ಮರೆಯಲಾರದ ಸಣ್ಣ ಕಥೆಗಳು - ೪

ಹಿಂದೆ ಕೆಲವು ಮರೆಯಲಾರದ ಸಣ್ಣ ಕಥೆಗಳ ವಿಷಯ ಬರೆದಿದ್ದೆ. ಇವತ್ತು ನನಗೆ ಹೊಳೆದ ಕಥೆ ಸಂಜಯ ಹಾವನೂರರ ’ಲಿಫ್ಟ್’.ಇದು ನಾನು ಮುಂಚೆ ಹೇಳಿದ ಹಳೆಯ ಕಥೆಗಳಷ್ಟಂತೂ ಹಳೆಯದಲ್ಲ. ೧೯೮೩-೮೪ರಲ್ಲೋ ಏನೋ ಇದು ಮಯೂರದಲ್ಲಿ ಪ್ರಕಟವಾಗಿತ್ತು. ನಂತರ ಭಾರತೀಯ ಭಾಷೆಗಳಲ್ಲಿ ಬಂದಿರುವ ವೈಜ್ಞಾನಿಕ ಹಿನ್ನಲೆಯ (science fiction) ಕಥೆಗಳನ್ನೆಲ್ಲ ಒಟ್ಟುಗೂಡಿಸಿರುವ ಕಥಾಸಂಕಲನವೊಂದರಲ್ಲಿ ಈ ಕಥೆಯ ಇಂಗ್ಲಿಷ್ ಗೆ "The Lift" ಎಂಬ ಹೆಸರಲ್ಲೇ ಅನುವಾದವಾಗಿದೆಯೆಂದು ಎಲ್ಲೋ ಓದಿದ ನೆನಪು.

ಕೀಮತಿಲಾಲ್ ದಲಾಲ್ ರಸ್ತೆಯ ಶೇರುಪೇಟೆಯ ಒಬ್ಬ ದಳ್ಳಾಳಿ. ಶೇರುಗಳ ಜೊತೆ ಜೂಜಾಡುವುದೊಂದೇ ಅಲ್ಲ, ಕುದುರೆ ಜೂಜಿನಲ್ಲಿಯೂ ಅವನಿಗೆ ಆಸಕ್ತಿ. ಒಂದು ದಿನ ತನ್ನ ದಕ್ಷಿಣ ಮುಂಬಯಿಯ ಬಹುಮಹಡಿ ಕಟ್ಟದವೊಂದರಲ್ಲಿರುವ ತನ್ನ ಕಚೇರಿಗೆ ಹೋದಾಗ ಲಿಫ್ಹ್ಟಿನಿಂದ ಹೊರ ಬಿದ್ದಾಗ, ಅವನು ಹೊರ ಬರುವಾಗ, ಒಳಗೆ ಯಾರೂ ಇಲ್ಲವೇ ಇಲ್ಲ ಎನ್ನುವ ರೀತಿ ಹೊರಗಿದ್ದ ಜನರೆಲ್ಲ ಅವನ ಮೇಲೇ ಬೀಳುವಂತೆ ಒಳಬರುವುದನ್ನು ಗಮನಿಸುತ್ತಾನೆ. ಏಕೆ ಯಾರಿಗೂ ತಾನು ಕಾಣುತ್ತಲೇ ಇಲ್ಲವ ಎಂದು ಬೈದುಕೊಂಡು ಹೋದ ಅವನಿಗೆ ಇನ್ನೊಂದೆರಡು ಜನರನ್ನು ನೋಡಿದ ಮೇಲೆ, ತಾನು ಯಾರಿಗೂ ಕಾಣದಂತೆ ಆಗಿಹೋಗಿದ್ದಾನೆ ಎಂದು ತಿಳಿಯುತ್ತೆ. ಹಾಗೇ ಅವನಿಗೆ ಕಾಣುತ್ತಿರುವ ನೋಟ, ಜನ ಎಲ್ಲರೂ ಮೂರು ದಿನ ಮೊದಲಿನವು ಎನ್ನುವುದೂ ಅವನಿಗೆ ಅರಿವಾಗುತ್ತೆ. ಚುರುಕು ಬುದ್ಧಿಯ ಕೀಮತಿ ಲಾಲ್, ಈ ಬದಲಾವಣೆ ಲಿಫ್ಟ್ ನ ಒಳಗಿಂದ ಬಂದಾಗಲಿಂದ ಆಗಿದೆ ಅನ್ನುವುದನ್ನು ಗುರುತಿಸಿಕೊಂಡು, ಮತ್ತೆ ಲಿಫ್ಟ್ ಗೆ ಹೋಗಿ ಮೇಲೆ ಬಂದಾಗ ಯಾವ ಅಂಕೆಯ ಗುಂಡಿಗಳನ್ನು ಒತ್ತಿದ್ದನ್ನೋ, ಅದನ್ನೇ ತಿರುವುಮುರುವಾಗಿ ಒತ್ತುತ್ತಾನೆ. ಲಿಫ್ಟ್ ನಿಂತು ಹೊರಬಂದ ಮೇಲೆ, ಎಲ್ಲ ಮಾಮೂಲಾಗಿರುವುದು, ತಾನು ವರ್ತಮಾನಕ್ಕೆ ಬಂದಿರುವುದು ತಿಳಿಯುತ್ತೆ.

ಮೂರು ದಿನಗಳ ಹಿಂದೆ ಹೋಗುವಂತಹ ಕಾಲಯಾನಕ್ಕೆ ಕೀಲಿ ಸಿಕ್ಕ ಕೀಮತಿಲಾಲ್ ಆಗಿಂದಾಗ್ಗೆ ಭೂತಕಾಲಕ್ಕೆ ಹೋಗಿ, ಯಾರಿಗೂ ಕಾಣದಂತೆ ನಡೆದ ಸಂಗತಿಗಳನ್ನೆಲ್ಲ ನೋಡುವಂತಹ ತನ್ನ ಶಕ್ತಿಯನ್ನ ಬಳಸಿಕೊಳ್ಳತೊಡಗುತ್ತಾನೆ. ರಾಜಕೀಯ ನಾಯಕರ ಆಪ್ತ ಸಮಾಲೋಚನೆಗಳು, ಮೋಸದ ವ್ಯವಹಾರ ಮೊದಲಾದ್ದೆಲ್ಲವನ್ನೂ ತಿಳಿದು ಪತ್ರಿಕೆಯೊಂದಕ್ಕೆ ವರದಿ ಮಾಡತೊಡಗುತ್ತಾನೆ. ಈ ವರದಿ ಎಲ್ಲಿಂದ ಬರುತ್ತಿದೆ ಎಂದು ತಿಳಿಯದಿದ್ದರೂ, ಸುದ್ದಿಯನ್ನು ಪ್ರಕಟಿಸತೊಡಗುವ ಪತ್ರಿಕೆ, ದೊಡ್ಡ ಗಲಭೆಯನ್ನೇ ಹುಟ್ಟು ಹಾಕುತ್ತೆ. ಲಂಚಕೋರರಿಗೆಲ್ಲ ಎಲ್ಲಿ ಈ ಕಾಣದ ವರದಿಗಾರ ತಮ್ಮನ್ನು ಹಿಡಿದುಹಾಕುತ್ತಾನೋ ಎನ್ನುವ ಭಯದಿಂದ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸುಸೂತ್ರವಾಗಿ ನಡೆಯಲು ತೊಡಗುತ್ತೆ!

ಕೀಮತಿ ಲಾಲ್ ತನ್ನ ಗೆಳೆಯಯೊಬ್ಬನೊಂದಿಗೆ ಈ ಮೊದಲು ಆದ ವಿಷಯಗಳನ್ನೆಲ್ಲ ಹಂಚಿಕೊಳ್ಳುತ್ತಾನೆ. ಮೂರು ದಿನಗಳ ನಂತರ ಬರಲಿರುವ ಕುದುರೆ ಜೂಜಿನ ಒಂದು ಕೊನೇ ಪಂದ್ಯದ ದಿನ ತನ್ನ ಕರಾಮತ್ತನ್ನ ತೋರಿಸುವೆ ಎಂದು ಹೇಳಿ ಹೊರಟುಬಿಡುತ್ತಾನೆ. ಗೆಳೆಯನಿಗೆ ಇದನ್ನೆಲ್ಲ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತಾಗುತ್ತದೆ. ಆ ತಕ್ಷಣ ಅವನಿಗೆ ಕೀಮತಿಲಾಲನ ಮನಸ್ಸಿನಲ್ಲಿ ಇರುವ ಯೋಚನೆ ಅರ್ಥವಾಗುತ್ತೆ.ಮೂರು ದಿನ ಮುಂದೆ ಹೋಗಿ, ಯಾವ ಕುದುರೆ ಗೆಲ್ಲುವುದೆಂದು ತಿಳಿದು ಅದರ ಮೇಲೆ ಬಾಜಿ ಕಟ್ಟುವ ಅವನ ಯೋಚನೆ ಅಪಾಯದ್ದೆಂದು ಅವನಿಗೆ ಅನಿಸುತ್ತದೆ. ಏಕೆಂದರೆ ಕಳೆದು ಹೋದ ಕಾಲಕ್ಕೆ ಒಂದೇ ಸಾಧ್ಯತೆ! ಕಾಲಯಾನದಂತಾಗುವ ಲಿಫ್ಟ್ ಈ ಕಾರಣಕ್ಕಾಗಿಯೇ ಸಲೀಸಾಗಿ ಹೋಗಲು ಸಾಧ್ಯವಾಗಿತ್ತು- ಆದರೆ, ಮುಂಬರುವ ಕಾಲಕ್ಕೆ ಅನಂತ ಸಾಧ್ಯತೆಗಳು! ಕೀಮತಿಲಾಲನ ಪ್ರಯೋಗ ಅವನನ್ನು ಅಪಾಯಕ್ಕೀಡುಮಾಡಬಹುದೆಂಬ ಭಯದಲ್ಲಿ ಗೆಳೆಯ ಕೂಡಲೆ ಕೀಮತಿ ಲಾಲನನ್ನು ನೋಡಲು ಅವನ ಮನೆಗೆ ಹೋಗುತ್ತಾನೆ. ಅಷ್ಟರಲ್ಲೇ ಅವನು ಕಚೇರಿಗೆ ಹೋದ ವಿಷಯ ತಿಳಿದು ಕೂಡಲೆ ಟ್ರೈನ್ ಹಿಡಿದು ಅವನ ಕಚೇರಿಗೆ ಹೋಗುತ್ತಿರುವಂತೆ ಲಿಫ್ಟ್ ಭಾರೀ ಶಬ್ದದಿಂದ ಸ್ಫೋಟಗೊಳ್ಳುವುದರಲ್ಲಿ ಕಥೆ ಮುಗಿಯುತ್ತೆ.

ಓದಿ ಬಹಳ ದಿನಗಳಾದ್ದರಿಂದ ಕೆಲವು ವಿವರಗಳು ತಪ್ಪಿರಬಹುದು - ಆದರೆ ಸಿಕ್ಕರೆ ತಪ್ಪದೇ ಓದಿ - ಕನ್ನಡದಲ್ಲಿ ಅಪರೂಪವಾದ ಸೈನ್ಸಫಿಕ್ಶನ್ ಪ್ರಕಾರದ ಕಥೆ

ಸಂಜಯ ಹಾವನೂರರ - ಲಿಫ್ಟ್

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?