ಜಯ ಗೌರೀ ಜಗದೀಶ್ವರಿನಾಳೆ ಗೌರಿ ಹಬ್ಬ. ಎಲ್ಲರಿಗೂ ಮೊದಲು ಪೂಜಿಸುವ ಗಣೇಶನ ಹಬ್ಬದ ಮುನ್ನಾದಿನವೇ ಗೌರಿ ಹಬ್ಬ. ಅದರಲ್ಲಿಯೂ ಈಕೆ ಬರೀ ಗೌರಿಯಲ್ಲ, ಸ್ವರ್ಣಗೌರಿ. ಅದಕ್ಕೇ ಮೊದಲಿಗೆ ಸ್ವರ್ಣಗೌರಿ ಚಿತ್ರದಿಂದ ಒಂದು ಸುಂದರ ಹಾಡನ್ನ ಕೇಳಿ.ಈ ಸ್ವರ್ಣಗೌರಿಯಂತೂ ಅಂತಿಂತಹವಳಲ್ಲ. ಬಹಳ ಚಾಕಚಕ್ಯತೆ ಉಳ್ಳವಳು. ಇವಳಿಲ್ಲದಿದ್ದರೆ ಶಿವನ ಗತಿ ಏನಾಗುತ್ತಿತ್ತೋ? ’ಶಿವನೇ ಗತಿ’ ಅಂತ ಅವನು ಹೇಳೋದಕ್ಕಾಗೋದಿಲ್ವಲ್ಲ? ಪುಣ್ಯಕ್ಕೆ ಅನ್ನಪೂರ್ಣೆಯಾದ ಗೌರಿ ಮನೆಯಲ್ಲಿ ಇರೋದ್ರಿಂದ ಅವನು ಬದುಕಿದ!

ತನ್ನದೈದು ಬಾಯಿ ಮಗನೊಬ್ಬನಿಗಾರು ಬಾಯಿ
ಇನ್ನೊಬ್ಬ ಮಗನಿಗಿದೆ ಆನೆಯ ಬಾಯಿ!
ಅನ್ನವನುಣಿಸುವ ಅನ್ನಪೂರ್ಣೆ ಮನೆಯಲ್ಲಿ
ಇಲ್ಲದಿರೆಂತು ಜೀವಿಪನು ಬಯಲನುಟ್ಟವನು*?

*ಬಯಲನುಟ್ಟವ - ದಿಗಂಬರ, ಆಕಾಶವನ್ನೇ ಬಟ್ಟೆಯಾಗಿ ಉಳ್ಳವನಾದ ಶಿವ

ಸಂಸ್ಕೃತ ಮೂಲ:
ಸ್ವಯಂ ಪಂಚಮುಖೋ ಪುತ್ರೌ ಗಜಾನನ ಷಡಾನನೌ
ದಿಗಂಬರಃ ಕಥಂ ಜೀವೇತ್ ಅನ್ನಪೂರ್ಣಾ ನ ಚ ಗೃಹೇ!

ಮಕ್ಕಳ ಜಗಳ ಯಾರ ಮನೇಲಿಲ್ಲ? ಮಕ್ಕಳ ಜಗಳ ಬಿಡಿಸೋಕೆ ತಾಯಿ ಬೇಕೇ ಬೇಕು. ಆದರೆ ಒಮ್ಮೊಮ್ಮೆ, ಆ ತಾಯಿ ಗೌರಿಗೂ ಅದು ಆಗೋದಿಲ್ವಂತೆ. ಒಬ್ಬ ಸುಭಾಷಿತಕಾರ ಹೇಳೋದನ್ನ ಕೇಳಿ:

ಅಯ್ಯೋ ಗಣೇಶ! ಯಾಕೋ ಅಳುವೆ? ನನ್ನ ಕಿವಿಗಳನ್ನ ಎಳೀತಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದ ಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!

ಸಂಸ್ಕೃತ ಮೂಲ:

ಹೇ ಹೇರಂಬ ಮದಂಬ ರೋದಿಷಿ ಕಥಂ ಕರ್ಣೌ ಲುಠತ್ಯಗ್ನಿಭೂಃ
ಕಿಂ ತೇ ಸ್ಕಂದ ವಿಚೇಷ್ಟಿತಂ ಮಮ ಪುರಾ ಸಂಖ್ಯಾ ಕೃತಾ ಚಕ್ಷುಷಾಂ|
ನೈತತ್ತೇಹ್ಯುಚಿತಂ ಗಜಾಸ್ಯ ಚರಿತಂ ನಾಸಾ ಪ್ರಮೀತಾ ಚ ಮೇ
ತಾವೇವಂ ಸಹಸಾ ವಿಲೋಕ್ಯ ಹಸಿತವ್ಯಗ್ರಾ ಶಿವಾ ಪಾತು ವಃ ||


ಕಡೆಯಲ್ಲಿ ಒಂದು ವಿಡಿಯೋ. ಗೌರಿ ಹಬ್ಬದಲ್ಲಿ ಕೇಳಲು ತಕ್ಕದಾದ ಒಂದು ಮುತ್ತುಸ್ವಾಮಿ ದೀಕ್ಷಿತರ ರಚನೆ, ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ ಅವರು ನುಡಿಸಿದ್ದು. ವಿಡಿಯೋ ಕೃಪೆ: ಎಲ್.ರಾಮಕೃಷ್ಣನ್.

ಗೌರೀ ರಾಗದಲ್ಲಿ, ’ಗೌರೀ ಗಿರಿರಾಜ ಕುಮಾರಿ ಗಾನವನ ಮಯೂರಿ’ ಅನ್ನುವ ರಚನೆ.


ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರೈಕೆಗಳು.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?