ನವರಾತ್ರಿಯ ಐದನೇ ದಿನ

ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕೃತಿಯನ್ನು ಹಾಡಲಾಗುತ್ತೆ.


ಭೈರವಿ ರಾಗ ಕರ್ನಾಟಕ ಸಂಗೀತಕ್ಕೆ ಸೀಮಿತವಾದ ರಾಗ - ಇದಕ್ಕೆ ಹತ್ತಿರವಾದ ರಾಗ, ಹಿಂದೂಸ್ಗಾನಿ ಸಂಗೀತದಲ್ಲಾಗಲಿ, ಅಥವಾ ಪ್ರಪಂಚದ ಬೇರೆ ಯಾವುದೇ ಸಂಗೀತದಲ್ಲೂ ಇದನ್ನು ಹೋಲುವ ರಾಗವಿಲ್ಲ. ನೀವು ತರಾಸು ಅವರ ಹಂಸಗೀತೆಯನ್ನು ಓದಿದ್ದರೆ, ಅದರ ಮೇಲೆ ಆಧಾರಿತವಾದ ಚಲನಚಿತ್ರವನ್ನು ನೋಡಿದ್ದರೆ, ಅದರಲ್ಲಿ ಬರುವ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿಮಗೆ ತಿಳಿದೇ ಇರುತ್ತೆ. ಇಲ್ಲಿ ಒಂದು ವಿಷಯವನ್ನು ಹೇಳಿಬಿಡುತ್ತೇನೆ. ಈ ಭೈರವಿ ವೆಂಕಟಸುಬ್ಬಯ್ಯ ತರಾಸು ಅವರ್ ಕಲ್ಪನೆಯ ಪಾತ್ರವೇ ಹೊರತು ಚಾರಿತ್ರಿಕ ವ್ಯಕ್ತಿಯಲ್ಲ.

ಇವತ್ತು ನಾನು ಆಯ್ಕೆ ಮಾಡಿಕೊಂಡು ಹೇಳಲಿರುವ ರಚನೆ ಮುತ್ತುಸ್ಬಾಮಿ ದೀಕ್ಷಿತರದ್ದು. ಸಂಗೀತ ತ್ರಿಮೂರ್ತಿಗಳಲ್ಲಿ ಇವರು ಎಲ್ಲರಿಗಿಂತ ಕಡಿಮೆ ಕಾಲ ಬದುಕಿದ್ದರೂ (ಕ್ರಿ.ಶ.೧೭೭೫-೧೮೩೫) , ಸಂಗೀತ ಸಾಧನೆಯಲ್ಲಿ ಇನ್ನಿಬ್ಬರಿಗೆ ಸಾಟಿಯಾದವರು ಇವರು. ವೈಣಿಕ ಮತ್ತು ಹಾಡುಗಾರರಾಗಿದ್ದ ಇವರಿಗೆ ಹಿಂದೂಸ್ತಾನಿ ಸಂಗೀತದ ಪರಿಚಯವೂ ಇತ್ತು. ಇವರು ದಕ್ಷಿಣಭಾರತದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿನ ದೇವ ದೇವತೆಗಳಬಗ್ಗೆ ತಮ್ಮ ರಚನೆಗಳನ್ನು ಹಾಡಿದ್ದಾರೆ. ಇವರು ಸುಮಾರು ನಾನೂರು ರಚನೆಗಳು ನಮಗೆ ದೊರೆತಿವೆ.

ವಿಶೇಷವೆಂದರೆ, ಇವರು ತಾವು ಮದ್ರಾಸ್ ನ ಸೈಂಟ್ ಜಾರ್ಜ್ ಕೋಟೆಯಲ್ಲಿ ಕೇಳಿದ ಇಂಗ್ಲಿಷ್ ಬ್ಯಾಂಡ್ ಗಳ ಹಾಡುಗಳ ಮಟ್ಟಿನಲ್ಲೇ, ಅದಕ್ಕೆ ತಮ್ಮದೇ ಸಾಹಿತ್ಯ ಬರೆದಿರುವುದು. ಈಗಲೂ ಇದನ್ನು ಸಂಗೀತ ಅಭ್ಹ್ಯಾಸದ ಮೊದಲ ದಿನಗಳಲ್ಲಿ ಹೇಳಿಕೊಡುವುದಿದೆ. ಇಂಥ ಸರಳ ರಚನೆಗಳಿಂದ ಹಿಡಿದು ಅತಿ ಕ್ಲಿಷ್ಟವಾದ ರಚನೆಗಳನ್ನೂ ಮಾಡಿರುವುದು ಇವರ ಸಂಗೀತದ ಹರಹನ್ನು ತೋರಿಸುತ್ತೆ.

ಇವತ್ತಿನ ದೇವೀ ಪರವಾದ ಕೃತಿ ಕಲಾವತಿ ರಾಗದಲ್ಲಿರುವ ’ಕಲಾವತೀ ಕಮಲಾಸನ ಯುವತಿ’ ಎಂಬ ರಚನೆ. ಈ ರಚನೆಯು ಕಾಶ್ಮೀರ ವಾಸಿಯಾದ ಸರಸ್ವತೀ ದೇವಿಯ ಮೇಲೆ ಬರೆದಿರುವುದಾಗಿದೆ. ಶರತ್ಕಾಲದ ಬೆಳದಿಂಗಳಂತೆ ಮೆರುಗುವ ಸರಸ್ವತಿ, ಒಳಿತನ್ನು ಮಾಡು! ಎಂದು ದೀಕ್ಷಿತರು ಇಲ್ಲಿ ಕೇಳಿಕೊಳ್ಳುತ್ತಾರೆ.
ದಸರೆಯಲ್ಲಿ ಹಾಡಲು, ಕೇಳಲು ನಾದದೇವತೆಯನ್ನು ಹೊಗಳುವ ಈ ಹಾಡು ಎಷ್ಟು ಸೊಗಸು ಅಲ್ಲವೆ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?