ನವರಾತ್ರಿಯ ಎಂಟನೇ ದಿನ

ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ.

ಮೊದಲು, ಇವತ್ತಿನ ಸ್ವಾತಿ ತಿರುನಾಳರ ನವರಾತ್ರಿ ಕೃತಿ ಯಾವುದೆಂದು ಹೇಳಿಬಿಡುವೆ. ಅದು, ನಾಟಕುರಂಜಿ ರಾಗದಲ್ಲಿರುವ ಪಾಹಿ ಜನನಿ ಸಂತತಂ ಎಂಬುದು. ಅದನ್ನು ನೀವು ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.


ಇವತ್ತು ನಾನು ಕೇಳಿಸಲಿರುವ ರಚನೆ ಒಂದು ರಾಗಮಾಲಿಕೆ. ಹೆಸರೇ ಸೂಚಿಸುವಂತೆ ಇದು ರಾಗಗಳ ಸರಮಾಲೆ. ಎಷ್ಟೋ ರಚನೆಗಳಲ್ಲಿ, ಆಯಾ ರಾಗದ ಭಾಗದಲ್ಲಿ ಆಯಾ ರಾಗದ ಹೆಸರನ್ನೂ ಚಮತ್ಕಾರಿಕವಾಗಿ ಸೇರಿಸಿ ಸೂಚಿಸುವುದುಂಟು. ಅದಕ್ಕೆ ರಾಗಮುದ್ರೆ ಎನ್ನುತ್ತೇವೆ. ಇವತ್ತು ನಾನು ಕೊಡುತ್ತಿರುವ ರಾಗಮಾಲಿಕೆಯ ವಿಶೇಷವೇನೆಂದರೆ, ಅದರ ಪ್ರತಿ ರಾಗದ ಭಾಗದಲ್ಲಿಯೂ ಆಯಾ ರಾಗದ ರಾಗಮುದ್ರೆ ಇದೆ.

ಈ ರಚನೆಯ ಹೆಸರು ರಂಜನಿ ಮಾಲಾ. ಇದರ ಸಾಹಿತ್ಯ ಹೀಗಿದೆ - ರಾಗಗಳ ಹೆಸರುಗಳನ್ನು ದಪ್ಪ ಅಕ್ಷರದಲ್ಲಿ ಸೂಚಿಸಿರುವೆ.

ರಂಜನಿ ಮೃದು ಪಂಕಜ ಲೋಚನಿ

ಮಂಜು ಭಾಷಿಣಿ ಮನೋಲ್ಲಾಸಿನಿ ಮಂದಗಮನಿ ಶ್ರೀರಂಜನಿ

ಸಾಮಗಾನ ವಿನೋದಿನಿ ಶಶಾಂಕವದನಿ ಮೇಘರಂಜನಿ

ಪಾಮರಜನ ಪಾಲಿನಿ ಶೂಲಿನಿ ಪಾಪವಿಮೋಚನಿ ಜನರಂಜನಿ

ಪ್ರತಿಸಾಲಿನ ನಡುವೆಯೂ ಸುಂದರವಾದ ಚಿಟ್ಟೆಸ್ವರಗಳಿವೆ. ಇದನ್ನು ನೀವು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಕೇಳಬಹುದು.

ರಂಜನಿ ಮೃದುಪಂಕಜ ಲೋಚನಿ - ಡಾ.ನಾಗವಲ್ಲಿ ಮತ್ತು ರಂಜನಿ ಅವರ ಕಂಠದಲ್ಲಿ.ಸಂಸ್ಕೃತದಲ್ಲಿರುವ ಈ ಸುಂದರವಾದ ರಚನೆಯನ್ನು ರಚಿಸಿದ ವಾಗ್ಗೇಯಕಾರರು ತಂಜಾವೂರು ಶಂಕರ ಅಯ್ಯರ್. ೧೯೨೪ರಲ್ಲಿ ಜನಿಸಿದ ಇವರು ತಮ್ಮ ೮೦ ನೇ ವಯಸ್ಸಿನಲ್ಲಿಯೂ ಹಾಡುತ್ತಾ ರಸಿಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇವರಿಗೆ ಸಂಗೀತಗಾರರ ಸಂಗೀತಗಾರ ಎಂಬ ಬಿರುದೇ ಇದೆ. ಇವರ ಹಲವು ರಚನೆಗಳು ಜನಪ್ರಿಯವೂ ಆಗಿವೆ. ಅವುಗಳಲ್ಲಿ ಬಹಳ ಪ್ರಖ್ಯಾತ ರಚನೆ ಎಂದರೆ ಈ ರಂಜನಿಮಾಲಾ.

ಈ ಸಮಯದಲ್ಲಿ ಇನ್ನೊಂದು ವಿಷಯವನ್ನು ಹೇಳಬೇಕು. ನಮಗೆ ಈಗ ದೊರಕಿರುವಂತೆ ರಾಗಮಾಲಿಕೆಗಳು, ಮತ್ತೆ ರಾಗಮುದ್ರೆಗಳು ೧೭-೧೮ನೇ ಶತಮಾನದ ನಂತರ ಕಂಡುಬರುತ್ತವೆ. ಮೊದಲು ಇಂತಹ ರಚನೆ ಮಾಡಿದವರಾರು? ಖಡಾಖಂಡಿತವಾಗಿ ಹೇಳಲಾರೆನಾದರು, ೧೫ನೇ ಶತಮಾನಕ್ಕೆ ಮೊದಲೇ ಇಂತಹ ಪ್ರಯೋಗಗಳನ್ನು ಕರ್ನಾಟಕದ ಹರಿದಾಸರು ಮಾಡಿದ್ದಿರಬೇಕು ಎಂದು ನನ್ನ ಅನಿಸಿಕೆ. ಶ್ರೀಪಾದರಾಯರ (ಕ್ರಿ.ಶ.೧೪೦೪-೧೫೦೨) ಲಾಲಿ ಗೋವಿಂದಲಾಲಿ ಎನ್ನುವ ಪದವೊಂದರಲ್ಲಿ (ದೇವರನಾಮ) ಮೂರು ಚರಣಗಳು ಹೀಗೆ ಬರುತ್ತವೆ:

.. ಮಂದಗಮನೆಯರೆಲ್ಲ ತೂಗಿದರು ಕಲ್ಯಾಣಿ ರಾಗದಿಂದ ||

.. ದೇವಗಂಧರ್ವರೆಲ್ಲ ಪಾಡಿ ತೂಗಿದರು ದೇವಗಾಂಧಾರದಿಂದ ||

ಆ ನಂದ ಭವನದೊಳಗೆ ಆನಂದಭರಿತರಾಗಿ

................. ತೂಗಿದರು ಆನಂದ ಭೈರವಿಯಿಂದ ||

ಕಲ್ಯ್ಯಾಣಿ, ದೇವಗಾಂಧಾರ, ಆನಂದಭೈರವಿ ಎಂಬ ಮೂರು ರಾಗಗಳ ಹೆಸರು ಇಲ್ಲಿ ಬಂದಿರುವುದನ್ನು ಗಮನಿಸಬಹುದು. ಬಹುಶಃ ರಾಗಮುದ್ರೆಯಿರುವ ಮೊದಲ ಸಂಗೀತ ರಚನೆ ಇದು. ಇದನ್ನು ಶ್ರೀಪಾದರಾಜರು ರಾಗಮಾಲಿಕೆಯಾಗೇ ಹಾಡುತ್ತಿದ್ದಿರಬೇಕೆಂದು ನನ್ನ ಅನುಮಾನ. ಅದು ನಿಜವಾಗಿದ್ದರೆ, ಇದಕ್ಕೇ ಮೊತ್ತಮೊದಲ ರಾಗಮಾಲಿಕೆ ಅನ್ನುವ ಪಟ್ಟ ಸಿಕ್ಕಲೂಬಹುದು!


-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ