ರಾಗ ಅಭೇರಿ - ಮೊದಲ ಕಂತು

ಯಾವುದೇ ರಾಗಗಳ ಬಗ್ಗೆ ಬರೆದು ಬಹಳ ದಿನಗಳಾಯಿತು ಅನ್ನಿಸಿತು. ಅದಕ್ಕೇ ಇರಲಿ ಅಂತ ಅಭೇರಿ ರಾಗದ ಬಗ್ಗೆ ಶುರು ಮಾಡ್ತಿದ್ದೇನೆ.

ಕರ್ನಾಟಕ ಸಂಗೀತದಲ್ಲಿ ಅಭೇರಿ, ಆಭೇರಿ ಅನ್ನುವ ಎರಡು ಹೆಸರುಗಳಿಂದಲೂ ಕರೆಯಲ್ಪಡುವ ಈ ರಾಗಕ್ಕೆ ಹಿಂದೂಸ್ತಾನಿ ರಾಗದಲ್ಲಿ ಒಂದು ಅವಳಿ ಜವಳಿ ರಾಗವಿದೆ. ಅಲ್ಲಿ ಅದನ್ನ ಭೀಮ್‍ಪಲಾಸ್, ಅಥವಾ ಭೀಮ್‍ಪಲಾಸೀ ಅಂತ ಕರೀತಾರೆ. ಕರ್ನಾಟಕ ಸಂಗೀತದಲ್ಲಿ ಇದು ಬಹಳ ಹಳೇ ರಾಗದಂತೆ ಕಾಣೋದಿಲ್ಲ. ೧೭ನೇ ಶತಮಾನದ ನಂತರ ಕಂಡುಬರೋ ಹೆಸರಿದು. ಆದರೆ, ಅದಕ್ಕೂ ಮೊದಲು ದೇವಗಾಂಧಾರ ಅಂತ ಪ್ರಸಿದ್ಧವಾದ ರಾಗವೊಂದಿತ್ತು, ಅದು ಹೆಚ್ಚು ಕಡಿಮೆ ಈಗ ನಾವು ಯಾವುದನ್ನ ಅಭೇರಿ ಅಂತ ಕರೀತೀವೋ ಅದೇ ತರಹ ಇರ್ತಿತ್ತು. ಈಗ ಕರ್ನಾಟಕ ಸಂಗೀತದಲ್ಲಿ ದೇವಗಾಂಧಾರಿ ಅಂತ ಬೇರೊಂದು ಪ್ರಸಿದ್ಧ ರಾಗ ಇರೋದ್ರಿಂದ, ೨೦ ನೇ ಶತಮಾನದಲ್ಲಿ ಹಳೆಯ ದೇವಗಾಂಧಾರಕ್ಕೆ ಕರ್ನಾಟಕ ದೇವಗಾಂಧಾರಿ ಅಂತ ಕರೆಯೋ ಪದ್ಧತಿ ಶುರುವಾಗಿದೆ.

ಇಷ್ಟು ಸಾಲದು ಅಂತ ಅಭೇರಿ ರಾಗದಲ್ಲೇ ತ್ಯಾಗರಾಜರ ಪದ್ಧತಿ ದೀಕ್ಷಿತರ ಪದ್ಧತಿ ಅಂತ ಎರಡು ಬೇರೆಬೇರೆ ರಾಗಗಳಿವೆ. ಸದ್ಯಕ್ಕೆ ನಾನು ತ್ಯಾಗರಾಜರ ಪದ್ಧತಿಯ ಅಭೇರಿ ರಾಗದ ಬಗ್ಗೆ ಮಾತಾಡುವೆ. ಇದಕ್ಕೂ (ಕರ್ನಾಟಕ) ದೇವಗಾಂಧಾರಕ್ಕೂ ವ್ಯತ್ಯಾಸ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ಇನ್ನು ಮಾಮೂಲಿನ ಹಾಗೆ, ಈ ರಾಗದ ಸ್ವರಗಳ ಬಗ್ಗೆ ಮಾತಾಡೋ ಮೊದಲು, ಕೆಲವು ಚಿತ್ರಗೀತೆಗಳನ್ನ ಕೇಳಿಬಿಡೋಣ ಅಲ್ವೇ? ಅಂದಹಾಗೆ, ಈ ರಾಗ ಚಿತ್ರಸಂಗೀತಗಾರರಿಗೆ ಒಳ್ಳೇ ಪ್ರಿಯವಾದ ರಾಗ ಅಂದ್ರೆ ತಪ್ಪಿಲ್ಲ. ಕನ್ನಡ ಚಿತ್ರಗಳಲ್ಲಂತೂ ಒಳ್ಳೊಳ್ಳೇ ಹಾಡುಗಳು ಈ ರಾಗದಲ್ಲಿ ಬಂದಿವೆ.

ಮೊದಲಿಗೆ:
ಕನ್ನಡಕ್ಕೆ ಒಬ್ಬರೇ ರಾಜ್ ಕುಮಾರ್ ಹಾಡಿರುವ ಚೆಲುವೆಯೇ ನಿನ್ನ ನೋಡಲು - ಹೊಸಬೆಳಕು ಚಿತ್ರದಿಂದ:ಇನ್ನೊಂದು ಇನ್ನೂ ಹಳೆಯ, ಆದರೆ ಬಲು ಸೊಗಸಾದ ಗೀತೆ - ನಿನ್ನ ನೀನು ಮರೆತರೇನು - ದೇವರ ಕಣ್ಣು ಚಿತ್ರದ್ದು - ಎಸ್ಪಿ ಬಾಲಸುಬ್ರಮಣ್ಯಂ ಕೊರಲಲ್ಲಿ:


ಮೂರನೆಯದು ಮತ್ತಿನ್ನಷ್ಟು ಹಳೆಯ, ಆದರೆ, ಮತ್ತಿನ್ನಷ್ಟು ಚೆನ್ನಾಗಿರುವ ಗೀತೆ - ಹೂವು ಚೆಲುವೆಲ್ಲ ತಂದೆಂದಿತು - ಚಿತ್ರ ಹಣ್ಣೆಲೆ ಚಿಗುರಿದಾಗ - ಹಾಡಿರುವುದು ಪಿ.ಸುಶೀಲಾಸದ್ಯಕ್ಕೆ ಮೂರಕ್ಕೆ ಮುಕ್ತಾಯವಾಗಿರಲಿ. ಮತ್ತೆ ಇನ್ನೊಂದು ಸಲ ನೋಡಬಹುದು. ಅಲ್ವಾ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?