ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?

ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.

’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ಈ ರೀತಿಯ ಪದಗಳನ್ನ ನೀವು ಓದಿಲ್ದಿದ್ರೆ, ಇಲ್ಲಿ ಚಿಟಕಿಸಿ.

ಈಗ ಡಿಸ್ಲೆಕ್ಸಿಯಾಗೆ ಓದುವಲ್ಲಿ ತೊಡಕು – ಓದುವುದರಲ್ಲಿ ತೊಡಕು – ಅಥವಾ ’ತೊಡಕೋದು’ ಅಂತ ಒಂದು ಹೊಸ ಪದವನ್ನು ಹುಟ್ಟಿಸಬಹುದು. ಯಾಕಂದ್ರೆ ಆ ಪದಗಳೇ ಹೇಳುತ್ತೆ - ಓದುವುದರಲ್ಲಿ ತೊಡಕಾಗುತ್ತೆ ಅಂತ. ಅದನ್ನ ಬಿಟ್ಟು ಪಠಣ ಅಕ್ಷಮತೆ ಅಂತೆ ಪಠಣ ಅಕ್ಷಮತೆ!

ಮತ್ತೆ ’ಕಲಿಕಾ ನ್ಯೂನತೆ’ – ಇದೂ ಅಷ್ಟೆ – ಸಂಸ್ಕೃತವೂ ಅಲ್ಲ, ಕನ್ನಡವೂ ಅಲ್ಲದ ಒಂದು ಕಲಸು ಮೇಲೋಗರ; ಆದರೆ ರುಚಿಯೂ ಇಲ್ಲ ಅಷ್ಟೇ ಈ ಮೇಲೋಗರದಲ್ಲಿ. ಕಲಿಕೆ ಏನು ಆಕಾರಾಂತ ಸ್ತ್ರೀಲಿಂಗ ಪದವೇ ಕಲಿಕಾ ಅಂತ ಹೇಳೋದಕ್ಕೆ?

ಅಲ್ಲದೆ ’ಕಲಿಕಾ ನ್ಯೂನತೆ’ ಅಂತ ಅಂದರೆ ಇದನ್ನು (ಈಗಾಗಲೇ ಮಾಡಿರುವ) ಕಲಿಕೆಯಲ್ಲಿ ಕೊರತೆ ಎಂದು ತಿಳಿಯೋಣವೋ? ಇಲ್ಲ (ನಿಜವಾದ ಅರ್ಥದಂತೆ) ಕಲಿಯುವುದಕ್ಕೆ ಆಗದಂತಹ ಕೊರತೆ ಅಂತ ತಿಳಿಯೋಣವೋ? ಬೇಕಾದರೆ ನೇರವಾಗಿ ’ಕಲಿಯಲಾಗದ ಕೊರೆ’ ’ಕಲಿಯಲಾಗದ ಕೊರತೆ’ ಅನ್ನ ಬಹುದು ಅಲ್ವಾ?

ನಾಲ್ಕಾರು ಜನ ಕುಳಿತು ಯೋಚಿಸಿದರೆ ನಾನು ಬರೆದಂತಹ ಪದಗಳಿಗಿಂತ ಇನ್ನೂ ತಿಳಿವಾದ, ಇನ್ನೂ ಒಳ್ಳೆಯ ಪದಗಳು ಖಂಡಿತ ಸಿಗಬಹುದು. ಈ ರೀತಿ ಯೋಚನೆ ಮಾಡಬೇಕಿದೆ ಅಂತ ತೋರಿಸಲಷ್ಟೇ ನಾನಿಲ್ಲಿ ಬರೆದಿದ್ದು.

-ಹಂಸಾನಂದಿ

ಕೊಸರು: ನನಗೆ ಸಂಸ್ಕೃತ ಅರ್ಥವಾಗುತ್ತೆ ಅನ್ನೋ ಕಾರಣಕ್ಕೆ ಊರ್ನವರಿಗೆಲ್ಲ ಅದು ತಿಳಿಯುತ್ತೆ ಅಂತ ನಾನು ಅಂದ್ಕೊಳೋದೂ ಇಲ್ಲ. ಮತ್ತೆ ಬೇಡದ ಕಡೆ ಸಂಸ್ಕೃತದ ತುತ್ತೂರಿ ಊದೋದನ್ನ ನಾನು ಬೆಂಬಲಿಸೋದೂ ಇಲ್ಲ!


ಮೇಲ್ಕೊಸರು: ಇವತ್ತು ವಿಮರ್ಶಕಿ ಬ್ಲಾಗ್ ನೋಡಿದಾಗ ಅನಿಸಿದ್ದನ್ನ ಅಲ್ಲೇ ಟಿಪ್ಪಣಿ ಹಾಕ್ದೆ. ಅದನ್ನೇ ಕತ್ತರಿಸಿ, ಒಂದೆರಡು ಚಿಕ್ಕ ಬದಲಾವಣೆಗಳ ಜೊತೆ ಇಲ್ಲಿ ಅಂಟಿಸ್ತಿದೀನಿ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?