’ಹರಿ’ಯ ನೆನಪಿನಲೊಂದು ಸರಸತಿಯ ಸ್ತುತಿ

ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು
ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ;
ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು!
ಕಾಯೆನ್ನ ಸರಸತಿಯೆ ಎನ್ನನೆಂದಿಗೂ ಬಿಡದೆ ತೊಲಗಿಸುತ ಜಡತೆಯನ್ನು

ಸಂಸ್ಕೃತ ಮೂಲ:

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶ್ವೇತ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ

-ಹಂಸಾನಂದಿ

ಕೊ: ಸುಮಾರು ಮೂರು ವರ್ಷಗಳ ಹಿಂದೆ ಮಾಡಿದ್ದ ಅನುವಾದವಿದು, ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಹಾಕಿರುವೆ.

ಕೊ.ಕೊ: ** ಮೈಸೂರಿನಲ್ಲಿ ಇತ್ತೀಚೆಗೆ ದಿವಂಗತರಾದ ಎಸ್.ಕೆ. ಹರಿಹರೇಶ್ವರ ಅವರು ಸಂಸ್ಕೃತ, ಕನ್ನಡ ಎರಡರಲ್ಲೂ ಬಹಳ ವಿದ್ವಾಂಸರು. ಹರಿ ಅವರು ಸಂಸ್ಕೃತದಿಂದ ಹಲವಾರು ಉತ್ತಮ ಅನುವಾದಗಳನ್ನೂ ಮಾಡಿದ್ದಾರೆ - ಉದಾಹರಣೆಗೆ ಈ ಕೊಂಡಿಯಲ್ಲಿ ನಿಮಗೆ ಕಾಣಸಿಗುವ ಲಕ್ಷ್ಮೀ ಸ್ತುತಿಗಳನ್ನು ನೋಡಬಹುದು. ನಾನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗಳನ್ನು ಮಾಡಲು, ಒಂದು ರೀತಿಯಲ್ಲಿ, ಸುತ್ತಿ-ಬಳಸಿ ಅವರೂ ಒಬ್ಬ ಪ್ರೇರೇಪಣೆ ಅಂದರೂ ಸರಿಯೇ. ಹರಿಯವರ (ನಾವೆಲ್ಲ ಅವರನ್ನು ಹರಿ ಎಂತಲೇ ಕರೆಯುತ್ತಿದ್ದಿದ್ದು) ನೆನಪಿನಲ್ಲಿ, ಅವರ ಹೆಸರನ್ನೂ (**ಹರಿಹರ) ಒಳಗೊಂಡಿರುವ, ಅವರು ತಮ್ಮ ಸಾಹಿತ್ಯ ಚಟುವಟಿಕೆಗಳಿಂದ ನಿತ್ಯವೂ ಆರಾಧಿಸಿದ್ದ ಸರಸ್ವತಿಯ ಧ್ಯಾನ ಶ್ಲೋಕವು ಸರಿಯಾದ ನುಡಿನಮನವೆಂಬಂತೆ ಎನ್ನಿಸಿದ್ದರಿಂದ ಮತ್ತೆ ಹಾಕುತ್ತಿದ್ದೇನೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?