ರಾಮನವಮಿಯ ಸಮಯಕ್ಕೆ ಒಂದು ಮಂಗಳ ಸುಳಾದಿ

ಇಂದು ರಾಮನವಮಿ. ರಾಮ ಹುಟ್ಟಿದ ದಿನವೆಂಬ ನೆನಪಿನಲ್ಲಿ ಮಾಡುವ ಹಬ್ಬ. ಮಂಗಳಕರವಾದ ದಿನವೆಂಬ ನಂಬಿಕೆ. ಇಂತಹ ದಿನಕ್ಕೆ ತಕ್ಕಂತೆ, ಒಂದು ಮಂಗಳಕರ ಸಂಗೀತ ರಚನೆಯನ್ನು ವಿವರಿಸೋಣ ಎನ್ನಿಸಿತು.ಸುಳಾದಿ ಎನ್ನುವುದು ಕರ್ನಾಟಕದ ಹರಿದಾಸರು ಪ್ರಚಾರ ಪಡಿಸಿದ ಒಂದು ಸಂಗೀತ ರಚನಾ ಪ್ರಕಾರ. ಈ ಪದ ಬಂದದ್ದು ಹೇಗೆಂಬ ಜಿಜ್ಞಾಸೆ ಇನ್ನೊಮ್ಮೆ ಮಾಡಬಹುದು. ಆದರೆ, ಸುಳಾದಿಯ ರಚನೆ ಹೇಗಿರುತ್ತೆ ಅನ್ನುವುದನ್ನು ಮಾತ್ರ ಹೇಳುವೆ.

ಸುಳಾದಿ ಎನ್ನುವುದು ಬೇರೆಬೇರೆ ತಾಳಗಳಲ್ಲಿ ರಚಿತವಾಗಿರುವಂತಹ ಒಂದು ತಾಳಮಾಲಿಕೆ. ಸುಳಾದಿಗಳನ್ನು ಹಾಡುವಾಗ ಏಳು ತಾಳಗಳನ್ನು ಉಪಯೋಗಿಸುತ್ತಿದ್ದಿದ್ದರಿಂದ, ಆ ಏಳು ತಾಳಗಳೂ ಸುಳಾದಿ ಸಪ್ತತಾಳಗಳು ಎಂದೇ ಹೆಸರಾಗಿವೆ. ಧ್ರುವ, ಮಠ್ಯ(ಮಟ್ಟೆ), ರೂಪಕ, ಜಂಪೆ(ಜಂಪಟ, ಜೊಂಪಟ,ಝಂಪ), ತ್ರಿಪುಟ (ತ್ರಿವಿಡೆ), ಅಟ್ಟ(ಅಡ), ಮತ್ತು ಏಕ - ಇವೇ ಈ ಏಳು ತಾಳಗಳು. ಸುಳಾದಿಗಳಲ್ಲಿ ಸಾಧಾರಣವಾಗಿ ಏಳಾದರೂ ಖಂಡ(ಭಾಗ)ಗಳಿದ್ದು, ಒಂದೊಂದು ಖಂಡವೂ ಒಂದೊಂದು ತಾಳದಲ್ಲಿರುತ್ತವೆ. ಹೆಚ್ಚು ಖಂಡಗಳಿದ್ದಾಗ, ಒಂದೇ ತಾಳದಲ್ಲಿ ಒಂದಕ್ಕಿಂತ ಹೆಚ್ಚಿನ ಖಂಡಗಳಿರಬಹುದು. ಕಡಿಮೆಯಿದ್ದಾಗ, ಎಲ್ಲ ತಾಳಗಳೂ ಒಂದು ರಚನೆಯಲ್ಲಿ ಇರದೇ ಹೋಗಬಹುದು. ಕೆಲವು ಸುಳಾದಿಗಳಲ್ಲಿ ಆದಿತಾಳ (ಒಂದು ಬಗೆಯ ತ್ರಿಪುಟತಾಳ)ದ ಬಳಕೆಯೂ ಆಗಿದೆ. ಸುಳಾದಿಯ ಕೊನೆಯಲ್ಲಿ ಜೊತೆ(ಜತೆ) ಎಂದು ಕರೆಯುವ ಎರಡು ಸಾಲುಗಳಿದ್ದು ಅದು, ಸುಳಾದಿಯ ಮುಖ್ಯ ಅಂಶವನ್ನು ತೋರುವಂತಿರುತ್ತದೆ.

ಸುಳಾದಿಗಳು ಹರಿದಾಸರೇ ಮೊದಲು ಮಾಡಿದ ರಚನೆಯ ವಿಧವೆಂದು ತೋರುತ್ತದೆ. ಶ್ರೀಪಾದರಾಯರಿಂದ ಹಿಡಿದು ವಿಜಯದಾಸರ ವರೆಗಿನ ಎಲ್ಲ ಪ್ರಮುಖ ಹರಿದಾಸರೂ ಸುಳಾದಿಗಳನ್ನು ರಚಿಸಿದ್ದಾರೆ. ೧೭-೧೮ನೇ ಶತಮಾನದಲ್ಲಿ ಕೃತಿ ಎಂಬ ಸಂಗೀತ ರಚನೆಗಳು ಜನಪ್ರಿಯವಾಗುವ ಮೊದಲು ಸುಳಾದಿಗಳು ಬಹಳ ಪ್ರಚಲಿತದಲ್ಲಿದ್ದ ಹಾಗೆ ತೋರುತ್ತವೆ. ಆ ಕಾಲದ ಸಂಗೀತ ಶಾಸ್ತ್ರ ರಚನೆಗಳೆಲ್ಲ ಲಕ್ಷ್ಯ ಸಂಗೀತಕ್ಕೆ ಉದಾಹರಣೆಯಾಗಿ ಸುಳಾದಿಗಳನ್ನು ಕೊಡುತ್ತವೆ (ಉದಾ: ಷಾಹಜಿಯ ರಾಗಲಕ್ಷಣ, ತುಳಜಾಜಿಯ ಸಂಗೀತ ಸಾರಾಮೃತ). ಆದರೆ ಕಾಲ ಕಳೆದಂತೆ, ಅವುಗಳ ಜನಪ್ರಿಯತೆ ಕಡಿಮೆಯಾದಂತೆ ತೋರುತ್ತೆ. ಹಲವು ತಾಳಗಳಲ್ಲಿರುತ್ತಿದ್ದ ಕ್ಲಿಷ್ಟತೆಯೂ ಇದಕ್ಕೆ ಒಂದು ಕಾರಣವಾಗಿರಬಹುದು. ೨೦ನೇ ಶತಮಾನದ ಮೊದಲಲ್ಲಿ ಬಂದ ಸುಬ್ಬರಾಮ ದೀಕ್ಷಿತರ ಸಂಗೀತ ಸಂಪ್ರದಾಯ ಪ್ರದರ್ಶಿನಿಯಲ್ಲೂ ಕೆಲವು ರಾಗಗಳಲ್ಲಿ ಲಕ್ಷ್ಯದ ಉದಾಹರಣೆಗೆ ಸುಳಾದಿಗಳನ್ನು ಕೊಡಲಾಗಿದೆ.

ಹರಿದಾಸರೇ ಸುಳಾದಿಗಳನ್ನು ರಚಿಸುತ್ತಿದ್ದುದ್ದರಿಂದ, ಎಲ್ಲ ಸುಳಾದಿಗಳೂ ಕನ್ನಡದಲ್ಲೇ ಇದ್ದವು - ಇಪ್ಪತ್ತೊಂದನೇ ಶತಮಾನ ಬರುವ ತನಕ.

ಡಾ.ಶ್ರೀಕಾಂತ್ ಮೂರ್ತಿ ಇಂದಿನ ಒಬ್ಬ ವಾಗ್ಗೇಯಕಾರರು. ಇಂಗ್ಲೆಂಡಿನಲ್ಲಿ ಮನೋವೈದ್ಯರಾಗಿರುವ ಇವರು, ಪ್ರವೃತ್ತಿಯಲ್ಲಿ ಸಂಗೀತಗಾರ ಹಾಗೂ ವಾಗ್ಗೇಯಕಾರರು. ಹಲವು ಭಾಷೆಗಳಲ್ಲೂ ಪರಿಣತಿ ಹೊಂದಿದವರು. ಇವರು ಕನ್ನಡ, ಸಂಸ್ಕೃತ, ಮತ್ತು ಸಂಕೇತಿ ಭಾಷೆಗಳಲ್ಲಿ ಹಲವಾರು ಉತ್ತಮ ರಚನೆಗಳನ್ನು ರಚಿಸಿದ್ದಾರೆ. ಸುಳಾದಿಗಳ ಬಗ್ಗೆ ಬರೆಯುವಾಗ ಇವರ ರಚನೆಯಾದ ರಾಮಾಯಣ ಮಂಗಳ ಸುಳಾದಿಯ ಬಗ್ಗೆ ಹೇಳಬೇಕೆನಿಸಿತು.

ಎಲ್ಲ ಸುಳಾದಿಗಳಂತೆ ಈ ಮಂಗಳ ಸುಳಾದಿಯನ್ನೂ ಏಳೂ ಸುಳಾದಿತಾಳಗಳಲ್ಲಿ ಯೋಜಿಸಲಾಗಿದೆ. ಆದರೆ, ಇದು ಕನ್ನಡದಲ್ಲಿಲ್ಲದೇ ಸಂಕೇತಿ ಭಾಷೆಯಲ್ಲಿರುವುದು ಒಂದು ಹೊಸ ಸಂಗತಿ. ರಾಮಾಯಣದ ಆರು ಕಾಂಡಗಳ ಕಥೆಯನ್ನು ಸುಂದರವಾಗಿ ಹೇಳಿದ್ದಾರೆ. ಕರ್ನಾಟಕ ಸಂಗೀತದಲ್ಲಿ ಮಂಗಳಕರವಾದ ರಾಗಗಳೆಂದು ಪರಿಗಣಿಸಲಾಗುವ ಶ್ರೀರಾಗ, ಧನ್ಯಾಸಿ, ವಸಂತ, ಅಸಾವೇರಿ, ಮೋಹನ, ಸೌರಾಷ್ಟ್ರ ಮತ್ತೆ ಸುರುಟಿ ರಾಗಗಳನ್ನು ಬಳಸಿದ್ದಾರೆ. ಪ್ರತೀ ಭಾಗಕ್ಕೂ ಸುಂದರ ಚಿಟ್ಟೆ ಸ್ವರಗಳನ್ನು ಜೋಡಿಸಿದ್ದಾರೆ. ಅಷ್ಟೇ ಅಲ್ಲದೆ,ಎಲ್ಲ ಭಾಗಗಳಲ್ಲೂ ಬಹಳ ಚಮತ್ಕಾರವಾಗಿ (ಎಷ್ಟೋ ಕಡೆ ಎರಡು ಪದಗಳ ನಡುವೆ ಬರುವಂತೆ) ಅರ್ಥವತ್ತಾಗಿ ರಾಗದ ಮುದ್ರೆ, ತಾಳದ ಮುದ್ರೆ ಯನ್ನು ಇಟ್ಟು ಸೊಗಸಿಸಿದ್ದಾರೆ. ಅಷ್ಟೇ ಅಲ್ಲದೆ, ರಚನೆಯ ಮುದ್ರೆ, ಭಾಷೆಯ ಮುದ್ರೆಯನ್ನೂ ಇಟ್ಟಿದ್ದಾರೆ. ಇಂತಹ ವಿಶೇಷದ ಮುದ್ರೆಗಳನ್ನು ನಾನು ಯಾವ ಬೇರೆ ರಚನೆಯಲ್ಲೂ ನೋಡಿಲ್ಲ.

ಸಂಕೇತಿ ಅನ್ನುವ ಭಾಷೆ ಮೂಲದಲ್ಲಿ ತಮಿಳುನಾಡಿನಿಂದ ವಲಸೆ ಬಂದು ಕರ್ನಾಟಕದಲ್ಲಿ ಸುಮಾರು ಕಡಿಮೆ ಎಂದರೆ ೫೦೦, ಹೆಚ್ಚೆಂದರೆ ೯೦೦ ವರ್ಷಗಳ ಹಿಂದೆ ಬಂದು ನೆಲೆಸಿದ ಒಂದು ಗುಂಪಿನವರ ಭಾಷೆ. ಮೊದಲಿಗೆ ಹೆಚ್ಚಾಗಿ ದಕ್ಷಿಣ ಕರ್ನಾಟಕದ ಹಾಸನ, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಇರುತ್ತಿದ್ದ ಇವರು ಎಲ್ಲ ವ್ಯವಹಾರಕ್ಕೂ ಕನ್ನಡವನ್ನೇ ಉಪಯೋಗಿಸುವುದರಿಂದ, ಸಂಕೇತಿ ಭಾಷೆ ಬರೀ ಮಾತಿನಲ್ಲಿ ಮಾತ್ರ ಉಳಿದು, ಅದನ್ನು ಬರೆಯುವ ಪದ್ಧತಿ ಇಲ್ಲ. ಈ ಭಾಷೆಯಲ್ಲಿ ಕೆಲವು ಸಂಪ್ರದಾಯದ ಹಾಡುಗಳಿದ್ದವಂತೆ. ಆದರೆ ಈ ರೀತಿ ಸಂಗೀತ ರಚನೆಯನ್ನು ಮಾಡಿರುವುದರಲ್ಲಿ ಡಾ.ಶ್ರೀಕಾಂತ್ ಮೂರ್ತಿಯವರೇ ಮೊದಲಿಗರು.

ಸಂಕೇತಿ ಭಾಷೆಯಲ್ಲಿದ್ದ ಮೂಲ ಸುಳಾದಿಯನ್ನು ಕನ್ನಡಿಸಿ ನಾನು ಇಲ್ಲಿ ಹಾಕಿದ್ದೇನೆ. ಅನುವಾದಿಸುವಾಗ ಮೂಲದ ಭಾವವನ್ನು ಹಾಗೂ ಪದಗಳನ್ನೂ ಆದಷ್ಟೂ ಉಳಿಸಿಕೊಳ್ಳಲು ಪ್ರಯತ್ನ ಮಾಡಿದೆನಾದರೂ, ಕೆಲವು ಕಡೆ ಮೂಲದ ಪ್ರಾಸವನ್ನು ಕಳೆಯಬೇಕಾಯಿತು. ಅಲ್ಲದೇ, ಮೂಲದಲ್ಲಿದ್ದ ಮುದ್ರೆಯನ್ನು ಒಂದೆರಡು ಕಡೆ ಉಳಿಸಿಕೊಳ್ಳಲಾಗದೇ ಹೋದೆ. ಅದಕ್ಕಾಗಿ ಶ್ರೀಕಾಂತರ ಕ್ಷಮೆ ಬೇಡುವೆ.

ರಾಮಾಯಣ ಮಂಗಳ ಸುಳಾದಿ:

ರಾಗ: ಶ್ರೀರಾಗ - ಧ್ರುವ ತಾಳ

ಶ್ರೀ ರಾಮಚಂದ್ರ ಬರುವ! ದಯವಿರಿಸಿ ಸದಾ ಜೊತೆ ಇರುವ!
ಆಶ್ರಯ ಕೊಡುವಾಲದಮರನವ! ಅಹಾ ಕಾರ್ಮುಗಿಲಿನ ತೆರದವ!

ಬಾಲ ಕಾಂಡ -ರಾಗ: ಧನ್ಯಾಸಿ - ಮಠ್ಯ ತಾಳ

ಮಾರೀಚ ಸುಬಾಹುಗಳ ಮಟ್ಟಿ ಯಾಗ ನಡೆಸಿದವ
ನಾರೀಮಣಿಗಂಟಿದ ನಶಿಸದಘವ ತರಿದವ
ಗೌರೀಶಧನುವ ಚಟಖಟಪಟನೇ ಮುರಿದವ
ಸೀರಾಂಕಜೆ(೧) ಧನ್ಯಾ ಸೀತೆಯ ತಾ ವರಿಸಿದವ

ಅಯೋಧ್ಯಾ ಕಾಂಡ -ರಾಗ: ವಸಂತ ರೂಪಕತಾಳ

ಪಿತನಪ್ಪಣೆ ತಪ್ಪದಂತೆ ವ್ಯಸನವಿರದೆ ನಡೆವವ
ಸೀತೆಲಕ್ಷ್ಮಣರೊಡನೆ ತಾನಡವಿಗೆ ತೆರಳಿದವ
ಮಿತಿಮೀರಿದ ರೂಪಕಾಂತಿಯಲಿ ಗುಹನಬಳಿ ಬಂದವ
ಮತ್ತೆ ಭರತನಳುವ ಸಂತಯಿಸಲು ಕೆರವನಿತ್ತವ

ಅರಣ್ಯ ಕಾಂಡ - ರಾಗ: ಅಸಾವೇರಿ ಜಂಪೆತಾಳ

ಮಹಾಋಷಿ ಕೊಟ್ಟ ಬಿಲ್ಲಂಬುಗಳ ಧರಿಸಿದವ
ಮಹಾಸುರೆಯ ಕೆಡುಕಿನಾಸೆಗಳ ಮಡುಹಿದವ
ಮಾಯಾಮಿಗಕವ ಸಾವೇರಿ ಬಂದುಸಿರನಡಗಿಸಿ
ಮಡದಿಯ ಕಾಣದೆ ಹಲುಬಿ ಜೊಂಪಲೆಚ್ಚರ ತಪ್ಪಿದವ

ಅರಣ್ಯ ಕಾಂಡ - ರಾಗ: ಮೋಹನ ತ್ರಿಪುಟ ತಾಳ

ಅನುಜ ಸೌಮಿತ್ರಿವೊಡನೆ ಮೋಹನ ಸುಪಂಪೆಗೆ ಬಂದವ - ರವಿ
ತನಯನ ಸಖನೆಂದೆಣಿಸಿ ಅವನಣ್ಣನ ಕೊಂದವ - ಕಡು
ದನುಜ ಮಡದಿಯ ಕದ್ದುಮುಚ್ಚಿದರಿಂದ ಬೆಂದವ - ಪವನ
ತನಯ ಜನನಿಗೆ ಸೂಚನೆಯ ಗುರುತಿನುಂಗುರವ ಕೊಟ್ಟವ


ಸುಂದರ ಕಾಂಡ -ರಾಗ: ಸೌರಾಷ್ಟ್ರ ಅಟ್ಟತಾಳ

ಶಂಕೆಯಿರದೇ ಹನುಮನ ಕಡಲ ದಾಟಲು ಹುರಿದುಂಬಿಸಿದವ
ಲಂಕೆಯನೆ ಕಲ್ಲೋಲಗೊಳಿಸಿ ಸ್ವರಾಷ್ಟ್ರಕೆ(೨) ಬಂದವನಪ್ಪಿದವ
ಜಿಂಕೆ ಜಾನಕಿಗೆ ಅಟ್ಟಹಾಸದಸುರ ಕೊಟ್ಟಳಲ ಕೇಳಿ ಬಿಕ್ಕಿದವ
ಸಂಕೇತ (೩)ಕೆ ಕೊಟ್ಟ ಚೂಡಾಮಣಿಯ ಮುಟ್ಟಿಸವರಿ ಎದೆಗೊತ್ತಿದವ

ಯುದ್ಧ ಕಾಂಡ- ರಾಗ: ಸುರಟಿ ಏಕತಾಳ

ವರ ಕಪಿಸೇನಾಬಲವ ಕಟ್ಟಿದವ
ಕಿರಿಯ ವಿಭೀಷಣನ ಮೆಚ್ಚಿದವ
ಶಿರ ಹತ್ತಿರುವವನ ಸುರುಟಿದವ
ಉರಿಹೊಕ್ಕವಳೆದೆಯನು ಆಳಿದವ
ಹರ ರಾಮೇಶ್ವರ(೪)ನಲಿ ನೆಲೆಸಿದವ
ಧರೆಗೇಕಮೇವ ಶ್ರೀಕಾಂತ()ನವ

ಜೊತೆ: (ಶ್ರೀರಾಗ, ತ್ರಿಶ್ರ ತ್ರಿಪುಟ ತಾಳ)

ಧರುಮದಿ ಕಲುಷ ನುಸುಳದಿರಲು ಪೊರೆವ
ಕರುಣೆಯ ಜೊತೆ (೬)ಮಂಗಳವನೀಯುವ


ಟಿಪ್ಪಣಿ:
(೧): ಸೀರಾಂಕಜೆ - ನೇಗಿಲನ್ನು ಧರಿಸಿದ ಜನಕನ ಮಗಳು, ಸೀತೆ
(೨): ಸೌರಾಷ್ಟ್ರ ಎನ್ನುವ ರಾಗವನ್ನು ಸ್ವರಾಷ್ಟ್ರ ಎಂಬ ಪದದಿಂದ ಸೂಚಿಸಿದೆ
(೩): ಸಂಕೇತ ಅನ್ನುವುದು ಮೂಲದಲ್ಲಿದ್ದ ಭಾಷಾ ಮುದ್ರೆಯೂ ಕೂಡ
(೪): ರಾಮೇಶ್ವರಂ, ಹಾಗೇ ಹಾಸನ ಜಿಲ್ಲೆಯ ರಾಮನಾಥಪುರದ ರಾಮೇಶ್ವರ ಎರಡೂ
(೫): ಶ್ರೀಕಾಂತ ಅನ್ನುವುದು ವಾಗ್ಗೇಯಕಾರ ಮುದ್ರೆ
(೬): ಜೊತೆ ಅನ್ನುವುದು ಸುಳಾದಿಯ ಜೊತೆ ಎನ್ನುವುದನ್ನು ಸೂಚಿಸುವ ಮುದ್ರೆ.

ಮಂಗಳಕರವಾದ ಈ ರಚನೆಯೊಡನೆ, ರಾಮನವಮಿ ಎಲ್ಲರಿಗೂ ಮಂಗಳವನ್ನು ತರಲೆಂಬ ಹಾರೈಕೆ ನನ್ನದು.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?