’ಬೇಸಿಗೆ ತ್ರಿಕೋನ’

ಚಿಕ್ಕವನಾಗಿದ್ದಾಗ ಈ ’ಬೇಸಿಗೆ ತ್ರಿಕೋನ’ (Summer Triangle) ಅನ್ನೋ ಹೆಸರು ನೋಡಿದಾಗ, ಅದರ ಬಗ್ಗೆ ಓದುತ್ತಿದ್ದಾಗ ಯಾವಾಗಲೂ ಒಂದು ವಿಚಿತ್ರ ಅನ್ನಿಸ್ತಿತ್ತು. ಮೂರು ನಕ್ಷತ್ರಗಳಿರೋ ಇದಕ್ಕೆ ಹೆಸರೇನೋ ಬೇಸಿಗೆ ತ್ರಿಕೋನ. ಜುಲೈ -ಆಗಸ್ಟ್ ನಲ್ಲಿ ಕಾಣತ್ತಂತೆ! ಅದು ಹೇಗೆ ಸಾಧ್ಯ? ಅದು ಮಳೆಗಾಲ ಅಲ್ವೇ? ಜುಲೈ ಆಗಸ್ಟ್ ಅಂದ್ರೆ ನಮ್ಮೂರಲ್ಲಿ ಆಕಾಶದಲ್ಲಿ ಮೋಡ ಬಿಟ್ಟು ಮತ್ತೇನೂ ಕಾಣಿಸ್ತಿರಲಿಲ್ಲ. ಇನ್ನು ನಕ್ಷತ್ರ ಎಲ್ಲಿಂದ ಕಾಣಬೇಕು, ಅಂದ್ಕೋತಿದ್ದೆ.

ಜುಲೈ-ಅಗಸ್ಟ್ ನಲ್ಲಿ ಆಕಾಶದಲ್ಲಿ ಕಾಣೋ ಮೂರು ಪ್ರಕಾಶಮಾನವಾದ ತಾರೆಗಳ ಗುಂಪಿಗೆ ’ಬೇಸಿಗೆ ತ್ರಿಕೋನ’ ಅಂತ ಕರೆಯೋದು ರೂಢಿ. ಲೈರಾ ತಾರಾಪುಂಜ (constellation) ದಲ್ಲಿರುವ ಅಭಿಜಿತ್ ನಕ್ಷತ್ರ (Vega), ಅಕ್ವಿಲಾ (Aquila) ತಾರಾಪುಂಜದಲ್ಲಿರುವ ಶ್ರವಣ ನಕ್ಷತ್ರ (Altair) ಮತ್ತೆ ಸಿಗ್ನಸ್ (Cygnus) ತಾರಾಪುಂಜದಲ್ಲಿ ಇರುವ ಡೆನೆಬ್ (ಇದಕ್ಕೆ ಕನ್ನಡದಲ್ಲಿ ಹೆಸರಿಲ್ಲ)- ಇವೇ ಈ ಮೂರು ನಕ್ಷತ್ರಗಳು.

ಮಾನ್ಸೂನ್ ಹವಾಮಾನದ ನಮ್ಮೂರನ್ನು ಬಿಟ್ಟು ಬೇರೆ ಸಮಶೀತೋಷ್ಣ ವಲಯದ ಊರಿಗೆ ವಲಸೆ ಬಂದಾಗ ತಿಳೀತು ಇದ್ಯಾಕೆ ಬೇಸಿಗೆ ತ್ರಿಕೋನ ಅಂತ! ಇಲ್ಲಂತೂ ಜುಲೈ ಆಗಸ್ಟ್ ಅಂದರೆ ಬೆಟ್ಟ ಬೇಸಿಗೆ! ಹಾಗೇ ಮುಕ್ಕಾಲುಪಾಲು ದಿನಗಳಲ್ಲಿ ಆಕಾಶದಲ್ಲಿ ಮೋಡದ ಹೆಸರೂ ಇರೋದಿಲ್ಲ. ಹಾಗಾಗಿ ಇಂತಹ ಜಾಗದಲ್ಲಿದ್ದವರ್ಯಾರೋ ಇದಕ್ಕೆ ಹೀಗೆ ’ಸಮ್ಮರ್ ಟ್ರಯಾಂಗಲ್’’ ಅಂತ ಕರೆದಿದ್ದರೆ ಅದು ಅನ್ವರ್ಥ ನಾಮವೇ ಬಿಡಿ.

ಈಗ ನೀವು ಎಲ್ಲಾದ್ರೂ ಇರಿ - ಯಾವತ್ತಾದರೂ ರಾತ್ರಿ ಮೋಡವಿಲ್ಲದೆ ಹೋದ್ರೆ ಹೊರಕ್ಕೆ ಹೋಗಿ ಪೂರ್ವ ದಿಕ್ಕಿನಲ್ಲಿ ನೋಡಿದರೆ ಈ ’ಬೇಸಿಗೆ ತ್ರಿಕೋನ’ ಹುಡುಕೋದು ತೀರಾ ಸುಲಭ. ಈ ದಿನಗಳಲ್ಲಂತೂ ಸೂರ್ಯ ಮುಳುಗಿ ಎರಡು -ಮೂರು ಗಂಟೆಗಳಲ್ಲಿ ಗುರು ಹುಟ್ತಾನೆ. ಗುರು ಬಹಳ ಪ್ರಕಾಶಮಾನವಾಗಿರೋದ್ರಿಂದ ಅದನ್ನ ಬೇರೆ ನಕ್ಷತ್ರಗಳನ್ನ ನೋಡೋದಕ್ಕೆ ಒಂದು ದಿಕ್ಸೂಚಿಯಾಗಿ ಇಟ್ಕೋಬಹುದು. ಕೆಳಗಿನ ಚಿತ್ರದಲ್ಲಿ ನೋಡಿ ಪೂರ್ವಾಕಾಶ ಹೇಗಿದೆ ಈ ದಿನಗಳಲ್ಲಿ ಅಂತ.


ಗುರುವಿನ ಎಡಗಡೆ ನೋಡಿದರೆ ನಿಮಗೆ ಪೆಗಾಸಸ್ ನ ದೊಡ್ಡ ಚೌಕ ಕಾಣುತ್ತೆ. ಇದಕ್ಕೆ ನಮ್ಮಲ್ಲಿ ಪೂರ್ವಾಭಾದ್ರ/ಉತ್ತರಾಭಾದ್ರ ಅನ್ನೋ ಹೆಸರು. ಅದಕ್ಕೆ ಸ್ವಲ್ಪ ಮೇಲೆ (ಪಶ್ಚಿಮಕ್ಕೆ) ಹೋದರೆ ನೀವು ಈ ಬೇಸಿಗೆ ತ್ರಿಕೋನವನ್ನ ಸುಲಭವಾಗಿ ಗುರುತಿಸಬಹುದು.
ಈಗ ಸ್ವಲ್ಪ ಹತ್ತಿರದ ನೋಟ ಇಲ್ಲಿದೆ:
ಗುರುವಿನ ಎಡಗಡೆ ನೋಡಿದರೆ ನಿಮಗೆ ಪೆಗಾಸಸ್ ನ ದೊಡ್ಡ ಚೌಕ ಕಾಣುತ್ತೆ. ಇದಕ್ಕೆ ನಮ್ಮಲ್ಲಿ ಪೂರ್ವಾಭಾದ್ರ/ಉತ್ತರಾಭಾದ್ರ ಅನ್ನೋ ಹೆಸರು. ಅದಕ್ಕೆ ಸ್ವಲ್ಪ ಮೇಲೆ (ಪಶ್ಚಿಮಕ್ಕೆ) ಹೋದರೆ ನೀವು ಈ ಬೇಸಿಗೆ ತ್ರಿಕೋನವನ್ನ ಸುಲಭವಾಗಿ ಗುರುತಿಸಬಹುದು.

ಇದರದ್ದೇ, ಈಗ ಸ್ವಲ್ಪ ಹತ್ತಿರದ ನೋಟ ಇಲ್ಲಿದೆ:


ಈ ಮೂರು ನಕ್ಷತ್ರಗಳಲ್ಲಿ ಅಭಿಜಿತ್ ಬಹಳ ಪ್ರಕಾಶಮಾನವಾದ್ದು. ಅದರ ‘ಕಾಣುವ ಪ್ರಕಾಶ’ (apparent magnitude) ಸರಿಸುಮಾರು ಸೊನ್ನೆ. ನಕ್ಷತ್ರಗಳು ಬರಿಗಣ್ಣಿಗೆ ಕಾಣುವ ಪ್ರಕಾಶವನ್ನ ಅಳೆಯೋವಾಗ ಅದನ್ನ ಸೊನ್ನೆಯಿಂದ ಆರರ ಒಳಗಿನ ಒಂದು ಅಂಕೆ ಕೊಡ್ತಾರೆ. ಅಂಕೆ ಕಮ್ಮಿ ಇದ್ದಷ್ಟೂ ಪ್ರಕಾಶ ಹೆಚ್ಚು. ಈ ಅಳತೆಯಲ್ಲಿ ಸೂರ್ಯನ ಪ್ರಕಾಶ ಸುಮಾರು -೨೬. ಪೂರ್ಣ ಚಂದ್ರನ ಪ್ರಕಾಶ ಸುಮಾರು -೧೨. ಬರಿಗಣ್ಣಿಗೆ ಕಾಣುವ ನಕ್ಷತ್ರ ಗಲ್ಲಿ ಮೂರು ಮಾತ್ರ ಸೊನ್ನೆಗೂ ಕಡಿಮೆ ಪ್ರಕಾಶವನ್ನು ಹೊಂದಿವೆ (ಸಿರಿಯಸ್, ಕಾನೊಪಸ್ ಮತ್ತೆ ಆಲ್ಫಾ ಸೆಂಟಾರಸ್). ಗುರು ಈಗ ಸುಮಾರು -೨.೬ರ ಪ್ರಕಾಶದಿಂದ ಬೆಳಗುತ್ತಿರುವುದರಿಂದ (ಗ್ರಹಗಳು ಎಲ್ಲಿವೆ ಎನ್ನುವುದರ ಮೇಲೆ ಅವುಗಳ ಪ್ರಕಾಶ ಬದಲಾಗುತ್ತಿರುತ್ತೆ) ಅಭಿಜಿತ್ ಗುರುವಿಗಿಂತ ಕಡಿಮೆ ಪ್ರಕಾಶಿಸುತ್ತಿರುತ್ತೆ. ಡೆನೆಬ್ ನ ಕಾಣುವ ಪ್ರಕಾಶ ೧.೨೫ ಮತ್ತೆ ಶ್ರವಣ ನಕ್ಷತ್ರದ ಕಾಣುವ ಪ್ರಕಾಶ ೦.೭೭. ಈ ತ್ರಿಕೋನದ ಮೂರೂ ನಕ್ಷತ್ರಗಳೂ ಬರಿಗಣ್ಣಿಗೆ ಕಾಣುವ ೨೦ ಅತೀ ಪ್ರಕಾಶಮಾನವಾದ ತಾರೆಗಳಲ್ಲಿ ಸೇರಿವೆ. ಆದ್ರೆ ತಮಾಷೆ ಅಂದ್ರೆ, ಸೂರ್ಯನ ಸುಮಾರು ಎರಡರಷ್ಟು ತ್ರಿಜ್ಯ (radius) ಇರೋ ಅಭಿಜಿತ್, ಮತ್ತೆ ಶ್ರವಣ ಎರಡೂ ನಮಗೆ ಹತ್ತಿರವಿರೋದ್ರಿಂದ ಪ್ರಕಾಶಮಾನವಾಗಿ ಕಂಡರೆ, ಅವುಗಳಿಗಿಂತ ಮಂಕಾಗಿ ಕಾಣೋ ಡೆನೆಬ್, ಗಾತ್ರದಲ್ಲಿ ಇವೆರಡಕ್ಕಿಂತ ಬಹಳ ದೊಡ್ಡದು - ಇದರ ತ್ರಿಜ್ಯ ಸೂರ್ಯನಿಗಿಂತ ಸುಮಾರು ನೂರು ಪಟ್ಟು!

ಸರಿ, ಹಾಗಿದ್ರೆ ರಾತ್ರಿ ಆದಮೇಲೆ ಆಕಾಶದ ಕಡೆ ಒಂದು ಕಣ್ಣು ಹಾಯಿಸ್ತೀರಲ್ಲ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ