ಭಕ್ತಿ




ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,
ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,
ಹದಿಬದೆಯು ತನ್ನ ಪತಿಯ ಜೊತೆ ಬಿಡದಿರುವಂತೆ,
ಬಳ್ಳಿ ಮರವನು ಹುಡುಕಿ ತಬ್ಬಿ ಹಬ್ಬುವಂತೆ,
ಕಡಲ ದಾರಿಯನರಸಿ ಹರಿದು ಸೇರುವ ಹೊಳೆಯಂತೆ,
ಓ ಶಿವನೆ, ಮನವೆನದು ಅರಸಿ ಅರಸಿ
ಕೊನೆಗೆ ಸೇರಿ ನಿಲ್ಲುವುದು ನಿನ್ನ ಅಡಿದಾವರೆಗಳಲೇ;
ಇದನೆ ತಾನೆ ಭಕ್ತಿಯೆಂದೆನುವುದು!






ಅಂಕೋಲೆ ಗಿಡ(Alangium decapetalum)
ಚಿತ್ರ ಕೃಪೆ - ಹರಿಪ್ರಸಾದ್ ನಾಡಿಗ್

ಸಂಸ್ಕೃತ ಮೂಲ (ಶಂಕರಾಚಾರ್ಯರ ಶಿವಾನಂದಲಹರಿಯಿಂದ)

ಅಂಕೋಲಂ ನಿಜಬೀಜ ಸಂತತಿರಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜವಿಭುಂ ಲತಾ ಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಂ
ಪ್ರಾಪ್ನೋತೀಹ ಯಥಾ ತಥಾ ಪಶುಪತೇ ಪಾದಾರವಿಂದದ್ವಯಂ
ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ

-ಹಂಸಾನಂದಿ

ಕೊ: ಅಂಕೋಲೆ ಮರದ (Alangium Salvifolium -ಇದರಲ್ಲಿ Alangium Hexapetalum Alangium decapetalum ಎಂಬ ಉಪ ಪ್ರಬೇಧಗಳೂ ಇರುವಂತೆ ಕಾಣುತ್ತದೆ) ಬೀಜಗಳು ಮರದ ತೊಗಟೆಗೇ ನೆಟ್ಟುಕೊಳ್ಳುತ್ತವಂತೆ. ಶಂಕರಾಚಾರ್ಯರು ಈ ವಿಷಯವನ್ನೇ ಮೊದಲ ಸಾಲಿನಲ್ಲಿ ಹೇಳಿರುವುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಗೂಗಲೇಶ್ವರನ ಮೊರೆಹೊಕ್ಕರೆ, ಹೀಗೆ ಬೀಜ ತೊಗಟೆಯಲ್ಲಿ ನೆಟ್ಟುಕೊಂಡ ಕೆಲ ಚಿತ್ರಗಳನ್ನು ನೋಡುವಿರಿ.