ಯಾರಿಗೆ ಯಾರ ಜೊತೆ?

ಬಂಗಾರ ರತುನದ ಗಾಜಿನ ಮಣಿಗಳ
ಒಟ್ಟಿಗೆ ಒಂದೇ ಸಾಲಲಿ ತಿಳಿಯದೆ
ಹೆಣ್ಗಳು ಪೋಣಿಸುವುದರಲಿ ಅಚ್ಚರಿಯಿಲ್ಲ;

ಒಂದೇ ಸಾಲಿನಲಿ ಪಂಡಿತ ಪಾಣಿನಿ
ಇಂದ್ರನ ಹಾಗೂ ಹರೆಯದ ಯುವಕರ
ನಾಯಿಕುನ್ನಿಗಳೊಡನೆ ಸೇರಿಸಿಹನಲ್ಲ!ಸಂಸ್ಕೃತ ಮೂಲ:


ಕಾಚಂ ಮಣಿಂ ಕಾಂಚನಮೇಕ ಸೂತ್ರಂ
ಮುಗ್ಧಾ ನಿಬದ್ಧಂತಿ ಅತ್ರ ಕಿಮತ್ರ ಚಿತ್ರಂ
ವಿಚಾರವಾನ್ ಪಾಣಿನಿರೇಕ ಸೂತ್ರೇ
ಶ್ವಾನಂ ಯುವಾನಂ ಮಘವಾನಮಾಹ

-ಹಂಸಾನಂದಿ

ಕೊ: ಸಂಸ್ಕೃತದ ಸೂತ್ರ ಅನ್ನುವುದರ ಶ್ಲೇಷವನ್ನು ಉಳಿಸಿಕೊಳ್ಳಲು ’ಸಾಲು’ ಅನ್ನುವ ಪದ ಬಳಸಿದ್ದೇನೆ.ಸರವನ್ನು ಒಂದು ದಾರದಲ್ಲಿ ಪೋಣಿಸುವಂತೆ, ಒಂದು ಸಾಲಲ್ಲಿ ಪೋಣಿಸುವುದು ನಿಜ ತಾನೇ!

ಕೊ.ಕೊ: ಪಾಣಿನಿಯು ಅವನ ಅಷ್ಟಾಧ್ಯಾಯಿಯಲ್ಲಿ ವ್ಯಾಕರಣದ ನಿಯಮಗಳನ್ನು ಸೂತ್ರ ರೂಪದಲ್ಲಿ ಕೊಟ್ಟಿದ್ದಾನೆ. ಅದರಲ್ಲಿ ೬.೪.೧೩೩ ಸೂತ್ರ ಹೀಗಿದೆ -ಶ್ವ ಯುವ ಮಘೋಣಾಂ ಅತದ್ಧಿತೇ (६. ४. १३३ श्व(न्)युव(न्)मघोणां अतद्धिते ।). ಇದು ಯಾವ ನಿಯಮವನ್ನು ಹೇಳುತ್ತದೆ ಅಂತ ನನಗೆ ಗೊತ್ತಿಲ್ಲವಾದರೂ, ಈ ಮೂರು ಪದಗಳು ಒಂದು ನಿಯಮಕ್ಕೆ ಒಳಗಾಗುತ್ತವೆ ಅಂತಷ್ಟು ಮಾತ್ರ ನಿಖರವಾಗಿ ಹೇಳಬಹುದು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?