ಶ್ರೀ ವರಲಕ್ಷ್ಮೀ ನಮಸ್ತುಭ್ಯಂ

ಈ ಶುಕ್ರವಾರ ಜುಲೈ ೩೧, ೨೦೦೯ ವರಲಕ್ಷ್ಮಿಯ ಹಬ್ಬ. ನಾವು ಆಚರಿಸುವ ಹಬ್ಬಗಳಲ್ಲಿ ಹೆಚ್ಚಿನವು ಚಾಂದ್ರಮಾನ ಮಾಸ-ತಿಥಿಗಳ ಆಧಾರದ್ದು. ಅಂದರೆ ಭಾದ್ರಪದ ಚೌತಿಯ ದಿನ ಗಣಪತಿ ಹಬ್ಬ. ಚೈತ್ರ ಶುದ್ಧ ನವಮಿಯಂದು ರಾಮನವಮಿ ಇತ್ಯಾದಿ. ಕೆಲವು ಅಪವಾದಗಳಿವೆ ಅನ್ನಿ. ಅವುಗಳಲ್ಲೊಂದು ವರ ಮಹಾಲಕ್ಷ್ಮಿಯ ಹಬ್ಬ.

ಶ್ರಾವಣದ ಹುಣ್ಣಿಮೆಯ ಹಿಂದಿನ ಶುಕ್ರವಾರ ಬರುವ ಈ ಹಬ್ಬ ನನಗೆ ತಿಳಿದ ಹಾಗೆ ದಕ್ಷಿಣ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಹೆಸರುವಾಸಿ. ಚಿಕ್ಕಂದಿನಲ್ಲಿ ಈ ಹಬ್ಬದ ಬಗ್ಗೆ ಒಂದು ಕಥೆಯನ್ನ ಅಜ್ಜಿ ಹೇಳುತ್ತಿದ್ದಿದ್ದು ನೆನಪಿದೆ.

ಕಳಸಾಪುರವೆಂಬ ಊರಿದೆ ( ಹಾಸನ/ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿ). ಒಂದಾನೊಂದು ಕಾಲದಲ್ಲಿ ಆ ಊರಿನಲ್ಲಿ ಒಬ್ಬಾಕೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಬೇಕೆಂದು ಬಗೆಬಗೆಯ ಖಾದ್ಯಗಳನ್ನು ಮಾಡಿದ್ದಳು. ಸಂಜೆ ನಡೆಸಬೇಕಾದ ಪೂಜೆಯೆಂದು ಸಂಜೆಯವರೆಗೆ ಎಲ್ಲರಿಗೂ ಉಪವಾಸ. ಪಾಪ, ಮಕ್ಕಳಿಗೆ ತಡೆದೀತೇ? ಆದರೆ ತಾಯಿ ಕಟ್ಟುನಿಟ್ಟಿನವಳು. ಮಕ್ಕಳಾ, ಸ್ವಲ್ಪ ಹೊತ್ತು ಕಾಯಿರಿ. ಇನ್ನೇನು ಪೂಜೆ ವೇಳೆ ಅಂತ ಏನೋ ಸಮಾಧಾನ ಮಾಡಿ, ನೀರು ತರಲೆಂದು ಕೆರೆಗೆ ಹೊರಟಳು. ಮಕ್ಕಳು ಪಾಪ ಸುಸ್ತಾಗಿ ಕೂತರು.

ಅದೇನೋ ತಾಯಿಗೆ ಮಕ್ಕಳ ಮೇಲೆ ಕನಿಕರವಾಯಿತೆಂದು ತೋರುತ್ತೆ. ಹೊರಗೆ ಹೋದ ತಾಯಿ ಐದೇ ನಿಮಿಷಕ್ಕೆ ಮರಳಿ ಬಂದು ಮಕ್ಕಳನ್ನ ಕರೆದು "ಹೋಕ್ಕೊಳಲಿ, ಸ್ವಲ್ಪ ತಿನ್ನಿ ತುಂಬಾ ಹೊತ್ತಾಗಿದೆ -ಇನ್ನೂ ಪೂಜೆ ಮುಗಿಯೋ ಹೊತ್ತು ಅಂದ್ರೆ ಅಲ್ಲೂ ತನಕ ನಿಮಗೆ ತಡೆಯೋಕಾಗಲ್ಲ ಅಂತ" ಹೇಳಿ, ಒಬ್ಬಟ್ಟು, ಅತಿರಸ ಎಲ್ಲ ತಿನ್ನೋದಕ್ಕೆ ಕೊಟ್ಟು ಅಡಿಗೇಮನೆ ಹೊಕ್ಕಳು. ಮಕ್ಕಳು ಖುಷಿಯಾಗಿ ತಿನ್ನ ತೊಡಗಿದರು, ಅಮ್ಮನ ಮನಸ್ಸು ಬದಲಾಯಿತಲ್ಲ ಅಂತ.

ಆದರೆ, ತಿಂಡಿ ತಿಂದು ಮುಗಿಸುವಷ್ಟರಲ್ಲೇ ಅಮ್ಮ ಮತ್ತೆ ಬಂದು "ಇದೇನಿದು, ನಾನಿಲ್ಲದಾಗ ಮೀಸಲಿಟ್ಟಿದ್ದ ನೈವೇದ್ಯವೆಲ್ಲ ತಿಂದಿದ್ದೀರಲ್ಲ!" ಅಂತ ಬೈಯತೊಡಗುವುದೇ? ಮಕ್ಕಳಂತೂ ಕಕ್ಕಾಬಿಕ್ಕಿ. "ಅಯ್ಯೋ, ನೀವೇ ಕೊಟ್ಟಿರಲ್ಲ? ಕೊಟ್ಟು ಮತ್ತೆ ಅಡಿಗೆ ಮನೆಗೇ ಹೋದರಲ್ಲ? " ಅಂತ ಮಕ್ಕಳು ಅಂದರೆ ಕಕ್ಕಾಬಿಕ್ಕಿಯಾಗುವ ಸರದಿ ಅಮ್ಮನದ್ದು. ತಕ್ಷಣವೆ ಅಡಿಗೇ ಮನೆಗೆ ಹೋಗಲು, ಹಿತ್ತಲ ಬಾಗಿಲಿಂದ ಯಾರೋ ಹೆಂಗಸು ಹೊರಹೋಗುತ್ತಿದ್ದದ್ದು ಕಾಣಿಸಿತು. ಓಡಿ ಆಕೆಯನ್ನು ಹಿಡಿಯ ಹೋದ ತಾಯಿಗೆ ಸಿಕ್ಕಿದ್ದು ಆ ಹೆಂಗಸಿನ ಸೀರೆಯ ಸೆರಗು ಮಾತ್ರ. ಹಾಗೆ ಹೊರಗೆ ಹೋದ ತಾಯಿಯ ರೂಪಧಾರಿ ಲಕ್ಷ್ಮಿಯ ಸೀರೆಯ ಸೆರಗಿನ ಭಾಗವನ್ನು ಈಗಲೂ ಆ ಮನೆಯಲ್ಲಿ ವರಲಕ್ಷ್ಮಿಯ ಸೀರೆಯ ಸೆರಗನ್ನಿಟ್ಟು ಪೂಜೆ ಮಾಡುತ್ತಾರಂತೆ. ಇಷ್ಟು ನಮ್ಮ ಅಜ್ಜಿ ಹೇಳುತ್ತಿದ್ದ ಕಥೆಯ ಸಾರಾಂಶ.

ಕಥೆಯ ಪಾಡಿಗೆ ಹಾಗಿರಲಿ. ಈ ದಿನಕ್ಕೆ ತಕ್ಕ ಒಂದು ಒಳ್ಳೇ ಹಾಡು ಕೇಳಿಸಲೇ? ’ಶ್ರೀ ವರಲಕ್ಷ್ಮೀ ನಮಸ್ತುಭ್ಯಂ’ ಎಂದು ಆರಂಭವಾಗುವ ಈ ಕೃತಿ ಮುತ್ತುಸ್ವಾಮಿ ದೀಕ್ಷಿತರ ರಚನೆ. ಮೊದಲ ಪದವೇ ರಾಗಮುದ್ರೆ! ಗೊತ್ತಾಯ್ತಲ್ಲ? ಶ್ರೀರಾಗದಲ್ಲಿರುವ ಈ ರಚನೆಯಲ್ಲಿ ದೀಕ್ಷಿತರು ಗೋಪುಚ್ಚಯತಿಯ ಪ್ರಯೋಗ ಮಾಡಿದ್ದಾರೆ. ಗೋಪುಚ್ಚಯತಿ- ಅಂದರೆ ಹಸುವಿನ ಬಾಲದಂತೆ, ಮೊದಲು ದೊಡ್ಡದಾಗಿಯೂ, ಹೋಗುತ್ತ ಹೋಗುತ್ತ ಚಿಕ್ಕದಾಗುವ ಒಂದು ಪದಾಲಂಕಾರ. ’ಶ್ರೀ ಸಾರಸಪದೇ ರಸಪದೇ ಸಪದೇ ಪದೇ ಪದೇ’ ಎನ್ನುವ ಸಾಲಿನಲ್ಲಿ ಈ ಅಲಂಕಾರವನ್ನ್ನು ನೋಡಬಹುದು. ಕರ್ನಾಟಕ ಸಂಗೀತದಲ್ಲಿ ಶ್ರೀರಾಗವು ಹಿಂದಿನಿಂದಲೂ ಮಂಗಳಕಾರಿ ಎನ್ನುವ ನಂಬುಗೆಗೆ ಪಾತ್ರವಾದದ್ದು. ಹಾಗಾಗೇ, ಬಹಳ ಸಂಗೀತ ಶಾಸ್ತ್ರ ಗ್ರಂಥಗಳು ರಾಗಗಳನ್ನು ವಿವರಿಸತೊಡಗುವಾಗ ಶ್ರೀರಾಗದಿಂದಲೋ, ಇಲ್ಲಾ ಶ್ರೀರಾಗಮೇಳದಿಂದಲೇ ತೊಡಗುತ್ತಿದ್ದ ರೂಢಿ ಇತ್ತು. ಘನರಾಗವೆಂದು ಪರಿಗಣಿಸಲ್ಪಟ್ಟಿರುವ ಶ್ರೀರಾಗ, ಇವತ್ತೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

ಮಂಗಳಕಾರಿಯಾದ ಈ ದಿನ ಕೇಳಲು ಮಂಗಳಕಾರಿಯಾದ ರಾಗದಲ್ಲಿರುವ ಈ ಹಾಡು ಸೂಕ್ತ ಅನಿಸಿ, ಇಲ್ಲಿ ಹಾಕುತ್ತಿದ್ದೇನೆ.


-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ