Skip to main content

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ. ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈಗಂಟ್ಕೊಂಡಿರತ್ತಲ್ಲ ಅಂತ ನನಗನಿಸ್ತು. ಅದಕ್ಕೇ ಅವರನ್ನ ಹಾಗೇ ಕೇಳೂಬಿಟ್ಟೆ.

ಆಗ ಅವ್ರಂದ್ರು - "ಅಲ್ರೀ, ನೀವು ಮಾಡ್ಬೇಕೂ ಅಂದ್ಕೊಂಡಿರೋ ಈ ನೂರಿಪ್ಪತ್ತೆಂಟು ವಿಷಯದಲ್ಲಿ ಮೊದಲ ನೂರು ವಿಷಯಗಳನ್ನಾದ್ರೂ ನಿಮಗೆ ಹೇಳಿರೋದು, ನೆನಪಿಸೋದು ನಿಮ್ಮ ಹೆಂಡ್ತೀ ತಾನೇ?" ಅಂತ. "ಅರೆ, ಹೌದಲ್ಲ!" ಅನ್ನಿಸ್ತು. "ಅದೇರೀ, ಗಂಡಸ್ರಿಗೂ ಹೆಂಗಸ್ರಿಗೂ ಇರೋ ವ್ಯತ್ಯಾಸ. ಯಾವ್ದನ್ನ ಎಲ್ಲಿಡ್ಬೇಕು ಅನ್ನೋದು ಹೆಂಗಸ್ರಿಗಲ್ವೇ ಸರಿಯಾಗ್ಗೊತ್ತಿರೋದು? ಅದು ಅವರ್ಗೆ ಹುಟ್ಟಿಂದ ಬಂದಿರತ್ತೇ ರೀ" ಅಂದ್ಕೊಂಡು ಅವರು ಹೋದ್ರು.

ಹೌದು. ಅದೇನೋ ನಿಜ. ಯಾವ್ದನ್ನ ಎಲ್ಲಿಟ್ಟಿರ್ಬೇಕು, ಯಾರನ್ನ ಎಲ್ಲಿಟ್ಟಿರ್ಬೇಕು ಅನ್ನೋದನ್ನ ಹೆಂಗಸ್ರು ಚೆನ್ನಾಗೇ ತಿಳ್ಕೊಂಡಿರ್ತಾರೆ. ಅದ್ರಲ್ಲೂ, ಅವರವರ ಗಂಡಂದ್ರನ್ನ ಎಲ್ಲಿಟ್ಟಿರ್ಬೇಕು ಅಂತ ಬಹಳ ಚೆನ್ನಾಗೇ ತಿಳ್ಕೊಂಡಿರ್ತಾರೆ. ಇದನ್ನ ಅವರ್ಗೆ ಯಾರೂ ಹೇಳ್ಕೊಡ್ಬೇಕಾಗಿಲ್ಲ. ಯಾರಾದ್ರೂ, ಹೇಳ್ಕೊಡ್ಬೇಕು ಅಂದ್ರೆ, ಅವರವರ ತಾಯಿ ಹೇಳ್ಕೊಡ್ಬೇಕು. ಇಲ್ಲ ಅವರ ನಡವಳಿಕೆ ನೋಡ್ಕೊಂಡು ಕಲ್ತ್ಕೋತಾರೋ? ಗೊತ್ತಿಲ್ಲ. ನನ್ ಹೆಂಡ್ತೀನೇ ಕೇಳಿ ನೋಡ್ಬೇಕು ಅಂದ್ಕೊಂಡಿದ್ದೆ. ಆದ್ರೆ, ಅಷ್ಟ್ರೊಳ್ಗೆ ಉತ್ತರ ಸಿಕ್ತು ಅನ್ನಿ.

ವಿದ್ಯೆಗೆ, ಕಲಿಕೆಗೆ ಅಧಿದೇವತೆ ಸರಸ್ವತಿ ಅಂತ ಅಂದ್ಕೋತೀವಿ. ಇದು ಬಹುಶಃ ಗಂಡಸ್ರಿಗೆ ಮಾತ್ರ - ಅಥವಾ ’ಪುಸ್ತಕದ ಬದನೇಕಾಯಿ’ ಅಂತೀವಲ್ಲ ಅಂತಹ ವಿದ್ಯಕ್ಕೆ. ಗಂಡಂದ್ರನ್ನ ಹೇಗೆ ನೋಡ್ಕೊಳ್ಬೇಕು ಅನ್ನೋದಕ್ಕೆ ಹೆಂಗಸ್ರಿಗೆಲ್ಲ ದೊಡ್ಡ ಗುರು ಅಂದ್ರೆ ಅದು ಲಕ್ಷ್ಮಿ. ಜೂಲಿ ಲಕ್ಷ್ಮಿ ಅಲ್ಲಾರೀ. ಹ್ಹ ಹ್ಹ - ಈ ಕಾಲದವರಿಗೆ ಜೂಲಿ ರಮ್ಯ ಗೊತ್ತಿರ್ಬಹುದೇ ಹೊರತು ಜೂಲಿ ಲಕ್ಷ್ಮಿ ಗೊತ್ತಿರೋಲ್ಲ ಅನ್ನೋದು ನನ್ ಹಳೇ ಕಾಲದ್ ಮನಸ್ಗೆ ಮರ್ತೇ ಹೋಯ್ತು. ಇರ್ಲಿ. ನಾನು ಹೇಳಿದ್ದು ಸಾಕ್ಷಾತ್ ಹಾಲ್ಗಡಲಲ್ಲಿ ಹುಟ್ಟಿ ಬಂದ ಮಹಾಲಕ್ಷ್ಮಿ ವಿಷಯ.

ಲಕ್ಷ್ಮಿ ಬಹಳ ಜಾಣೆ. ಪಾರ್ವತಿ ಪಾಪ, ತಿಂಗಳುಗಟ್ಟಲೆ ಶಿವನಿಗೆ ಸೇವೆ ಮಾಡ್ತಾ, ಅವನು ಯಾವತ್ತು ಕಣ್ತೆಗೀತಾನೋ, ಯಾವಾಗ ತನ್ನ ಕಡೆ ನೋಡ್ತಾನೋ ಅಂತ ಕಷ್ಟವಂತೂ ಪಟ್ಟಿದ್ದೇ ಪಟ್ಟಿದ್ದು. ಕಡುಜಾಣೆ ಲಕ್ಷ್ಮಿ ಸಮುದ್ರದಿಂದ ಹುಟ್ಟಿದ ತಕ್ಷಣ ಸುತ್ಮುತ್ಲೂ ನೋಡಿ ಕಣ್ಣಿಗೆ ಚೆನ್ನಾಗಿ ಕಂಡ ನಾರಾಯಣನ್ನ ಮದುವೆ ಮಾಡ್ಕೊಂಡ್ಬಿಟ್ಳು. ಅಷ್ಟೇ ಅಲ್ಲ, ತವರ್ಮನೇ ಆದ ಸಮುದ್ರದಲ್ಲೇ ಗಂಡನ್ಜೊತೆ ಠಿಕಾಣೀನೂ ಹೂಡ್ಬಿಟ್ಳು. ಕಷ್ಟ ಪಟ್ಟು ಮದ್ವೆ ಆದ ಪಾರ್ವತಿಯನ್ನ ನಾವು ದಂಪತಿಗಳನ್ನ ಹೇಳೋವಾಗ ಶಿವ-ಪಾರ್ವತಿ ಅಂತ ಮೊದ್ಲು ಗಂಡನ ಹೆಸ್ರು ಹೇಳ್ತೀವಿ. ಆದ್ರೆ, ಲಕ್ಷ್ಮಿ ದಂಪತಿಗಳಿಗೆ ಹಾಗಿಲ್ಲ ನೋಡಿ. ಅವರು ಏನಿದ್ರೂ ಲಕ್ಷ್ಮೀ-ನಾರಾಯಣ, ಲಕ್ಷ್ಮೀ-ಕೇಶವ, ಲಕ್ಷ್ಮೀ-ಜನಾರ್ದನ, ಲಕ್ಷ್ಮೀ-ವೆಂಕಟೇಶ್ವರ. ಅಂತೂ ಲಕ್ಷ್ಮಿಗೆ ಗಂಡ ಯಾವತ್ತೂ ತನ್ನ ಹಿಂದೆ ಇರ್ಬೇಕು ಅನ್ನೋದು ಮೊದಲಿಂದ್ಲೇ ಗೊತ್ತಿತ್ತು ಅನ್ಸತ್ತೆ. ಅದಕ್ಕೇ ಹೆಂಗಸ್ರೆಲ್ಲ ಅವಳನ್ನ ಗುರು ಅಂದ್ಕೊಂಡ್ರೆ ಆಶ್ಚರ್ಯ ಏನಿದೆ? ಅಲ್ವಾ?



ಆ ಲಕ್ಷ್ಮಿ ಐಶ್ವರ್ಯಕ್ಕೆ ದೇವತೆ ಅಂತ ಅಂದ್ಕೊಳೋದು ಗಂಡಸ್ರು ಮಾತ್ರ ಅನ್ಸತ್ತೆ .ಪುರಂದರ ದಾಸರ ಒಂದು ರಚನೆಯನ್ನ ಓದಿದಮೇಲೆ, ಹೆಂಗಸ್ರಿಗೆಲ್ಲ ಸಂಸಾರದ ಪಾಠ - ಅದ್ರಲ್ಲೂ ಗಂಡಂದ್ರನ್ನ ಹೇಗೆ ’ನೋಡ್ಕೋಬೇಕು’ ಅಂತ ಹೇಳ್ಕೊಡೋ ಪರಮಗುರು ಅಂದ್ರೆ ಈ ಲಕ್ಷ್ಮೀದೇವಿಯೇ ಅನ್ನೋದು ನನಗೆ ಖಾತ್ರಿಯಾಯ್ತು ಈಗ.

ಓದಿ ನೋಡಿ ಈ ದೇವರನಾಮವನ್ನ - ಮರುಳುಮಾಡಿಕೊಂಡೆಯಲ್ಲ ಮಾಯಾದೇವಿಯೆ!

ಪಲ್ಲವಿ:

ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ |
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ || ಪಲ್ಲವಿ||

ಚರಣಗಳು:

ಜ್ಞಾನಿಗಳು ನಿತ್ಯ ಪಾನಾದಿಗಳನ್ನು ಬಿಟ್ಟು
ನಾನಾ ವಿಧ ತಪವಿದ್ದರು ಧ್ಯಾನಕ್ಕೆ ಸಿಲುಕದವನ|| ಮರುಳು ಮಾಡಿಕೊಂಡೆಯಲ್ಲ||

ಸರ್ವ ಸಂಗವನು ಬಿಟ್ಟು ಸನ್ಯಾಸಿಯಾದ ಕಾಲಕ್ಕು
ಸರ್ವದಾ ತನ್ನೆದೆಯಮೇಲೇ ಬಿಡದೆ ನಿನ್ನ ಧರಿಸಿಪ್ಪಂತೆ ||ಮರುಳು ಮಾಡಿಕೊಂಡೆಯಲ್ಲ||

ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ
ಹಲವು ಆಭರಣಗಳು ಜಲವು ಆಗಿ ಜಾಣತನದಿ ||ಮರುಳು ಮಾಡಿಕೊಂಡೆಯಲ್ಲ||

ರಂಗನು ಭೂಲೋಕದಿ ಭುಜಂಗ ಗಿರಿಯೊಳಲಮೇಲು-
ಮನ್ಗಪತಿಯಾಗಿ ನಿನ್ನ ಅಂಗೀಕರಿಸುವಂತೆ ||ಮರುಳು ಮಾಡಿಕೊಂಡೆಯಲ್ಲ||

ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು
ಪೊಕ್ಕುಳೊಳು ಮಕ್ಕಳು ಪಡೆದು ಕಕ್ಕುಲಾತಿ ಪಡುವಂತೆ ||ಮರುಳು ಮಾಡಿಕೊಂಡೆಯಲ್ಲ||

ಎಡಕೆ ಭೂಮಿ ಬಲಕೆ ಶ್ರೀಯು ಎದುರಲ್ಲಿ ದುರ್ಗಾದೇವಿ
ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಸುವಂತೆ ||ಮರುಳು ಮಾಡಿಕೊಂಡೆಯಲ್ಲ||

ಎಂದೆಂದಿಗೂ ಮರೆಯ ನಿನ್ನಾನಂದದಿ ಜನರಿಗೆಲ್ಲ
ತಂದು ತೋರೆ ಸ್ವಾಧೀನ ಪುರಂದರ ವಿಟ್ಠಲರಾಯನ ||ಮರುಳು ಮಾಡಿಕೊಂಡೆಯಲ್ಲ||

ನೋಡಿ - ಲಕ್ಷ್ಮಿ ಮಾಡಿದ್ದು ಒಂದೊಂದಾ? ನಾರಾಯಣನನ್ನ ಮರುಳು ಮಾಡಿದ್ದು ನಾನಾ ತರಹ. ಮನೆ ಬಿಟ್ಟು ಹೋಗದ ಹಾಗೆ, ಕಣ್ಮುಂದೇ ಇರೋ ತರಹ, ತನ್ನ ತವರುಮನೆಯಾಗ ಹಾಲಿನ ಸಮುದ್ರದಲ್ಲೇ ಇರೋ ಹಾಗೆ ಮಾಡ್ಬಿಟ್ಲು. ಕಷ್ಟ ಪಟ್ಟು ಅವ್ನೂ ಪಾಪ, ಒಂದಷ್ಟು ದಿನ ಬೇರೆ ಊರಲ್ಲಿದ್ದು (ಭೂಲೋಕ) ಹೋಗೋಣ ಅಂತ ಬಂದ್ರೆ, ಅಷ್ಟರಲ್ಲೇ ತಾನೂ ಬಂದು ವೇಷ ಬದಲಿಸಿ, ಅಲಮೇಲುಮಂಗೆಯಾಗಿ ಅವನ ಕೈಯನ್ನೇ ಮತ್ತೆ ಹಿಡಿದಳು. ’ಎಲ್ಲೆಲ್ಲಿ ನೋಡಲಿ, ನಿನ್ನನ್ನೆ ಕಾಣುವೆ’ ಅಂತ ಅವನು ಹಾಡ್ಬೇಕೂ ಅಂತಲೋ ಏನೋ, ಒಂದ್ಕಡೆ ಭೂದೇವಿ ಇನ್ನೊಂದ್ಕಡೆ ಶ್ರೀದೇವಿ ಆಗಿ ಅವನನ್ನೇ ಸುತ್ತುವರಿದಳು. ಇದೆಲ್ಲ ಚಾಕಚಕ್ಯತೆಗಳು ಎಲ್ಲ ಹೆಂಡ್ತೀರಲ್ಲೂ ಇವತ್ಗೂ ಇಲ್ವೇ? ಅಂದ್ರೆ ಲಕ್ಷ್ಮೀ ತಾನೇ ಎಲ್ಲ ಹೆಂಡ್ತೀರ್ಗೂ ಮಹಾಶಕ್ತಿ? ಅದಕ್ಕೇ ಇರಬೇಕು, ಬಹಳ ಜನದ ಮನೇಲಿ ’ನಮಸ್ತೇ ಶಾರದಾ ದೇವೀ’ ನೋ ’ಯಾಕುಂದೇಂದು ತುಷಾರಹಾರಧವಳಾ’ ನೋ ಹೇಳೋ ಹೆಚ್ಚಿಗೆ ಹೆಂಗಸ್ರನ್ನ ನಾನು ಕಂಡಿಲ್ಲ. ಅವರೆಲ್ಲರ ಮೆಚ್ಚಿನ ಸ್ತೋತ್ರ ಅಂದ್ರೆ ’ನಮಸ್ತೇಸ್ತು ಮಹಾಮಾಯೇ’ನೇ ಆಗಿರುತ್ತೆ!

ಮಕ್ಕಳನ್ನ ಹೆತ್ತರೆ ತನ್ನ ಮೈಕಟ್ಟು ಹಾಳಾಗತ್ತೆ ಅಂತ ಈ ಮಹಾಲಕ್ಷ್ಮಿ, ನಾರಾಯಣನ ಹೊಕ್ಕುಳಲ್ಲೇ ಮಗ ಹುಟ್ಟೋ ಹಾಗೆ ಮಾಡಿದ್ಲಂತೆ! ಭೂಲೋಕ ಲಕ್ಷ್ಮಿಯರು ಇದು ಒಂದ್ವಿಷಯದಲ್ಲಿ ಮಾತ್ರ -ಲಕ್ಷ್ಮಿಯ ಮಟ್ಟಕ್ಕೆ ಇನ್ನೂ ಹೋಗಿಲ್ಲ! ಅಥವಾ ಹೋಗಕ್ಕಾಗಿಲ್ಲ ಅನ್ನೋಣ. ನಾಳೆ ಏನೋ ಹೇಗೋ ಯಾರ್ಕಂಡವರು? ಏನಂತೀರಾ?

-ಹಂಸಾನಂದಿ

ಚಿತ್ರ: ಹಳೇಬೀಡು ದೇವಾಲಯದಲ್ಲಿನ ಲಕ್ಷ್ಮೀ ನಾರಾಯಣರು. ದಿನೇಶ್ ಕನ್ನಂಬಾಡಿ ಅವರ ಕೈಚಳಕ. ವಿಕಿಪೀಡಿಯಾ ಕೃಪೆ.

ಕೊಕೊ: ಈ ಹಾಡಿನ ಬಗ್ಗೆ ತೋರಿಕೊಟ್ಟ ತುಳಸೀವನದ ತ್ರಿವೇಣಿಯವರಿಗೆ ಧನ್ಯವಾದಗಳು.

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.

ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ  ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು  ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!


ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು,  ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನ…

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ. ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ. ಆದರೆ…

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…