ’ತುತ್ತುರು ತೂರೆಂದು ಬತ್ತಿಸರಾಗಗಳನ್ನು’ ಎಂದು ಮೊದಲಾಗುವ ಈ ಹಾಡೂ ಒಂದಾಗಿದೆ.

ಭಾರತೀಯ ಸಂಗೀತದಲ್ಲಿ, ಬಹಳ ಕಾಲದಿಂದ ಪ್ರಮುಖ ರಾಗಗಳು ಮೂವತ್ತೆರಡು ಎಂದು ಗುರುತಿಸಿರುವುದು ಕಂಡುಬರುತ್ತದೆ. ಪುರಂದರ ದಾಸರಿಗೂ ನೂರಾರು ವರ್ಷಗಳ ಮೊದಲೇ ಭಕ್ತಿ ಭಾಂಡಾರಿ ಬಸವಣ್ಣ (ಕ್ರಿ.ಶ.೧೧೩೪-೧೧೯೬) ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ.

ಎನ್ನ ಕಾಯವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎನ್ನ ನರಗಳ ತಂತಿಯ ಮಾಡಯ್ಯ
ಬತ್ತೀಸ ರಾಗವ ಹಾಡಯ್ಯ
ಉರದಲೊತ್ತಿ ಬಾರಿಸು ಕೂಡಲಸಂಗಮದೇವ!

ಬಸವಣ್ಣ ’ಬತ್ತೀಸ ರಾಗವ ಹಾಡಯ್ಯ’ ಎಂದು ನುಡಿದರೂ ಕೂಡ, ಯಾವ ರಾಗಗಳನ್ನೂ ಹೆಸರಿಸುವುದಿಲ್ಲ. ವಚನಗಳನ್ನು ಹಾಡುವುದಕ್ಕಿಂತ ಹೇಳುವುದು ಪದ್ಧತಿಯಾಗಿದ್ದರಿಂದ, ಸಂಗೀತದ ಹೆಚ್ಚಿನ ಪ್ರಸ್ತುತಿ ಅದರಲ್ಲಿ ಕಾಣದಿದ್ದರೆ ಅದರಲ್ಲಿ ಅಚ್ಚರಿಯಿಲ್ಲ. ಆದರೆ, ಪುರಂದರ ದಾಸರು ಸಂಗೀತಗಾರರಾದ್ದರಿಂದ ಅವರ ರಚನೆಯಲ್ಲಿ ಈ ರಾಗಗಳ ಬಗ್ಗೆ ಹೆಚ್ಚಿನ ವಿವರವು ಸಿಗಬಹುದು ಎಂಬ ಊಹೆ ನೀವು ಮಾಡಿದ್ದರೆ ತಪ್ಪಿಲ್ಲ! ಆದರೆ ಮೂವತ್ತೆರಡನ್ನೂ ಅವರು ಈ ಹಾಡಿನಲ್ಲಿ ಹೆಸರಿಸುವುದಿಲ್ಲ ಅನ್ನುವುದು ನಮ್ಮ ದುರದೃಷ್ಟ.

’ತುತ್ತುರು ತೂರೆಂದು ಬತ್ತಿಸ ರಾಗಗಳನ್ನು..’ ಎನ್ನುವ ಪದದ ಮೊದಲ ಚರಣ ಹೀಗಿದೆ:

ಗೌಳ ನಾಟಿ ಆಹೇರಿ ಗುರ್ಜರಿ ಮಾಳವಿ ಸಾರಂಗ ರಾಗ ಕೇಳಿ ರಮಣಿಯರತಿ ದೂರದಿಂದ
ಫಲಮಂಜರಿ ಗೌಳಿ ದೇಶಾಕ್ಷಿ ರಾಗಗಳನು ನಳಿನನಾಭನು ತನ್ನ ಕೊಳಲಲೂದಿದನು

ಅಂದರೆ, ಮೂವತ್ತೆರಡಲ್ಲದಿದ್ದರೂ ಈ ಕೆಳಗಿನ ಒಂಬತ್ತು ರಾಗಗಳನ್ನಾದರೂ ನಾವು ಈ ಹಾಡಿನಲ್ಲಿ ಕಾಣುತ್ತೇವೆ ಎನ್ನುವುದಕ್ಕೆ ನಾವು ಸಂತಸ ಪಡಬೇಕು.

೧. ಗೌಳ
೨. ನಾಟಿ
೩. ಆಹೇರಿ
೪. ಗುರ್ಜರಿ
೫. ಮಾಳವಿ
೬. ಸಾರಂಗ
೭. ಫಲಮಂಜರಿ
೮. ಗೌಳಿ
೯. ದೇಶಾಕ್ಷಿ

ಆದರೆ, ಪುರಂದರ ದಾಸರು ಇನ್ನೂ ಕೆಲವು ರಚನೆಗಳಲ್ಲಿ ರಾಗಗಳ ಹೆಸರನ್ನು ಹೇಳಿರುವುದು ನಮಗೆ ಅದೃಷ್ಟದ ಸಂಗತಿ.

ನಳಿನಜಾಂಡ ತಲೆಯ ತೂಗಿ’ ಎಂದು ಮೊದಲಾಗುವ ರಚನೆಯ ಮೊದಲ ಚರಣ ಹೀಗಿದೆ:

ಮಾರವಿ ದೇಶಿ ಗುರ್ಜರಿ ಭೈರವಿ ಗೌಳಿ ನಾಟಿ ಸಾವೇರಿ ಆಹೇರಿ ಪೂರ್ವಿ
ಕಾಂಭೋಜಿ ಪಾಡಿ ದೇಶಾಕ್ಷೀ ಶಂಕರಾಭರಣ ಮಾಳವ
ವರಾಳಿ ಕಲ್ಯಾಣಿ ತೋಡಿ ಮುಖಾರಿಯರಳಿ ವಸಂತ ಬೌಳಿ ಧನ್ಯಾಸಿ
ಸೌರಾಷ್ಟ್ರ ಗುಂಡಕ್ರಿಯ ರಾಮಕ್ರಿಯ ಮೇಘ ಕುರಂಜಿಯು ಪಾಡಲು ನೋಡಿ!

ಮೊದಲ ಹಾಡಿನಲ್ಲಿಯೇ ಹೇಳಿದ್ದ ರಾಗಗಳನ್ನು ಬಿಟ್ಟು ಹೊಸ ರಾಗಗಳನ್ನು ಪಟ್ಟಿ ಮಾಡುತ್ತಾ ಹೋಗೋಣ:

೧೦. ಮಾರವಿ
೧೧. ದೇಶಿ

* ಗುರ್ಜರಿ (ಮೊದಲೇ ಹೇಳಿದೆ)
೧೨. ಭೈರವಿ
* ಗೌಳಿ
* ನಾಟಿ
೧೩. ಸಾವೇರಿ
* ಆಹೇರಿ
೧೪. ಪೂರ್ವಿ
೧೫. ಕಾಂಭೋಜಿ
೧೬. ಪಾಡಿ

* ದೇಶಾಕ್ಷಿ
೧೭. ಶಂಕರಾಭರಣ
೧೮. ಮಾಳವ
೧೯. ವರಾಳಿ
೨೦. ಕಲ್ಯಾಣಿ

೨೧. ತೋಡಿ
೨೨. ಮುಖಾರಿ
೨೩. ವಸಂತ
೨೪. ಬೌಳಿ
೨೫. ಧನ್ಯಾಸಿ
೨೬. ಸೌರಾಷ್ಟ್ರ
೨೭. ಗುಂಡಕ್ರಿಯ

೨೮. ರಾಮಕ್ರಿಯ
೨೯. ಮೇಘ
೩೦. ಕುರಂಜಿ

ಈ ಎರಡು ಹಾಡುಗಳಿಂದಲೇ ಮೂವತ್ತು ರಾಗಗಳ ಪಟ್ಟಿ ನಮಗೆ ಸಿಕ್ಕಿದೆ. ಇನ್ನು ’ಅಂಗನೆಯರೆಲ್ಲರು ನೆರೆದು’ ಎಂದು ಮೊದಲಾಗುವ ರಚನೆಯ ಚರಣವೊಂದನ್ನು ನೋಡೋಣ:

ಪಾಡಿ ಮಲಹರಿ ಭೈರವಿ ಸಾರಂಗ ದೇಶಿ ಗುಂಡಕ್ರಿಯ ಗುರ್ಜರಿ ಕಲ್ಯಾಣಿ ರಾಗದಿ ತಂಡ
ತಂಡದಲಿ ನೆರೆದು ರಂಗನ ಉಡಿಯ ಘಂಟೆ ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

ಈ ಸಾಲುಗಳನ್ನು ನೋಡಿದಾಗ, ಮಲಹರಿ ಎಂಬ ರಾಗವೊಂದನ್ನು ಬಿಟ್ಟು ಉಳಿದವೆಲ್ಲ ಮೊದಲಿನ ಎರಡು ರಚನೆಗಳಲ್ಲೇ ಕಂಡುಬಂದಿವೆಂದು ತಿಳಿಯುವುದು.

೩೧. ಮಲಹರಿ

ಪುರಂದರ ದಾಸರು ’ರಂಗ ಕೊಳಲಲೂದಲಾಗಿ’ ಎನ್ನುವ ಇನ್ನೊಂದು ಪದದಲ್ಲಿಯೂ, ಅವನ ಕೊಳಲ
ನಾದಕ್ಕೆ ಹೇಗೆ ಪ್ರಾಣಿ ಪಕ್ಷಿಗಳೂ, ನಿರ್ಜೀವ ವಸ್ತುಗಳೂ ಮರುಳಾದವು ಎಂದು
ವಿವರಿಸುತ್ತಾರೆ. ಅದರ ಕಡೆಯಲ್ಲಿ, ಅಂಕಿತ ಬರುವ ಚರಣದ ಎರಡು ಸಾಲುಗಳು ಹೀಗಿವೆ:

ಧಾಮ ವನಮಾಲೆ ಬಹಿರ್ಭೂಶಿತ ಸ್ವಾಮಿ ಪುರಂದರ ವಿಟ್ಠಲರಾಯನು
ರಾಮಕ್ರಿಯ ಮೇಘರಂಜನಿ ಪಾಡೆ ಸಾಮವೇದ ನಮೋ ನಮೋ ಎನ್ನೆ

ಇಲ್ಲಿ ಹೇಳಿದ ರಾಮಕ್ರಿಯ ಎನ್ನುವ ರಾಗವನ್ನು ಆಗಲೇ ಪಟ್ಟಿ ಮಾಡಿದ್ದೇವೆ. ಉಳಿದದ್ದೆಂದರೆ

೩೨: ಮೇಘರಂಜನಿ

ಹೀಗೆ, ಪುರಂದರದಾಸರ ರಚನೆಗಳಿಂದಲೇ, ಅವರ ಕಾಲದ ಹಲವು ಪ್ರಸಿದ್ಧ ರಾಗಗಳನ್ನು ನಾವು ಹೆಕ್ಕಿತೆಗೆದಿದ್ದಾಗಿದೆ. ಈ ಮೂವತ್ತೆರಡೇ, ಪೂರ್ವಪ್ರಸಿದ್ಧ
ಬತ್ತೀಸರಾಗಗಳಾಗಿದ್ದಿರಬಹುದು ಎನ್ನುವುದು ನನ್ನ ಊಹೆ, ಮತ್ತು ನಂಬಿಕೆ.

ಕಾಲ-ಕಾಲಕ್ಕೆ ಜನರ ಮೆಚ್ಚಿಗೆ ಪಡೆಯುವ ರಾಗಗಳು ಬದಲಾಗುವುದು ಸಹಜವೂ ಆಗಿದೆ. ಹಾಗಾಗಿ ಬಸವಣ್ಣನವರು ಹೇಳಿದ ಬತ್ತೀಸ ರಾಗಗಳೂ, ಪುರಂದರ ದಾಸರ ಕಾಲದ ಬತ್ತೀಸ ರಾಗಗಳೂ ಒಂದೇ ಆಗಿರಬೇಕಿಲ್ಲ. ಆದರೆ, ಪುರಂದರ ದಾಸರ ರಚನೆಗಳಲ್ಲಿ ಕಂಡು ಬರುವ ಈ ಸಾಕ್ಷಿಗಳಿಂದ, ಅವರ ಕಾಲದಲ್ಲಿದ್ದ ಬತ್ತೀಸರಾಗಗಳು ಈ ಬರಹದಲ್ಲಿರುವ ಪಟ್ಟಿಯಂತೇ ಇದ್ದಿರಬೇಕು ಎನ್ನುವುದು ಯೋಚಿಸಬೇಕಾದ ವಿಚಾರ. ಹಾಗೆ ಅಲ್ಲ ಎಂದು ಹೇಳುವುದಕ್ಕೆ ಸಾಕ್ಷಿ-ಆಧಾರಗಳು
ಸಿಗುವ ಹೊರತು, ಈ ಪಟ್ಟಿಯನ್ನು ೧೫-೧೬ನೇ ಶತಮಾನದಲ್ಲಿ ಜನಪ್ರಿಯವಾದ ಮೂವತ್ತೆರಡು ರಾಗಗಳು ಎಂದು ಎಣಿಸುವುದರಲ್ಲಿ ತಪ್ಪೇನಿಲ್ಲ.

-ಹಂಸಾನಂದಿ

ಕೊ.ಕೊ: ಈ ಬರಹವು ನಾನು ಸುಮಾರು ಒಂದು ವರ್ಷದ ಹಿಂದೆ ಇಂಗ್ಲಿಷ್ ನಲ್ಲಿ ಬರೆದ ಬರಹವೊಂದರ ಅಂದಾಜು ಅನುವಾದ.

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.

ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ  ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು  ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!


ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು,  ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನ…

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ. ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ. ಆದರೆ…

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…