Posts

Showing posts from May, 2009

ಸ್ಪೆಲಿಂಗ್ ಪರಿಣತೆ ಕಾವ್ಯ

ಕನ್ನಡದಂಥ ಭಾಷೆಯಲ್ಲಿ ಪದಗಳನ್ನು ಬರೆಯುವುದೂ, ಉಚ್ಚರಿಸುವುದೂ ಸುಮಾರು ಒಂದೇ ರೀತಿ ಇರುವಾಗ, ಅದರಲ್ಲಿ ಸ್ಪೆಲಿಂಗ್ ಪ್ರಶ್ನೆ ಅಷ್ಟಾಗಿ ಕಾಣಬರುವುದಿಲ್ಲ. ಆದರೆ, ಇಂಗ್ಲಿಷ್ ನಂತಹ ನುಡಿಗಳಲ್ಲಿ ಅದೊಂದು ತೊಡಕೇ - ಕೆಲವರಿಗೆ :)

ಯುಎಸ್ಎ ನಲ್ಲಿ ಪ್ರತಿವರ್ಷ ಸ್ಪೆಲಿಂಗ್ ಬೀ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತೆ. ಕೆಳಗಿನ ಹಲವಾರು ಹಂತಗಳಲ್ಲಿ ಗೆದ್ದು ಬಂದ ೧೧ ಮಕ್ಕಳ ನಡುವೆ ೧೩ ವರ್ಷದ ಕಾವ್ಯ ಶಿವಶಂಕರ್ ಎಂಬ ಮೈಸೂರು ಮೂಲದ ಹುಡುಗಿ ೨೦೦೯ ರ ಸ್ಪೆಲಿಂಗ್ ಬೀ ಯಲ್ಲಿ ಅಗ್ರೇಸರಳಾಗಿ ಆಯ್ಕೆಯಾಗಿದ್ದಾಳೆ. ಇವಳು ಈ ಸ್ಪರ್ಧೆಯಲ್ಲಿ ೩೦೦೦೦ ಡಾಲರ್ ಮೊತ್ತದ ಹಣವನ್ನೂ. ಮತ್ತಿತರ ಬಹುಮಾನಗಳನ್ನೂ ಗೆದ್ದಿದ್ದಾಳೆ. ಇವಳಿಗೆ ಈ ಸ್ಪರ್ಧೆಗೆ ತರಪೇತಿ ಕೊಟ್ಟದ್ದು ತಂದೆ ಮಿರ್ಲೆ ಶಿವಶಂಕರ್.

ಕಾವ್ಯಳೊಡನೆ ಒಂದು ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ:

http://www.kannada.blogkut.com/

-ಹಂಸಾನಂದಿ

ಕೇದಗೆಯ ಕಂಪು

ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು
ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನುಗಳು

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಾಗ್ರಾಯ ಸ್ವಯಮಾಯಾಂತಿಷಟ್ಪದಾಃ ||

*ಅಗ್ಗಳ =ಉತ್ತಮ,ಶ್ರೇಷ್ಠ
**ರಾಯಸ = ದೂತ, ಹರಿಕಾರ, ಓಲೆಕಾರ

-ಹಂಸಾನಂದಿ

ಸಂಸಾರೊಂದಿಗರು

ದೂರದಿಂದಾರ ಮನೆಗೆ
ಅತಿಥಿಗಳು ಸಂತಸದಿ
ಬರುವರೋ - ಅವನೀಗ
ದಿಟದಿ ಸಂಸಾರೊಂದಿಗ.

ಮಿಕ್ಕವರಿಗೆ ಏನೆನಬೇಕು
ಎಂದು ಕೇಳುವೆಯಾ?
ಅಲ್ಲವೇ ಅವರು ಬರಿಯ
ಮನೆಯ ಕಾವಲಿನವರು?

ಸಂಸ್ಕೃತ ಮೂಲ:

ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತಾಃ |
ಗೃಹಸ್ಥಃ ತು ವಿಜ್ಞೇಯಾಃ ಶೇಷಾಸ್ತು ಗೃಹರಕ್ಷಿಣಃ ||

-ಹಂಸಾನಂದಿ

ಮಂಗನ ಕೈಗೆ ಮಾಣಿಕ್ಯ

ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ

ಸಂಸ್ಕೃತ ಮೂಲ:

ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ ||

मा दद्यात् खलसङ्घेषु कल्पनामधुरागिरः।
यथा वानरहस्तेषु कोमलाः कुसुमस्रजः॥

(ಈ ಸುಭಾಷಿತವನ್ನು ಓದಿದ್ದು http://samskrtam.wordpress.com/ ನಲ್ಲಿ)

-ಹಂಸಾನಂದಿ

ಅಮೃತವರ್ಷಿಣಿ

ಸ್ವಲ್ಪ ದಿವಸಗಳ ಹಿಂದೆ ಉದಯ ಟೀವೀನಲ್ಲಿ ಈಚೆಗೆ ತೆರೆಕಂಡ ಒಂದು ಸಿನಿಮಾ ತಂಡದವರ ಜೊತೆ ಮುಖಾಮುಖಿ ಮಾತುಕತೆ ಬರ್ತಾ ಇತ್ತು. ನಿರೂಪಕಿ ನಡುವೆ ಈಗ ಒಂದು ಹಾಡು ಕೇಳೋಣ್ವಾ ಅಂತ ಒಂದು ಹಾಡು ಹಾಕಿದರು. ಆ ಹಾಡು ನನಗಂತೂ ಕೂಡಲೆ ಹಿಡಿಸಿಬಿಡ್ತು.

ನೀವೂ ಆ ಹಾಡನ್ನ ಇಲ್ಲಿಂದ ಕೇಳಬಹುದು ನೋಡಿ. ಇದಕ್ಕೆ ಸಂಗೀತ ಕೊಟ್ಟಿರೋದು ಎ.ಟಿ.ರವೀಶ್. ಹಾಡಿರೋದು ಹರಿಹರನ್ ಮತ್ತೆ ಚಿತ್ರಾ. ಚಿತ್ರ - ಸೀನ.

ಜೀವ ಮಿಡಿಯುತಿದೆ ಒಲವಿನ ಸ್ವರಗಳಲಿ

ಈ ಹಾಡು ನನಗೆ ಹಿಡಿಸೋದಕ್ಕೆ ಅದು ನನಗೆ ಇಷ್ಟವಾಗೋ ಒಂದು ರಾಗದಲ್ಲಿ ಇರೋದೂ ಒಂದು ಕಾರಣ ಇರಬಹುದು. ಸಾಧಾರಣವಾಗಿ ಚಿತ್ರಗೀತೆಗಳು ಇಂತಹದ್ದೇ ಶಾಸ್ತ್ರೀಯ ರಾಗದಲ್ಲಿ ಇರಬೇಕು ಅಂತ ಏನೂ ಇಲ್ಲ. ಆದ್ರೆ ಈ ಹಾಡು ಮಾತ್ರ ಪೂರ್ತಿ ಅಮೃತವರ್ಷಿಣಿ ರಾಗದಲ್ಲೇ ಯೋಜಿತವಾಗಿದೆ.

ಹಾಗಂತ ಇದೇನು ಚಿತ್ರಗೀತೆಗಳಲ್ಲಿ ಅಮೃತವರ್ಷಿಣಿ ರಾಗವನ್ನ ಬಳಸಿರೋದು ಇದೇನೂ ಮೊದಲೇನಲ್ಲ. ಉದಾಹರಣೆಗೆ ಆನಂದ ಭೈರವಿ ಅನ್ನೋ ಚಿತ್ರದ ಚೈತ್ರದ ಕುಸುಮಾಂಜಲಿ ಅನ್ನೋ ಹಾಡು. ಇದೂ ಕೂಡ ಪೂರ್ತಿ ಈ ರಾಗದಲ್ಲೇ ಇರೋದು.

ಈಗ ಕೇಳಿ: ಚೈತ್ರದ ಕುಸುಮಾಂಜಲಿ ಅನ್ನೋ ಹಾಡನ್ನ. ಚಿತ್ರ ಆನಂದಭೈರವಿ. ಹಾಡಿರೋದು ಎಸ್.ಪಿ.ಬಾಲಸುಬ್ರಹ್ಮಣ್ಯಂ.

(ಅಂದ್ ಹಾಗೆ, ನೀವು ಕೇಳಿಲ್ದಿದ್ರೆ, ಈ ಚಿತ್ರದ ಬೇರೆ ಹಾಡುಗಳನ್ನೂ ಕೇಳಿ, ಸುಮಾರು ಎಲ್ಲವೂ ಚೆನ್ನಾಗಿವೆ!)

ಅಮೃತ ವರ್ಷಿಣಿ ಅನ್ನೋದು ಹೆಸರಿಂದಲೇ ಮಳೆಗೆ ಸಂಬಂಧಿಸಿರೋ ರಾಗ. ಅದಕ್ಕೇ ಅಂತಲೇ ಈ ಮುತ್ತಿನ ಹಾರ ಚಿತ್ರದ ಈ ಚಿತ್ರಗೀತೆ…

ಯಾರೆದುರು ಹೊಗಳಿಕೊಳ್ಳಬೇಕು?

ಬಲ್ಲವರೆದುರು ಹಿರಿಮೆಯ ಹೇಳದಿರು
ಅರಿತೇ ಅರಿಯುವರು ತಾವಾಗೇ;
ಹೇಳದಿರು ಹಿರಿಮೆಯ ಹುಂಬರೆದುರು
ಅರಿತವರ ನುಡಿಯ ಕೇಳದವರಿಗೆ!

ಸಂಸ್ಕೃತ ಮೂಲ:

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯಃ ಸ್ವಯಂ
ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಃ ಪ್ರೋಕ್ತಂ ನ ವೇತ್ತಿ ಸಃ||

-ಹಂಸಾನಂದಿ

ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

ಸಾಯೋದ್ ಹೇಗಿರತ್ತೆ ಅನ್ನೋದ್ನ
ತಿಳಿಯೋದ್ ಕಷ್ಟ ಇಲ್ಲ;

ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ
ಮಾತ್ಗೆದುರಾಡೋ ಬಂಟ, ಇಲ್ವೇ
ಹಾವ್ ಹೊಕ್ಕ್ ಮನೇಲ್ವಾಸ;

ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ
ನಾವಿರುವಲ್ಲೇ ಗೊತ್ತಾಗತ್ತಲ್ಲ!

ಸಂಸ್ಕೃತ ಮೂಲ (ಗರುಡಪುರಾಣ ೧-೧೦೮-೨೫):

ದುಷ್ಟಾ ಭಾರ್ಯಾ ಶಠಂ ಮಿತ್ರಂ ಭೃತ್ಯಶ್ಚೋತ್ತರದಾಯಕಃ |
ಸಸರ್ಪೇ ಚ ಗೃಹೇ ವಾಸೋ ಮೃತ್ಯುರೇವ ನ ಸಂಶಯಃ ||


-ಹಂಸಾನಂದಿ

ಕೊರತೆಯಲೂ ಕಾಣುವ ಕಾಂತಿ

ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುಂಡು ಗೆದ್ದಿಹ ಯೋಧ
ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರಿ ಹರಿವಹೊಳೆ
ಹುಣ್ಣಿಮೆಯ ಹಿಂದಿನಿರುಳ ಚಂದಿರ ಬೇಟದಲಿ ಬಸವಳಿದ ಹರೆಯದ ಹುಡುಗಿ
ಕೊರತೆಯಲೆ ಮೆರುಗುವರು ಕೊಡುಗೈಯಲಿ ನೀಡಿ ಸಿರಿಯಳಿದವರ ತೆರದಿ

ಸಂಸ್ಕೃತ ಮೂಲ - ಭರ್ತೃಹರಿ

ಮಣಿ ಶಾಣೋಲ್ಲೀಢಃ ಸಮರವಿಜಯೀ ಹೇತಿದಲಿತೋ
ಮದಕ್ಷೀಣೋ ನಾಗ: ಶರದಿ ಸರಿತಾಶ್ಯಾನಪುಲಿನಾ |
ಕಲಾಶೇಷಶ್ಚಂದ್ರಃ ಸುರತಮೃದಿತಾ ಬಾಲವನಿತಾ
ಸನಿಮ್ನಾ ಶೋಭಂತೇ ಗಲಿತವಿಭವಾಶ್ಚಾರ್ಥಿಷು ನರಾಃ ||

मणिः शणोल्लीढः समरविजयी हेतिदलितो
मदक्षीबो नागः शरदि सरिताश्यानपुलिना ।
कलाशेषश्चन्द्रः सुरतमृदिता बालवनिता
सनिम्ना शोभन्ते गलितविभवाश्चार्थिषु नराः ॥

-ಹಂಸಾನಂದಿ

ಮಾತು ಎನ್ನುವ ಒಂದೇ ಒಡವೆ

ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು


ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾಃ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ |
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ||

(ಮೂಲದಲ್ಲಿರುವ ಉತ್ತಮ ಪುರುಷ -third person, ಕನ್ನಡಿಸುವಾಗ ಮಧ್ಯಮ ಪುರುಷ ವಾಗಿ ಮಾರ್ಪಡಿಸಿರುವೆ. ಅದುಳಿದು ಉಳಿದದ್ದೆಲ್ಲ ಹಾಗೇ ಇದೆ)

-ಹಂಸಾನಂದಿ