ಮಾತಿನಲ್ಲಿ ಹುರುಳು
ಕಾಳಿದಾಸನ ರಘುವಂಶದ ಮೊದಲ ಶ್ಲೋಕ ಹೀಗಿದೆ:

वागर्थाविव सम्पृक्तौ वागर्थ प्रतिपत्तयॆ |
जगतः पितरौ वन्दे पार्वती परमेश्वरौ ॥

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

ಈ ಪದ್ಯವನ್ನು ಕನ್ನಡಕ್ಕೆ ತರಲು ಇಲ್ಲಿದೆ ನನ್ನ ಪ್ರಯತ್ನ:

ತಲೆವಾಗುವೆ ನಾ ಶಿವಶಿವೆಗೆ
ಜಗದಲಿ ಎಲ್ಲರ ಹೆತ್ತವರ;
ಬಿಡದೊಡಗೂಡಿಯೆ ಇಹರಲ್ಲ!
ಮಾತಿಗೆ ಬೆಸೆದಿಹ ಹುರುಳಂತೆ

ಪದಪದಕ್ಕೆ ಅನುವಾದ ಮಾಡದಿದ್ದರೂ, ಒಟ್ಟಾರೆ ಭಾವನೆಯನ್ನು ಕನ್ನಡಕ್ಕೆ ತರುವ ಪ್ರಯತ್ನವಷ್ಟೇ. ಮಾತು ಮತ್ತು ಅದರ ತಿಳಿವಿನಂತೆ ಸದಾ ಜೊತೆಯಾಗಿರುವ ಪಾರ್ವತೀಪರಮೇಶ್ವರರನ್ನು ಸ್ಮರಿಸುವ ಈ ಪದ್ಯವೇ ಸೂಚಿಸುತ್ತಿದೆ - ಅರ್ಥವಿಲ್ಲದೇ ಮಾತಿಗೆ ಬೆಲೆಯಿಲ್ಲ, ಅಂತೆಯೇ ಪಾರ್ವತಿಯಿಲ್ಲವೇ ಪರಮೇಶ್ವರನಿಗೂ ಬೆಲೆಯಿಲ್ಲ ಎಂದು.

ಶಿವ ಪಾರ್ವತಿಯರನ್ನು ಸ್ಮರಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಏನು ಮಾತಾಡುವಾಗಲೂ ಹುರುಳಿಲ್ಲದೇ ಆಡಬಾರದು ಎಂಬುದಕ್ಕೆ ಒಂದು ಎಚ್ಚರಿಕೆ ಇದು ಎಲ್ಲರಿಗೆ!

-ಹಂಸಾನಂದಿ

ಕೊ: ಎರಡು ವರ್ಷಕ್ಕೂ ಹಿಂದೆ ಮಾಡಿದ್ದಿದು - ಈ ಬ್ಲಾಗಿನಲ್ಲಿ ಹಾಕಿಲ್ಲದ್ದರಿಂದ, ಒಂದೆರಡು ಪುಟ್ಟ ಬದಲಾವಣೆಗಳೊಂದಿಗೆ ಇಂದು ಹಾಕುತ್ತಿರುವೆ

ಕೊ.ಕೊ: ಚಿತ್ರ ಕೃಪೆ- ’ಅಮರ ಚಿತ್ರ ಕಥೆ’ ಯಲ್ಲಿ ಶಿವ ಪಾರ್ವತಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?