ಬ್ಲಾಗಿಗೆ ಮರುಳಾದೆಯಾ? ಮನವೇ?

(ಕನ್ನಡ ಬ್ಲಾಗಿಗರ ಕೂಟದ ಬಗ್ಗೆ ಅಶೋಕ್ ಅವರು ನೆನ್ನೆ ಬರೆದಿದ್ದರು. ಅಲ್ಲಿ ನಾನೂ ಒಬ್ಬ ಸದಸ್ಯ. ಅದನ್ನು ನಡೆಸುತ್ತಿರುವವರು ನಿಮ್ಮ ಮೆಚ್ಚಿನ ಬ್ಲಾಗಿನ ಬಗ್ಗೆ ಸ್ವಲ್ಪ ಬರೀರಿ ಅಂತ ಎಲ್ಲರಿಗೂ ಸೇರಿಸಿ ಕರೆಕೊಟ್ಟಿದ್ದರು. ಅದಕ್ಕೆ ನಾನು ಬರೆದ ಉತ್ತರವನ್ನ ಇವತ್ತು ಕನ್ನಡ ಬ್ಲಾಗರ್ಸ್ ಪುಟದಲ್ಲಿ (http://kannadablogs.ning.com/) ಹಾಕಿದಾರೆ. ಅದನ್ನೇ ಇಲ್ಲಿ ಕತ್ತರಿಸಿ ಅಂಟಿಸಿರುವೆ. - ಹಂಸಾನಂದಿ)

====================================================================================

ಸ್ವಾಮೀ,

ನೀವು ಬರೀರಿ ಅಂದ್ರಿ. ನಾನು ಬರ್ದಿದೀನಿ. ಆದ್ರೆ ಈ ಪಾಟಿ ಒಳ್ಳೊಳ್ಳೇ ಬ್ಲಾಗುಗಳಿರೋವಾಗ ನೀವು ಒಂದು ಮೆಚ್ಚಿದ ಬ್ಲಾಗ್ ಬಗ್ಗೆ ಬರೀರಿ ಅನ್ನೋದು ಬರೀ ಮೋಸ ಅಂತೀನಿ ನಾನು.

ಆದ್ರೆ ಒಂದರ ಬಗ್ಗೆ ಬರೆಯೋದು ಅಷ್ಟು ಸುಲಭ ಅಲ್ವೇ ಅಲ್ಲ. ಅದಕ್ಕೇ ನನ್ನ ಮನಸ್ಸಿಗೆ ಹಿಡಿಸಿದ ಕೆಲವನ್ನು ಸೇರಿಸಿ ಈ ಹಾಡು. ಈ ಹಾಡಲ್ಲಿ ಇಲ್ಲದಿರೋ ಎಷ್ಟೋ ಬ್ಲಾಗುಗಳೂ ನನಗೆ ಮೆಚ್ಚುಗೆಯಾಗಿವೆ. ಆದ್ರೆ , ಹಾಡಿಗೆ ಮೂರು ಚರಣಕ್ಕಿಂತ ಹೆಚ್ಚಿದ್ರೆ ಚೆನ್ನಾಗಿರೋದಿಲ್ಲ ಅನ್ನಿಸ್ತು. ಅದಕ್ಕೇ ಅಷ್ಟಕ್ಕೇ ಬ್ರೇಕ್ ಹಾಕ್ದೆ.

ಪುರಂದರ ದಾಸರ ಕ್ಷೀರಾಬ್ದಿ ಕನ್ನಿಕೆ ಶ್ರೀಮಹಾಲಕುಮಿ ಯಾರಿಗೆ ವಧುವಾಗುವೆ ಧಾಟಿಯಲ್ಲಿ ಓದಿಕೊಳ್ಳಿ - ದಾಸಶ್ರೇಷ್ಠರ ಕ್ಷಮೆ ನಾನೇನೂ ಕೋರುತ್ತಿಲ್ಲ. ಯಾಕಂದ್ರೆ ಅವರು ದಯಾನಿಧಿಗಳಲ್ವೇ ? ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿಂ!

ಮೂಲ ಹಾಡಿನ ವರಸೆ ಇಲ್ಲಿದೆ: http://tinyurl.com/dkynkh/

ಜಾಲದಿ ತಿರುಗುತ ಕಂಡುದನೋದುತ
ಬ್ಲಾಗಿದೆ ಮನಸೋತೆಯಾ? ಮನವೇ
ಕನ್ನಡ ಬ್ಲಾಗಿಗೆ ಮರುಳಾದೆಯಾ?

ಡಾರ್ವಿನ್ ನೆನಪಿಸುವ ವಿಕಾಸವಾದಕ್ಕೋ?
ಸದ್ದಿಲ್ಲದೇ ಮೀನ್ಪಿಡಿವ ಮೌನಗಾಳಕ್ಕೋ?
ಅಲೆಗಳ ನಿನಾದದ ಕಡಲತೀರಕ್ಕೋ?
ಪೂಜೆಯ ವೇಳೆಗೆ ತುಳಸೀವನಕ್ಕೋ? || ಬ್ಲಾಗಿಗೆ ಮರುಳಾದೆಯಾ?|

ತಾಯ್ನೆಲದ ನೆನಹಿನ ನೆಲದ ಮಾತಿಗೋ?
ಹಾಡುತ ನಲಿಯಲು ಆಲಾಪಕ್ಕೋ?
ಮನದಾಳವ ತಿಳಿವ ಹರಿವಲಹರಿಗೋ?
ಊರೂರ ತಿರುಗಿಸುವ ಅಲೆಮಾರಿಗೋ? || ಬ್ಲಾಗಿಗೆ ಮರುಳಾದೆಯಾ?||

ನಿತ್ಯ ಸುದ್ದಿಯ ತರುವ ಓಕೇನೋಗೋ?
ಚಿತ್ರದಲೆ ಮನಸೆಳೆವ ಅನುಭವ ಮಂಟಪಕೋ?
ಸಾಹಿತ್ಯ ಸಂಗತಿಯ ಸರಸ ಸಲ್ಲಾಪಕೋ?
ಬ್ಲಾಗುಗಳ ಬುಟ್ಟಿಯದುವೆ ಸಿರಿ ಸಂಪದಕೋ? || ಬ್ಲಾಗಿಗೆ ಮರುಳಾದೆಯಾ?||

-ಹಂಸಾನಂದಿ

(ಇನ್ನು ಆಯಾಬ್ಲಾಗುಗಳನ್ನು ಹುಡುಕಿ ಕಾಣುವುದನ್ನು ಓದುಗರಿಗೆ ಬಿಡಲಾಗಿದೆ Smiling

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ