ಬ್ಲಾಗ್ ಮತ್ತೆ ಬರಹಗಳ ಗುಣಮಟ್ಟ

ನಾನಂತೂ ಕಾಲೇಜು ಮುಗಿದ ನಂತರ ಕಾಗದದಲ್ಲಿ, ಅದೂ ಕನ್ನಡದಲ್ಲಿ ಬರೆದದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ - ಸುಮಾರು ೯೬ ನೇ ಇಸವಿಯಲ್ಲಿ ಮಾಡಿದ್ದ ಒಂದು ಇಂಗ್ಲಿಷ್ ಕಥೆಯ ಅನುವಾದವಲ್ಲದೇ ಇನ್ನೇನನ್ನೂ ಕಾಗದದ ಮೇಲೆ ಬರೆದ ನೆನಪೇ ಇಲ್ಲ. ಎಷ್ಟೋ ಬಾರಿ ಒಳ್ಳೆಯ ಸುಭಾಷಿತಗಳನ್ನು ನೆನೆಸಿಕೊಂಡಾಗಲೆಲ್ಲ, ಅಥವಾ ಎಸ್ವಿ ಪರಮೇಶ್ವರ ಭಟ್ಟರ ಅಥವಾ ಪಾವೆಂ ಅವರ ಸುಭಾಷಿತಗಳ ಅನುವಾದಗಳನ್ನು ಓದಿದಾಗಲೆಲ್ಲ ನನಗೆ ಹೊಳೆದ ಕನ್ನಡಿಸುವ ಹೊಸ ಸಾಲುಗಳು ಹಾಗೇ ಗಾಳಿಯಲ್ಲೇ ಆರಿಹೋಗುತ್ತಿದ್ದಿದ್ದೂ ನಿಜ. ಈ ನಿಟ್ಟಿನಲ್ಲಿ ನೋಡಿದರೆ ಕಂಪ್ಯೂಟರಿನಲ್ಲಿ ಬರೆಯುವ, ಅಲ್ಲದೆ ಬರೆದದ್ದನ್ನು ನಾಲ್ಕಾರು ಜನ ಓದುವಂಥ ಅವಕಾಶ ಬಂದಿದ್ದು ಏನನ್ನಾದರೂ ಬರೆಯುತ್ತಿರಬೇಕೆಂಬ ಹುಮ್ಮಸ್ಸು ತಂದಿರುವುದಂತೂ ಅಷ್ಟೇ ನಿಜ. ಬ್ಲಾಗಿಷ್ಟನಾಗುವ ಮೊದಲು, ನಮ್ಮ ಕನ್ನಡಕೂಟದ ವಾರ್ಷಿಕ ಸಂಚಿಕೆಗೆ ಒಂದೋ ಎರಡೋ ಎರಡೋ ಬರಹವನ್ನೋ ಚುಟುಕವನ್ನೋ ಪ್ರಬಂಧವನ್ನೋ ಬರೆಯುತ್ತಿದ್ದ ನಾನು ಈಗ ಮೂರು ವರ್ಷದಲ್ಲಿ ಮುನ್ನೂರಕ್ಕೂ ಹೆಚ್ಚು ಬ್ಲಾಗ್ ಪೋಸ್ಟುಗಳನ್ನು ಪೋಸ್ಟಿಸಿದ್ದೇನೆ! ಎಲ್ಲವೂ ಬಹಳ ಸೊಗಸಾಗಿದೆ ಎಂದು ಹೇಳಲಾರೆನಾದರೂ, ಎಲ್ಲವೂ ಜಳ್ಳಲ್ಲ ಅಂತ ಹೇಳುವಷ್ಟು ಧೈರ್ಯವಂತೂ ಇದೆ.

"ಬ್ಲಾಗು ’ಸಾಹಿತ್ಯ’ವೇ?" ಅಂತ ಹೀಗಳೆಯುವ ಗೋಜಿಲ್ಲ ಅನ್ನಿಸುತ್ತೆ ನನಗೆ. ಅಥವಾ, ಈ ಕಾರಣಕ್ಕೆ ಯಾವನೇ ಒಬ್ಬ ಬ್ಲಾಗಿಷ್ಟ ಕೊರಗುವ ಗೋಜೂ ಇಲ್ಲ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗುವುದು ಮಾತ್ರ ಸಾಹಿತ್ಯವೇ? ಖಂಡಿತ ಅಲ್ಲ. ನಾನು ಓದುವ ಬ್ಲಾಗುಗಳಲ್ಲಿ ಹಲವಾರು ಹೊಳೆವ ಮಿಂಚುಗಳನ್ನು ಕಂಡಿರುವೆ. ಈಗ ಪತ್ರಿಕೆಗಳಲ್ಲಿ, ಅಥವಾ ಸುದ್ದಿ ಪೋರ್ಟಲ್ ಗಳಲ್ಲಿ ಇರುವ ’ಬರಹ’ಗಾರರನ್ನೂ, ’ಅಂಕಣ’ಕಾರರನ್ನೂ ನಿವಾಳಿಸಿ ಎಸೆಯಬಲ್ಲ ಮಟ್ಟದ ಬರಹಗಳನ್ನು ಬರೆಯುವ ಹಲವಾರು ಕನ್ನಡ ಬ್ಲಾಗಿಷ್ಟರಿದ್ದಾರೆ ಅನ್ನುವುದು ನನಗೆ ಒಂದು ಒಳ್ಳೇ ಬೆಳವಣಿಗೆಯಾಗೇ ಕಾಣುತ್ತೆ.

ನಮ್ಮಲ್ಲಿ ಪ್ರವೃತ್ತಿಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಬಲ್ಲವರು ಕೆಲವರು ಮಾತ್ರ. ಆದ್ದರಿಂದ ಬರೆಯಬಲ್ಲವರೆಲ್ಲ ವೃತ್ತಿಯಿಂದ ಬರಹಗಾರರಾಗುವುದಿಲ್ಲ. ಆದರೆ, ಇವತ್ತಂತೂ, (ಬ್ಲಾಗರುಗಳಲ್ಲದ) ಸಾಮಾನ್ಯ ಓದುಗರು ಬರೆಯುವ ವೃತ್ತಿಯಲ್ಲಿದ್ದವರು ಬರೆದದ್ದನ್ನು ಮಾತ್ರ ಗಂಭೀರವಾಗಿ ಪರಿಗಣಿಸುವಂತೆ ನನಗೆ ತೋರುತ್ತೆ. ಇದು ಕಾಲಕ್ರಮೇಣ ಬದಲಾಗುವುದೇ? ಕಾದು ನೋಡೋಣ!

-ಹಂಸಾನಂದಿ

ಕೊ: ಇವತ್ತು ಮಂಜುನಾಥ ಕೊಳ್ಳೇಗಾಲ ಅವರು ಬರೆದ ನಾನೇಕೆ ಬರೆಯುವುದಿಲ್ಲ ಅನ್ನುವ ಬ್ಲಾಗ್ ಪೋಸ್ಟನ್ನು ಓದುತ್ತಾ ಹೊಳೆದ ಲಹರಿಯನ್ನು ಹಾಗೇ ಬರೆ.. ಕ್ಷಮಿಸಿ! ಟೈಪಿಸಿರುವೆ!

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ