ರಾಜ್ಯೋತ್ಸವ ೨೦೧೦

ರಾಜ್ಯೋತ್ಸವಕ್ಕೆಂದು ಎರಡು ವಾರಗಳ ಹಿಂದೆ ಇಲ್ಲೊಂದು ವಿಶೇಷ ಸಂಗೀತ ಕಚೇರಿ ನಡೆಯಿತು. ಕರ್ನಾಟಕ ಸಂಗೀತದ ಕಚೇರಿ ಎಂದರೆ ಸಾಧಾರಣವಾಗಿ ಮೂರು ನಾಲ್ಕು ಭಾಷೆಗಳ ರಚನೆಗಳನ್ನು ಹಾಡುವುದು ರೂಢಿ. ಆದರೆ ಇದು ರಾಜ್ಯೋತ್ಸವಕ್ಕಾದ್ದರಿಂದ ಒಳ್ಳೆಯ ಕನ್ನಡ ರಚನೆಗಳನ್ನೇ ಆಯ್ದು ಹಾಡಿದವರು ಶ್ರೀ ರಾಘವನ್ ಮಣಿಯನ್. ಇದರಲ್ಲಿ ಈ ಸಂದರ್ಭಕ್ಕೆಂದೇ ರಚಿಸಿದ ವಿಶೇಷ ರಾಗ-ತಾನ-ಪಲ್ಲವಿಯೂ ಇತ್ತು.

ಪಲ್ಲವಿಯ ಸಾಹಿತ್ಯ ಹೀಗಿತ್ತು:

ಕನ್ನಡದ ಕಾವೇರಿ
ಶಾರದೆಯ ಶೃಂಗೇರಿ
ನವರಸದಿ ಮಿನುಗುತಲಿ
ಕನ್ನಡಮ್ಮ ಭುವನೇಶ್ವರಿ!

ಎರಡು ರಾಗಗಳಲ್ಲಿ ಮೂಡಿದ ಈ ಪಲ್ಲವಿ ಕನ್ನಡ - ಮತ್ತೆ ನವರಸ ಕನ್ನಡ ರಾಗಗಳಲ್ಲಿದ್ದು ಈ ಸಂದರ್ಭಕ್ಕೆ ಬಲು ತಕ್ಕದ್ದಾಗಿತ್ತು.

ಈ ಕಚೇರಿಗೆ ನನ್ನದೂ ಒಂದು ಚೂರು ಅಳಿಲು ಸೇವೆ ಇತ್ತು. ನಾನು ಬಸವಣ್ಣನವರ ವಚನವೊಂದರ ಸಾಹಿತ್ಯವನ್ನಿಟ್ಟುಕೊಂಡು ರಚಿಸಿದ್ದ ವರ್ಣವೊಂದನ್ನು ರಾಘವನ್ ಅವರು ಹಾಡಿದ್ದು ನನಗೆ ಬಹಳ ಸಂತೋಷ ಆಯ್ತು ಅಂತ ಹೇಳ್ಬೇಕಾಗೇ ಇಲ್ಲ :) ಕೆಳಗಿನ ವಿಡಿಯೋದಲ್ಲಿ ಮೊದಲು ಎರಡು ಪದ್ಯಗಳ ನಂತರ ಈ ವರ್ಣ ಮೊದಲಾಗುತ್ತೆ - "ನಾದಪ್ರಿಯ ಶಿವನೆಂಬರು" - ಇದು ನಾಗಸ್ವರಾವಳಿ ರಾಗದಲ್ಲಿದೆ.ಒಂದು ಕಚೇರಿಯಲ್ಲಿ ತ್ಯಾಗರಾಜರ ರಚನೆಗಳಿರದೇ ಇರುವುದು ಅಪರೂಪವೇ. ತ್ಯಾಗರಾಜರು ಕನ್ನಡ ಭಾಷೆಯಲ್ಲಿ ರಚನೆಮಾಡಿಲ್ಲ. ಆದರೆ, ನಾನು ಮಾಡಿದ್ದ ಅನುವಾದವೊಂದನ್ನು, ಮೂಲದ ಮಟ್ಟಿನಲ್ಲೇ ರಾಘವನ್ ಅವರು ಹಾಡಿದ್ದನ್ನು ಇಲ್ಲಿ ನೋಡಿ. ರಾಗ ಆಂದೋಳಿಕ - ರಾಗಸುಧಾರಸ:ಎಲ್ಲರಿಗೂ ರಾಜ್ಯೋತ್ಸವದ ಹಾರೈಕೆಗಳು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?