ನವರಾತ್ರಿಯ ಆರನೇ ದಿನ

ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ ಏಳನೆಯ ದಿನ ಬರುತ್ತದೆ.

ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಸ್ವಾತಿ ತಿರುನಾಳ್ ಮಹಾರಾಜರ ಕೃತಿ ಕಾಮವರ್ಧಿನಿ ರಾಗದಲ್ಲಿರುವ ಸರೋರುಹಾಸನ ಜಾಯೇ ಎಂಬುದು.ಈ ರಾಗವನ್ನು ತಮಿಳುನಾಡಿನಲ್ಲಿ ಹೆಚ್ಚಾಗಿ ಪಂತುವರಾಳಿ ಎಂಬ ಹೆಸರಿಂದ ಕರೆಯುತ್ತಾರೆ. ಇದನ್ನ ಈಗ ಕೇಳಿ - ಹಾಡುತ್ತಿರುವುದು ಸ್ವಾತಿ ತಿರುನಾಳರ ವಂಶದವರೇ ಆದ ರಾಮವರ್ಮ. ಈ ಮುದ್ರಿಕೆ ನವರಾತ್ರಿ ಮಂಡಪದಲ್ಲೇ, ಎರಡು ವರ್ಷದ ಹಿಂದೆ ನಡೆದ ಕಚೇರಿಯದು - ಹಾಗಾಗಿ ಅಲ್ಲಿನ ವಾತಾವರಣ ಹೇಗಿದೆ ಎನ್ನುವುದನ್ನು ಚೆನ್ನಾಗಿ ತೋರಿಸುತ್ತೆ.ಸರಸ್ವತಿಯನ್ನು ಕಲಿಕೆಯ ಅಧಿದೇವತೆ ಎಂದು ನಂಬುವವರು ನಾವು. ಹಾಗಾಗೇ, ವಿದ್ಯಾರಂಭದಲ್ಲಿ ಸರಸ್ವತಿಯ ಪೂಜೆ ಗೈಯುವುದು ರೂಢಿ. ಲಲಿತಕಲೆಗಳಾದ ಸಂಗೀತ ನೃತ್ಯ ಮೊದಲಾದುವುಗಳನ್ನು ಕಲಿಯಲಾರಂಭಿಸುವಾಗಲಂತೂ ಕಡ್ಡಾಯವೇ ಎನ್ನಬಹುದು. ಹಾಗಾಗಿ, ನವರಾತ್ರಿಯ ಆರನೇ ದಿನ ಸರಸ್ವತಿಯ ಸ್ತುತಿಯೊಂದನ್ನು ನಾವು ಕೇಳಿದ್ದು ಅರ್ಥಪೂರ್ಣವಾಗಿಯೇ ಇದೆ.

ಸಂಗೀತಾಭ್ಯಾಸಿಗಳು ಮೊದಲಿಗೆ ಕಲಿಯುವುದು ಮಾಯಾಮಾಳವಗೌಳ ರಾಗದಲ್ಲಿ ಸರಳೆವರಸೆ-ಜಂಟೀವರಸೆ -ಅಲಂಕಾರ ಮೊದಲಾದ ಸರಳವಾದ ಸ್ವರ ಚಿತ್ತಾರಗಳನ್ನು. ನಂತರ, ಸರಳ ಸ್ವರ ಸಾಹಿತ್ಯ ಸಂಯೋಜನೆ ಇರುವ ಗೀತೆಗಳನ್ನು ಹೇಳಿಕೊಡಲಾಗುತ್ತೆ. ಈ ಪದ್ಧತಿಯನ್ನು ಹಾಕಿಕೊಟ್ಟವರು ಪುರಂದರದಾಸರೇ ಎಂಬ ನಂಬುಗೆ ಸಾಂಪ್ರದಾಯಿಕವಾಗಿ ಚಾಲ್ತಿಯಲ್ಲಿದೆ. ಇದರ ನಂತರ ಹೇಳಿಕೊಡಲಾಗುವ ರಚನೆಗಳು ಸ್ವರಜತಿಗಳು ಅಥವಾ ಜತಿಸ್ವರಗಳು. ಇದರ ನಂತರ ಬರುವ ರಚನೆಗಳೇ ವರ್ಣಗಳು.

ವರ್ಣ ಎಂಬುದರ ಅರ್ಥ ಬಣ್ಣ ಎಂದಲ್ಲವೇ? ಹಾಗೇ, ಈ ವರ್ಣಗಳು ರಾಗಗಳ ಬೇರೆಬೇರೆ ಛಾಯೆಗಳನ್ನು ತೋರುವ ಚಿತ್ರಪಟಗಳೆಂದರೆ ಅಡ್ಡಿಯಿಲ್ಲ. ವರ್ಣಗಳು ಅವು ನಿಯೋಜಿತವಾಗಿರುವ ರಾಗಗಳ ವೈಶಿಷ್ಟ್ಯಗಳನ್ನು ಎತ್ತಿ ತೋರುವಂತೆ ಮಾಡಿರುವ ರಚನೆಗಳು. ಒಂದು ಸಂಗೀತ ಕಚೇರಿಗೆ ನೀವು ಹೋದರೆ, ಹೆಚ್ಚೆಂದರೆ ಒಂದು ವರ್ಣವನ್ನು, ಕಚೇರಿಯ ಪ್ರಾರಂಭದಲ್ಲಿ ಕೇಳಬಹುದು. ಪ್ರತೀಸಲ ಕೇಳುತ್ತೀರಿ ಎಂದೇನಿಲ್ಲ. ಆದರೆ, ಸಂಗೀತದ ವಿದ್ಯಾರ್ಥಿಗಳಿಗೆ ಮಾತ್ರ, ಇವು ಬಹಳ ಮಹತ್ವದ ರಚನೆಗಳು. ಹೇಗೆ ಉತ್ತಮವಾದ ಪ್ರಬಂಧವನ್ನು ರಚಿಸಲು ಒಳ್ಳೆಯ ವ್ಯಾಕರಣದ ಬುನಾದಿ ಬೇಕೋ, ಹಾಗೆ, ಉತ್ತಮ ಸಂಗೀತಗಾರರಾಗಲು ಈ ವರ್ಣಗಳ ಅಭ್ಯಾಸ ಅತ್ಯವಶ್ಯಕ.

ಇಷ್ಟೆಲ್ಲ ಏಕೆ ಹೇಳಿದೆನೆಂದರೆ, ಇವತ್ತು ನಾನು ಆರಿಸಿಕೊಂಡು, ನಿಮಗೆ ಕೇಳಿಸುತ್ತಿರುವ, ದೇವೀಪರವಾದ ರಚನೆ, ಒಂದು ವರ್ಣ. ವರ್ಣಗಲ್ಲಿ ಸಾಹಿತ್ಯ (= ಮಾತು) ಕಡಿಮೆ. ಸಂಗೀತ (=ಧಾತು) ಹೆಚ್ಚು. ಒಂದು ಸಾಲಿನ ಪಲ್ಲವಿ, ಒಂದು ಸಾಲಿನ ಅನುಪಲ್ಲವಿಯ ನಂತರ ಚಿಟ್ಟೆಸ್ವರಗಳು ಇರುತ್ತವೆ. ನಂತರ ಒಂದು ಸಾಲಿನ ಚರಣವನ್ನು, ಹಲವು ಎತ್ತುಗಡೆ ಸ್ವರಗಳನ್ನು ಹಾಡುವ ನಡುವೆ ಮತ್ತೆ ಮತ್ತೆ ಹಾಡಲಾಗುತ್ತೆ.

ಇವತ್ತಿನ ವರ್ಣ ಗಂಭೀರನಾಟ ರಾಗ, ಆದಿತಾಳದಲ್ಲಿದೆ. ರಚಿಸಿರುವವರು ಡಾ. ಎಂ. ಬಾಲಮುರಳಿಕೃಷ್ಣ.

ಬಾಲಮುರಳಿಕೃಷ್ಣ ಅವರು ೨೦ನೇ ಶತಮಾನದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರು. ಸಂಗೀತದಲ್ಲಿ ಅವರು ಅಪರಿಮಿತ ಮೇಧಾವಿ. ಬಹಳ ಚಿಕ್ಕವಯಸ್ಸಿನಲ್ಲೇ ರಚನೆಗಳನ್ನು ಮಾಡತೊಡಗಿದ ಬಾಲಮುರಳಿ ಅವರು ಬಹಳ ಸಂಖ್ಯೆಯಲ್ಲಿ ವರ್ಣ, ಕೃತಿ ಮತ್ತು ತಿಲ್ಲಾನಗಳನ್ನು ರಚಿಸಿದ್ದಾರೆ. ಅವರ ವರ್ಣಗಳು ಮತ್ತು ತಿಲ್ಲಾನಗಳು ಸಂಗೀತರಂಗದಲ್ಲಿ ಬಹಳ ಮೆಚ್ಚುಗೆ ಪಡೆದಿವೆ. ಈ ವರ್ಣದಲ್ಲಿ ಬಾಲಮುರಳಿ ಅವರು ಪಾರ್ವತಿಯನ್ನು ಓಂಕಾರಸ್ವರೂಪಿಯೆಂದು ವರ್ಣಿಸಿದ್ದಾರೆ. ಹಾಡುತ್ತಿರುವುದು ಡಾ.ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್.

height="385">

ನಾಳೆ ಮತ್ತೊಂದು ಕೃತಿಯೊಡನೆ ಭೇಟಿಯಾಗೋಣ!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?