ವಾತಾಪಿ ಗಣಪತಿಂ ಭಜೇಹಂ

ಈ ಶನಿವಾರ ಭಾದ್ರಪದ ಶುಕ್ಲ ಚೌತಿ. ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳು ಗಣಪನನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು, ಎಲ್ಲರ ಮನದಲ್ಲಿ ನೆಲೆಯಾಗಿ ನಿಲ್ಲುವಂತೆ ವಿದ್ಯಾಭೂಷಣರು ಹಾಡಿರುವುದು ನಮಗೆಲ್ಲ ತಿಳಿದಿರುವುದೇ - 'ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ' ಅನ್ನುವ ಈ ಹಾಡು ಹಂಸಧ್ವನಿ ರಾಗದಲ್ಲಿದೆ. ಅದೇ ಹಂಸದ್ವನಿ ರಾಗದಲ್ಲಿ, ಗಣಪತಿಯ ಮೇಲೆಯೇ ಮತ್ತೊಂದು ಪ್ರಖ್ಯಾತ ರಚನೆ ಇದೆ; ಅದು ಮುತ್ತುಸ್ವಾಮಿ ದೀಕ್ಷಿತರ ವಾತಾಪಿಗಣಪತಿಂ ಭಜೇಹಂ ಅನ್ನುವ ಕೃತಿ. ಸುಮಾರು ಒಂದು ನಾಲ್ಕಾರು ಸಂಗೀತ ಕಚೇರಿಗಳಿಗಾದರೂ ನೀವು ಹೋಗಿದ್ದರೆ, ನಿಮಗೆ ಈ ರಚನೆ ತಿಳಿದೇ ಇರಬೇಕು ಎನ್ನುವಷ್ಟು ಪ್ರಖ್ಯಾತವಾದ ರಚನೆ ಇದು.

ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಇವರು ಸುಮಾರು ನಾನೂರು ರಚನೆಗಳನ್ನು ರಚಿಸಿದ್ದಾರೆ. ಅದರಲ್ಲಿ ೩-೪ ಮಾತ್ರ ತೆಲುಗು/ಮಣಿಪ್ರವಾಳದಲ್ಲಿದ್ದು ಉಳಿದದ್ದೆಲ್ಲ ಸಂಸ್ಕೃತದಲ್ಲಿವೆ. ಬಹಳ ಸರಳವಲ್ಲದಿದ್ದರೂ, ಇವರ ರಚನೆಗಳು ಸಂಗೀತರಸದಿಂದ ತುಂಬಿವೆ. ತಂಜಾವೂರಿನ ಬಳಿಯ ತಿರುವಾರೂರಿನಲ್ಲಿ ಜನಿಸಿದ ಇವರು ದೇಶದ ಹಲವೆಡೆಗಳಿಗೆ ಯಾತ್ರಿಕರಾಗಿ ಹೋಗಿ, ಅಲ್ಲಿನ ದೇವಾಲಯಗಳ ದೇವಾನುದೇವತೆಗಳ ಬಗ್ಗೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ.


ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ. ೧೭೭೬ - ೧೮೩೫)ಎಸ್.ರಾಜಂ ಅವರ ವರ್ಣಚಿತ್ರ.

ಬಾದಾಮಿಯ ಚಾಲುಕ್ಯ ರಾಜ ಎರಡನೇ ಪುಲಿಕೇಶಿ ಪಲ್ಲವರನ್ನು ಕಾಂಚಿಗೇ ಹೋಗಿ ಸೋಲಿಸಿದ್ದ. ಅದರ ಪ್ರತೀಕಾರಕ್ಕೆ, ಕ್ರಿ.ಶ.೬೪೩ರ ಸುಮಾರಿನಲ್ಲಿ ಪಲ್ಲವರು ಬಾದಾಮಿಗೇ ಬಂದು ಲಗ್ಗೆ ಹಾಕಿ ಪುಲಿಕೇಶಿಯನ್ನು ಸೋಲಿಸಿಯೂಬಿಟ್ಟರು. ಆ ಸಮಯದಲ್ಲಿ, ಬಾದಾಮಿಯಲ್ಲಿದ್ದ ಗಣಪತಿಯ ದೇವಾಲಯದಿಂದ ಮೂಲ ವಿಗ್ರಹವನ್ನು ಪಲ್ಲವರ ಸೈನ್ಯಾಧಿಕಾರಿಯಾಗಿದ್ದ ಪರಂಜ್ಯೋತಿ (ಸಿರುತ್ತೊಂಡನ್ ಎಂಬ ಹೆಸರೂ ಇವನಿಗಿದೆ) ಎನ್ನುವವನು ಎತ್ತಿ ಒಯ್ದು ಅವನ ಊರಾದ ತಿರುಚೆಂಗಾಟಂಗುಡಿಯಲ್ಲಿ ಸ್ಥಾಪಿಸಿದನಂತೆ. ಈಗ ಬಾದಾಮಿ ಕೋಟೆಯಲ್ಲಿ ಕೆಳಗಿನ ಶಿವಾಲಯ ಎಂದು ಕರೆಯುವ ದೇವಾಲಯವೇ ಮೊದಲಿಗೆ ಈ ಗಣಪತಿಯಿದ್ದ ದೇವಾಲಯ ಎಂದು ಹೇಳಲಾಗುತ್ತೆ.ಬಾದಾಮಿ ಕೋಟೆಯ ಮೇಲೆ ಕಾಣುವ ಒಂದು ನೋಟ.(ಚಿತ್ರ ಕೃಪೆ: ಶ್ರೀನಿವಾಸ್ ಪಿ ಎಸ್) ಚಿತ್ರದ ತುತ್ತತುದಿಯಲ್ಲಿ ಕಾಣುವುದು ’ಮೇಲಿನ ಶಿವಾಲಯ’. ಚಿತ್ರದ ಎಡಭಾಗದಲ್ಲಿ, ನಡುವಿನಲ್ಲಿ ಇರುವ ಪುಟ್ಟ ಗುಡಿಯೇ ’ಕೆಳಗಿನ ಶಿವಾಲಯ’(ಕೇಸರಿ ಬಣ್ಣದಲ್ಲಿ ಸೂಚಿಸಿದ್ದೇನೆ). ಒಳಗೆ ಯಾವುದೇ ವಿಗ್ರಹವಿಲ್ಲ. ಇದೇ ವಾತಾಪಿಗಣಪತಿಯ ಮೂಲ ನೆಲೆ.
ವಾತಾಪಿ ಗಣಪತಿ ಗುಡಿಯ ಹತ್ತಿರದ ನೋಟಗಳು
ಬಾದಾಮಿಯ ಮೊದಲ ಹೆಸರು ವಾತಾಪಿ. ಹಾಗಾಗಿ, ತಿರುಚೆಂಗಾಟಂಗುಡಿಯಲ್ಲಿ ಸ್ಥಾಪನೆ ಆದಮೇಲೆಯೂ, ಈ ಗಣಪತಿ ವಾತಾಪಿಗಣಪತಿಯಿಂದೇ ಪ್ರಖ್ಯಾತವಾಗಿದ್ದರಲ್ಲೇನೂ ಅಚ್ಚರಿಯಿಲ್ಲ.


ಈಗ ತಿರುಚೆಂಗಾಟಂಗುಡಿಯಲ್ಲಿರುವ ವಾತಾಪಿಗಣಪತಿ. ಸರಳವಾದ ಶಿಲ್ಪಶೈಲಿಯನ್ನು ಗಮನಿಸಿ. (ಚಿತ್ರ ಕೃಪೆ: ಇಂಡಿಯನ್‍ಟೆಂಪಲ್ಸ್.ಕಾಮ್)

ನಂತರ, ಕೆಲವು ಕಾಲದ ನಂತರ ತಿರುವಾರೂರಿನ ತ್ಯಾಗರಾಜ ದೇವಾಲಯದ ಪ್ರಾಕಾರದಲ್ಲಿಯೂ ಈ ಮೂರ್ತಿಯ ರೀತಿಯದೇ ಇನ್ನೊಂದು ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಯಿತಂತೆ. ಆ ಗಣಪತಿಯನ್ನೂ ವಾತಾಪಿಗಣಪತಿ ಎಂದೇ ಕರೆಯಲಾಗುತ್ತೆ.ತಿರುವಾರೂರಿನ ತ್ಯಾಗರಾಜ ದೇವಾಲಯ ಬಹಳ ದೊಡ್ಡದು. ಅಲ್ಲಿನ ಪ್ರಾಕಾರದಲ್ಲಿ ಹದಿನಾರು ಬಗೆಯ ಗಣಪತಿಯ ಗುಡಿಗಳಿದ್ದು, ಅವು ತಿರುವಾರೂರು ಷೋಡಶ ಗಣಪತಿಗಳು ಎಂದೇ ಪ್ರಸಿದ್ದವಾಗಿವೆ. ಮುತ್ತುಸ್ವಾಮಿ ದೀಕ್ಷಿತರು ವಾತಾಪಿ ಗಣಪತಿಂ ಭಜೇಹಂ ಎಂದು ಹಾಡಿದ್ದು ತಿರುವಾರೂರಿನಲ್ಲಿನ ಗಣಪನ ಮೇಲೇ. (ಅವರು, ಎಲ್ಲಿರುವ ಹದಿನಾರೂ ಗಣಪತಿಗಳ ಬಗ್ಗೆಯೂ ಒಂದೊಂದು ಕೃತಿ ರಚನೆ ಮಾಡಿದ್ದಾರೆ.)

ಆಸಕ್ತರಿಗಾಗಿ, ವಾತಾಪಿಗಣಪತಿಂ ಭಜೇಹಂ ಕೃತಿಯ ಸಾಹಿತ್ಯ ಇಲ್ಲಿದೆ:

ವಾತಾಪಿ ಗಣಪತಿಂ. ರಾಗ: ಹಂಸಧ್ವನಿ. ತಾಳ: ಆದಿ.

ಪಲ್ಲವಿ:
ವಾತಾಪಿ ಗಣಪತಿಂ ಭಜೇಹಂ ವಾರಣಾಸ್ಯಂ ವರಪ್ರದಂ ಶ್ರೀ

ಅನುಪಲ್ಲವಿ:
ಭೂತಾದಿ ಸಂಸೇವಿತ ಚರಣಂ ಭೂತಭೌತಿಕ ಪ್ರಪಂಚಾಭರಣಮ್
ವೀತರಾಗಿಣಂ ವಿನುತಯೋಗಿಣಂ ವಿಶ್ವಕಾರಣಂ ವಿಘ್ನವಾರಣಂ

ಚರಣ:
ಪುರಾ ಕುಂಭಸಂಭವ ಮುನಿವರ ಪ್ರಪೂಜಿತಮ್ ತ್ರಿಕೋಣಮಧ್ಯಗತಂ
ಮುರಾರಿ ಪ್ರಮುಖಾದ್ಯುಪಾಸಿತಮ್ ಮೂಲಾಧಾರ ಕ್ಷೇತ್ರಸ್ಥಿತಂ
ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವಸ್ವರೂಪ ವಕ್ರತುಂಡಂ
ನಿರಂತರಂ ನಿಟಿಲ ಚಂದ್ರಖಂಡಮ್ ನಿಜವಾಮಕರ ವಿಧೃತೇಕ್ಷುದಂಡಂ
ಕರಾಂಬುಜ ಪಾಶ ಬೀಜಾಪೂರಂ ಕಲುಶವಿದೂರಂ ಭೂತಾಕಾರಂ
ಹರಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಶಿತ ಹೇರಂಬಂ

ಎಲ್ಲರಿಗೂ ಮುಂಬರುವ ಗೌರಿ-ಗಣೇಶ ಹಬ್ಬಗಳು ಸಂತಸವನ್ನು ತರಲೆಂಬ ಹಾರೈಕೆಗಳು.

-ಹಂಸಾನಂದಿ

ಕೊ: ಕೆಲ ಸಂಶೋಧಕರು, ಮೂಲ ವಾತಾಪಿಗಣಪತಿಯೇ ತಿರುವಾರೂರಿನಲ್ಲಿದೆ ಎಂದೂ, ತಿರುಚೆಂಗಾಟಂಗುಡಿಯದ್ದೇ ನಂತರದ್ದು ಎಂದೂ ಹೇಳುತ್ತಾರೆ. ಅಂತೂ ಒಟ್ಟಿನಲ್ಲು ಬಾದಾಮಿಯಿಂದ ಹೊರಟ ಈ ಗಣಪ ದಕ್ಷಿಣ ತಮಿಳುನಾಡಿನಲ್ಲಿ ಸುಮಾರು ಸಾವಿರದ ಮುನ್ನೂರುವರ್ಷಕ್ಕೂ ಹೆಚ್ಚಿಗೆ ಮನೆ ಮಾಡಿದ್ದಾನೆ. ಇನ್ನೂರು ವರ್ಷಗಳಿಂದ, ಮುತ್ತುಸ್ಬಾಮಿದೀಕ್ಷಿತರ ರಚನೆಯಿಂದ, ಎಲ್ಲೆಡೆಯೂ ಪ್ರಖ್ಯಾತನಾಗಿದ್ದಾನೆ

ಕೊ.ಕೊ: ಇದು ಮೂರು ವರ್ಷಗಳ ಹಿಂದೆ ಗಣೇಶನ ಹಬ್ಬದ ಸಮಯದಲ್ಲಿ ಬರೆದಿದ್ದು. ಇಲ್ಲಿ ಹಾಕಿರಲಿಲ್ಲವಾದ್ದರಿಂದ, ಕೆಲವು ಚಿಕ್ಕ ಬದಲಾವಣೆಗಳೊಂದಿಗೆ ಹಾಕುತ್ತಿದ್ದೇನೆ.

ಕೊ.ಕೊ.ಕೊ: ಮೊದಲು ಹಾಕಿದ್ದ ಚಿತ್ರದಲ್ಲಿದ್ದ ತಪ್ಪನ್ನು ಗಮನಿಸಿ ಹೇಳಿ, ಮತ್ತೆ ನನ್ನ ಬಳಿ ಇದ್ದ ಚಿತ್ರಗಳಿಗಿಂತ ಇನ್ನೂ ಚೆನ್ನಾಗಿರುವ ಚಿತ್ರಗಳನ್ನು ಕೊಟ್ಟ ಗೆಳೆಯ ಶ್ರೀನಿವಾಸ್ ಅವರಿಗೆ ನಾನು ಆಭಾರಿ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ