Posts

Showing posts from January, 2010

ಜೊತೆಬಾಳುವೆ

ಅಡವಿಯ ತೊರೆದ ಹುಲಿಯ ಕೊಲುವರು
ಹುಲಿಯಿರದ ಅಡವಿಯನೆ ಕಡಿವರು
ಕಾಯುವುದೊಳಿತು ಹುಲಿ ಅಡವಿಯನು
ನೀಡುವುದುಚಿತ ಅಡವಿ ಹುಲಿಗೆ ಕಾವಲು

ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):

ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|
ತಸ್ಮಾತ್ ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್ ||

-ಹಂಸಾನಂದಿ

ಕೈಗೆಟುಕುವ ದೇವರು

ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದು
ಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?

ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||

-ಹಂಸಾನಂದಿ

ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ

ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ ಯಶಸ್ಸು ಸಿಗುವಲ್ಲಿ ಅದೃಷ್ಟದ ಪಾತ್ರ - ಇವುಗಳ ಬಗ್ಗೆ ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು. ಆಗ ಕೇಳಿದ ಒಂದು ಹಳೇ ಕಥೆ - "ಮಾಡುವ ಕೆಲಸ ಸರಿಯಾಗಬೇಕಾದರೆ ಅದೃಷ್ಟ ಬೇಕೇ ಬೇಕು. ಹೇಗೆ? ನಾವು ಬತ್ತದ ಪೈರು ಬೆಳೀಬೇಕು ಅಂತಿಟ್ಕೊಳ್ಳಿ. ಮೊದಲು ನಮ್ಮದೇ ಆಗ ಜಮೀನಿರ್ಬೇಕು, ಅಥವಾ ಗುತ್ತಿಗೆ ತೊಗೊಬೇಕು. ಮತ್ತೆ ಅದನ್ನ ಉತ್ತು, ಬಿತ್ತು, ನಾಟಿ ಮಾಡಿ, ಕಳೆ ತೆಗೆದು ಎಲ್ಲಾ ಕೆಲಸ ಆಗಬೇಕಾದ ಸಮಯದಲ್ಲಿ ಮಾಡಬೇಕು. ಜೊತೆಗೆ ಸರಿಯಾದ ಸಮಯದಲ್ಲಿ ಮಳೆಯೂ ಬರಬೇಕು. ಈಗ ಮಳೆ ಸುರಿಯೋದು ನಮ್ಮ ಕೈಲಿದೆಯೇ? ಇಲ್ಲ. ಅದೇ ಅದೃಷ್ಟ. ಆದರೆ, ಮಳೆ ಚೆನ್ನಾಗಿ ಬರುವಾಗ, ಅದಕ್ಕೆ ಮೊದಲು ಮಾಡಬೇಕಾದ ಉತ್ತು ಬಿತ್ತುವ ಕೆಲಸಗಳನ್ನು ಮಾಡಿರದಿದ್ದರೆ ಪಯಿರನ್ನ ಬೆಳೆಯೋಕೆ ಸಾಧ್ಯವೇ?"

ಮನುಷ್ಯ ಪ್ರಯತ್ನ ಎಷ್ಟು ಅಗತ್ಯ ಅನ್ನೋದರ ಬಗ್ಗ ಕೇಳುಗರು ಫೋನ್ ನಲ್ಲಿ ಮಾತಾಡಿ ತಮ್ಮ ನಿಲುವು, ಅನುಭವ ಇವುಗಳನ್ನ ಇತರ ಕೇಳುಗರ ಜೊತೆ ಹಂಚಿಕೋತಿದ್ದರು. ನಾನೂ ಕೂಡ ಫೋನಿಸಿ, ಎಡರು ತೊಡರುಗಳ ಪ್ರಯತ್ನಗಳನ್ನ ಕೈ ಬಿಡದೇ ನಡೆಸುವವರೇ ಉತ್ತಮರು ಅಂತ ಅರ್ಥ ಬರುವ ಈ ಸಂಸ್ಕೃತ ಸುಭಾಷಿತನ್ನ, ಮತ್ತೆ ಅದರ ತಿರುಳನ್ನ ಇಂಗ್ಲಿಷ್ ನಲ್ಲಿ ಹೇಳಿದೆ.

ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ
ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನ…

ಹಣೆಬರಹ

Image
ಮುಳ್ಳು ಜಾಲಿಯಲೊಂದೆಲೆಯೂ ಇಲ್ಲದಿರೆ ಕೊರತೆ ವಸಂತನದೇನು?
ಗೂಬೆಗೆ ನಡುಹಗಲಲಿ ಕಣ್ಣು ಕಾಣದಿರೆ ನೇಸರನಲ್ಲಿಹುದೆ ಕುಂದು?
ಮಳೆನೀರು ಚಾತಕ*ದ ಬಾಯಲ್ಲಿ ಬೀಳದಿರೆ ತಪ್ಪುಗೈದುದೇನು ಮೋಡ?
ಮುನ್ನ ಹಣೆಯಲಿ ಬರೆದುದ ಸುಲಭದಲಿ ಅಳಿಸಲು ಯಾರಿಗಾಗುವುದು?(ಚಿತ್ರ ಕೃಪೆ: ವಿಕಿಪೀಡಿಯಾ)

ಸಂಸ್ಕೃತ ಮೂಲ:

ಪತ್ರಂ ನೈವ ಯದಾ ಕರೀರವಿಟಪೇ ದೋಷೋ ವಸಂತಸ್ಯ ಕಿಮ್
ನೋಲೂಕೋSಪ್ಯವಲೋಕತೇ ಯದಿ ದಿವಾ ಸೂರ್ಯಸ್ಯ ಕಿಮ್ ದೂಷಣಮ್ |
ಧಾರಾ ನೈವ ಪತಂತಿ ಚಾತಕ ಮುಖೇ ಮೇಘಸ್ಯ ಕಿಂ ದೂಷಣಮ್
ಯತ್ಪೂರ್ವಂ ವಿಧಿನಾ ಲಲಾಟಲಿಖಿತಂ ತನ್ಮಾರ್ಜಿತುಂ ಕಃ ಕ್ಷಮಃ ||

पत्रं नैव यदा करीरविटपे दोषो वसन्तस्य किम्
नोलूकोऽप्यवलोकते यदि दिवा सूर्यस्य किं दूषणम् ।
धारा नैव पतन्ति चातकमुखे मेघस्य किं दूषणम्
यत्पूर्वं विधिना ललाटलिखितं तन्मार्जितुं कः क्षमः ॥

(ಇದೇ ತಾನೇ ಸುಭಾಷಿತ ಮಂಜರಿಯಲ್ಲಿ ಓದಿದ್ದಿದು)

-ಹಂಸಾನಂದಿ

ಕೊಸರು: *: ಚಾತಕ ಪಕ್ಷಿ ಆಕಾಶದಿಂದ ಬೀಳುವ ಮಳೆನೀರು ನೆಲಕ್ಕೆ ಬೀಳುವ ಮೊದಲೇ (ಮಾತ್ರ) ಕುಡಿಯುತ್ತೆ ಅನ್ನುವುದು ಸಂಸ್ಕೃತ ಕಾವ್ಯಗಳಲ್ಲಿ ಆಗಾಗ್ಗೆ ಬಳಕೆಯಾಗುವ ಪಸಿದ್ಧ ಕವಿಸಮಯ

ಮುಚ್ಚಿಡಬೇಕಾದ್ದೇನನ್ನು?

ಹಣದ ಹಾನಿ ಮನದ ದುಗುಡ
ಮನೆಯಲಾದ ಕೆಡುಕು ನಡತೆ
ಆದ ಮೋಸ ಹೋದ ಮಾನ
ತೋರ್ಗೊಡಬಾರದು ಜಾಣರು!


ಸಂಸ್ಕೃತ ಮೂಲ:

अर्थनाशं मनस्तापं गृहे दुश्चरितानि च |
वञ्चनं चापमानं च मतिमान्न प्रकाशयेत् ||

ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ ||
ವಂಚನಂ ಚಾಪಮಾನಂ ಚ ಮತಿಮಾನ್ನ ಪ್ರಕಾಶಯೇತ್ ||

-ಹಂಸಾನಂದಿ

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

ಅರಿತವರ ಹೊರತು ಹೆರವರು ತಿಳಿವರೆ
ಗುಣಗಳ ನಡುವಲಿ ಇರುವ ದೂರವನು?
ಮೂಗಿನ ಹೊರತು ಕಣ್ಣು ತಿಳಿವುದೆ
ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು?

ಸಂಸ್ಕೃತ ಮೂಲ:

ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |
ಮಾಲತೀ ಮಲ್ಲಿಕಾಮೋದಂ ಘ್ರಾಣಂ ವೇತ್ತಿನ ಲೋಚನಂ||

-ಹಂಸಾನಂದಿ

ಕೊಸರು: ಕೆಲವು ಸಂಸ್ಕೃತ ನಿಘಂಟುಗಳು ಮಾಲತಿ, ಮಲ್ಲಿಗೆ ಎರಡಕ್ಕೂ jasmine (Jasminum Grandiflorum)ಎನ್ನುವ ಅರ್ಥವನ್ನೇಕೊಡುತ್ತಾವಾದರೂ, ಇನ್ನು ಕೆಲವೆಡೆ ಬೇರೆ ಅರ್ಥಗಳೂ ಇವೆ. ಹಾಗಾಗಿ, ಮಲ್ಲಿಗೆಗೆ ಹತ್ತಿರವಾದ, ಜಾಜಿ (ಜಾಜಿಮಲ್ಲಿಗೆ ಅಂತಲೂ ಹೇಳುವ ರೂಢಿ ಇದೆ) ಎಂದು ಬಳಸಿರುವೆ. ಹೆಚ್ಚಿನ ಮಾಹಿತಿಗೆ www.flowersofindia.net ನೋಡಬಹುದು.

ಇದು ಮಾನಿಯರ್-ವಿಲಿಯಮ್ಸ್ ನಿಂದ:

mAlatI f. Jasminum Grandiflorum (plant and blossom ; it bears fragrant white flowers which open towards evening) Ka1v. Var. Sus3r. ; Bignonia Suaveolens W. ; Echites Caryophyllata L. ; another species of plant (= %{vizalyA}) L. ; a bud , blossom L. ; %{-kAca-mAlI} (?) L. ; a maid , virgin L. ; moonlight or night L. ; N. of various metres Col. ; of a river VarBr2S. ; of a woman (the heroine of the drama Ma1lati1-ma1dhava q.v.) ; of Kalya1n2a-malla's comm. on Megha-du1ta…

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;
ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;
ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!
ನಲ್ಗೆಳೆಯರೊಡನಾಟವದೇನ ಮಾಡದೇ ಇಹುದು?


ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ |
ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿ: ಕಥಯ ಕಿಂ ನ ಕರೋತಿ ಪುಂಸಾಮ್||

-ಹಂಸಾನಂದಿ