ಮತ್ತೊಂದು ಗ್ರಹಕೂಟ

ಬರುವ ವಾರ ಚಂದ್ರ ಶುಕ್ರ ಮಂಗಳ ಗಳ ಯುತಿ, ಅಂದ್ರೆ ಕಂಜಂಕ್ಷನ್ ಇದೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಇದು.ಇಲ್ಲಿ ಹಾಕಿರೋ ಚಿತ್ರದಲ್ಲಿ ಹಳದಿ ಚುಕ್ಕೆಗಳಿಂದಾದ ಗೆರೆಯೇ ಕ್ರಾಂತಿವೃತ್ತ (ecliptic). ಅಂದ್ರೆ, ಆಕಾಶದಲ್ಲಿ ಸೂರ್ಯ ಹೋಗೋ ದಾರಿ ಅಂದ್ಕೊಳಿ. ಏಪ್ರಿಲ್ ೨೩ ರ ದಿನ ಸೂರ್ಯ ಎಲ್ಲಿರ್ತಾನೆ ಅನ್ನೋದನ್ ಚಿತ್ರದಲ್ಲಿ ನೋಡಿ. ಸೂರ್ಯ ಕಂಡಮೇಲೆ,ನೀವು ಆಕಾಶದಲ್ಲಿ ನೋಡೋದೇನು ಬಂತು? ಸೂರ್ಯನ್ನ ಬಿಟ್ಟು, ಅಲ್ವಾ? ಆದ್ರೆ ಸೂರ್ಯನ್ನ ತೋರ್ಸಿರೋದು ಯಾಕೆ ಅಂದ್ರೆ, ಈ ಗ್ರಹಗಳಕೂಟವನ್ನ ಯಾವಾಗ ನೋಡ್ಬೇಕು ಅನ್ನೋ ಅಂದಾಜು ಬರೋದಕ್ಕೆ.

ಹಾಗೇ ಚಿತ್ರದಲ್ಲಿ ಸ್ವಲ್ಪ ಮೇಲೆ ಹೋದ್ರೆ, ನಿಮಗೆ ಶುಕ್ರ(Venus), ಮಂಗಳ (Mars), ಮತ್ತೆ ಚಂದ್ರ - ಈ ಮೂವರೂ ಎಲ್ಲಿರ್ತಾರೆ ಅನ್ನೋದೂ ಕಾಣತ್ತೆ. ಸೂರ್ಯನಿಗೂ, ಈ ಮೂವರಿಗೂ ಸುಮಾರಾಗಿ ಎರಡು ಅಡ್ಡ ಗೆರೆಗಳ ಅಂತರ ಇದೆ. ಪ್ರತಿಯೊಂದು ಅಡ್ಡಸಾಲೂ ಹದಿನೈದು ಡಿಗ್ರಿ, ಅಥವಾ ಒಂದು ಗಂಟೆ ಸಮಯ ಸೂಚಿಸುತ್ತೆ. ಅಂದರೆ, ಈ ಮೂರೂ ಹುಟ್ಟೋದು ಸೂರ್ಯ ಹುಟ್ಟೋ ಸುಮಾರ ೨ ಗಂಟೆ ಮೊದಲು. ಆದ್ರೆ, ಸಾಧಾರಣವಾಗಿ ದಿಗಂತದಲ್ಲಿ ಯಾವಾಗ್ಲೂ ಸ್ವಲ್ಪ ಮೋಡ್ವೋ ಗೀಡ್ವೋ ಇರತ್ತಲ್ಲ. ಹಾಗಾಗಿ, ಸೂರ್ಯ ಹುಟ್ಟೋಕೆ ಸುಮಾರು ಒಂದು ಗಂಟೆಯಿಂದ ಮುಕ್ಕಾಲು ಗಂಟೆಯ ನಡುವೆ ಇವುಗಳನ್ನ ನೋಡೋ ಅವಕಾಶ ಇರತ್ತೆ.

ಇನ್ನೊಂದ್ ವಿಷಯ ಇದು ಅಮಾವಾಸ್ಯೆಗೆ ತೀರಾ ಹತ್ತಿರವಾಗಿರೋದ್ರಿಂದ, ಚಂದ್ರ ಕಾಣೋದು ಸ್ವಲ್ಪ ಕಷ್ಟವೇ! ಬೇಜಾರ್ಮಾಡ್ಕೋಬೇಡಿ ಅಂತ ಚಿತ್ರದಲ್ಲಿರೋ ಇನ್ನೊಂದೆರಡು ವಿಶೇಷಗಳನ್ನ ತೋರಿಸ್ಬಿಡ್ತೀನಿ.

ಅಲ್ಲಿ Hamal ಅಂತ ಇದೆಯಲ್ಲ, ಅದನ್ನೇ ನಾವು ಅಶ್ವಿನಿ ನಕ್ಷತ್ರ ಅನ್ನೋದು. ಈಗ ಏಪ್ರಿಲ್ ೧೪ಕ್ಕೆ ಮೇಷ ಸಂಕ್ರಮಣ ಆಯ್ತಲ್ವ? ಅದು ಯಾಕೆ ಅಂದ್ರೆ ಅವತ್ತು ಸೂರ್ಯ ಅಶ್ವಿನೀ ನಕ್ಷತ್ರವನ್ನ ಪ್ರವೇಶಿಸ್ದ. ಈಗ ದಿನಾ ಮುಂದೆ ಹೋಗ್ತಾ ಹೋಗ್ತಾ, ಸುಮಾರು ೧೩ ದಿನ ಆದ್ಮೇಲೆ ಭರಣೀ ನಕ್ಷತ್ರಕ್ಕೆ ಹೋಗ್ತಾನೆ. ಈಗ Hamal ಇಂದ ಕೆಳಗೆ ಚಿತ್ರದ ತುದೀಲಿ ಒಂದು ನಕ್ಷತ್ರ ಇದೆಯಲ್ಲ (ಅಶ್ವಿನಿಗೆ ಅದನ್ನ ಸೇರಿಸಿದೆ), ಅದೇ ಭರಣಿ ನಕ್ಷತ್ರ.

ಇನ್ನು ಚಿತ್ರದ ಎಡಗಡೇಲಿ M31 ಅಂತ ಒಂದಿದೆಯಲ್ಲ, ಅದೇ ಆಂಡ್ರೋಮೀಡಾ ಗಾಲಕ್ಸಿ. ನಮ್ಮ ಆಕಾಶದಲ್ಲಿ ಬರೀ ಕಣ್ಣಿನಲ್ಲಿ ಕಾಣೋ ಅತೀ ದೂರದ ವಸ್ತು (ಇದಕ್ಕೆ ವಸ್ತು ಅನ್ನೋ ವಿವರ ಸರಿ ಇಲ್ಲ!)ಇದೇನೇ.

ಮತ್ತೆ ಹಾಗೇ ಒಂದು ನಾಕು ನಕ್ಷತ್ರದ ಚೌಕ ಜೋರಾಗಿ ಕಾಣ್ತಿದೆಯಲ್ಲ, ಅದನ್ನ ಪೆಗಾಸಸ್ ಅಂತಾರೆ- ನಮ್ಮ ದೇಶದಲ್ಲಿ ಉತ್ತರಾಭಾದ್ರ ಅಂತ ಕರೆದ ನಕ್ಷತ್ರ ಇದೇನೆ (ಚೌಕದ ಬಲಭಾಗದ ಎರಡು ನಕ್ಷತ್ರಗಳಿಗೆ ಈ ಹೆಸರು).

-ಹಂಸಾನಂದಿ

(ಚಿತ್ರ ಚೆನ್ನಾಗಿ ನೋಡ್ಬೇಕಾದ್ರೆ, ಚಿತ್ರದ ಮೇಲೆ ಚಿಟಕಿಸಿ.ಚಿತ್ರವನ್ನ Alcyone Ephimeris ಬಳಸಿ ತೆಗೆದುಕೊಂಡೆ)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?