ತಿಗಣೆಗಂಜಿದ ದೇವರು!

ಅನ್ನಮಯ್ಯ ಒಂದು ಕೀರ್ತನೆಯಲ್ಲಿ, ಬೆಳಗಾಗುತ್ತಲೇ, ಹಾವಿನ ಹೆಡೆಯೇ ಸೊಳ್ಳೆಗಳಿಂದ ಕಾಯುವ ತೆರೆ (ಸೊಳ್ಳೆ ಪರದೆ ಎನ್ನಿ) ಆಗಿರುವ ಶ್ರೀಹರಿಗೆ ಹಾಲುಣಿಸುವುದನ್ನು ನೆನೆದಿದ್ದಾರಂತೆ. ಅನ್ನಮಯ್ಯ ಶ್ರೀಹರಿಯನ್ನು, ಭಕ್ತಕೋಟಿಯ ಕಷ್ಟಕೋಟಲೆಗಳನ್ನು ನಿವಾರಿಸಲು, ಸೊಳ್ಳೆಪರದೆಯಂತಿರುವ ಆದಿಶೇಷನ ಹೆಡೆಯನ್ನು ಸರಿಸಿ, ಹೊರಗೆ ಬಾ ಎನ್ನುವುದು ನನಗೇನೋ ಅದಂತೂ ಬಹಳ ಸಹಜವೇ ಅನ್ನಿಸ್ತಾ ಇದೆ.

ಯಾಕಂತೀರಾ?

ನಿಜ ಹೇಳಬೇಕೆಂದರೆ, ಶ್ರೀಹರಿ ಕ್ಷೀರಸಾಗರಕ್ಕೆ ಹೋಗಿ ಹಾವಿನ ಹಾಸಿಗೆಯ ಮೇಲೆ ಮಲಗಿದ್ದೇ, ಸೊಳ್ಳೆ, ತಿಗಣೆ ಹೀಗೆ ಹುಳುಹುಪ್ಪಟೆಗಳ ಕಾಟ ತಪ್ಪಿಸ್ಕೊಳ್ಳೋದಿಕ್ಕೆ. ಹೇಗೆ ಅಷ್ಟು ಖಾತ್ರಿಯಾಗಿ ಹೇಳ್ತೀಯಾ ಅಂತೀರಾ? ನನ್ನ ಹತ್ತಿರ ಪುರಾವೆ ಇದೆ ಸ್ವಾಮೀ!

ಇಲ್ಲಿ ನೋಡಿ ಒಂದು ಸಂಸ್ಕೃತ ಸುಭಾಷಿತ:

ಕಮಲೇ ಕಮಲಾ ಶೇತೇ
ಹರಃ ಶೇತೇ ಹಿಮಾಲಯೇ
ಕ್ಷೀರಾಬ್ದೌ ಚ ಹರಿಃ ಶೇತೇ
ಮನ್ಯೇ ಮತ್ಕುಣ ಶಂಕಯಾ

ಹಾಗಂದರೆ,

ಕಮಲದಲಿ ಮಲಗುವಳು ಲಕುಮಿ
ಶಿವ ಮಲಗುವ ಹಿಮಾಲಯದಲಿ
ಪಾಲ ಕಡಲಲಿ ಪವಡಿಸುವನು ಹರಿ
ತಿಗಣೆ ಕಡಿತದ ಅಂಜಿಕೆಯಿಂದ!

ನೋಡಿದ್ರಲ್ಲ! ಹರಿ ಹಾಲ್ಗಡಲಿಗೆ ಹೋಗಿದ್ದೇ ಸೊಳ್ಳೆ, ತಿಗಣೆ ಹೀಗೆ ಹುಳುಹುಪ್ಪಟೆ, ಕ್ರಿಮಿಕೀಟಗಳಿಗೆ ಹೆದರಿ; ಅವುಗಳಿಂದ ತಪ್ಪಿಸ್ಕೊಳೋದಿಕ್ಕೆ ಅಂತ. ಅಲ್ಲಿ ಹೋದಮೇಲೆ ಏನಾಯ್ತು? ಬಹುಶಃ ತಿಗಣೆಗಳೇನೋ ಕಾಡಲಿಲ್ಲ ಅಂತ ಕಾಣತ್ತೆ. ಆದರೆ, ಹದಿನಾಲ್ಕೂ ಲೋಕಗಳನ್ನು ವ್ಯಾಪಿಸಿರುವ ಸೊಳ್ಳೆ ರಾಯರು ಅಲ್ಲೂ ಪ್ರತ್ಯಕ್ಷರಾಗಿರಬೇಕು.

ತಾನು ಮಲಗಿರುವ ಹಾವಿನ ಹೆಡೆಯನ್ನು ಉಪಯೋಗಿಸೋದು ಬಿಟ್ಟು, ಪಾಪ, ಹರಿಗೆ ತಾನೇ ಇನ್ನೇನಿತ್ತು? ಲಕ್ಷ್ಮಿಯ ಸೀರೆ ಸೆರಗಿನಿಂದಾದರೂ, ಸ್ವಲ್ಪ ಗಾಳಿ ಬೀಸಿಕೊಂಡು ಸೊಳ್ಳೆ ಓಡಿಸೋಣ ಅಂದರೆ, ಆ ಮಹಾರಾಯ್ತಿ ಮೊದಲೇ ಕಮಲದೊಳಗೆ ಸೇರಿದ್ದಾಳೆ. ರಾತ್ರಿ ಹೊತ್ತು ಕಮಲ ಮುದುಡುವುದೂ ಗೊತ್ತಿರುವ ಸಂಗತಿಯೇ. ಇನ್ನು, ಅವಳ ಸೆರಗಿನ ವಿಷಯ ದೂರವೇ. ಅಲ್ಲವೇ?

ಅದಕ್ಕೇ ಪಾಪ, ವಿಷ್ಣು ಹಾವಿನ ಹೆಡೆಯನ್ನೇ ಸೊಳ್ಳೆ ಪರದೆಯನ್ನಾಗಿಸಿಕೊಂಡಿದ್ದಾನೆ ಅಂತ ಅನ್ನಮಯ್ಯ ಹೇಳಿದರೆ, ಆದು ತೀರಾ ಸಹಜಾ ಅಂತೀನಿ ನಾನು.

ನೀವೇನಂತೀರಾ?

-ಹಂಸಾನಂದಿ

ಕೊ: ಇದು ಸುಮಾರು ಮೂರುವರ್ಷದ ಹಿಂದೆ ಬರೆದದ್ದು. ಕೆಲವು ಚಿಕ್ಕ ಬದಲಾವಣೆಗಳೊಂದಿಗೆ ಹಾಕಿರುವೆ.