ನವರಾತ್ರಿಯ ಒಂಬತ್ತನೇ ದಿನ

ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಅದಕ್ಕೆಂದು ಈ ಮೊದಲೇ ನಾನು ಕನ್ನಡಕ್ಕೆ ಅನುವಾದಿಸಿದ್ದ ಕೆಲವು ಪ್ರಸಿದ್ಧ ಸರಸ್ವತೀ ಸ್ತುತಿಗಳನ್ನು ಹಾಕಿದ್ದೇನೆ. ಓದಿ ನಂತರ ಹಾಡು ಕೇಳಬಹುದು. ಅಲ್ಲವೇ?

ಮೈಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು
ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ;
ತಾಯೆ! ಆ ಹರಿಹರಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು!
ಕಾಯೆನ್ನ ಸರಸತಿಯೆ ಎನ್ನನೆಂದಿಗೂ ಬಿಡದೆ ತೊಲಗಿಸಿ ಆಲಸಿಕೆಯನ್ನು

ಸಂಸ್ಕೃತ ಮೂಲ:
ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ|
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ||

ಸರಸತಿಯೆ ತಲೆಬಾಗುವೆನು ಮನದಾಸೆಗಳನೀವಳೆ
ಅರಿವಿನಾಸೆಯೆನಗಿರಲು ಹರಸು ಕೈಗೂಡುತಿರಲೆಂದು

ಸಂಸ್ಕೃತ ಮೂಲ:
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ|
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಶಾರದೆಯೆ ನಮಿಸುವೆನು ಕಾಶ್ಮೀರದಲಿ ನೆಲೆಸಿಹಳೆ
ಕೋರುವೆನು ಅನುದಿನವು ಅರಿವು ತಿಳಿವನು ನೀಡು

ಸಂಸ್ಕೃತ ಮೂಲ:
ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ಬುದ್ಧಿಂ ಚ ದೇಹಿಮೇ||


ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ನವರಾತ್ರಿಯ ಒಂಬತ್ತನೆ ದಿವಸ ಹಾಡುವ ಕೃತಿ, ’ಪಾಹಿ ಪರ್ವತ ನಂದಿನ” ಎಂಬ ಆರಭಿ ರಾಗದ ರಚನೆ; ಅದನ್ನು ನೀವು ಇಲ್ಲಿ ಕೇಳಬಹುದು. ಇದೇ ಸ್ವಾತಿ ತಿರುನಾಳರ ನವರಾತ್ರಿ ಕೃತಿಗಳಲ್ಲಿ ಕೊನೆಯದು.


ಮಹಾನವಮಿಯ ಸರಸ್ವತಿ ಪೂಜೆಯ ಪ್ರಯುಕ್ತ ಸರಸ್ವತಿಯ ಮೇಲಿರುವ ಒಂದು ಒಳ್ಳೆ ರಚನೆಯನ್ನು ಕೇಳೋಣ.ಮೈಸೂರು ವಾಸುದೇವಾಚಾರ್ಯರು ೨೦ನೇ ಶತಮಾನದಲ್ಲಿನ ಒಬ್ಬ ಪ್ರಮುಖ ವಾಗ್ಗೇಯಕಾರರು. ತ್ಯಾಗರಾಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಸುಮಾರು ೩೦೦ಕ್ಕೂ ಹೆಚ್ಚು ರಚನೆಗಳನ್ನು ಹೆಚ್ಚಾಗಿ ತೆಲುಗು ಮತ್ತು ಸಂಸ್ಕೃತದಲ್ಲಿ ಮಾಡಿದ್ದಾರೆ, ಕಚೇರಿಗಳಲ್ಲಿ ಕೇಳಬಹುದಾದ ರಚನೆಗಳನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ, ಕರ್ನಾಟಕದ ನೆಲದಲ್ಲಿ ಮೂಡಿಬಂದ ಕೃತಿಗಳಲ್ಲಿ ಇವರದ್ದು ದೊಡ್ಡ ಪಾಲು ಇರುತ್ತದೆ ಎನ್ನಬಹುದು.

ಕನಕಪುರದಲ್ಲಿ ಹುಟ್ಟಿದ ವಾಸುದೇವಾಚಾರ್ಯರು ತಮ್ಮ ಜೀವನದ ಬಹುಪಾಲು ಭಾಗವನ್ನು ಮೈಸೂರಿನ ಒಡೆಯರ ಆಶ್ರಯದಲ್ಲಿ ಕಳೆದರು. ಅಷ್ಟೇ ಅಲ್ಲ, ಮೈಸೂರಿನ ಕೊನೆಯ ದೊರೆ ಜಯಚಾಮರಾಜೇಂದ್ರ ಒಡೆಯರಿಗೆ ಇವರು ಸಂಗೀತಗುರುಗಳು ಕೂಡ. ತಮ್ಮ ರಚನೆಗಳಲ್ಲಿ ವಾಸುದೇವ ಎಂಬ ಅಂಕಿತವನ್ನು ಇಟ್ಟಿರುತ್ತಾರೆ. ಅಭಿನವ ತ್ಯಾಗರಾಜರೆಂದೇ ಪ್ರಸಿದ್ಧರಾದ ವಾಸುದೇವಾಚಾರ್ಯರು ಬರಹಗಾರರು ಕೂಡಾ. ಸಂಗೀತ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ’ನಾ ಕಂಡ ಕಲಾವಿದರು’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಇಂದು ಇವರ ಸಂಸ್ಕೃತ ಭಾಷೆಯಲ್ಲಿರುವ ಹಿಂದೋಳ ರಾಗದ ಕೃತಿ, ’ಮಾಮವತು ಶ್ರೀ ಸರಸ್ವತ” ಎಂಬ ರಚನೆಯನ್ನು ಸುಧಾ ರಘುನಾಥನ್ ಅವರ ಧ್ವನಿಯಲ್ಲಿ ಈಗ ಕೇಳೋಣ.







ನಾಳೆ ವಿಜಯದಶಮಿ. ಶ್ರೀ ಚಾಮುಂಡೇಶ್ವರಿಯ ಉತ್ಸವ ಹೋಗುವ ದಿವಸ. ಆ ಸಮಯದ ವೈಭವಕ್ಕೆ ತಕ್ಕ ಕೊನೆಯ ರಚನೆಯೊಂದಿಗೆ ನಾಳೆ ಈ ಮಾಲಿಕೆಯನ್ನು ಮುಗಿಸುತ್ತೇನೆ.

-ಹಂಸಾನಂದಿ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ