Skip to main content

ಇಂದಿನ ದಿನವೇ ಶುಭದಿನವು

ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

ಈ ಉಗಾಭೋಗದಲ್ಲಿ ಪುರಂದರದಾಸರು ಹೇಳೋದು ನಿಜವೇ. ದೇವರನ್ನು ನೆನೆಯೋದಕ್ಕೆ ಪಂಚಾಂಗ ನೋಡ್ಬೇಕಿಲ್ಲ. ಯಾಕಂದ್ರೆ, ಎಂದು ನಾವು ಹರಿಯನ್ನು ನೆನ್ನೆಯುತ್ತೇವೋ ಅವತ್ತಿನ ದಿನ ಚೆನ್ನಾಗೇ ಆಗುತ್ತೆ ಅನ್ನೋದು ಪುರಂದರದಾಸರ ಅಭಿಪ್ರಾಯ. ಹಾಗೇ, ಪುರಂದರದಾಸರಂತಹ ಮಹನೀಯರನ್ನ ನೆನೆಯೋದಕ್ಕೆ ಕೂಡ, ಯಾವ ದಿನವಾದರೂ ಒಳ್ಳೇದೇ. ಆದರೂ, ಅಂಥವರನ್ನ ಅವರು ಹುಟ್ಟಿದ ದಿನದಂದೋ, ಅಥವಾ ಅವರ ಜೀವನದ ಯಾವುದಾದರೂ ಮಹತ್ವದ ಘಟನೆ ನಡೆದ ದಿನ ನೆನೆಸಿಕೊಳ್ಳೋದು ಸಂಪ್ರದಾಯವಾಗಿ ಬಂದಿದೆ. ಅಂತಹ ದಿನಗಳು ನಮಗೆ ಇಂಥಾ ಹಿರಿಯ ಜೀವಗಳು ತಮ್ಮ ಬಾಳಿನಲ್ಲಿ ನಡೆದು ತೋರಿದ ದಾರಿಯನ್ನೊಮ್ಮೆ ಮತ್ತೊಮ್ಮೆ ವಿವರವಾಗಿ ನೋಡೋದಕ್ಕೆ ಒಂದು ಅವಕಾಶ ಕೊಡುತ್ತವೆ. ಇವತ್ತು ಪುರಂದರ ದಾಸರ ಆರಾಧನೆ ( ಜನವರಿ ೨೫, ೨೦೦೯, ಪುಷ್ಯ ಬಹುಳ ಅಮಾವಾಸ್ಯೆ) ಆಗಿರೋದ್ರಿಂದ, ಅವರ ಕೆಲವು ಮಾತುಗಳನ್ನೋ ಓದೋದು, ಅಥವಾ ಕೇಳೋದು ಮಾಡೋದು ಒಳ್ಳೇದು ಅಂತ ನನ್ನನಿಸಿಕೆ.

ಪುರಂದರ ದಾಸರನ್ನು ಕರ್ನಾಟಕದ ಹರಿದಾಸ ಪರಂಪರೆಯ ನಾಲ್ಕು ಆಧಾರ ಸ್ತಂಭಗಳಲ್ಲೊಬ್ಬರು ಎಂದು ಕರೆಯುವ ವಾಡಿಕೆ. ಒಂದು ಸಂಸ್ಕೃತ ಶ್ಲೋಕ ಈ ನಾಲ್ಕು ದಾಸ ವರೇಣ್ಯರನ್ನು ಹೀಗೆ ಸ್ಮರಿಸುತ್ತದೆ:

ನಮ: ಶ್ರೀಪಾದರಾಜಾಯ ನಮಸ್ತೇ ವ್ಯಾಸ ಯೋಗಿನೇ |
ನಮ: ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮ: ||

(ನಮಿಪೆ ಶ್ರೀಪಾದ ರಾಯರಿಗೆ ಮಣಿವೆ ಯೋಗಿ ವ್ಯಾಸಗೆ
ಹಿರಿಯ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ)


( ಪುರಂದರದಾಸರ ಶಿಲ್ಪ - ಇದು ಬಹುಶಃ ಹಂಪೆಯ ಪುರಂದರ ಮಂಟಪದಲ್ಲಿರುವುದು - ನಾನು ಪರಿಚಿತರ ಮನೆಯಲ್ಲಿದ್ದ ಛಾಯಾಚಿತ್ರವೊಂದನ್ನು ಫೋಟೋ ತೆಗೆದದ್ದು. ದಾಸರ ತಂಬೂರಿಯನ್ನೂ, ಜೋಳಿಗೆಯನ್ನೂ, ಮುಂಡಾಸನ್ನೂ ಗಮನಿಸಿ)

ಪುರಂದರದಾಸರನ್ನು ದಾಸಶ್ರೇಷ್ಠರೆಂದೇ ಕರೆಯುವ ರೂಢಿ ಇದೆ. 'ಪುರಂದರಗುರುಂ ವಂದೇ ದಾಸಶ್ರೇಷ್ಠಮ್ ದಯಾನಿಧಿಮ್' ಎಂಬ ಮಾತೇ ಇದೆ. ಅದಕ್ಕೇ ಅಲ್ಲವೆ, ಗುರುಗಳಾದ ವ್ಯಾಸರಾಯರೇ ಪುರಂದರದಾಸರ ಬಗ್ಗೆ 'ದಾಸರೆಂದರೆ ಪುರಂದರ ದಾಸರಯ್ಯ' ಎಂದು ಹೊಗಳಿ ಹಾಡಿರುವುದು? ಈ ಮಾದರಿಯಲ್ಲಿ ಗುರುವಿನಿಂದಲೇ ಬಾಯ್ತುಂಬ ಹೊಗಳಿಸಿಕೊಂಡ ಶಿಷ್ಯರು ವಿರಳವೇ.

ಪುರಂದರದಾಸರದ್ದು ಬಹುಮುಖ ಪ್ರತಿಭೆ. ಅವರನ್ನು 'ಕರ್ನಾಟಕ ಸಂಗೀತದ ಪಿತಾಮಹ'ರೆಂದೇ ಗೌರವಿಸುತ್ತೇವೆ. ಅವರು ಒಬ್ಬ ಭಕ್ತ, ಕವಿ, ರಸಿಕ, ಸಂಗೀತಗಾರ, ವಾಗ್ಗೇಯಕಾರ ಮತ್ತು ಸಮಾಜ ಸುಧಾರಕನಾಗೊ ದಕ್ಷಿಣ ಭಾರತದಲ್ಲೆಲ್ಲ ತಿರುಗಾಡಿದ್ದರು. ಆದರೆ, ನಮ್ಮಲ್ಲಿ ಎಷ್ಟೋ ದೊಡ್ಡವರ ಜೀವನದಲ್ಲಿ ಆಗಿರುವಂತೆ, ಅವರ ಜೀವನದ ಹೆಚ್ಚಿನ ವಿವರಗಳು ನಮಗೆ ಹೀಗೇ ಇದ್ದಿರಬೇಕೆಂದು ತಿಳಿಯುವುದಿಲ್ಲ. ಅವರು ಹುಟ್ಟಿದ ದಿನವೇ ಆಗಲಿ, ಅಥವಾ ಅವರು ವ್ಯಾಸತೀರ್ಥರ ಶಿಷ್ಯರಾಗಿ ಹರಿದಾಸ ದೀಕ್ಷೆಯನ್ನು ತೆಗೆದುಕೊಂಡ ದಿನವೂ ಯಾವುದೆಂದು ಖಡಾಖಂಡಿತವಾಗಿ ಹೇಳಲಾಗದು. ಆದರೆ ಅವರ ಜೀವನದ ಕಡೆಯ ದಿನದ ಬಗ್ಗೆ ಮಾತ್ರ ನಮಗೆ ಖಚಿತವಾದ ಮಾಹಿತಿ ತಿಳಿದುಬರುತ್ತೆ - ಅದು ನಡೆದದ್ದು ರಕ್ತಾಕ್ಷಿ ಸಂವತ್ಸರ ಪುಷ್ಯ ಮಾಸದ ಅಮಾವಾಸ್ಯೆಯ ದಿನ. ( ಈ ದಿನ ಕ್ರಿ.ಶ.೧೫೬೪ ಕ್ಕೆ ಸರಿಹೋಗುತ್ತೆ). ಈ ವಿಷಯ ನಮಗೆ ತಿಳಿಯುವುದು ಪುರಂದರದಾಸರ ಮಗ ಮಧ್ವಪದಾಸರ ಒಂದು ರಚನೆಯಲ್ಲಿ.

ಆ ಪದ ಹೀಗಿದೆ:

ತೆರಳಿದರು ಹರಿಪುರಕಿಂದು || ಪಲ್ಲವಿ ||

ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ ||

ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧಜನರು || ೧ ||

ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಸಿ || ೨ ||

ಈ ರಚನೆಯ ಪಲ್ಲವಿಯನ್ನು ನೋಡಿದಾಗ, ಅದು ಪುರಂದರದಾಸರ ಮರಣದ ದಿನವೇ ರಚಿಸಿರಬೇಕೆಂದು ತೋರುತ್ತೆ. ಮೊದಲನೇ ಚರಣ ಅಂದು ಯಾವ ದಿನವಾಗಿತ್ತೆನ್ನುವುದನ್ನೂ, ಎರಡನೇ ಚರಣವು ಇದು ನಡೆದದ್ದು ಹಂಪೆಯ ವಿಜಯ ವಿಠಲನ ಸನ್ನಿಧಿಯಲ್ಲಿ ಎನ್ನುವುದನ್ನೂ ತಿಳಿಸುತ್ತೆ. ಹಾಗಾಗಿ, ಈ ಘಟನೆ ಹಂಪೆಯ ವಿಜಯ ವಿಠಲನ ಗುಡಿಯ ಬಳಿ, ತುಂಗಭದ್ರೆಯ ದಡದಲ್ಲಿರುವ ಪುರಂದರದಾಸ ಮಂಟಪದಲ್ಲೇ ಇರಬೇಕು ಎಂದೂ ಎನಿಸುತ್ತೆ.

ಈ ಅಂಶ ನಮಗೆ ಯಾಕೆ ಮುಖ್ಯವಾಗುತ್ತೆ? ಚಾರಿತ್ರಿಕ ಅಂಶಗಳನ್ನು ನಾವು ಹೇಗೆ ದಾಸರ ರಚನೆಗಳಿಂದ ಹೆಕ್ಕಿ ತೆಗೆಯಬಹುದು ಅನ್ನುವುದನ್ನು ಇದು ಸೂಚಿಸುತ್ತೆ. ಪುರಂದರದಾಸರ ಜೀವನದ ಸುತ್ತ ಇರುವ ದಂತಕಥೆಗಳನ್ನು ನಂಬಲಿ, ಬಿಡಲಿ, ಅವರ ಹಾಡುಗಳಿಂದಲೇ ಹೇಗೆ ನಾವು ಎಷ್ಟೋ ವಿಷಯಗಳನ್ನು ಅರಿತುಕೊಳ್ಳಬಹುದು ಅನ್ನುವುದನ್ನು ಇದು ನಮಗೆ ನೆನಪಿಸುತ್ತೆ. ನಿಜ ಹೇಳಬೇಕೆಂದರೆ ಪುರಂದರದಾಸರು ದೊಡ್ಡವರಾಗುವುದು ಅವರ ರಚನೆಗಳಿಂದಲೇ ಹೊರತು ದಂತಕಥೆಗಳಿಂದಲ್ಲ. ಪುರಂದರದಾಸರು ಲಕ್ಷಗಟ್ಟಲೆ ರಚನೆಗಳನ್ನು ಬರೆದಿದ್ದಾರೆಂಬ ಪ್ರತೀತಿ ಇದ್ದರೂ, ನಮಗೆ ಸಿಕ್ಕಿರುವುದು ಸಾವಿರಗಟ್ಟಲೆಯಲ್ಲಿದೆ ಅಷ್ಟೇ. ಆದರೆ, ನಮಗೆ ದೊರೆತಿರುವ ರಚನೆಗಳಲ್ಲೇ ಅವರ ಕಾಲದ ಜನಜೀವನದ ಬಗ್ಗೆ ನಾವು ಚೆನ್ನಾಗಿ ಅರಿತುಕೊಳ್ಳಬಹುದು - ಅದಕ್ಕೇ ದಾಸಸಾಹಿತ್ಯ ಚರಿತ್ರೆಗೆ ಒಂದು ಕನ್ನಡಿ ಎಂದು ನನ್ನೆಣಿಕೆ. ಅಂದಿನ ದಿನಗಳಲ್ಲಿದ್ದ ಹುಳುಕುಗಳೇ ಆಗಲಿ, ಹಿರಿಮೆಗಳೇ ಆಗಲಿ, ಅವುಗಳನ್ನು ಅರಿತುಕೊಳ್ಳುವುದು, ಶತಮಾನಗಳ ನಂತರವೂ, ಇವತ್ತಿಗೂ ಕೂಡ ನಮಗೆ ಬಹಳ ಮುಖ್ಯವೇ ಆಗುತ್ತೆ.

ಪುರಂದರರ ರಚನೆಗಳನ್ನು ಸಂಗ್ರಹಿಸುವುದರಲ್ಲಿ ೧೮ನೇ ಶತಮಾನದಲ್ಲಿ ಮುಖ್ಯ ಪಾತ್ರ ವಹಿಸಿದ ವಿಜಯದಾಸರು ಒಂದು ಹಾಡಿನಲ್ಲಿ, ಪುರಂದರದಾಸರು ದಾಸದೀಕ್ಷೆ ತೆಗೆದುಕೊಳ್ಳುವ ಮೊದಲು ವ್ಯಾಪಾರಿಯಾಗಿದ್ದರೆಂದು ಹೇಳುತ್ತಾರೆ. ಪುರಂದರದಾಸರೇ ಕೆಲವು ರಚನೆಗಳಲ್ಲಿ ವ್ಯಾಪಾರದ ಬಗ್ಗೆ ಮಾತಾಡುತ್ತಾರೆ. ಅವುಗಳಲ್ಲಿ ಸ್ವಾನುಭವದ ನೆನಹೂ ಇರಬಹುದೋ ಏನೋ?

ಅಂತಹ ಒಂದು ರಚನೆ ಹೀಗಿದೆ:

ವ್ಯಾಪಾರ ನಮಗಾಯಿತು
ಶ್ರೀಪತಿಯ ಪಾದಾರವಿಂದ ಸೇವೆಯೆಂಬೋ |

ಹರಿಕರುಣವೆ ಅಂಗಿ ಗುರುಕರುಣವೆ ಮುಂಡಾಸು
ಹರಿದಾಸರ ದಯವೆಂಬೋ ವಲ್ಲಿ
ಪರಮಪಾಪಿ ಕಲಿಯೆಂಬೋ ಪಾಪೋಸು ಮೆಟ್ಟಿ
ದುರಾತ್ಮರಾದವರ ಎದೆಮೇಲೆ ನಡೆವಂಥ || ವ್ಯಾಪಾರ ನಮಗಾಯಿತು||

ಬಿಳಿಯಕಾಗದ ಹೃದಯ ಬಾಯಿ ಕಲಮದಾನಿ
ನಾಲಿಗೆಯೆಂಬೋದೇ ಲೇಖನಿಯು
ಲೋಲನ ಕಥೆ ನಾಮಂಗಳ
ಶೀಲಮನವಿ ಬರೆದು ಹರಿಗೆ ಒಪ್ಪಿಸುವಂಥ || ವ್ಯಾಪಾರ ನಮಗಾಯಿತು||

ಇಲ್ಲಿ ಪುರಂದರದಾಸರು ಬೇರಾವುದೇ ಕೆಲಸದ ಬಗ್ಗೆ ಹೇಳದೆ ವ್ಯಾಪಾರದ ಬಗ್ಗೆ ಮಾತಾಡುವುದು, ಅವರಿಗೆ ವ್ಯಾಪಾರದ ಅನುಭವವಿದ್ದಿರಬಹುದೇ ಎಂಬ ಮಾತಿಗೆ ಇಂಬು ಕೊಡುತ್ತೆ.

ಹೀಗೇ, ಇನ್ನೊಂದು ಉಗಾಭೋಗದಲ್ಲಿ, ಅವರು ಹೇಳುವುದು ಹೀಗೆ:

ಎನ್ನ ಕಡೆಹಾಯಿಸಿರುವುದು ನಿನ್ನ ಭಾರ
ನಿನ್ನ ನಂಬಿ ಬದುಕುವುದು ಎನ್ನ ವ್ಯಾಪಾರ

ಒಟ್ಟಿನಲ್ಲಿ ಜೀವನವ್ಯಾಪಾರವನ್ನು ಸಾಗಿಸಲು ಹರಿಯ ಮೇಲೆ ಪುರಂದರದಾಸರಿಗೆ ಇದ್ದ ನಂಬಿಕೆಗೆ ಸಾಟಿಯೇ ಇಲ್ಲ ಎನ್ನಬಹುದು. ಈ ದಾಸರ ಆರಾಧನೆಯ ಶುಭದಿನ, ಅವರ ಮಾತುಗಳ ಹೊಳಹನ್ನು ನೆನೆಯುವ ಪ್ರಯತ್ನ ಮಾಡೋದಕ್ಕೆ ಒಳ್ಳೇ ದಿನ ಆಲ್ಲವೇ?

-ಹಂಸಾನಂದಿ

(ಸೂ: ಈ ಬರಹವು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಿಂದ ಪ್ರಕಟವಾಗುವ 'ಗುರುಸಾರ್ವಭೌಮ' ಎನ್ನುವ ಮಾಸಪತ್ರಿಕೆ ಗೆಂದು ನಾನು ಬರೆದ 'A Day to Remember' ಎಂಬ ಇಂಗ್ಲಿಷ್ ಬರಹದ ಕನ್ನಡ ಅನುವಾದ)

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.

ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ  ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು  ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!


ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು,  ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನ…

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ. ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ. ಆದರೆ…

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…