ನಾಟಕ ಚೈತ್ರ ೨೦೧೦

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!

ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು ಅಂದ್ರೆ ಹೊಸತು. ಹಾಗಾಗಿ ಹೊಸದಾಗಿ ಏನು ಯೋಚಿಸಿದ್ರೂ ಮಾಡಿದ್ರೂ ಅದನ್ನ ಚೈತ್ರ ಅಂದ್ರೆ ಅದರಲ್ಲೇನಿದೆ ತಪ್ಪು? ಅಲ್ವಾ? ಅಷ್ಟೇ ಅಲ್ಲದೆ ಈ ನಾಟಕ ಚೈತ್ರಕ್ಕೆ ತಾಲೀಮು ಶುರು ಮಾಡಿದ್ದಂತೂ ಚೈತ್ರದಲ್ಲೇ.

ಸುಮಾರು ೨+ ತಿಂಗಳು ನಡೆಸಿದ ಅಭ್ಯಾಸದ ನಂತರ ನೆನ್ನೆ ಸ್ಯಾನ್ ಹೊಸೆಯ ಮೌಂಟ್ ಪ್ಲೆಸೆಂಟ್ ಪ್ರೌಢ ಶಾಲೆಯ ರಂಗ ಮಂದಿರದಲ್ಲಿ ಎರಡು ನಾಟಕಗಳನ್ನು ಆಡಿದ್ದಾಯಿತು. ಒಂದು ಟಿ ಎನ್ ಸೀತಾರಾಮರ ’ನಮ್ಮೊಳಗೊಬ್ಬ ನಾಜೂಕಯ್ಯ’ ಮತ್ತೆ ಮತ್ತೊಂದು ಡುಂಡಿರಾಜರ ’ಕೊರಿಯಪ್ಪನ ಕೊರಿಯೊಗ್ರಫಿ’.

ಸುಮಾರು ೪೦೦ಕ್ಕೂ ಹೆಚ್ಚು ಜನ ಬಂದು ನೋಡಿ ಆನಂದಿಸಿ ಹೋದರು. ಹೌಸ್ ಫುಲ್ ಥಿಯೇಟರ್! ಇದಕ್ಕಿಂದ ಹೆಚ್ಚೇನು ಬೇಕು ನಾಟಕ ಆಡಿಸಿದವರಿಗೆ? ಅಲ್ಲದೆ ಟಿಕೆಟ್ ಮಾರಿ ಬಂದ ಲಾಭವೆಲ್ಲ ಮೈತ್ರಿ www.maitri.org ಅನ್ನುವ ಲಾಭದಾಸೆಇರದ ಸಂಸ್ಥೆಗೆ.
’ನಮ್ಮೊಳಗೊಬ್ಬ ..’ ನಾಟಕದಲ್ಲಿ ನನ್ನದೂ ಒಂದು ಪಾತ್ರ ಇತ್ತು. ಬದಲಾಯಿಸಲು ಕಷ್ಟವಾದ ವ್ಯವಸ್ಥೆಯಲ್ಲಿ ಇರುವ ಒಬ್ಬ ಅಯೋಗ್ಯ ಸರಕಾರಿ ಅಧಿಕಾರಿಯ ಪಾತ್ರ.

ನಾನೂ ಹೀಗೆ ಒಂದು ದೊಡ್ಡ ನಾಟಕ ದಲ್ಲಿ ಪಾತ್ರ ಮಾಡಿ ಬಹಳ ದಿನಗಳೇ ಆಗಿತ್ತು. ನಾಟಕ ಆದಮೇಲೆ, ಎರಡನೇ ನಾಟಕಕ್ಕೆ ಮೊದಲು ತಿಂಡಿ ತೀರ್ಥದ ಸಾಲಿನಲ್ಲಿ ನಿಂತಾಗ ಎಷ್ಟೋ ಜನ ಬಂದು ಚೆನ್ನಾಗಿತ್ತು ಪಾತ್ರ ಅಂತ ಹೇಳಿದ್ರು. ಕೆಲವರು ’ನಿಮಗೆ ಸರೀಯಾಗಿ ಒಪ್ತಾ ಇತ್ತು’ ಅಂದ್ರು - ಇದನ್ನ ಮೆಚ್ಚುಗೆ ಅಂತ ತಿಳ್ಕೋಬೇಕೋ ಅಲ್ವೋ ಅಂತ ಮಾತ್ರ ಇನ್ನೂ ಗೊತ್ತಾಗ್ತಿಲ್ಲ ;)

ನಂತರ ಬಂದಿದ್ದು ಕೊರಿಯಪ್ಪನ ಕೊರಿಯೋಗ್ರಫಿ. ಅದೂ ಮಜವಾಗಿತ್ತು ನೋಡೋಕೆ.

ಅದೇನೇ ಇರ್ಲಿ, ಒಟ್ಟಲ್ಲಿ ಹೀಗೆ ಸೇರಿ ನಾಟಕ ಮಾಡೋದು ಅಂದ್ರೆ ಅದೇ ಒಂದು ಸೊಗಸು.

ಚೈತ್ರ ಮುಗಿದ ಮೇಲೆ ವೈಶಾಖ ಬರ್ಲೇ ಬೇಕು. ಉಪ್ಪು ತಿಂದಮೇಲೆ ನೀರು ಕುಡೀಲೇ ಬೇಕು; ಇನ್ನು ನಾಟ್ಕ ಪಾಟ್ಕ ಬಿಟ್ಟು (ಇಷ್ಟು ದಿನ ಹಿಂದಕ್ಕೆ ಸರಿಸಿದ್ದ) ಬೇರೆ ವಿಷಯಗಳ ಬಗ್ಗೆ ಗಮನ ಹರಿಸಬೇಕು!

ನಾಟಕದ ಕೆಲವು ಚಿತ್ರಗಳು ಇಲ್ಲಿವೆ (ಸಿ ಡಿ ಚೈತನ್ಯ ಅವರ ಕೈಚಳಕ).

-ಹಂಸಾನಂದಿ